Monday, December 21, 2009

I am Surprised!!!!!!!!

ದಟ್ಸ್ ಕನ್ನಡ ಡಾಟ್ ಕಾಂ ವೆಬ್ಸೈಟ್ ನಲ್ಲಿ ನನ್ನ ಬ್ಲಾಗ್ ಲಿಸ್ಟ್ ಆಗಿದೆ. ಇದರಲ್ಲಿ ಹೆಮ್ಮೆಪಡುವಂತಹ ವಿಷಯ ಇಲ್ಲಾಂತ ನನಗೆ ಗೊತ್ತು....But I am Surprised!!!!!!!! ನಾನು ಬರೆದ ಬ್ಲಾಗ್ ವಿಷಯ  ಹೊಸ ರೈಲು ಬಿಟ್ಟ ಕೇಂದ್ರ ಸರಕಾರ  relevent ಆಗಿತ್ತು.     


Friday, December 18, 2009

ಹೊಸ ' ರೈಲು ಬಿಟ್ಟ ' ಕೇಂದ್ರ ಸರಕಾರ

ತುಂಬಾ ದಿನಗಳಿಂದ ಶಿವಮೊಗ್ಗಕ್ಕೊಂದು ಇಂಟರ್ ಸಿಟಿ ರೈಲು ಬೇಕೆಂಬ ಕನಸು ನನಸಾಗಿದೆ. ಈ ರೈಲಿನ ವೇಳಾಪಟ್ಟಿ ಈ ಕೆಳಗಿನಂತಿದೆ.



                 ಈ ರೈಲಿಂದ ಶಿವಮೊಗ್ಗ ಜನರ ಮುಖದಲ್ಲಿ ಮಂದಹಾಸ ಮೂಡಿದ್ದರೂ ವೇಳಾಪಟ್ಟಿ ಸರಿಯಾಗಿ ಗಮನಿಸಿದರೆ ಅದು ಉಪಯೋಗಕಾರಿಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಸದ್ಯದ ವೇಳಾಪಟ್ಟಿಯಿಂದ ಏನೂ ಉಪಯೋಗ ಇಲ್ಲ ಅನ್ನೋದು ನನ್ನ ವಾದ. ಅದಕ್ಕೆ ಸರಿಯಾದ ಕಾರಣಗಳೂ ನನ್ನ ಬಳಿ ಇದೆ.

                 ನಮ್ಮನೆ ಯಿರೋದು ಶಿವಮೊಗ್ಗದಿಂದ ಸರಿಸುಮಾರು ೬೦ ಕಿ.ಮಿ. ದೂರದಲ್ಲಿ. ಅಲೀಗೆ ಹೋಗಲು[ಅಥವಾ ಅಲ್ಲಿಂದ ಬರಲು] ಎರಡು ಕಾಲು ಗಂಟೆಗಳು ಬೇಕಾಗುತ್ತೆ. ರಾತ್ರಿ ನಮ್ಮೂರಿಗೆ ಹೋಗಲು ಇರುವ ಕೊನೆಯ ಬಸ್ಸು ೭:೩೦ ಕ್ಕೆ. ಅದೂ ಆ ಬಸ್ ನಮ್ಮೊರಿನಿಂದ ೫ ಕಿ.ಮಿ. ಹಿಂದೆ ನಿಲ್ಲುತ್ತೆ. ನಾನೇನಾದರು ಇಂಟರ್ ಸಿಟಿರೈಲಿನಲ್ಲಿ [ಟ್ರೈನ್ ನ0 6201] 10:00 PM ಗೆ ಶಿವಮೊಗ್ಗಕ್ಕೆ ಬಂದಿಳಿದರೆ ರಾತ್ರಿ ಎಲ್ಲಿಗೆ ಹೋಗೋದು? ಬಸ್ ನಿಲ್ದಾಣದಲ್ಲೇ ಜಾಗರಣೆ ಮಾಡೋದ? ನಾನು ರಾತ್ರಿ 10:00 ಕ್ಕೆ ಶಿವಮೊಗ್ಗಕ್ಕೆ ಬಂದು ಬೆಳಗಿನವರೆಗೆ ಕಾದು, ಬೆಳಿಗ್ಗೆ ಮುಂಚೆ ಬಸ್ಸಿಗೆ ಹೋಗೋದಾದರೆ ನಾನು ರಾತ್ರಿನೇ ಬೆಂಗಳೂರಿಂದ ಹೊರಡುತ್ತೇನೆ? ಈ ಇಂಟರ್ ಸಿಟಿರೈಲು ಯಾಕೆ ಬೇಕು? ಇನ್ನು ಬೆಳಿಗ್ಗೆ ಶಿವಮೊಗ್ಗಕ್ಕೆ ಮೊದಲ ಬಸ್ ಇರೋದೇ 06:00 ಕ್ಕೆ. ನಾನು 06:20 ರ ರೈಲಿಗೆ ತಲುಪೋದು ಹೇಗೆ?




                ಇದು ನನ್ನೊಬ್ಬನ ಕಥೆಯಲ್ಲ. ಶಿವಮೊಗ್ಗ ನಗರದಿಂದ 10KM ನನತರ ಇರುವ ಎಲ್ಲ ಊರಿನವರ ಸಮಸ್ಯೆ. ಕನಿಷ್ಠ ತಾಲೂಕು ಕೇಂದ್ರಗಳಿಗೆ ಹೋಗಲು/ಬರಲು ರಾತ್ರಿ 08:30 ರ ನಂತರ ಮತ್ತು ಬೆಳಿಗ್ಗೆ 07:30 ರ ಒಳಗೆ ಬಸ್ಸಿನ ಸೌಲಭ್ಯವಿಲ್ಲ. ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ, ಸೊರಬ, ಹೊನ್ನಾಳಿ ಈ ತಾಲೂಕುಗಳ ಸುತ್ತ ಮುತ್ತ ಇರುವವರಿಗೆ ಈ ರೈಲಿನಿಂದ ಏನೂ ಉಪಯೋಗ ಇಲ್ಲ. ಬೆಂಗಳೂರಿಗೆ ಓಡಾಡುವ ಹೆಚ್ಚಿನ ಜನ ಈ ತಾಲೂಕುಗಳಿಂದಲೇ ಇರುವರು.

             
ಇಂಟರ್ ಸಿಟಿ ರೈಲಿನಿಂದ ಶಿವಮೊಗ್ಗಾದ ನಾಗರೀಕರಿಗೆ ಮಾತ್ರ ಸಹಾಯ ಆಗಿರೋದು. ಶಿವಮೊಗ್ಗ ಜಿಲ್ಲಾ ನಾಗರೀಕರಿಗೆ ಎಳ್ಳಷ್ಟೂ ಉಪಯೋಗ ಇಲ್ಲ. ರೈಲು ವೇಳಾಪಟ್ಟಿ ಮಾಡುವಾಗ ಶಿವಮೊಗ್ಗ ನಗರ ಜನತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ್ರೆ ಅದನ್ನು ಪರಿಷ್ಕರಿಸುವುದು ಒಳಿತು. ಹೊಸ " ರೈಲು ಬಿಟ್ಟು " ಜನರ ಬಾಯಿಮುಚ್ಚಿಸುವ ತಂತ್ರವಾಗಿದ್ದರೆ  ಅದಕ್ಕಿಂತ ದ್ರೋಹ ಇನ್ನೊಂದಿಲ್ಲ. ಈ ರೈಲಿನಿಂದ ಯಾವ ಒಬ್ಬ ಬಡವನಿಗೂ ಉಪಯೋಗವಿಲ್ಲ ಅನ್ನೋದು ನನ್ನ ಅಭಿಪ್ರಾಯ.

               ವೇಳಾಪಟ್ಟಿ ಮಾಡೋದು ತುಂಬಾ ಕಷ್ಟ ಅನ್ನೋದು ನನಗೂ ಗೊತ್ತಿದೆ. ಅದಕ್ಕೆ ಹಲವು ಟ್ರೈನುಗಳ ಸಮಯವನ್ನು ಗಮನಿಸಬೇಕಾಗುತ್ತದೆ. ಅಲ್ಲದೆ ಈ ಮಾರ್ಗದಲ್ಲಿ [ಬೀರೂರು ನಂತರ] ಹಲವಾರು ರೈಲುಗಳು ಓಡಾಡುತ್ತವೆ. ಆದರೆ ಜನರಿಗೆಅನುಕೂಲವಾಗುವಂತಹದ್ದು ಮಾಡಬೇಕಲ್ಲವೇ? ಈ ಕಣ್ಣೊರೆಸುವ ತಂತ್ರ ಏಕೆ? ಜಿಲ್ಲಾ MP ಆದ ಸನ್ಮಾನ್ಯ ರಾಘವೇಂದ್ರ ಅವರು ಈ ಸಾಧನೆಯನ್ನು ಇನ್ನೋದೈದು ವರ್ಷ ಹೇಳಿಕೊಳ್ಳುತ್ತಾ ಕೂರದೆ ವೇಳಾಪಟ್ಟಿಯನ್ನು ಬದಲಾವಣೆ ಮಾಡುವ ಬಗ್ಗೆ ಏನಾದರು ಮಾಡುತ್ತಾರೆ ಎಂದು ಆಶಿಸೋಣವೇ?    

               

Wednesday, December 16, 2009

Bicycle - Buy a Cycle

Get a bicycle.  You will not regret it if you live. 
                ~Mark Twain, "Taming the Bicycle"


      ಕೆಲವು ದಿನಗಳ ಹಿಂದೆ ಆಜ್ಜಿಯ ಶ್ರಾದ್ಧ ಇತ್ತು ಹಾಗಾಗಿ ಊರಿಗೆ ಹೋಗಿದ್ದೆ. ಅಪರೂಪಕ್ಕೆ ಬೇಗ ಎದ್ದು ಅದೂ ಇದೂ ಕೆಲಸ ಮುಗಿಸೋ ಹೊತ್ತಿಗೆ 10 ಗಂಟೆಯಾಗಿತ್ತು. ಅದೇ ವೇಳೆ ಪುರೋಹಿತರು ಬಂದರು. ಅವರನ್ನು ಉಪಚರಿಸಿ ಉಭಯಕುಶಲೋಪರಿ ವಿನಿಮಯದ ನಂತರ ಮನೆಯ ಹೊರಗೆ ಕಾಲಿಟ್ಟೆ. ನೋಡಿದ್ರೆ ಚಪ್ಪರದ ಕೆಳಗೊಂದು ಸೈಕಲ್ ನಿಂತಿದೆ! [ಮನೆಯಲ್ಲಿ ಅಡಿಕೆ ಕೊಯ್ಲು ನಡಿತಿರೋದ್ರಿಂದ ಸೋಗೆಯ ಚಪ್ಪರ ಹಾಕಿದ್ದಾರೆ.] ಯಾರದ್ದು ಅಂತ ಗೊತ್ತಾಗಲಿಲ್ಲ. ಆಮೇಲೆ ಹೊಳೀತು ಪುರೋಹಿತರದ್ದು ಅಂತ. ಸೈಕಲ್ ನೋಡಿ ಯಾಕೋ ಮನಸ್ಸು ತಡೀಲಿಲ್ಲ. ಏನಾದ್ರು ಆಗ್ಲಿ ಅಂತ ನಿಲ್ಲಿಸಿದ್ದ ಸೈಕಲ್ ಹತ್ತಿ ಅಲ್ಲೇ ಅಂಗಳದಲಿ ಒಂದೆರಡು ಸುತ್ತು ಹಾಕಿದೆ. ಯಾಕೋ ತೃಪ್ತಿಯಾಗಲಿಲ್ಲ. ಹಾಗೆ ಮನೆಯ ಹಿಂದೆ ಓಡಿಸಿಕೊಂಡು ಹೋಗಿ ಬಾವಿಕಟ್ಟೆಯನ್ನು ಸುತ್ತು ಹಾಕಿ ಪುನಃ ಮನೆಯ ಅಂಗಳಕ್ಕೆ ಬಂದೆ. ಇದೆ ರೀತಿ ನಾಲ್ಕೈದು ಸುತ್ತು ಹಾಕಿದ ಮೇಲೆ ಮನಸ್ಸು ಪ್ರಫುಲ್ಲವಾಯಿತು. ಸೈಕಲ್ ಗೆ ಹೊಂದಿಕೊಂಡಂತೆ ಹತ್ತಾರು ನೆನಪುಗಳು ಒಂದರ ಹಿಂದೊಂದು ರೈಲಿನ ಬೋಗಿಗಳಂತೆ ಬಂದವು.

                 ಎಲ್ಲ ಹುಡುಗರಿಗೂ ಇರುವಂತೆ ನನಗೂ ಚಿಕ್ಕಂದಿನಿಂದಲೇ ಸೈಕಲ್ ಬಗ್ಗೆ ವಿಪರೀತ ಕುತೂಹಲ, ಆಸಕ್ತಿ,..........ಹುಚ್ಚು. ಮೂರು ನಾಲ್ಕು ತರಗತಿಯಲ್ಲಿರುವಾಗ ರಜಾದಿನಗಳಲ್ಲಿ ಚಿಕ್ಕಮ್ಮನ ಮನೆಗೆ ಹೋದಾಗ ಚಿಕ್ಕ ಸೈಕಲ್ ಹೊಡೀತಿದ್ದೆ. ಅದು ಗಂಟೆಗೆ ಒಂದು ರೂಪಾಯಿಗೆ ಸಿಗುತ್ತಿದ್ದ ಬಾಡಿಗೆ ಸೈಕಲ್. ನಾವೊಂದಿಷ್ಟು ಹುಡುಗರು ಬಾಡಿಗೆ ಸೈಕಲ್ ನಲ್ಲಿ ದಾವಣಗೆರೆಯ ಬೀದಿಗಳನ್ನು ಸುತ್ತಿದ ನೆನಪು ಚೆನ್ನಾಗಿಯೇ ಇದೆ. ಮನೆಯಲ್ಲಿ ಅಪ್ಪನ ಸೈಕಲ್  ಇದ್ದರೂ ಅದು ನನಗೆ ಆಗ್ತಾ ಇರಲಿಲ್ಲ. ಅಂತೂ ಇಂತೂ ಯಾವಾಗ ಉದ್ದ ಆಗ್ತೀನಿ ಅಂತ ಕಾದು ಕಾದು ಐದನೆಯ ತರಗತಿಗೆ ಬರುವ ವೇಳೆಗೆ ಸೈಕಲ್ ರೂಲ್ ಹಿಡಿದು ಓಡಿಸೋದು ಕಲಿತಿದ್ದೆ. [ಆಗ ಅಪ್ಪ ತಮ್ಮ ಸೈಕಲ್ ಮಾರಾಟ ಮಾಡಿ ಮೊಪೆಡ್ ತಗೊಂಡಿದ್ರು.] ನನ್ನೆಲ್ಲ experiment ಗೆ ಆಹುತಿ ಆಗ್ತಾ ಇದ್ದಿದ್ದು ಮನೆಗೆ ಬರುತ್ತಿದ್ದವರ ಸೈಕಲ್ ಗಳು. ಐದನೆಯ ತರಗತಿ ಕೊನೆಗೆ ಬರೋ ಹೊತ್ತಿಗೆ ಸೀಟು ಹತ್ತಿ ಸೈಕಲ್ ಓಡಿಸೋದು ಕಲಿತೆ. ತುಂಬಾ ತಾಳ್ಮೆಯಿಂದ ನನ್ನ ಹಿಂದೆಓಡುತ್ತ ಸೈಕಲ್ ಹಿಡಿದು ಬ್ಯಾಲೆನ್ಸ್ ಮಾಡಲು ಸಹಾಯ ಮಾಡಿದ್ದು  ಮುಕುಂದ ಎಂಬ ನನ್ನ ದೊಡ್ಡಮ್ಮನ ಮನೆಯ ಪಕ್ಕದ ಮನೆಯವನು. ಯಾವಾಗ ನಾನು ಸೈಕಲ್ ಆರಾಮವಾಗಿ ಓಡಿಸಲು ಕಲಿತೆನೋ ಆವಾಗಿನಿಂದ ಮನೆಗೆ ಯಾರೇ ಸೈಕಲ್ ತಗೊಂಡು ಬಂದ್ರು ನಾನು ಓಡಿಸಲು ತಗೊಂಡು ಹೋಗ್ತಾ ಇದ್ದೆ. ನಿಜ ಹೇಳ್ಬೇಕಂದ್ರೆ ಯಾರಾದ್ರು ಸೈಕಲ್ ತಗೋದು ಬರ್ಲಪ್ಪ ಅಂತ ಕಾಯುತ್ತ ಇದ್ದೆ. ಯಾರೇ ಬಂದ್ರು ಅವರ ಹತ್ತಿರ ಸೈಕಲ್ ಇರಲಿ ಎಂಬುದೇ ನನ್ನ ಪ್ರಾರ್ಥನೆ ಆಗಿತ್ತು.

               ಹೀಗೆ  ಕಂಡಕಂಡವರ ಸೈಕಲ್ ಹೊಡೆಯೋದು ನೋಡಿ ನಮ್ಮಮ್ಮ ನನಗೂ ಒಂದು ಸೈಕಲ್ ಕೊಡಿಸೋ ಮನಸ್ಸು ಮಾಡಿದ್ರು; ಆದರೆ ಆಗ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಹಾಗೂ ಹೀಗೂ ವರ್ಷಗಳು ದೂಡ್ತ ಹೈಸ್ಕೂಲಿಗೆ ಸೇರಿದೆ. ಸ್ಕೂಲಿನ ಸಮಯಕ್ಕೆ ಸರಿಯಾಗಿ ಬಸ್ಸಿಲ್ಲದೆ ಬೆಳಿಗ್ಗೆ ಅಟೆಂಡರುಗಳು  ಬರುವ ಮೊದಲೇ ಶಾಲೆಗೇ ಹೊಗಿಯಾಗಿರತಿತ್ತು. ಸಂಜೆ ನಡೆದು ಬರಬೇಕಾಗ್ತಿತ್ತು. ನಾನು NCC ಗೆ ಬೇರೆ ಸೇರಿಕೊಂಡಿದ್ದೆ. ಒಂಬತ್ತನೆಯ ತರಗತಿಯ ಶುರುವಿನ ವೇಳೆ RD (republic day) ಕ್ಯಾಂಪ್ ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಹತ್ತು ದಿನಗಳ ಕ್ಯಾಂಪ್ ಇದ್ದಿದ್ದು ಸೂರತ್ಕಲ್ ನಲ್ಲಿ. ಕ್ಯಾಂಪ್ ಮುಗಿಸಿ ಮನೆಗೆ ಕಾಲಿಟ್ಟರೆ ಜಗುಲಿಯಲ್ಲಿ ನಿಂತಿದೆ ಒಂದು ಹೊಸ ಸೈಕಲ್. ಬ್ಯಾಗ್ ಇಳಿಸಿದವನೇ ಸೈಕಲ್ ಹತ್ತಿರ ನಿಂತು ಅಲ್ಲೇ ವಿಶ್ರಮಿಸುತ್ತಿದ್ದ ಅಪ್ಪನನ್ನು,  "ಯಾರದ್ದು ಸೈಕಲ್ " ಅಂತ ಕೇಳಿದೆ. ಅವರು ನಗುತ್ತ "ನಿಂದೆ"  ಅಂದ್ರು. ನನಗಂತೂ ನಂಬೋಕೆ ಆಗಲಿಲ್ಲ. ಒಳಗಿಂದ ಬಂದ ಅಮ್ಮ ಅದನ್ನು confirm ಮಾಡಿದ್ರು. ನನಗೋ ಹೇಳರದಷ್ಟು ಖುಷಿ, ಸಂಭ್ರಮ. ನಮ್ಮಪ್ಪ ಕೊಟ್ಟ ಎರಡು suprise ಗಳಲ್ಲಿ ಇದು ಒಂದನೆಯದು [ಮತ್ತು ಮೊದಲನೆಯದು.]. ಆ ವೇಳೆಗಾಗಲೇ ಕಂಡಕಂಡವರ ಸೈಕಲ್ ಹೊಡೆದು ಸೈಕಲ್ ಹೊಡೆಯೋದ್ರಲ್ಲಿ expert ಆಗಿದ್ದೆ. ಅಲ್ಲಿಂದ ಹೈಸ್ಕೂಲ್ ಮುಗಿಯುವ ವರೆಗೂ ಅದೇ ನನ್ನ ಮೆಚ್ಚಿನ ಸಂಗಾತಿ. ಸ್ವಂತ ಸೈಕಲ್ ಬಂದ ಮೇಲೆ ನನ್ನನ್ನು ಹಿಡಿಯೋರು ಯಾರೂ ಇಲ್ಲದ ಹಾಗೆ ಆಯಿತು. ಆ ಎರಡು ವರ್ಷ ಸೈಕಲ್ ಬಿಟ್ಟು ನನ್ನ ಜೀವನವನ್ನು ಯೋಚಿಸಲೂ ಸಾಧ್ಯ ಇರಲಿಲ್ಲ. ಮಳೆ, ಚಳಿ, ಗಾಳಿ, ಬಿಸಿಲು, ತಗ್ಗು, ಏರು, ಕೆಸರು, ಟಾರು, ಕಲ್ಲು, ಮಣ್ಣು, ಹೊಂಡ, ಒಳದಾರಿ, ಗಾಡಿ ದಾರಿ, ಪಾಚಿಗಟ್ಟಿದ ದಾರಿ, ಯಾವುದನ್ನೂ ಲೆಕ್ಕಿಸದೆ; ನಗು, ಅಳು, ನಿರಾಸೆ, ಹತಾಶೆ, ಉತ್ಸಾಹ, ಸಂಭ್ರಮ, ಅವಸರ, ಬೇಸರ ಎಲ್ಲದಕ್ಕೂ ಸಾಕ್ಷಿಯಾಗಿ ನನ್ನ ಸೈಕಲ್ ನನ್ನೊಡನಿತ್ತು.



                 ನಾನು ಸೈಕಲ್ ತೆಗೆದುಕೊಂಡ ಮೇಲೆ ನನ್ನ ಸ್ನೇಹಿತರೂ ತಗೊಂಡರು. ಹಾಗಾಗಿ ಎಲ್ಲರೂ ಒಟ್ಟಿಗೆ ಸ್ಕೂಲಿಗೆ ಹೋಗಿ ಬರ್ತಾ ಇದ್ವಿ. ಹೈಸ್ಕೂಲ್ ಮುಗಿಸಿ ಸೈಕಲ್ ಸ್ಟ್ಯಾಂಡ್ ನಿಂದ ಬಸ್ ಸ್ಟ್ಯಾಂಡ್ ವರೆಗೂ ಸೈಕಲ್ ಗಳ ಮೆರವಣಿಗೆ, ಒಂದರಹಿಂದೊಂದು ಸೈಕಲ್ ಗಳು. ಬೆಲ್ ಮಾಡುತ್ತಾ ನಡೆಯುತ್ತಿದ್ದವರನ್ನು ಅತ್ತಿತ್ತ ಸರಿಸುತ್ತ ಮಧ್ಯದಲ್ಲಿ ಜಾಗ ಮಾಡಿಕೊಂಡು ವೇಗವಾಗಿ ನುಗ್ಗುತ್ತಿದ್ದೆವು. ಹಳೆದು, ಹೊಸಾದು, ಬ್ರೇಕ್ ಇಲ್ಲದೆ ಇರೋವು , ಪೆಡಲ್ ಇಲ್ಲದೆ ಇರೋವು, ಸೀಟ್ ಕಿತ್ತು ಹೋಗಿರೋವು, ವಿಚಿತ್ರ ಶಬ್ದ ಮಾಡುವಂತವು......ಹೀಗೆ ಏನೇನೊ ತರದ ಸೈಕಲ್ ಗಳು. ನಾನಾ ವಿದಧ ಸೈಕಲ್ ಗಳಿದ್ದರೂ ಅದನ್ನು ಓಡಿಸುವ ಸಂಭ್ರಮ ಎಲ್ಲರಿಗೂ ಒಂದೇ ಆಗಿತ್ತು. ಯಾರೋ ಒಬ್ಬರು ಒಂದು ದಿನ ತಮ್ಮ ಪುಟ್ಟ ಸೈಕಲ್ ನ್ನು ತಂದಿದ್ದು ಇನ್ನೂ ನನಗೆ ನೆನಪಿದೆ. ಸೈಕಲ್ ಬಂದ ಮೇಲೆ ಒಂದಿಷ್ಟು ಕೆಲಸಗಳೂ ಜಾಸ್ತಿ ಆಯಿತು. ಮಿಲ್ ನಿಂದ  ಮೂಟೆ ತರೋದು, ಸಂತೆಯಿಂದ ತರಕಾರಿ ತರೋದು ಹೀಗೆ....ಅದೇನೂ ದೊಡ್ಡ ವಿಚಾರ ಅನ್ನಿಸಿರಲಿಲ್ಲ.  
             
                 ಪಿಯುಸಿ ಗೆ ಕಾಲೇಜು ಸೇರಿದ್ದು residential ಆಗಿದ್ದರಿಂದ ನನ್ನ ಸೈಕಲ್ ಮೂಲೆ ಸೇರಿತು. ಸುಮ್ನೆ ತುಕ್ಕು ಹಿಡಿಯುತ್ತೆ ಅಂತ ಅಪ್ಪ ಅದನ್ನು ಯಾರಿಗೋ ಮಾರಿದರು. ಮೊದಲು ಅದಿಕ್ಕೆ ವಿರೋಧಿಸಿದರು ನಾನು ಏನು ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಅದರೂ ಸೈಕಲ್ ಬಗ್ಗೆ ಇರುವ ನೆನಪುಗಳಿಗೆ ಕೊರತೆ ಇಲ್ಲ.

                  ಸೂರ್ಯ ಮೂಡೋ ಹೊತ್ತಿನಲ್ಲಿ ತಂಗಾಳಿ ಸೇವಿಸುತ್ತ, ಸಂಗೀತ ಕೇಳುತ್ತ ಸೈಕಲ್ ಓಡಿಸುವ ಮಜಾನೆ ಬೇರೆ. ಈಗಂತೂ ಮಾರ್ಕೆಟಿನಲ್ಲಿ ವಿಧ ವಿಧದ ಸೈಕಲ್ ಗಳು ಮಾರಾಟಕ್ಕಿವೆ. ಗಿಯರ್ ಸೈಕಲ್, ಫೋಲ್ಡಿಂಗ್ ಸೈಕಲ್, ಮೌಂಟೈನ್ ಬೈಕ್, conference ಸೈಕಲ್ ಹೀಗೆ....ಏನೇನೊ ಮಾದರಿಗಳು. ಯಾರಿಗಾದರು ಸೈಕಲ್ ಮಾದರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಬಹುದು. ಸೈಕಲ್ ಡಿಸೈನ್ ಬಗ್ಗೆ ಆಸಕ್ತಿ ಇದ್ದಾರೆ ಈ ಕೆಳಗಿನ ಬ್ಲಾಗ್ ಅತ್ಯುತ್ತಮ ಮಾಹಿತಿ ಹೊಂದಿದೆ.
http://bicycledesign.blogspot.com/








 
 


                  ಮನುಷ್ಯನು invent ಮಾಡಿರುವ ಅತ್ಯಂತ ಉಪಯುಕ್ತ ಸಾಧನ ಸೈಕಲ್. ಪಾಶ್ಚಿಮಾತ್ಯ ದೇಶಗಳಲ್ಲಿ ಬೈಕ್ ಅಂತಾನೂ ಕರೀತಾರೆ. ಸೈಕಲ್ ನಷ್ಟು ಉಪಯುಕ್ತ, ಆರಾಮದಾಯಕ ಹಾಗು ಆರೋಗ್ಯಕ್ಕೆ ಒಳ್ಳೆಯದಾದ ಸಾಧನ ಬೇರೊಂದಿಲ್ಲ. ಅದಿಕ್ಕೆ "When man invented the bicycle he reached the peak of his attainments.  Here was a machine of precision and balance for the convenience of man.  And (unlike subsequent inventions for man's convenience) the more he used it, the fitter his body became.  Here, for once, was a product of man's brain that was entirely beneficial to those who used it, and of no harm or irritation to others.  Progress should have stopped when man invented the bicycle" ಅಂತ ಹೇಳಲಾಗಿದೆ. ಸೈಕಲ್ ಬಗ್ಗೆ ಏನಾದ್ರು ಉಕ್ತಿಗಳು ಇದ್ದೀಯ ಅಂತ ಗೂಗಲಿಸಿದರೆ ಈ ಕೊಂಡಿ ಸಿಕ್ಕಿತು ನೋಡಿ. http://www.quotegarden.com/bicycling.html .

-- ನವೀನ್ ಕೆ.ಎಸ್. 

Thursday, December 10, 2009

ಯಾವಾಗ ಮುಕ್ತಿ?

ಅನೇಕ ಚಾನಲ್ ಗಳು ಶುರುವಾಗಿದ್ದೆ ಮೆಗಧಾರಾವಾಹಿಗಳ ಮೂಲಕ ವೀಕ್ಷಕರನ್ನು ಸೆಳೆಯಬಹುದು ಎನ್ನುವ ಸರಳ ಲೆಕ್ಕಾಚಾರದಿಂದ. ಧಾರಾವಾಹಿಯನ್ನು ಸಹಜತೆಗೆ ಹತ್ತಿರವಾಗಿ ತೋರಿಸುವ ಪರಿಕಲ್ಪನೆ ಹುಟ್ಟು ಹಾಕಿದವರಲ್ಲಿ ಟಿ.ಏನ್.ಸೀತಾರಾಮ್ ಪ್ರಮುಖರು. ಅವರ ನಿರ್ದೇಶನದಲ್ಲಿ ಮೂಡಿಬಂದ ಮಾಯಾಮೃಗ ದೂರದರ್ಶನದಲ್ಲಿ ಕ್ರಾಂತಿಯನ್ನು ಮಾಡಿದಂತಹ ಧಾರಾವಾಹಿ. ಮಾಯಾಮೃಗ ಪ್ರಸಾರವಾಗುತ್ತಿದ್ದ ಕಾಲದಲ್ಲಿ ನಾನು ಹೈಸ್ಕೂಲಿನಲ್ಲಿದ್ದಿರಬಹುದು. ಆರರಿಂದ ಅರಾವತ್ತರವರೆಗಿನ ಎಲ್ಲರನ್ನು ಟಿವಿ ಎಂಬ ಮಾಯಪೆಟ್ಟಿಗೆಯ ಮುಂದೆ ೪:೩೦ ರಿಂದ ೫:೦೦ ಗಂಟೆಯವರೆಗೆ ಕೂರಿಸುತ್ತಿದ್ದಂತಹ ಸಾಧನೆ ಮಾಯಾಮೃಗದ್ದು. ಅಲ್ಲಿಂದೀಚೆಗೆ ಧಾರಾವಾಹಿಗಳ ಪ್ರವಾಹ ಚಾನಲ್ ಗಳಲ್ಲಿ  ಹರಿದಿದೆ......ಹರಿಯುತ್ತಿದೆ.
 
ಮಾಯಾಮೃಗದ ಯಶಸ್ಸಿನ ನಂತರ ಪ್ರತಿಬಿಂಬ, ಮನ್ವಂತರ, ಮುಕ್ತ, ಮುಕ್ತ ಮುಕ್ತ ವರೆಗೆ TNS ಅವರ ಪ್ರತಿಭೆ ಅನಾವರಣಗೊಂಡಿದೆ. ಕೆಲವು ತಿಂಗಳುಗಳಿಂದ ಮುಕ್ತ ಮುಕ್ತ ಧಾರಾವಾಹಿಯನ್ನು ತಪ್ಪದೆ ವೀಕ್ಷಿಸುತ್ತಾ ಇದ್ದೀನಿ. ಮೊದಲು ಆಸಕ್ತಿಯುತವಾಗಿದ್ದದ್ದು ಈಗ್ಯಾಕೋ ಬೇಸರ ಮೂಡಿಸುತ್ತ ಇದೆ. ಅದಕ್ಕೆ ಪ್ರಮುಖ ಕಾರಣಗಳು ಹೀಗಿವೆ.

1. ಧಾರಾವಾಹಿಯ ಕೇಂದ್ರ ಬಿಂದು ಆಗಿರುವ ಮಾಲತಿ ಮೇಡಂ ಸಂಸಾರಕ್ಕೆ TNS ಅವರು ಅತೀವ ಕಷ್ಟ ಕೊಡ್ತಾ ಇದಾರೆ . ಧಾರಾವಾಹಿ ಕಂತುಗಳನ್ನು ಎಳೆಯೋದಿಕ್ಕೆ ಸರದಿ ಪ್ರಕಾರ ಒಬ್ಬರ ನಂತರ ಒಬ್ಬರಿಗೆ ಅಥವಾ ಅವರಿಗೆ ಸಂಬಂಧಿಸಿದವರಿಗೆ ಸಮಸ್ಯೆಗಳ ಸೃಷ್ಟಿ. ಪ್ರಪಂಚದಲ್ಲಿ ಹಿಂದೆ ಇದ್ದಿರಬಹುದಾದ, ಈಗ ಇರುವ, ಮುಂದೆ ಬರುವ ಎಲ್ಲ ಸಮಸ್ಯೆಗಳಿಗೆ ಈ ಪರಿವಾರದವರು ಆಹುತಿಯಾಗಿದ್ದಾರೆ. ಹಾಗಾಗಿ ಈ ಸಂಸಾರದಲ್ಲಿ ಗೆಲುವಾಗಿದ್ದವರ್ಯಾರು ಇಲ್ಲ. ಎಲ್ಲ ಅಳುಬುರುಕು ಮುಖಗಳೇ. ಬಾಡಿದ ಮುಖದ ನಟನೆ ಮಾಡಿ ಮಾಡಿ ನಟರೆಲ್ಲ ಸುಸ್ತಾಗಿದ್ದಾರೆ. ಹೇಳಿದ್ದೆ ಡೈಲಾಗ್ ಹೇಳಿ ಹೇಳಿ ಅವರಿಗೂ ಬೇಜಾರಾಗಿದೆ. ಹಾಗಾಗಿ ವಿಷಾದ ದುಃಖದ ಸನ್ನಿವೇಶಗಳಲ್ಲಿ ಮತ್ತಷ್ಟು ದುಃಖಿತರಾಗಿ ಕಾಣುತ್ತಾರೆ. ಅಪರೂಪಕ್ಕೆ ಬರುವ ಹಾಸ್ಯ ಸನ್ನಿವೇಶಗಳನ್ನು ಅವರೆಲ್ಲ ತುಂಬಾ ಎಂಜಾಯ್ ಮಾಡ್ತಾ ಅಭಿನಯಿಸುವುದನ್ನು ಗಮನಿಸಬಹುದು.

2. ಈ ಧಾರಾವಾಹಿಯ ಮತ್ತೊಂದು drawback ಅಂದ್ರೆ ಕಾಲನಿಕ ಊರುಗಳು. ದೇವಸಾಗರ....ಅದೂ ಇದೂ ಅಂತ. ಕತೆ ಕಾಲ್ಪನಿಕ ಸರಿ; ಆದರೆ ಊರುಗಳ ಹೆಸರನ್ನಾದರೂ ಇರೋದನ್ನೇ ಬಳಸಬಹುದಿತ್ತು.

3. ಇನ್ನೊಂದು ತುಂಬಾ ಸೂಕ್ಷ್ಮವಾಗಿ ಗಮನಿಸಬಹುದಾದ ವಿಚಾರವೆಂದರೆ ಮೇಕಪ್. ಯಾವ ಪಾತ್ರದ ಕಥೆ ನಡೀತಿದಿಯೋ ಅವರಿಗೆ ಮಾತ್ರ ಮೇಕಪ್. ಉದಾಹರಣೆಗೆ ಕಲ್ಯಾಣಿ ಪಾತ್ರ. ಈ ಹುಡುಗಿ ಹಿಂಡು ಜನರ ಹಿಂದೆ ಮೂರು ಹೊತ್ತು ಅಳುಮೋರೆ ಹಾಕಿಕೊಂಡಿರುತ್ತ ಇದ್ದಳು. ನನಗಂತೂ ನೋಡೋಕೆ ಬೇಜಾರಾಗ್ತಾ ಇತ್ತು. ಮಧು ಜೊತೆ ನಿಶ್ಚಯಗೊಂದಿದ್ದ ಮದುವೆ ತಿರಸ್ಕರಿಸುವ ಎಪಿಸೋಡ್ ಗಳಲ್ಲಿ ಕಲ್ಯಾಣಿಗೆ ಚೆನ್ನಾಗಿ ಮೇಕಪ್ ಹಾಕಲಾಗಿತ್ತು. ಮೇಕಪ್ ಆತ್ಮವಿಶ್ವಾಸ ತೋರಿಸುತ್ತೆ ಅನ್ನೋ ವಿಚಾರವಿರಬಹುದು ನಿರ್ದೇಶಕರಿಗೆ.

4. ಸಿಕ್ಕಾಪಟ್ಟೆ ಮಳೆ ಬಂದಿರುತ್ತೆ....ಹೊರಗಿನಿಂದ ಒಳಗೆ ಬಂದ ಪಾತ್ರದ ಮೈಮೇಲೆ ಒಂಚೂರು ನೀರೆ ಬಿದ್ದೆರೋದಿಲ್ಲ.

5. ಮಾಲತಿ ಮೇಡಂಗೆ ಸ್ಕೂಲಿಗೆ ಹೊತ್ತಾಗಿರುತ್ತೆ ಆದರೂ ನಿವೇದಿತ ಮನೆಗೆ ಹೋಗಿ ಅದೂ ಇದೂ ಮಾತಾಡೋಕೆ ಸಮಯ ಇರುತ್ತೆ.

6. ಪದೇ ಪದೇ ರಿಪೀಟ್ ಆಗೋ ಸಂಭಾಷಣೆಗಳು. ಇದಕ್ಕೆ ಪ್ರಮುಖ ಕಾರಣ ಅನಗತ್ಯವಾಗಿ ಸಮಸ್ಯೆಗಳನ್ನು [ಎಪಿಸೋಡ್ ಗಳನ್ನು ] ರಬ್ಬರಿನಂತೆ ಎಳೆಯುವುದು.          

ಇರೋದ್ರಲ್ಲಿ TNS ಪರವಾಗಿಲ್ಲ ಸರಿ; ಆದರೂ ಎಲ್ಲದಕ್ಕೂ ಒಂದು ಕೊನೆ ಇರುತ್ತಲ್ಲ. ಸದ್ಯಕ್ಕಂತೂ ತಮ್ಮ trump card ಆದ ಕೋರ್ಟ್ ಸೀನ್ ಗಳನ್ನು ಮತ್ತೆ ತರಲು ಸಿದ್ಧರಾಗ್ತಾ ಇದಾರೆ. ಬಹುಷಃ TRP ಕಡಿಮೆ ಆಗಿರಬೇಕು. ಆದರೂ ಯಾವಾಗ ಇದರಿಂದ ಮುಕ್ತಿ?

Thursday, November 19, 2009

BBMP ದೂರು ಈಗ ಆನ್ ಲೈನ್.........

ಒಂದಿಷ್ಟು ಜನಸಂಖ್ಯೆ ಹೆಚ್ಚಿ, ಹಲವು ಬಡಾವಣೆಗಳು ಹುಟ್ಟಿ, ಚಿಕ್ಕ ಪುಟ್ಟ ಊರುಗಳೆಲ್ಲ ನಗರ, ಪಟ್ಟಣಗಳೆಂಬ ಹಣೆಪಟ್ಟಿ ಹಚ್ಚಿಕೊಂಡ ಮೇಲೆ ಅಲ್ಲೊಂದಿಷ್ಟು ಸಮಸ್ಯೆಗಳು ಹುಟ್ಟಿಕೊಳ್ಳೋದು ಸಹಜ. ಅದರಲ್ಲೂ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ರಸ್ತೆ, ಚರಂಡಿ, ತ್ಯಾಜ್ಯ ನಿರ್ವಹಣೆ, ವಿದ್ಯುತ್, ನೀರು ಸರಬರಾಜು ಇತ್ಯಾದಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನೆಲ್ಲಾ ನಿರ್ವಹಿಸುವ ಹೊಣೆಹೊತ್ತ ಬೃಬೆ0ಮಪ(BBMP) ಅಧಿಕಾರಿಗಳ ನಿರ್ಲಕ್ಷತನದಿಂದಲೋ, ಗುತ್ತಿಗೆದಾರರ ಸೋಮಾರಿತನದಿಂದಲೋ ಹಲವು ಕೆಲಸಗಳು ನೆನೆಗುದಿಗೆ ಬಿದ್ದಿರುದು ಎಲ್ಲರಿಗು ತಿಳಿದಿದೆ. ಈ ಅಸಮರ್ಪಕ ನಿರ್ವಹಣೆ ಅನೇಕರಲ್ಲಿ ಸಿಟ್ಟು ತಂದಿರಬಹುದಾದರೂ ಅದರ ಬಗ್ಗೆ ದೂರು ನೀಡುವವರು ತುಂಬಾ ಕಡಿಮೆ. ನಾನು ಗಮನಿಸಿದ ಹಾಗೆ ದೂರು ನೀದುವವರೆಲ್ಲರೂ ಮಧ್ಯವಯಸ್ಸನ್ನು ದಾತಿದವರೇ ಹೆಚ್ಚು. ಯುವಕರಿಗೆ ಇಂತಹ ವಿಚಾರಗಳು ಮನಸ್ಸಿಗೆ ಬಂದರೂ ಅವು ಸ್ನೇಹಿತರ ನಡುವೆ ಚರ್ಚಿಸುವ ವಿಚಾರಾಗಳಾಗಿ ಮಾತ್ರ ಉಳಿದಿವೆ. ಯಾಕೆಂದರೆ ಅವರಿಗೆ ವ್ಯವಸ್ಥೆ ಯಲ್ಲಿ ಇರದಿರುವ ನಂಬಿಕೆ. ಹೀಗೆ ದೂರು ನೀಡಬೇಕೆಂದು ಮನಸ್ಸಿಗೆ ಬಂದರೂ, ಕೈಕಟ್ಟಿ ಕುಳಿತವರಿಗೆ ಒಂದು ಆಶಾದಾಯಕವಾದ ಸುದ್ದಿ.



 ನಾಗರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆನ್ ಲೈನ್ ಮೂಲಕ ನೇರವಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಬಹುದು ಅಲ್ಲದೇ, ಎಸ್ಎಂಎಸ್ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದಾಗಿದೆ.

 


ನಿಮ್ಮ ಬಡಾವಣೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ BBMP ಯ ನೂತನ ವೆಬ್ಸೈಟ್  www.spandana.kar.nic.in ನಲ್ಲಿ ದೂರು ದಾಖಲಿಸಬಹುದು. ಈ ವೆಬ್ಸೈಟ್ ನಲ್ಲಿ ನಿಮ್ಮ ದೂರಿಗೆ ಸಂಬಂಧ ಪಟ್ಟ ಛಾಯಾಚಿತ್ರಗಳನ್ನು ಮತ್ತು ವೀಡಿಯೊಗಳನ್ನೂ ಕಳುಹಿಸಬಹುದು.



ಇಂಟರ್ನೆಟ್ ಉಪಯೋಗಿಸಲು ಗೊತ್ತಿಲ್ಲದೇ ಇರುವವರು ಮೊಬೈಲ್ ಸಂಖ್ಯೆ 94818 44444 ಗೆ ಎಸ್ಎಂಎಸ್ ಕಳುಹಿಸಬಹುದು. ದಾಖಲಿಸಿದ ದೂರು ಅಧಿಕಾರಿಗಳ ಗಮನಕ್ಕೆ ಬಂದಿದೆಯೇ ಎಂದು ತಿಳಿದುಕೊಳ್ಳಲು ನಿಮ್ಮ ದೂರಿನ ಸಂಖ್ಯೆಯನ್ನು ಎಸ್ಎಂಎಸ್ ಮಾಡಬಹುದು ಅಥವಾ ವೆಬ್ಸೈಟ್ ನಲ್ಲಿ ನೋಡಬಹುದು. ಬೆರಳ ತುದಿಗೆ ಮಾಹಿತಿ ದೊರೆಯುತ್ತಿರುವಾಗ ಇನ್ನು ತಡವೇಕೆ, ಸೋಮಾರಿತನವೇಕೆ. ವ್ಯವಸ್ಥೆಯನ್ನು ದೂರುವುದು ಬಿಟ್ಟು ಕಾರ್ಯಪ್ರವೃತ್ತರಾಗೋಣ. ಥ್ಯಾಂಕ್ಸ್ BBMP. ಥ್ಯಾಂಕ್ಸ್ ಭರತ್ ಲಾಲ್ ಮೀನಾ.    

Monday, November 16, 2009

ಸಚಿನ್ ಮತ್ತು ನಾನು

He came.............




He Saw....................




He conquered..........




ಪ್ರಪಂಚದಲ್ಲಿರೋ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳಲ್ಲಿ ನಾನೂ ಒಬ್ಬ. ನನಗೆ ಕ್ರಿಕೆಟ್ ಆಡೋದಕ್ಕಿಂತ ನೋಡೋದರಲ್ಲಿ ಆಸಕ್ತಿ ಜಾಸ್ತಿ. ಆದರೆ ನಾನು ಈ ಕ್ರಿಕೆಟ್ ನ ಅಂಕಿ ಅಂಶಗಳಿಂದ ದೂರ. ಯಾರು,  ಯಾವಾಗ, ಎಲ್ಲಿ, ಹೇಗೆ, ಯಾರ ವಿರುದ್ಧ, ಯಾವತರಹದ ಕಂಡೀಶನ್ನಲ್ಲಿ ಏನೇನು ಸಾಧನೆ ಮಾಡಿದರೂ ಅನ್ನೋದೆಲ್ಲ ನನಗೆ ಜ್ಞಾಪಕ ಇರೋದಿಲ್ಲ. I am just a plain cricket fan. ಕ್ರಿಕೆಟ್ ನ ನಾನು ಗಮನಿಸೋದು ಹೆಚ್ಚಾಗಿ ಭಾರತ ತಂದ ಆಡ್ತಾ ಇದ್ರೆ ಮಾಡ್ತಾ. ಅದೂ ಪಂದ್ಯ ಅಥವಾ ಸರಣಿ ಗೆಲ್ಲೋ ಅವಕಾಶ ಇದ್ದಾಗ ಮಾತ್ರ. ಏಕೋ ಏನೋ ಭಾರತ ತಂದ ಸೋಲೋದು ನೋಡೋಕೆ ನನಗೆ ಆಗೋಲ್ಲ. I hate failure. ಇದು sportsmanship ಅಲ್ಲದೆ ಇರಬಹುದು. ಆದರೆ ನಾನು ಇರೋದೇ ಹೀಗೆ.

ಶೀರ್ಷಿಕೆ ನೋಡಿದರೆ ನನಗೂ ಸಚಿನ್ಗೂ ಏನೋ ಭಾರಿ ನೆಂಟಸ್ತನ ಇರೋರತರ ಇದೆ. ಆದರೆ ಹಾಗೇನೂ ಇಲ್ಲ ಬಿಡಿ. ಸಚಿನ್ ತನ್ನ ಕ್ರಿಕೆಟ್ ಜೀವನದ ೨೦ ವರ್ಷಗಳನ್ನು ಮುಗಿಸಿದ್ದಾಗಿದೆ. ಮಾಧ್ಯಮಗಳಲ್ಲಿ ಬೇಕಾದಷ್ಟು ವರದಿಗಳು, ಸಂದರ್ಶನಗಳು ಬಂದಿವೆ. ನನ್ನದೊಂದಿಷ್ಟು ಅಭಿಪ್ರಾಯಗಳು.......

1. ನಾನೊಬ್ಬ ಸಚಿನ್ ಅಭಿಮಾನಿ.
2. ನಾನೇನಾದ್ರು ಕ್ರಿಕೆಟ್ ನೋಡ್ತೀನಿ ಅಂದ್ರೆ ಅದಕ್ಕೆ ಸಚಿನ್ನೇ ಕಾರಣ.
3. ಪ್ರತಿ ಸಲ ಸಚಿನ್ ಬ್ಯಾಟಿಂಗ್ ಮಾಡುವಾಗ ಸೆಂಚುರಿ ಹೊಡೆಯಲಿ ಅಂತ ಬಯಸುತ್ತೀನಿ.
4. 100 (Test+ODI ಸೇರಿ)  ಸೆಂಚುರಿಗಳನ್ನು ದಾಟಬೇಕೂಂತ  ನನಗೆ ಆಸೆ.
5. ಸಚಿನ್ ಸೆಂಚುರಿ ಹೊಡೆದಾಗಲೆಲ್ಲ ಭಾರತ ತಂಡ ಸೋಲುತ್ತೆ ಅನ್ನೋದನ್ನು ನಾನು ಒಪ್ಪೋದಿಲ್ಲ.
6. No doubt he is icon of world sports.

ಕ್ರೀಡಾ ಜೀವನದ 20 ವರ್ಷಗಳನ್ನು ಪೂರೈಸಿದ್ದಕ್ಕೆ ಸಚಿನ್ ಗೆ ಅಭಿನಂದನೆಗಳು. ಕ್ರಿಕೆಟ್ ಬಗ್ಗೆ ಇರುವ ಒಲುಮೆ, ಉತ್ಸಾಹ ಹೀಗೆ ಇರಲಿ. ಇನ್ನಷ್ಟು ದಾಖಲೆಗಳು ಮೂಡಿಬರಲಿ. Keep playing......All the Best.  

Wednesday, November 11, 2009

ನೀ ಬರುವುದ ತಪ್ಪಿದ್ದೆ.............

ಪ್ರತಿರಾತ್ರಿ ಪ್ರತಿಕನಸಲೂ
ನೋಡಿರುವೆ ನಿನ್ನನೆ

ಕೋಟಿ ದೂರವ ದಾಟಿ
ಮನದಿ ಭಾವನೆಗಳ ಮೀಟಿ
ಸುಳಿದಾಡಿದೆ ನೀ
ಸನಿಹ
ಪ್ರತಿದಿನ

ಪ್ರೀತಿ ಹೃದಯದಿ ಹುಟ್ಟಿ
ಮರವಾಗಿ 
ನಂಬಿಕೆಯ ಬೇರು ಆಳಕ್ಕಿಳಿದು
ನವಿರು ಪ್ರೇಮದ ನೆರಳು
ಬೀಳುವ ಮೊದಲೇ
ನೀ ಬರುವುದ ತಪ್ಪಿದ್ದೆ
ನಾ ಅದನೆ ಅಪ್ಪಿದ್ದೆ

-- ನವೀನ್ ಕೆ.ಎಸ್.

Wednesday, October 14, 2009

ಬರೀ ನೊರೆ....ನೊರೆ ಅಷ್ಟೆ

ಮೂಲ ಕತೆ : ಹರ್ನ್ಯಂಡೋ ತೆಲೆಜ್
ಇಂಗ್ಲೀಶ್ ಅನುವಾದ: ಡೊನಾಲ್ಡ್ ಯೇಟ್ಸ್

ನಾವು ಪಿ ಯು ಸಿ ಯಲ್ಲಿ ಓದುತ್ತಿರುವಾಗ ಇಂಗ್ಲಿಷ್ ಭಾಷೆಯ/ವಿಷಯದ ಒಂದು ಭಾಗವಾಗಿ ಓದಿದ Just Lather..Thats All ನನ್ನ ಮನ ತಟ್ಟಿದ ಕತೆ. ಕೊಲಂಬಿಯಾದಲ್ಲಿ ಹುಟ್ಟಿ ಪತ್ರಕರ್ತನಾಗಿ ದುಡಿದು, ಸರ್ವಾಧಿಕಾರದ ಆಳ್ವಿಕೆಯ ಕಾಲದಲ್ಲಿ ಆದ ಅನುಭವಗಳನ್ನು ತಮಾಶೆಯಾಗಿ ಅಷ್ಟೇ ಸ್ವಾರಸ್ಯಕರವಾಗಿ ಕತೆಗಳ ಮೂಲಕ ನಿರೂಪಿಸಿದ್ದಾನೆ ಹರ್ನ್ಯಂಡೋ ತೆಲೆಜ್ . ನನ್ನ ಸ್ನೇಹಿತ ಗುರುರಾಜ್ ಇಂಟರ್ನೆಟ್ ನಲ್ಲಿ ಹುಡುಕಿ ಕಳಿಸಿ ಅನುವಾದ ಮಾಡು ಎಂದಾಗ ಮನದಲ್ಲಿ ಅಳುಕು ಮೂಡಿತ್ತು. ಕೊನೆಗೂ ಅನುವಾದ ಮಾಡಿದ ಮೇಲೆ ಮನಸ್ಸು ನಿರಾಳವಾಗಿದೆ. ಇದು ತುಂಬಾ ಗ್ರೇಟ್ ಅನುವಾದ ಏನಲ್ಲ. ಆದರೆ ಮೂಲ ಕತೆಗೆ ಚ್ಯುತಿ ಬಾರದಂತೆ ಅನುವಾದಿಸಲು ಪ್ರಯತ್ನಿಸಿದ್ದೇನೆ. ಈ ಅನುವಾದ Just Lather..Thats All ಕತೆಯನ್ನು ತುಂಬಾ ಇಷ್ಟ ಪಡುವ ನನ್ನ ಸ್ನೇಹಿತ ರಜನಿ ಬಾಬುಗೆ ಅರ್ಪಣೆ.

ರೇರನ್ನು ಹರಿತಗೊಳಿಸುತ್ತಿದ್ದ ನಾನು ಒಳಗೆ ಬಂದು ಏನೂ ಹೇಳದೆ ಇದ್ದವನನ್ನು ಗಮನಿಸಲಿಲ್ಲ. ಸರಿಯಾಗಿ ನೋಡಿ ಅವನನ್ನು ಗುರುತಿಸಿದೊಡನೆ ಹೃದಯ ಬಡಿತ ಹೆಚ್ಚಾಗಿತ್ತು. ಆತಂಕವನ್ನು ಹೊರಗೆವದೆ ಮಸೆದ ರೇರಿನ ಹರಿತವನ್ನು ಬೆಳಕಿಗೆ ಹಿಡಿದು ನೋಡಿದೆ. ಅಷ್ಟರೊಳಗೆ ದೇಹಕ್ಕೆ ಆತುಕೊಂಡಿದ್ದ ಬೆಲ್ಟ್, ಗನ್ ಹೋಲ್ಡರ್ಗಳನ್ನು ಮೊಳೆಗೆ ತೂಗುಹಾಕಿ ತನ್ನ ಮಿಲಿಟರಿ ಕ್ಯಾಪನ್ನು ಅದರ ಮೇಲೆ ಇರಿಸಿದ್ದ. ಟೈ ಸಡಿಲಗೊಳಿಸುತ್ತ ನನ್ನತ್ತ ತಿರುಗಿ "ಸಿಕ್ಕಾಪಟ್ಟೆ ಸೆಖೆ. ಶೇವ್ ಆದ್ರೆ ಒಳ್ಳೇದು" ಎನ್ನುತ್ತಾ ಖುರ್ಚಿಯಲ್ಲಿ ಕುಳಿತ.

ಕಪ್ಪಿಟ್ಟ ಮುಖ. ನಾಲ್ಕು ದಿನಗಳ ಗಡ್ಡ. ಆ ದಿನಗಳು ನಮ್ಮವರನ್ನು ಹಿಡಿಯಲು ನೂರಾರು ಸೈನಿಕರೊಡನೆ ಕಾಡಿಗೆ ನುಗ್ಗಿದ್ದು ನನಗೆ ತಿಳಿದಿತ್ತು. ಸೋಪಿನ ಚೂರುಗಳನ್ನು ಬೆಚ್ಚನೆ ನೀರಿಗೆ ಹಾಕಿ ಬ್ರಶ್ ನಿಂದ ತಿರುಗಿಸುತ್ತಿದ್ದಂತೆ ನೊರೆ ಉಕ್ಕತೊಡಗಿತು.
"ಆ ಗುಂಪಿನವರಿಗೂ ಇಷ್ಟೇ ಗಡ್ಡ ಇರತ್ತೆ" ನಾನು ಕೇಳದೆಯೇ ಹೇಳಿದ. ಇನ್ನಷ್ಟು ರಭಸದಿಂದ ಬ್ರಶ್ ತಿರುಗಿತು.
"ಪ್ರಮುಖರೆಲ್ಲರು ಸಿಕ್ಕಿದ್ದಾರೆ. ಒಂದಿಷ್ಟು ಹೆಣಗಳೂ ಸಿಕ್ಕಿವೆ. ತಪ್ಪಿಸಿಕೊಂಡೋರನ್ನು ಬಿಡಲ್ಲ. . . . ಒಂದೆರಡು ದಿನ ಅಷ್ಟೇ . . . . . ಅವರನ್ನೂ ಹಿಡಿದು ಹಾಕ್ತೀವಿ."
"ಎಷ್ಟು ಜನ ಸಿಕ್ಕಿದ್ದಾರೆ"
"ಹದಿನಾಲ್ಕು.....ಅವರನ್ನು ಹಿಡಿಯೋಕೆ ತುಂಬಾ ಕಾಡಿನೊಳಗೆ ಹೋಗಬೇಕಾಯಿತು. ಈ ಸಾರ್ತಿ ಎಲ್ಲರನ್ನು ಕೊಂದುಹಾಕ್ತೀವಿ."
ಇನ್ನೂ ಏನೋ ಹೇಳಹೊರಟವನು ನೊರೆ ತುಂಬಿದ ಬ್ರಶ್ ನೋಡುತ್ತಲೇ ಖುರ್ಚಿಗೆ ಒರಗಿದ. ಇನ್ನು ಬಟ್ಟೆಯನ್ನು ಅವನಿಗೆ ಹೊದಿಸಬೇಕಿತ್ತು. ಬ್ರಶ್ ಮೇಜಿನ ಮೇಲಿಟ್ಟು ಡ್ರಾ ದಿಂದ ಬಟ್ಟೆ ತೆಗೆದು ಕುತ್ತಿಗೆಗೆ ಗಂಟು ಹಾಕಿದೆ. ಅವನ ಮಾತಿಗೆ ಕಡಿವಾಣ ಇರಲಿಲ್ಲ. ನನ್ನ ಮೌನ ಅವನೆಡೆಗೆ ಅನುಕಂಪ ತೋರುವನ್ತಿದ್ದರೆ ನನ್ನ ತಪ್ಪಲ್ಲ. ಸಾಸಿವೆಕಾಳಿನಷ್ಟು ಅನುಕಂಪ ಅವನೆಡೆಗೆ ಇರಲಿಲ್ಲ. ಆದರೆ ಅವನು ಹಾಗೆ ಭಾವಿಸಿದ್ದ.
"ಮೊನ್ನೆ ಶಾಲೆಗೆ ಬಂದಿದ್ಯಲ್ಲ"
"ಹೌದು"
"ಹೇಗಿತ್ತು"
"ಚೆನ್ನಾಗಿತ್ತು"
"ಜನಕ್ಕೆ ಒಳ್ಳೆ ಪಾಠ ಅಲ್ವ?"
"ಹೌದು"
ಮತ್ತೆ ಬ್ರಶ್ ತೆಗೆದುಕೊಂಡು ಗಡ್ಡಕ್ಕೆ ಹಚ್ಚತೊಡಗಿದೆ. ಬ್ರಷನ್ನು ಆವರಿಸಿದ್ದ ನೊರೆ ನಿಧಾನವಾಗಿ ಗಡ್ಡವನ್ನು ಆವರಿಸಿತು. ತಂಪಾದ ನೊರೆ ಮುಖಕ್ಕೆ ಸೋಕುತ್ತಲೇ ಸುಸ್ತಾಗಿದ್ದ ಅವನು ಕಣ್ಮುಚ್ಚಿದ. ಅವನನ್ನು ಮೊದಲು ನೋಡಿದ್ದು ಶಾಲಾ ಮೈದಾನದಲ್ಲಿ. ಗಲ್ಲಿಗೇರಿಸಿದ ನಾಲ್ವರು ಕ್ರಾಂತಿಕಾರಿಗಳನ್ನು ನೋಡಲು ಇಡೀ ನಗರಕ್ಕೆ ಆಜ್ಞೆ ನೀಡಿದ್ದ. ಆದರೆ ಅಂಗ ಹೀನವಾದ ಆ ಹೆಣಗಳ ನೋಟ ಅವನ ಮುಖವನ್ನು ನೋಡದಂತೆ ಮಾಡಿತ್ತು. ಇವತ್ತು ಅದೇ ಮುಖ ನನ್ನ ಕೈಯಲ್ಲಿದೆ. ಇವನ ಮುಖ ಅಷ್ಟೇನೂ ಕೆಟ್ಟದಾಗಿಲ್ಲ. ಗಡ್ಡ ಅವನನ್ನು ಸ್ವಲ್ಪ ವಯಸ್ಸಾದವನಂತೆ ಮಾಡಿತ್ತು. ಅವನ ಹೆಸರು ಟಾರಸ್, ಕ್ಯಾಪ್ಟನ್ ಟಾರಸ್. ಈ ಮನುಷ್ಯನಿಗೆ ಎಷ್ಟು ವಿಚಿತ್ರ ಕಲ್ಪನೆಗಳು ಬರುತ್ತವೆ ಅಂತ ಇವನು ಗಲ್ಲಿಗೆರಿಸಿದವರ ಹೆಣಗಳ ಮೇಲೆ ಟಾರ್ಗೆಟ್ ಪ್ರಾಕ್ಟೀಸ್ ಮಾಡಿಸಿದಾಗಲೇ ಗೊತ್ತಾಗಿದ್ದು. ಅವನು ಕಣ್ಮುಚ್ಚಿಕೊಂಡೆ " ನಾನೀಗ ಆರಾಮವಾಗಿ ನಿದ್ದೆ ಮಾಡಬಹುದು" ಎಂದ. ನನ್ನನ್ನೇನು ಕೆಣಕುತ್ತಿಲ್ಲ ಅಲ್ವ! ನಾನು ಸೋಪ್ ಹಚ್ಚೋದು ನಿಲ್ಲಿಸಿದೆ.
"ಸಂಜೆ ಸಿಕ್ಕಾಪಟ್ಟೆ ಕೆಲಸ ಇದೆ"
"ಮತ್ತೆ ಟಾರ್ಗೆಟ್ ಪ್ರಾಕ್ಟೀಸ್ ಮಾಡ್ತೀರ ?"
"ಅದೇ ತರ. ಆದರೆ ಯೋಚಿಸಿಲ್ಲ"
ಮೊನ್ನೆಯ ಘಟನೆಯು ಕಣ್ಮುಂದೆ ಬಂದಿತು. ಆತಂಕ ಎದೆಯ ಒಳಗೆ. ನಡುಗುತ್ತಿರುವ ಕೈಯಿಂದ ಬಿಟ್ಟ ಕೆಲಸ ಮತ್ತೆ ಶುರುಮಾಡಿದೆ. ಅವನ ಪ್ರಾಣ ನನ್ನ ಕೈಲಿದೆ ಅನ್ನೋ ಯೋಚನೆ ಒಂದಿಷ್ಟು ಸಮಾಧಾನ ನೀಡಿತು. ಆದರೆ ಇವನು ಇಲ್ಲಿಗೆ ಬರದೆ ಇದ್ದಿದ್ರೆ ಒಳ್ಳೇದಿತ್ತು. ಇಷ್ಟು ಹೊತ್ತಿಗಾಗಲೇ ಕ್ಯಾಪ್ಟನ್ ನನ್ನ ಬಳಿ ಶೇವ್ ಮಾಡಿಸಿಕೊಳ್ಳುತ್ತಿರೋ ವಿಚಾರ ನಮ್ಮವರಿಗೆಲ್ಲ ತಿಳಿದಿರುತ್ತೆ. ವೈರೀನ ಮನೆಗೆ ಸೇರಿಸೋದು ಒಳ್ಳೇದಲ್ಲ. ನನ್ನ ಪ್ರತಿ ಗ್ರಾಹಕರಂತೆ ಎಚ್ಚರಿಕೆಯಿಂದ, ನಿಧಾನವಾಗಿ ಒಂದೂ ಹನಿ ರಕ್ತ ಹೊರಬರದಂತೆ ಶೇವ್ ಮಾಡಬೇಕಾದ ಅನಿವಾರ್ಯತೆ ನನಗೆ. ರೇರ್ ಸರಿದಾಡಿದ ಪ್ರತಿ ಅಂಗುಲವೂ ಸ್ವಚ್ಚವಾಗಬೇಕು, ಮ್ರುದುವಾಗಬೇಕು. ಸವರಿದಾಗ ಚರ್ಮ ಒರಟಾಗಿರಬಾರದು. ನಾನು ಒಳಗೊಳಗೇ ಕ್ರಾಂತಿಕಾರಿಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿದ್ದೆ. ಜೊತೆಗೆ ನನ್ನ ವೃತ್ತಿಯ ಬಗ್ಗೆ ಅಷ್ಟೇ ಶ್ರದ್ದೆ ಇತ್ತು. ನನ್ನ ನಿಖರತೆಯ ಬಗ್ಗೆ ಹೆಮ್ಮೆಯೂ ಇತ್ತು. ನಾಲ್ಕು ದಿನದ ಗಡ್ಡ ರೇರಿಗೆ ಸವಾಲಾಗದಿದ್ದರೂ ನನಗೆ ಸವಾಲಾಗಿತ್ತು.

ರೇರ್ ತೆಗೆದುಕೊಂಡು ಸೈಡ್ ಬರ್ನ್ ಕೆಳಗಿಂದ ಕೆಲಸ ಆರಂಭಿಸಿದೆ. ಅವನ ಗಡ್ಡ ಶತ ಒರಟು. ಚರಚರ ಸದ್ದು ಮಾಡುತ್ತಾ ರೇರ್ ಅತ್ತಿತ್ತ ಓದುತ್ತಿದ್ದಂತೆ ಚರ್ಮ ಸ್ವಲ್ಪ ಸ್ವಲ್ಪ ಕಾಣಿಸಿತು. ಕೂದಲು ನೋರೆಯೊಂದಿಗೆ ಬೆರೆತು ಬ್ಲೇಡಿನ ಸುತ್ತ ಮುಟ್ಟಿತು. ಅಂಟಿಕೊಂಡಿದ್ದನ್ನು ಒರೆಸಿ ಮತ್ತೊಮ್ಮೆ ರೆಝರ್ ಮಸೆದೆ. ಕಣ್ಮುಚ್ಚಿ ಕುಳಿತವ ನಿಧಾನವಾಗಿ ಕಣ್ತೆರೆದು ಬಟ್ಟೆಯ ಒಳಗಿಂದ ಕೈ ತೆಗೆದು ಕೆನ್ನೆ ಮುಟ್ಟಿನೋಡಿಕೊಂಡ . ಕನ್ನಡಿಯಲ್ಲಿ ಶೇವ್ ಆದ ಜಾಗ ನೋಡುತ್ತಾ
"ಇವತ್ತು ಸಂಜೆ ಆರು ಗಂಟೆಗೆ ಬಂದುಬಿಡು" ಎಂದ.
"ಮೊನ್ನೆ ತರ ಇವತ್ತೇನಾದರೂ...." ಅನುಮಾನಿಸಿದೆ.
"ಅವತ್ತಿಗಿಂತ ಚೆನ್ನಾಗಿರುತ್ತೆ"
ತಾನು ಮಾಡಲು ಹೋರಾಟ ಕೆಲಸದ ಬಗ್ಗೆ ತುಂಬಾ ವಿಶ್ವಾಸ ಇರುವವನಂತೆ ಕಾಣಿಸಿತು. ನನಗೂ ಭಯಮಿಶ್ರಿತ ಕುತೂಹಲ.
"ಏನು ಮಾಡ್ಬೇಕು ಅಂದುಕೊಂಡಿದ್ದೀರಾ?"
"ಇನ್ನು ಏನು ಇಲ್ಲ.......ಆದರೆ ಒಂದಿಷ್ಟು ಗಮ್ಮತು ಮಾಡಬಹುದು"
ಹಿಂದೊರಗಿ ಕಣ್ಮುಚ್ಚಿದ. ಕೈಗೆ ರೇರ್ ಬಂತು. ಬಾಯಿಗೆ ಮಾತು ಬಂತು.
"ಇವತ್ತೇ ಎಲ್ಲರಿಗೂ ಶಿಕ್ಷೆನ?"
"ಹೌದು ಎಲ್ಲರಿಗೂ"
ಹಚ್ಚಿದ್ದ ಸೋಪು ಒಣಗುತ್ತಿತ್ತು. ತಕ್ಷಣವೇ ಕೆಲಸ ಮುಂದುವರೆಸಿದೆ. ನನ್ನ ನೋಟ ಕನ್ನದಿಯೇದೆಗೆ ಸರಿಯಿತು. ಅದೇ ಬಿಂಬ ಪ್ರತಿಬಿಂಬಗಳ ಆಟ. ಎಡಬಲಗಳು ಬಲಎಡಗಳಾಗಿ, ಹತ್ತಿರ ದೂರಗಳು ಒಂದಾಗಿ ಮೊದಲನೋಟಕ್ಕೆ ಅರ್ಥವಾಗದ ಪ್ರತಿಬಿಂಬಗಳ ಸಂಕಲನ. ಹೊರಗಡೆ ಇದ್ದಿದ್ದು ಮಧ್ಯಾನ್ಹದ ಮಾಮೂಲಿ ದೃಶ್ಯಗಳು. ಕಿರಾಣಿ ಅಂಗಡಿಯಲ್ಲಿನ ಒಂದೆರಡು ಮಾಮೂಲಿ ಗಿರಾಕಿಗಳು ಬಿಟ್ಟರೆ ಬೀದಿಯೆಲ್ಲ ಖಾಲಿ ಖಾಲಿ. ಮತ್ತೊಂದು ಸೈಡ್ ಬರ್ನ್ ನಿಂದ ರೇರ್ ಕೆಳಗಿಳಿಯಿತು. ಗಡ್ಡ ಇದ್ದಾಗಲೇ ಇವನು ಚೆನ್ನಾಗಿ ಕಾಣಿಸುತ್ತಿದ್ದ. ಕವಿಗಳ ಹಾಗೆ, ಸನ್ಯಾಸಿಗಳ ಹಾಗೆ ಗಡ್ಡ ಬಿಟ್ಟಿದ್ರೆ ಚೆನ್ನಾಗಿ ಒಪ್ಪುತ್ತಿತ್ತು. ತುಂಬಾ ಜನಕ್ಕೆ ಅವನ ಗುರುತು ಸಿಕ್ತಾ ಇರಲಿಲ್ಲ; ನನಗೂ. ಈಗ ರೆಝರ್ ನ ಅಲುಗು ಕುತ್ತಿಗೆಯ ಬಳಿ ಆಡ್ತಾ ಇದೆ. ಸೂಕ್ಷ್ಮ ಜಾಗ ಆಗಿರೋದ್ರಿಂದ ಎಷ್ಟು ಎಚ್ಚರಿಕೆವಹಿಸಿದ್ದರೂ ಸಾಲದು. ಈ ಜಾಗದಲ್ಲಿ ಕೂದಲು ಸುರುಳಿಯಾಗಿರುತ್ತೆ; ಆದರೆ ಮ್ರುದುವಾಗಿರುತ್ತೆ. ಒಂದು ಅಜಾಗರೂಕತೆಯ ರೇರಿನ ಎಳೆತ ಸಾಕು ಚರ್ಮದ ರಂಧ್ರದಲ್ಲಿ ರಕ್ತದ ಮುತ್ತನ್ನು ಹೊರಗೆಡವಲು. ನನ್ನಂತ ಉತ್ತಮ ಕ್ಷೌರಿಕ ಬೇಜವಾಬ್ದಾರಿತನದಿಂದ ಕೆಲಸ ಮಾಡಲು ಸಾಧ್ಯವೇ? ನಮ್ಮೋರು ಎಷ್ಟು ಜನ ಸತ್ತಿದ್ದು? ಹದಿನಾಲ್ಕು ಜನರನ್ನು ಹಿಡಿದಿದ್ದೀನಿ ಅಂದ ಅಲ್ವ? ಇವರೆಲ್ಲರ ಮೇಲೆ ಮತ್ತೊಮ್ಮೆ ಟಾರ್ಗೆಟ್ ಪ್ರಾಕ್ಟೀಸ್? ಈ ಆಲೋಚನೆಗೆಲ್ಲ ಬರದಿದ್ರೆ ಒಳ್ಳೇದು. ನಾನು ಅವನ ಶತ್ರು ಅಂತ ಅವನಿಗೆ ಗೊತ್ತಿಲ್ಲ. ಅವನಿಗೇನು ಯಾರಿಗೂ ಗೊತ್ತಿಲ್ಲ; ನಮ್ಮವರನ್ನು ಬಿಟ್ಟು. ಬಂದೂಕು ಹಿಡಿದು ಕೆಲಸ ಮಾಡುವುದಕ್ಕಿಂತ ಎಲ್ಲರ ನಡುವೆ ಇದ್ದು ಅನುಮಾನಬಾರದಂತೆ ಕೆಲಸ ಮಾಡೋದು ಕಷ್ಟ. ಹೌದು ಒಳಗೊಳಗೇ ಕ್ರಾಂತಿಕಾರಿಗಳಿಗೆ ಸಹಾಯ ಮಾಡುತ್ತಾ ಇದ್ದೆ. ಟಾರಸ್ ನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದೆ. ಅವನ ಪ್ರತಿಯೊಂದು ಕೆಲಸಗಳ ಬಗ್ಗೆ ನಮ್ಮವರಿಗೆ ಮಾಹಿತಿ ಕೊಡ್ತಾ ಇದ್ದೆ. ನಾನು ಏನೆ ಪ್ರಯತ್ನ ಮಾಡಿದರು ಪ್ರತಿಬಾರಿ ಅವನ ಯೋಜನೆಗಳಲ್ಲಿ ಯಶಸ್ವಿಯಾಗಿದ್ದ. ನನ್ನ ಕೈಗೆ ಸಿಕ್ಕ ಮೇಲೂ ಇವನನ್ನು ಜೀವಂತವಾಗಿ ಹೋಗೋಕೆ ಬಿಡೋದೇ.. ಅದೂ ಶೇವ್ ಮಾಡಿ.

ನನ್ನ ಕೆಲಸ ಹೆಚ್ಚು ಕಡಿಮೆ ಮುಗಿಯುತ್ತಾ ಬಂತು. ಈಗ ಅವನು ಮೊದಲಿಗಿಂತ ಚಿಕ್ಕವನಂತೆ ಕಾಣಿಸುತ್ತಿದ್ದಾನೆ. ನನ್ನ ಬಳಿ ಶೇವ್ ಮಾಡಿಸಿಕೊಂದವರೆಲ್ಲರು ಬಹುಷಃ ಹೀಗೆ ಕಾಣ್ತಾರೆಂತ ಅನ್ಸುತ್ತೆ. ಗಲ್ಲದ ಹತ್ತಿರ ಒಂಚೂರು, ಕುತ್ತಿಗೆಯ ಹತ್ತಿರ ಒಂಚೂರು, ದೊಡ್ಡ ನಾಡಿಯ ಹತ್ತಿರ ಒಂಚೂರು ನೊರೆ ಅಷ್ಟೇ. ನೋಡುತ್ತಿದ್ದಾರೆ ರೋಷ ಉಕ್ಕೆರುತ್ತೆ. ಟಾರಸ್ ಕೂಡ ಬೆವರುತ್ತಿರಬೇಕು. ಆದರೆ ಅವನು ಹೆದರಿದಂತೆ ಕಾಣುತ್ತಿಲ್ಲ. ಅವನು ಎಷ್ಟು ಶಾಂತ ನಾಗಿದ್ದಾನೆ ಎಂದರೆ ಸೆರೆ ಹಿಡಿದ ನಮ್ಮವರನ್ನು ಏನು ಮಾಡೋದು ಅಂತಾನು ಇನ್ನು ಚಿಂತಿಸಿಲ್ಲ. ಆದರೆ ನಾನು ರೇರ್ ಹರಿತಕ್ಕೆ ರಕ್ತ ಹೊರಬರದಂತೆ ಅತಿ ಎಚ್ಚರಿಕೆಯಿಂದ ಶೇವ್ ಮಾಡಬೇಕಿದೆ. ಬೇರೆ ವಿಚಾರಗಳನ್ನು ಸರಿಯಾಗಿ ಯೋಚಿಸಲೂ ಆಗ್ತ ಇಲ್ಲ. ಇವನ್ಯಾಕೆ ಇಲ್ಲಿಗೆ ಬಂದ? ನಾನೊಬ್ಬ ಕ್ರಾಂತಿಕಾರಿ, ಕೊಲೆಗಡುಕ ಅಲ್ಲ. ಇವನನ್ನು ಕೊಲ್ಲೋದು ಎಷ್ಟು ಸುಲಭ. ಇವನಿಗೆ ಬದುಕೋಕೆ ಅರ್ಹತೆ ಇಲ್ಲ. ನಿಜವಾಗಲೂ ಇಲ್ವಾ? ಅಯ್ಯೋ ದೇವರೇ!? ಯಾರೋ ಇನ್ನ್ಯಾರನ್ನೋ ಇನ್ನ್ಯಾರಿಗೊಸ್ಕರ ಕೊಲೆ ಮಾಡೋದು ಎಷ್ಟು ಸರಿ? ಅದರಿಂದ ಸಿಗೋದೇನು? ಒಬ್ಬರ ಹಿಂದೆ ಒಬ್ಬರು ಬರ್ತಾನೆ ಇರ್ತಾರೆ. ಮೊದಲು ಬಂದವರು ಅವರ ಹಿಂದೆ ಇದ್ದೊರನ್ನು, ಹಿಂದೆ ಇದ್ದೋರು ಅವರ ಹಿಂದೆ ಬರೋರನ್ನು ಕೊಲ್ತಾ ಇದ್ರೆ ಅದಕ್ಕೆ ಕೊನೆ ಎಲ್ಲಿ? ಕೊನೆಗೆ ಸಿಗೋದು ರಕ್ತದ ಕಾಲುವೆ ಮಾತ್ರ. ಇವನ ಕುತ್ತಿಗೆ ಕೊಯ್ಯೋದು ಎಷ್ಟು ಸುಲಭ. ರೇರ್ ನ ಒಂದು ಎಳೆತ ಕುತ್ತಿಗೆ ಹತ್ತಿರ...ನಾಡಿ ತುಂಡಾಗಿ ರಕ್ತ ನೀರಿನಂತೆ ಹರಿಯುತ್ತೆ. ಇವನಿಗೆ ಅಲ್ಲಾಡೋಕೂ ಆಸ್ಪದ ಇಲ್ಲ. ನನ್ನ ಹೊಳೆಯುತ್ತಿರೋ ರೇರ್ ಅಥವಾ ಹೊಳೆಯುತ್ತಿರೋ ಕಣ್ಣುಗಳನ್ನು ನೋಡೋಕು ಅವಕಾಶ ಸಿಗಲ್ಲ. ನನ್ನ ಕೈ ನಿಜವಾದ ಕೊಲೆಗಾರನಂತೆ ನಡುಗುತ್ತಿದೆ. ಅವನ ಕುತ್ತಿಗೆಯಿಂದ ಹೊರಬರೋ ರಕ್ತಧಾರೆ ಅವನಿಗೆ ಹೊದಿಸಿದ ಬಟ್ಟೆಯ ಮೇಲೆ ಚಿಮ್ಮಿ, ಕುರ್ಚಿಯ ಮೇಲೆ ಹರಿದು, ನನ್ನ ಕೈಗಳನ್ನು ತೊಯ್ದು, ನೆಲದ ಮೇಲೆ ಹರಿಯುತ್ತಲ್ಲ!!! ನನಗೆ ಗೊತ್ತು ಒಂದು ಜೋರಾದ ಹೊಡೆತ, ಒಂದು ಆಳವಾದ ಕಚ್ಚು ನೋವಾಗದಂತೆ ಸಾವು ತರುತ್ತೆ. ಆದರೆ ಶವಾನ ಏನು ಮಾಡೋದು? ಎಲ್ಲಿ ಅಡಗಿಸಿಡೋದು? ನಾನೆಲ್ಲಿ ಹೋಗಲಿ......ಓಡಿಹೊಗಲಿ? ಹೌದು ಓಡಿಹೊಗಬೇಕಾಗುತ್ತೆ....ದೂರ.... ಬಹುದೂರ.....ಬಲುದೂರ. ಅವರು ನನ್ನನ್ನು ಸುಮ್ಮನೆ ಬಿಡ್ತಾರ? ನಾನು ಸಿಗೋವರೆಗೂ ಹಿಂದೆ ಬರ್ತಾರೆ. ಜನ ಏನೆಂದುಕೊಳ್ತಾರೆ....? "ಕ್ಯಾಪ್ಟನ್ ಟಾರಸ್ ನ ಕೊಲೆಗಾರ. ಶೇವ್ ಮಾಡೋವಾಗ ಕುತ್ತಿಗೆ ಕೊಯ್ದೊನು. ಹೇಡಿ." ಮತ್ತೊಂದು ಕಡೆ " ನಮ್ಮೆಲರಿಗೂ ಆಸರೆಯಾಗಿದ್ದವ. ನಮ್ಮ ಕೆಲಸಗಳಿಗೆ ನೆರವಾದವ. ನಮ್ಮ ಹೀರೋ." ಆದರೆ ನಾನು ಯಾವ ವರ್ಗಕ್ಕೆ ಸೇರ್ತೀನಿ? ಕೊಲೆಗಾರಾನ ಅಥವಾ ಹೀರೋನ? ನನ್ನ ವಿಧಿ ನಾನು ಹೇಗೆ ರೆಝರನ್ನು ಹೇಗೆ ಉಪಯೋಗಿಸ್ತೀನಿ ಅನ್ನೋದರ ಮೇಲೆ ನಿಂತಿದೆ. ಕೈಯನ್ನು ತಿರುಗಿಸಿ ಸ್ವಲ್ಪ ಒತ್ತಿ ಒಳಗೆ ಸೇರಿಸಿದರೆ ಮುಗೀತು. ಚರ್ಮ ರೇಷ್ಮೆಯಂತೆ, ರಬ್ಬರಿನಂತೆ ದಾರಿ ಬಿಡುತ್ತೆ. ಮನುಷ್ಯನ ಚರ್ಮಕ್ಕಿಂತ ಮ್ರುದುವಾಗಿರೋದು ಯಾವುದೂ ಇಲ್ಲ. ಗಂಟಲು ಸೀಳಿದೊಡನೆ ಅದರ ಹಿಂದೆ ಹೊರನುಗ್ಗೋದು ರಕ್ತ...ಕೆಂಪುರಕ್ತ. ಇಷ್ಟು ಹರಿತವಾದ ರೇರ್ ಕೊಯ್ಯದೆ ಇರಲು ಸಾಧ್ಯವೇ ಇಲ್ಲ. ಆದರೆ ನಾನು ಕೊಲೆಗಾರ ಆಗಲು ಸಿದ್ಧ ಇಲ್ಲ. ಇಲ್ಲ ಸರ್ ನೀವು ಇಲ್ಲಿ ಬಂದಿರೋದು ಶೇವ್ಗೋಸ್ಕರ. ನಾನು ನನ್ನ ಕೆಲಸ ಮಾಡ್ತೀನಿ.....ಒಂಚೂರು ರಕ್ತ ಹೊರಬರದಂತೆ, ನನ್ನ ಕೈ ರಕ್ತವಾಗದಂತೆ. ಬರಿ ನೊರೆ....ನೊರೆ ಅಷ್ಟೇ. ನೀವೊಬ್ಬ ಕ್ಯಾಪ್ಟನ್. ಜನರನ್ನು ಹಿಡಿಯೋದು, ಶಿಕ್ಷಿಸೋದು ನಿಮ್ಮ ಕೆಲಸ. ಆದರೆ ನಾನು ಇಲ್ಲಿ ಬರೀ ಬಾರ್ಬರ್. ಪ್ರತಿ ಮನುಷ್ಯನಿಗೂ ಅವನದೇ ಆದ ಕರ್ತವ್ಯಗಳಿವೆ. ಅದನ್ನು ಅವನು ಮಾಡಬೇಕು.

ಅಂತೂ ಶೇವ್ ಮುಗೀತು. ಅವನು ಎದ್ದು ಕನ್ನಡಿಯಲ್ಲಿ ಮುಖ ನೋಡಿದ. ಹೊಸದಾಗಿ ಹೊಳೆಯುತ್ತಿದ್ದ ಮುಖವನ್ನು ಕೈಯಿಂದ ಮುಟ್ಟಿನೋಡಿ ನಸುನಕ್ಕ. "ಥ್ಯಾಂಕ್ಸ್" ಎಂದು ನೇತು ಹಾಕಿದ್ದ ಒಂದೊಂದೇ ವಸ್ತುಗಳನ್ನು ಧರಿಸತೊಡಗಿದ. ನಾನು ಬಿಳಿಚಿಕೊಂಡಿದ್ದ. ಅಂಗಿ ಒದ್ದೆಯಾಗಿರುವಂತೆ ಅನಿಸಿತು. ಟಾರಸ್ ಪಿಸ್ತೂಲ್ ಸರಿಯಾಗಿ ಇಟ್ಟುಕೊಂಡು ತಲೆ ಕೂದಲು ಆಚೀಚೆ ಸರಿಸಿ ಕ್ಯಾಪ್ ಧರಿಸಿದ. ಪ್ಯಾಂಟ್ ಜೇಬಿನಿಂದ ಒಂದಿಷ್ಟು ಕಾಯಿನ್ ಗಳನ್ನು ತೆಗೆದು ನನ್ನ ಕೈಮೇಲಿಟ್ಟು ಹೊರಗೆ ಬಾಗಿಲಿನ ಕಡೆಗೆ ನಡೆದ. ಬಾಗಿಲ ಬಳಿ ಒಂದು ಕ್ಷಣ ನಿಂತು ನನ್ನತ್ತ ತಿರುಗಿ " ನೀನು ನನ್ನ ಕೊಲೆ ಮಾಡೋಕೆ ಸಂಚು ಮಾಡಿದ್ದೀಯ ಅಂತ ಸುದ್ದಿ ಬಂತು. ಅದನ್ನು ಪರೀಕ್ಷೆ ಮಾಡೋಕೆ ಬಂದೆ. ಒಂದು ತಿಳಕೋ ಕೊಲೆ ಮಾಡೋದು ಅಷ್ಟು ಸುಲಭ ಅಲ್ಲ" ಎಂದು ಹೇಳಿ ರಸ್ತೆಗೆ ಇಳಿದ. ನಾನು ಅವಕ್ಕಾಗಿ ನೋಡುತ್ತಲೇ ಇದ್ದೆ.


Tuesday, October 13, 2009

ಯಾರಿಗೆಷ್ಟು ನೊಬೆಲ್ .....?

೧೯೦೧ ರಿಂದ ೨೦೦೯ ರ ವರೆಗಿನ ನೊಬೆಲ್ ಪ್ರಶಸ್ತಿ ಗಳಿಸಿದ ದೇಶಗಳ ಪಟ್ಟಿಯನ್ನು ಚಿತ್ರದಲ್ಲಿ ಪ್ರಕಟಿಸಲಾಗಿದೆ. ಫ್ಲಿಕರ್ ವೆಬ್ಸೈಟ್ ನಲ್ಲಿ ಪ್ರಕಟವಾದ ಮಾಹಿತಿ ನನಗೆ ಸಿಕ್ಕಿದ್ದು ಡಿಜಿಟಲ್ ಇನ್ಸ್ಪಿರಶನ್ ಬ್ಲಾಗ್ ಮೂಲಕ. ಆರು ವಿಭಾಗಗಳಲ್ಲಿ ಕೊಡಲಾಗುವ ಈ ಪ್ರಶಸ್ತಿಯ ಬಗ್ಗೆ ಹೆಚ್ಚೇನು ಹೇಳುವ ಅಗತ್ಯ ಇಲ್ಲ.

ಒಟ್ಟು ನೊಬೆಲ್ ಪ್ರೈಸ್ ಗಳಿಸಿದ ದೇಶಗಳು

ಅರ್ಥಶಾಸ್ತ್ರ
ವೈದ್ಯಕೀಯ
ಶಾಂತಿ
ರಸಾಯನಶಾಸ್ತ್ರ
ಭೌತಶಾಸ್ತ್ರ
ಸಾಹಿತ್ಯ

Saturday, October 10, 2009

ನೀನಿರುವ ಹೊತ್ತು

ನಿನ್ನೆ ಮನೆಯಲ್ಲಿ ಚಂದ್ರ ಇಣುಕಿದ್ದ ಹೊತ್ತು......
ನೀನೆ ಬಂದಂತೆ ಮನಸ್ಸು ಸಂಭ್ರಮಿಸಿತ್ತು......

Wednesday, September 23, 2009

ಪ್ರತಿ ನಿರೀಕ್ಷೆ

ಪ್ರೇಮ ಅವರ ಪ್ರೇಮಾಂತರಂಗ ಎಂಬ ಸುಂದರವಾದ ಬ್ಲಾಗಿನಲ್ಲಿ ಪ್ರಕಟವಾದ ಅವರ ನಿರೀಕ್ಷೆ ಹನಿಗವನಕ್ಕೆ ನನ್ನ ಪ್ರತಿ ನಿರೀಕ್ಷೆ.

ನಾ ನಿನಗೆ ಬೆನ್ನು ಮಾಡಿ ಹೋದಾಗ…..
ಮೈಯೆಲ್ಲಾ ಕಿವಿಯಾಗಿಸಿಕೊಂಡಿದ್ದೆ ನೀ ಕರೆವೆ ಎಂದು…..
ವಿಧಿಯ ಅಟ್ಟಹಾಸದ ಅಬ್ಬರದಲಿ ನಿನ್ನ ದನಿ ಕೇಳದೆ
ಮನದ ಭರವಸೆಯ ಬೀಜ ಮುರುಟಿಹೋಗಿತ್ತಂದು….

--ನವೀನ್ ಕೆ.ಎಸ್.

Sunday, September 20, 2009

ಮಳೆಯಲಿ... (ಯಾರೂ ಇರದೆ) ಜೊತೆಯಲಿ........



ಮಳೆಯ ವಿಚಾರದಲ್ಲಿ ಪಕ್ಕಾ ಮಲೆನಾಡಿಗ ನಾನು. ಎಲ್ಲೇ ಮಳೆಯಾದರೂ ತಟ್ಟನೆ ನೆನಪಾಗೋದು ನಮ್ಮೂರ ಮಳೆ. ಮಳೆಯ ಪ್ರಮಾಣದಲ್ಲಿ ವ್ಯತ್ಯಯ ಹೊರತುಪಡಿಸಿ ಎಲ್ಲ ಕಡೆ ಸುರಿಯುವ ಮಳೆ ತಂದೊಡುವ ಸನ್ನಿವೇಶಗಳು, ಎಬ್ಬಿಸುವ ಭಾವನೆಗಳು ಒಂದೇ. ಬೆಂಗಳೂರಿಗೆ ಬಂದ ನಂತರ ಮಳೆಯನ್ನು ಗಮನಿಸೋದು, ಮನದಲ್ಲಿ ಅರಳುವ ನವಿರು ಭಾವನೆಗಳನ್ನು ಅನುಭವಿಸೋದು ಬಿಟ್ಟಿದ್ದೆ. ದಾರಿಯಲ್ಲಿ ಹೋಗುವಾಗ ಮಳೆ ಬಂದರೆ ಅಲ್ಲೇ ಇರೋ ಅಂಗಡಿಯ ಸೂರಿನಲ್ಲಿ ನಿಂತು ಒಂದೈದು ನಿಮಿಷ ಮಳೆ ಬಿಡೋವರೆಗೂ ಕಾದು ಮುಂದೆ ಹೋಗುತ್ತಿದೆ. ಮಲೆನಾಡಿನಂತೆ ಬೆಂಗಳೂರ ಮಳೆಗೆ ವಿಶೇಷ ತಯಾರಿ ಬೇಕಾಗೋದಿಲ್ಲ. ಆದರು ಅಮ್ಮ ಮನೆಯಲ್ಲಿ ಇದ್ದ ಒಂದು ಕೊಡೆಯನ್ನು ಊರಿಗೆ ಹೋದಾಗ ಕೊಟ್ಟಿದ್ದಳು [ಈ ವಿಚಾರ ಗೊತ್ತಾದಾಗ ನೀನೆ ಛತ್ರಿ ನಿನಗ್ಯಾಕೋ ಛತ್ರಿ ಅಂತ ಸ್ನೇಹಿತೆ ಛೇಡಿಸುತ್ತ ಇದ್ಲು ].


ನಿನ್ನೆ ಕೆಲಸದ ಸಲುವಾಗಿ ಹೊರಗೆ ಹೋಗಿದ್ದೆ. ಮಳೆಯ ನಿರೀಕ್ಷೆ ಇದ್ದದ್ದರಿಂದ ಛತ್ರಿಯನ್ನು ತೆಗೆದುಕೊಂಡು ಹೋಗಲು ಮರೆತಿರಲಿಲ್ಲ. ಬಸ್ಸು ಇಳಿಯುವ ವೇಳೆಗಾಗಲೇ ಜಿಟಜಿಟ ಸದ್ದು ಮಾಡುತ್ತಾ ಮಳೆ ತನ್ನಿರುವಿಕೆಯನ್ನು ಸೂಚಿಸಿತ್ತು. ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಬಸ್ ಸ್ಟಾಂಡಿನಲ್ಲಿ ಕೆಸರುಗದ್ದೆಯನ್ನು ಸೃಷ್ಟಿಸಿಯಾಗಿತ್ತು. ನನ್ನ ನಿರೀಕ್ಷೆ ಸರಿಯಾದುದಕ್ಕೆ ಒಳಗೊಳಗೇ ಖುಷಿಪಡುತ್ತಾ ಬಸ್ಸಿನ ಕೊನೆಯ ಮೆಟ್ಟಿಲು [ಫುಟ್ ಬೋರ್ಡ್] ಇಳಿಯುವಾಗಲೇ ಛತ್ರಿ ಬಿಚ್ಚಿ ಕೆಸರಿನಲ್ಲಿ ಕಾಲಿಟ್ಟೆ. ನಿಧಾನವಾಗಿ ನಡೆದು ರಸ್ತೆಗೆ ಬಂದೆ. ಬೆನ್ನಲ್ಲಿದ್ದ ಬ್ಯಾಗನ್ನು ಸರಿಯಾಗಿ ಹೊತ್ತು ಒಂದು ಹನಿಯು ಮೈಮೇಲೆ ಬೀಳದಂತೆ ಜಾಗ್ರತೆವಹಿಸುತ್ತ ಮನೆಯ ಕಡೆ ಹೆಜ್ಜೆ ಹಾಕತೊಡಗಿದೆ. ನನ್ನ ಮುಂಜಾಗ್ರತೆಯನ್ನು ನೋಡಿ ಅಸೂಯೆಗೊಂಡ ಮಳೆ ಸ್ವಲ್ಪ ಜೋರಾಗಿಯೇ ಸುರಿಯತೊಡಗಿತು. ಛತ್ರಿ ಮತ್ತು ಬ್ಯಾಗನ್ನು ಬ್ಯಾಲೆನ್ಸ್ ಮಾಡ್ತಾ ಪ್ಯಾಂಟ್ ಒದ್ದೆಯಾಗದಿರಲಿ ಅಂತ ಸ್ವಲ್ಪ ಮಡಚಿಕೊಂಡೆ. ಇಟ್ಟಿದ್ದು ಎರಡೇ ಹೆಜ್ಜೆ ಧೋ ಅಂತ ಸುರಿಯತೊಡಗಿತ್ತು ಮಳೆ. ನನ್ನ ಮುನ್ನೆಚ್ಚರಿಕೆಗಳು ಯಾವುದು ನಡೆಯೋದಿಲ್ಲ ಅಂತ ಖಾತ್ರಿಯಾಯಿತು. ಅಲ್ಲಿಯವರೆಗೂ ನಾನು ಒದ್ದೆಯಾಗುತ್ತಿರುವ ಬಟ್ಟೆ ಮತ್ತು ಬ್ಯಾಗ್ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಯಾವಾಗ ಮಳೆಯ ಎದಿರು ನನ್ನ ಆಟಗಳು ನಡೀಲಿಲ್ಲವೋ ಆರಾಮವಾಗಿ ಹೆಜ್ಜೆ ಇಡತೊಡಗಿದೆ. ಬೆಂಬಿಡದೆ ಸುರಿಯುತ್ತಿದ್ದ ಮುಸಲಧಾರೆ ನನ್ನ ಛತ್ರಿಯ ಮೇಲೆ ಬಿದ್ದು ಕವಲುಗಳಾಗಿ ಒಡೆದು ಒಂದೊಂದು ತಂತಿಯ ತುದಿಯಲ್ಲೂ ಧಾರಾಕಾರವಾಗಿ ಬೀಳತೊಡಗಿತು. ಭೂಮಿಗೆ ಬಿದ್ದ ನೀರು ಕಾಲಿಗೆ ಎರಚತೊಡಗಿತ್ತು. ಛತ್ರಿಯ ತುದಿಯಿಂದ ನೇರವಾಗಿ ಕಂಬಿಗಳಂತೆ ಬೀಳುತ್ತಿದ್ದ ಮಳೆ ನನ್ನನ್ನು ಬಂಧಿಸಿರುವಂತೆ, ನಾನು ಪ್ರಕೃತಿಗೆ ಶರಣಾಗಿ ನನ್ನ ಛತ್ರಿ ಹಿಡಿದ ಕೈ ಅದಕ್ಕೆ ವಂದಿಸಿದಂತೆ ಭಾಸವಾಗತೊಡಗಿತು.


ಹಾಗೆ ನಡೆಯುತ್ತಿದ್ದಂತೆ ಹೈಸ್ಕೂಲಿಗೆ ಹೋಗುವಾಗ ಮಳೆ, ಗುಡುಗು, ಸಿಡಿಲು ಯಾವುದನ್ನೂ ಲೆಕ್ಕಿಸದೆ ಸೈಕಲ್ ಹೊಡಿತ ಇದ್ದದ್ದು ನೆನಪಾಯಿತು. ದೂರ ಹೆಚ್ಚೇನು ಅಲ್ಲ.....ಕೇವಲ ಐದು ಕಿಲೋಮೀಟರುಗಳು. ಸ್ಕೂಲ್ ಬ್ಯಾಗನ್ನು ಪ್ಲಾಸ್ಟಿಕ್ ನೊಳಗೆ ಸುತ್ತಿ ಕ್ಯಾರಿಯರ್ ಗೆ ಕಟ್ಟಿ ಒಂದು ಕೈನಲ್ಲಿ ಛತ್ರಿ ಮತ್ತೊಂದು ಕೈನಲ್ಲಿ ಸೈಕಲ್ ಹ್ಯಾಂಡಲ್ ಹಿಡಿದು ಉಬ್ಬು ತಗ್ಗುಗಳ ದಾರಿಯಲ್ಲಿ ಎಲ್ಲೂ ನಿಲ್ಲದೆ ಸೈಕಲ್ ಹೊಡೆಯುತ್ತಿದ್ದೆ[ವು]. ಸ್ಕೂಲ್ ತಲುಪೋವೇಳೆಗಾಗಲೇ ನಾವೆಲ್ಲಾ ಒದ್ದೆ ಮುದ್ದೆ. ನಮಗೆ ಖಾಳಜಿ ಇರ್ತ ಇದ್ದಿದ್ದು ನಮ್ಮ ಬ್ಯಾಗ್ ಒದ್ದೆಯಗಬಾರದೂಂತ. ನಮ್ಮ ಬಗ್ಗೆ ಗಮನ ಇರ್ತ ಇರಲಿಲ್ಲ. ಅದೇ ಒದ್ದೆ ಬಟ್ಟೆಯಲ್ಲಿ ಪಾಠ ಕೇಳ್ತಾ ಇದ್ವಿ. ದೂರದಿಂದ ಬರುವ ಎಲ್ಲ ವಿದ್ಯಾರ್ಥಿಗಳ ಪಾಡು ಇದೆ ಆಗಿರುತ್ತ ಇದ್ದಿದ್ದರಿಂದ ಅದೇನು ವಿಶೇಷ ಅನಿಸುತ್ತಿರಲಿಲ್ಲ. ಆ ದಿನಗಳಲ್ಲಿ ಸಾಮಾನ್ಯವಾಗಿದ್ದ ವಿಚಾರ ಈಗ ನೆನಪಿಗೆ ಬಂದಾಗ ಒಂಥರಾ ಸಾಹಸ ಅನಿಸೋಕೆ ಶುರುವಾಗೋದು ಸಹಜ. ಆದರೆ ಎಲ್ಲ ನೆನಪುಗಳ ಮಾತು ಮಧುರವೇನಲ್ಲ ಬಿಡಿ.

ನನ್ನ ನೆನಪಿನ ಸುರುಳಿ ಬಿಚ್ಚುತ್ತಿರುವಂತೆ ಮಳೆ ನನ್ನ ಮೈ ಒದ್ದೆ ಮಾಡಲು ಹೆಚ್ಚು ಆರ್ಭಟಿಸತೊಡಗಿತು. ಕೊನೆಗೂ ಮನೆಯ ಹತ್ತಿರ ಬರುವ ವೇಳೆಗಾಗಲೇ ಪ್ಯಾಂಟ್ ಒದ್ದೆಯಾಗಿದ್ದರೂ ಜೇಬಿನಲ್ಲಿದ್ದ ಮೊಬೈಲ್ ಸುರಕ್ಷಿತವಾಗಿತ್ತು. ರಾತ್ರಿ ಅಡಿಗೆಗೆ ಒಂದಿಷ್ಟು ತರಕಾರಿ ಕೊಂಡು ಮನೆಯ ಒಳಗೆ ಕಾಲಿಟ್ಟಾಗ ಮನಸ್ಸಿಗೆ ಆಹ್ಲಾದ, ದೇಹಕ್ಕೆ ಉತ್ಸಾಹ, ಜೀವನಕ್ಕೆ ನವಚೈತನ್ಯ ಬಂದಿತ್ತು. ಬಿಸಿ ಬಿಸಿ ಊಟ ಮಾಡ್ತಾ ನನ್ನ ನೆಚ್ಚಿನ ಟಿವಿ ಕಾರ್ಯಕ್ರಮ ನೋಡ್ತಾ ಇದ್ರೆ ಸ್ವರ್ಗವೇ ಧರೆಗಿಳಿದಂತಿತ್ತು...

Saturday, September 19, 2009

ಸುಳಿಯಲ್ಲಿ ಸಿಲುಕಿ......

ಕಳೆದ ವಾರ ತುಂಬಾ ನೀರಸವಾಗಿ ಶುರುವಾಗಿದ್ದು ಯಾವಾಗ ಮುಗಿಯುತ್ತಪ್ಪ ಅನಿಸಿಬಿಟ್ಟಿತ್ತು. ಒಂದರಹಿಂದೊಂದು ಬಂದ ಚಿಕ್ಕ ಪುಟ್ಟ ಸಮಸ್ಯೆಗಳು ಅನಗತ್ಯವಾಗಿ ತಲೆತಿಂದವು. ಕಳೆದ ವಾರದ ಆರಂಭಾನೆ ಸರಿಯಿರಲಿಲ್ಲ. ಭಾನುವಾರ ಸೋಮಾರಿತನ ಮಾಡಿ ಸುಮ್ಮನೆ ವೇಷ್ಟು ಮಾಡಿಕೊಂಡೆ. ಅವತ್ತು ಏಳುವ ಸಮಯಕ್ಕೆ ಸರಿಯಾಗಿ ಏಳದೆ ಎಷ್ಟೋ ಹೊತ್ತಿಗೆ ಎದ್ದು ದೇಹದ ತುಂಬಾ ಆಲಸ್ಯ ತುಂಬಿಕೊಂಡು, ದಿನದ ಕೊನೆಯ ಹೊತ್ತಿಗೆ ದೇಹದ ಜೊತೆ ಮನಸ್ಸೂ ಭಾರವಾಗಿತ್ತು. ಸೋಮವಾರ ಮಾಡಿದ ಒಳ್ಳೆಯ ಕೆಲಸವೆಂದರೆ ಒಂದು ಬಂಡಿ ಬಟ್ಟೆ ಒಗೆದಿದ್ದು.


ಮನೇಲಿ ಅಡಿಗೆ ಮಾಡಿಕೊಳ್ಳೋ ಅಭ್ಯಾಸ ಇರೋದ್ರಿಂದ ಎಲ್ ಪಿ ಜಿ ಯ ಮೇಲೆ ಅವಲಂಬನೆ ಸಹಜ. ಆದರೆ ಅದು ರೆಗ್ಯುಲರ್ ಸಿಲಿನ್ದೆರ್ ಅಲ್ಲ. ಎರಡೂವರೆ ಕೆಜಿ ಹಿಡಿಸೋ ಚಿಕ್ಕ ಬುರುಡೆ. ಅದು ರಾತ್ರಿ ಹೊತ್ತಿಗೆ ಖಾಲಿ. ಹೊಟ್ಟೆಗೆ ಹೋಟೆಲ್ ಊಟವೇ ಗತಿ. ಮತ್ತೆ ಮಾರನೆ ದಿನ ಸಂಜೆ ಹೊಸ ಬುರುಡೆ ಯನ್ನು ತಂದ್ದಿದ್ದಾಯಿತು. ಅದನ್ನು ಉಪಯೋಗಿಸಲು ತೊಡಗಿದ ಮೇಲೆ ನನಗೆ ಗೊತ್ತಾದ ವಿಷಯವೆಂದರೆ ಬರ್ನರ್ ಫಿಕ್ಸ್ ಮಾಡಿದ ಮೇಲೆ ಲೀಕೇಜ್ ಇದೆ ಅಂತ. ಅವತ್ತು ಹಾಗೆ ಅಡಿಗೆ ಮಾಡಿದೆ. ಆದ್ರೆ ಲೀಕೇಜ್ ಇರುವಲ್ಲಿ ಸಣ್ಣಗೆ ಬೆಂಕಿ ಹೊತ್ತಿಕೊಂಡು ಆಟೋಮ್ಯಾಟಿಕ್ ಸ್ಟಾರ್ಟಾರ್ ಕರಗಿಹೋಗಿದ್ದು ನಾನು ಗಮನಿಸಿದ್ದು ಅಡಿಗೆ ಮನೆ ಕ್ಲೀನ್ ಮಾಡಲು ಬಂದ ನಂತರವೇ. ಆಗಲೇ ಎಷ್ಟು damage ಆಗಬೇಕೋ ಅಷ್ಟು ಆಗಿಹೋಗಿತ್ತು. ಎಷ್ಟು ಅಂದ್ರೆ ನಾನು ಆ ಬರ್ನರ್ ಕಿಟ್ ಎಂದೆಂದಿಗೂ ಉಪಯೋಗಿಸಲಾರದಷ್ಟು. ಅದೇ ಬುರುಡೆಯಲ್ಲಿ ಸ್ನಾನಕ್ಕೆ ನೀರು ಕಾಯಿಸುತ್ತಿದ್ದೆ [immersion coil ಹಿಂದಿನ ವಾರ ಹಾಳಾಗಿತ್ತು.]. ಅದಕ್ಕೂ ಖೋತಾ ಆಯಿತು. ಹಾಗಂತ ಸ್ನಾನ ಮಾಡೋದೇನು ಬಿಡಲಿಲ್ಲ. ತಣ್ಣೀರು ಗತಿಯಾಯಿತು ಮುಂದೆರಡುದಿನ.


ತಲೆಮೇಲೆ ಮೇಲೆ ಕೈಹೊತ್ತು ಕುಳಿತ ನನಗೆ ಸ್ನೇಹಿತ ಸಾಂತ್ವಾನ ಹೇಳಿದ್ದಲ್ಲದೆ ತನ್ನಲ್ಲಿದ್ದ immersion coil ಮತ್ತು ಬರ್ನರ್ ತಂದು ಕೊಟ್ಟ. ಆಮೇಲೆ ನನಗೆ ಸ್ವಲ್ಪ ರಿಲೀಫ್ ಆಗಿದ್ದು. ಆದರೆ ಇವತ್ತು ಅಂದ್ರೆ ಶನಿವಾರ ದಿನ ಚೆನ್ನಾಗಿ ಕಳೀತು. ಸಂಜೆ ಸುರಿದ ಮಳೆಯಲ್ಲಿ ಛತ್ರಿ ಹಿಡಿದು ನಡೆದಿದ್ದು ತುಂಬಾ ಆಹ್ಲಾದಕರವಾಗಿತ್ತು [ನೀನೆ ಛತ್ರಿ ನಿನಗ್ಯಾಕೋ ಛತ್ರಿ ಅಂತ ನನ್ನ ಸ್ನೇಹಿತೆ ಹೇಳ್ತಾ ಇದ್ಲು ಬಿಡಿ. ]. ಬೆಂಗಳೂರಿಗೆ ಬಂದು ಈ ಅಕ್ಟೋಬರ್ ಗೆ ಹತ್ತು ವರ್ಷ ಆಗುತ್ತೆ. ಇಲ್ಲಿಯವರೆಗೂ ಎಲ್ಲ ಮಳೆಗಾಲಗಳನ್ನ ಕೊಡೆ ಇಲ್ಲದೆ ಕಳೆದಿದ್ದೆ. ಇವತ್ತಿನ ವಾಕಿಂಗ್ ನಾನು ಒಂದಿಷ್ಟು ನಾಸ್ತಲ್ಜಿಕ್ ಆಗೋಹಾಗೆ ಮಾಡಿದ್ದು ಸುಳ್ಳಲ್ಲ. ಕೊನೆಗೂ everything went well. I am very happy. ಮುಂದಿನ ವಾರ ಮಾಡಬೇಕಾಗಿರುವ ಹಲವು ಕೆಲಸಗಳನ್ನು ಚೆನ್ನಾಗಿ ಮಾಡುವ ಆಲೋಚನೆಗಳೊಂದಿಗೆ ನಿದ್ದೆಗೆ ಜಾರ್ತಾ ಇದ್ದೀನಿ. ಶುಭ ರಾತ್ರಿ.

Tuesday, August 4, 2009

108


108 ಇದು ಏನು ?
೧. ಇದು ಮೂರು ಅಂಕಿಯ ಟೋಲ್ ಫ್ರೀ ನಂಬರ್. ಇದಕ್ಕೆ ಕರೆಮಾಡಿ ನೀವು ವೈದ್ಯಕೀಯ, ಪೋಲಿಸ್, ಅಥವಾ ಅಗ್ನಿಶಾಮಕ ದಳದ ತುರ್ತು ಸೇವೆಗಳ ನೆರವು ಪಡೆಯಬಹುದು.
೨. 108 ಇದು ಯಾವುದೇ ಗಂಭೀರ ತುರ್ತು ಸ್ಥಿತಿಯಲ್ಲಿರುವ ಜನರಿಗಾಗಿ ದಿನದ ೨೪ ಗಂಟೆಗಳ ಉಚಿತ ಸೇವೆ.
೩. 108 ನ್ನು ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲ್ ನಿಂದ ನೇರವಾಗಿ ಸಂಪರ್ಕಿಸಬಹುದು.

108 ಇದು ಏನು ಮಾಡುತ್ತದೆ ?
108 ಕರೆಯು ನಿಮ್ಮ ಮತ್ತು / ವೃತ್ತಿಪರರೊಂದಿಗೆ (call center) ಸಂಪರ್ಕ ಹೊಂದಿಸುತ್ತದೆ ಹಾಗು ಅವರು ನಿಮ್ಮ ಕರೆಯನ್ನು ಸ್ವೀಕರಿಸಿ, ನಿಮ್ಮ ತುರ್ತು ಸಂದರ್ಭವನ್ನು ವಿವರಿಸಲು ಕೇಳುತ್ತಾರೆ. ನಂತರ ಅವರು ಅಗತ್ಯದ ತುರ್ತು ಸಿಬ್ಬಂದಿಯನ್ನು ನೀವಿರುವ ಸ್ಥಳಕ್ಕೆ ನಿಮ್ಮ ನೆರವಿಗೆ ಕಳಿಸುತ್ತಾರೆ.


ಯಾವ ಸಂದರ್ಭದಲ್ಲಿ ಕರೆ ಮಾಡಬೇಕು ?
೧. ವೈದ್ಯಕೀಯ ತುರ್ತು ಪರಿಸ್ಥಿತಿಗಳು.
a) ಗಾಯಗಳು b) ಹೃದಯ ತೊಂದರೆಗಳು c) ಲಕ್ವ d) ಉಸಿರಾಟ ಸಮಸ್ಯೆಗಳು e) ಮಧುಮೇಹ f) ಹೆರಿಗೆ g) ಪ್ರಜ್ಞೆ ತಪ್ಪುವಿಕೆ h) ಪ್ರಾಣಿಗಳು ಕಚ್ಚಿದಾಗ i) ಸುಟ್ಟ ಗಾಯಗಳು j) ಜ್ವರ k) ಸೋಂಕುಗಳು
೨. ಪೋಲೀಸ್ ತುರ್ತು ಪರಿಸ್ಥಿತಿಗಳು.
a) ಅಪರಾಧ b) ಕಳ್ಳತನ c) ಹ ೊಡೆದಾಟ d) ಕಳ್ಳತನ ನಡೆಯುತ್ತಿರುವಾಗ e) ಶಾರೀರಿಕ ಅಪರಾಧ.

೩. ಆಕಸ್ಮಿಕ ಅಗ್ನಿ ದುರಂತದ ತುರ್ತು ಪರಿಸ್ಥಿತಿಗಳು.

108 ಗೆ ಕರೆಮಾಡಿದಾಗ ಏನಾಗುತ್ತದೆ ?
ನೀವು 108 ಕ್ಕೆ ಕರೆ ಮಾಡಿದಾಗ ನಿಮ್ಮನ್ನು ವೃತ್ತಿಪರರಿಗೆ ಸಂಪರ್ಕಿಸಲಾಗುತ್ತದೆ. ಕೆಲವು ಅಗತ್ಯದ ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಿಸಿ ತುರ್ತು ಸೇವೆಯ ರೂಪದಲ್ಲಿ - ambulance, ಪೋಲೀಸ್ ಅಥವಾ ಅಗ್ನಿಶಾಮಕ ವಾಹನವನ್ನು ಕಳುಹಿಸಲಾಗುವುದು. ತಿಳಿಸಬೇಕಾದಂತಹ ಕೆಲವು ವಿವರಗಳು.
೧) ನೀವು ಕರೆ ಮಾಡುತ್ತಿರುವ ಸ್ಥಳ.
೨) ತುರ್ತು ಸ್ಥಿತಿಯ ವಿವರ.
೩) ಸಹಾಯ ಅಗತ್ಯವಿರುವ ಜನಗಳ ಸಂಖ್ಯೆ.
೪) ಕರೆ ಮಾಡುತ್ತಿರುವವರ ದೂರವಾಣಿ ಸಂಖ್ಯೆ / ಅವರನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ( ಸ್ಥಳ ಮಾರ್ಗದರ್ಶನಕ್ಕಾಗಿ ).

ಸಹಾಯವೂ ನಿಮ್ಮನ್ನು ಸರಾಸರಿ ೨೦ ನಿಮಿಷಗಳ ಅವಧಿಯಲ್ಲಿ ತಲಪುವುದು. ವೈದ್ಯಕೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವ್ಯಕ್ತಿಯ ಆರೋಗ್ಯದಲ್ಲಿ ಸ್ಥಿರತೆ ತರಲು ಬೇಕಾದ ಪೂರ್ವ ಚಿಕಿತ್ಸೆ ಮಾಡಲಾಗುವುದು. ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಅತ್ಯಂತ ಜನಪ್ರಿಯವಾದಂತ ಸೇವೆಯನ್ನು ಈಗ ನಗರಗಳಿಗೆ ವಿಸ್ತರಿಸಲಾಗಿದೆ. ನೆರವು ಬೇಕಾಗಿರುವ ಸ್ಥಳಕ್ಕೆ ಸಮೀಪವಾಗಿರುವ ತುರ್ತುಪರಿಸ್ಥಿತಿ ನಿರ್ವಹಣಾ ಕೇಂದ್ರದಿಂದ ಸೇವೆಯನ್ನು ಒದಗಿಸಲಾಗುವುದು. ಆದರೆ ಈ ಸೌಲಭ್ಯ ವಿಚಾರಣೆ ಮಾಡುವ ( enquiry) ದೂರವಾಣಿ ಸಂಖ್ಯೆಯಲ್ಲ. ತಮಾಷೆಗಾಗಿ 108 ಕ್ಕೆ ಕರೆ ಮಾಡಿ ಆಟವಾಡಬೇಡಿ. ಯಾವುದೇ ವ್ಯಕ್ತಿ ಗಂಭೀರ ಪರಿಸ್ಥಿತಿಯಲ್ಲಿ ಇಲ್ಲದಿದ್ದಾಗ ಕರೆ ಮಾಡಬಾರದು. ಸರ್ಕಾರ ಒದಗಿಸಿದ ಈ ಉಪಯುಕ್ತ ಸೇವೆಯನ್ನು ಸಾರ್ವಜನಿಕರು ಸದುಪಯೋಗಿಸಿಕೊಳ್ಳುವರೆಮ್ಬುದು ನನ್ನ ಆಶಯ.

Monday, August 3, 2009

ನನ್ನ ನೋಡಲು.............

ಇರುವೆನು ನಿನ್ನ ಮನದಲಿ

ಸುಳಿವೆನು ನಿನ್ನ ಬಳಿಯಲಿ

ಕಣ್ಮುಚ್ಚು ಹುಡುಗಿ ನೀ ನನ್ನ ನೋಡಲು.............

--ನವೀನ್ ಕೆ.ಎಸ್.

Friday, July 24, 2009

ಹೀಗೊಂದು ಮಾತುಕತೆ

ಹೀಗೆ ಒಂದು ದಿನ ಅನ್ನ ಮಾಡಲು ಬೇಜಾರಾಗಿ ಬೆಳಿಗ್ಗೆ ಉಳಿದಿದ್ದ ದೋಸೆ ಹಿಟ್ಟಿಗೆ ಸ್ವಲ್ಪ ಗೋದಿಹಿಟ್ಟು ಬೆರೆಸಿ ಈರುಳ್ಳಿ ಕೊಚ್ಚಿ ಹಾಕಿ ದೋಸೆ ಮಾಡಲು ರೆಡಿಯಾಗುತ್ತಿದ್ದೆ. ಮೊಬೈಲ್ ರಿಂಗಣಿಸಿದ ಸದ್ದು ಕೇಳಿ ಮಾಡುತ್ತಿದ ಕೆಲಸ ಅಲ್ಲಿಯೇ ಬಿಟ್ಟು ಕಾಲ್ ಅಟೆಂಡ್ ಮಾಡಲು ಹಾಲ್ ಗೆ ಓಡಿದೆ. ನನ್ನ ಗೆಳತಿಯ ಕರೆಯಾಗಿತ್ತದು. ನಮ್ಮಿಬ್ಬರ ಸಂಭಾಷಣೆ

ಗೆಳತಿ: ಏನೋ ಮಾಡ್ತಾ ಇದೀಯ?

ನಾನು: ದೋಸೆ ಹಿಟ್ಟು ಉಳಿದಿತ್ತು..................ಅದಿಕ್ಕೆ ಈರುಳ್ಳಿ ಕೊಚ್ಚಿ ಹಾಕಿ ದೋಸೆ ಮಾಡ್ತಿದೀನಿ.

ಗೆಳತಿ: ಎಷ್ಟು ಈಸಿನೋ ನಿನ್ನ ಲೈಫು..........

ನಾನು: ಅದ್ರಲ್ಲಿ ಲೈಫು ಈಸಿ ಆಗೋದೇನು ಬಂತು ಹುಡುಗಿ..........

ಗೆಳತಿ: ಮತ್ತಿನ್ನೇನೋ ನಮ್ ತರ ದಿನ ಇಂತದೇ ಅಡಿಗೆ ಆಗ್ಬೇಕೂಂತ ಏನಾದ್ರು ಇದ್ಯ.........?

ನಾನು: ದಿನ ಒಂದೊಂದು ತರ ಅಡಿಗೆ ಇದ್ರೆ ತಿನ್ನೋಕೆ ಚೆನ್ನಾಗಲ್ವೇನೆ.........!

ಗೆಳತಿ: ತಿನ್ನೋರಿಗೆ ಚಂದ.............ಆದ್ರೆ ಮಾಡೋರಿಗೆ........?

ನಾನು: ಅಂದ್ರೆ.....ನೀನು ದಿನ ಅಡಿಗೆ ಮಾಡ್ಬೇಕು ಅದ್ಕೆ ನಿಂಗೆ ಕಷ್ಟ ಅಂತಾನ?

ಗೆಳತಿ: ಹೌದು....ನಿಂತರ ಇದ್ರೆ ಆರಾಮು ನೋಡು....

ನಾನು: ನನ್ ಕಷ್ಟ ನನಗೆ.....ನಿಂಗೇನು ಗೊತ್ತು....

ಗೆಳತಿ: ನಿಂಗೇನೋ ಕಷ್ಟ. ಬೇಕಾದಲ್ಲಿಗೆ ಹೋಗ್ತಿಯ, ಬರ್ತೀಯ, ಹೇಳೋರು ಕೇಳೋರು ಯಾರು ಇಲ್ಲ.....ಹೆಂಗೆ ಬೇಕಾದ್ರೆ ಹಂಗೆ ಇರ್ತಿಯ.....ಇನ್ನೇನು.........

ನಾನು: ಅಯ್ಯೋ ಪಾಪಿ.........ನಿನಗೇನೆ ಕಡಿಮೆ ಆಗಿರೋದೀಗ...........!!?? ನಿನಗಿಷ್ಟವಾದ ಹಾಗೇನೇ ಇದ್ದೀಯಲ್ಲೇ.

ಗೆಳತಿ: ಆದರೂ....ಏನೋ ಒಂಥರಾ....ಕಣೋ.....ಮದುವೆಗಿಂತ ಮೊದಲೇ ಚೆನ್ನಾಗಿತ್ತು.......ಅನ್ಸುತ್ತೆ.......

ನಾನು: ಅದೆಲ್ಲ ಏನಿಲ್ಲ ಬಿಡು. ನಿನ್ನ ಮಾತು ಕೇಳೋಕೆ....ಕೇರ್ ಮಾಡೋಕೆ ಒಬ್ರು ಇದಾರಲ್ವ ಅದು ಮುಖ್ಯ. ನನಗೆ ಹೋಟೆಲ್ ಊಟ ಆಗಲ್ಲ. ಸೊ ಮನೇಲಿ ನಾನೇ ಬೇಯಿಸಿಕಳೋದು ತಪ್ಪಿಲ್ಲ. ಅಮ್ಮ ಇಲ್ಲಿಗೆ ಬರೋ ಪರಿಸ್ಥಿತಿ ಇಲ್ಲ. ಯಾರ ಹತ್ರ ಏನಾದ್ರು ಹೇಳಿಕೊಳ್ಳೋಣಾನ್ದ್ರು ಯಾರೂ ಇಲ್ಲ. ಹಾಗಾಗಿ ನಾನು ಅಂದ್ರೆ.........ಸಮಸ್ತ ಬ್ರಮ್ಹಚಾರಿಗಳ ಪ್ರತಿನಿಧಿ ಸುಮ್ಮನೆ ತಿರುಗ್ತಾನೆ ಇರ್ತೀನಿ. Most of the time it is waste..............ಆ ಸಮಸ್ಯೆ ನಿನಗಿಲ್ಲ ನೋಡು.

ಗೆಳತಿ: ನಮ್ಮನೇನಲ್ಲಿ ನಮ್ ಮಾವನಿಗೆ ಒಂಥರಾ ಅಡಿಗೆ, ನಮ್ ಅತ್ತೆಗೆ ಒಂಥರಾ ಅಡಿಗೆ, ಇವ್ರಿಗೆ ಒಂದು ರೀತಿ. ಕೆಲವೊಂದು ಸಲ ಪೇಷನ್ಸ್ ಕಳೆದು ಹೋಗ್ಬಿಡತ್ತೆ ಕಣೋ.

ನಾನು: ಇಪ್ಪತ್ನಾಕು ಗಂಟೇನು ಅಡಿಗೆನೆ ಮಾಡ್ತಾ ಇರ್ತೀಯ? ಇಲ್ಲ ತಾನೇ. ನೀನು ಬೇರೆ ಜವಾಬ್ದಾರಿಗಳನ್ನು ನಿರ್ವಹಿಸ್ತ ಇಲ್ವಾ. ನಿನ್ನ ಹಲವಾರು ಜವಾಬ್ದಾರಿಗಳಲ್ಲಿ ಅಡಿಗೆನು ಒಂದು ಅಷ್ಟೇ. ಇಟ್ ಇಸ್ ಜಸ್ಟ್ ಪಾರ್ಟ್ ಆಫ್ ಯುವರ್ ಲೈಫ್. ಅದೇ ಲೈಫ್ ಅಲ್ವಲ್ಲ.

ಗೆಳತಿ: ಫಿಲಾಸಫಿ ಹೇಳೋದು ಸುಲಭ ಕಣೋ........ಬಂದು ಮಾಡು ಗೋತ್ತಾಗುತ್ತೆ.

ನಾನು: ನೋಡು ಹುಡುಗಿ..........ಸಮಸ್ಯೆಗಳು ಎಲ್ಲರಿಗು ಇದ್ದೆ ಇದೆ. ಅದರ ಬಗ್ಗೆನೇ ಯೋಚಿಸ್ತಿದ್ರೆ ನಮಗಿಂತ ಕಷ್ಟಪಡೋರು ಯಾರೂ ಇಲ್ವೇನೋ ಅನ್ನೋ ಭಾವನೆ ಬಲವಾಗಿಬಿಡತ್ತೆ . ಮದುವೆಯಾದವರಿಗೆ ಒಂಥರಾ, ಆಗದಿದ್ದವರಿಗೆ ಒಂಥರಾ ಅಷ್ಟೇ. ಸಮಸ್ಯೆಗಳ ಬಗ್ಗೆ ಗಮನ ಹರಿಸೋದು ಬಿಟ್ಟು ಬೇರೆ ವಿಚಾರಗಳತ್ತ ಮನಸ್ಸು ಹರಿಸಿದರೆ ಮನಸ್ಸು ತಿಳಿಯಾಗಿರುತ್ತೆ.

ಗೆಳತಿ: ಅದೇನೋ ಕಣೋ ನನಗಂತೂ ಅರ್ಥ ಆಗಲ್ಲ. ಸರಿಯಪ್ಪ ನಾನು ಫೋನ್ ಇಡ್ತೀನಿ. ಮತ್ಯಾವಗಲಾದ್ರು ಮಾಡ್ತೀನಿ.

ನಾನು: ಸರಿ ಹುಡುಗಿ.........ಟೇಕ್ ಕೇರ್ ಬೈ ಬೈ.

ಗೆಳತಿ: ಓಕೆ.ಬೈ ಬೈ.

Thursday, July 23, 2009

ಅವ್ರು.........

ಇತ್ತೀಚೆಗಷ್ಟೆ ಮದುವೆಯಾದ ಗೆಳತಿಯೊಬ್ಬಳು ಅಚಾನಕ್ಕಾಗಿ ಸಿಕ್ಕಿದ್ದಳು. ಒಂದಿಷ್ಟು ಉಭಾಯಕುಶಲೋಪರಿಗಳ ನಂತರ ಅವಳು ಮಾತಾಡಿದ್ದು ಅವಳ ಗಂಡನ ಬಗ್ಗೆ ಬಿಟ್ಟರೆ ಇನ್ನೇನು ಅಲ್ಲ. ಪ್ರತಿ ಮಾತು ಅವನ ಸುತ್ತಲೇ ಗಿರಕಿ ಹೊಡೆದಿತ್ತು. "ನನ್ನ ಗಂಡನಿಗೆ ಬದನೇಕಾಯಿ ಆಗೋಲ್ಲ" ಅನ್ನೋ ವಿಷಯದಿಂದ ಶುರುವಾಗಿ "ಅವಳು ಬೇರೆಯವರ ಜೊತೆ ಫೋನಿನಲ್ಲಿ ಮಾತಾಡೋದು ಅವನಿಗೆ" ಇಷ್ಟವಾಗೋಲ್ಲ ಅನ್ನೋತನಕ ಮುಂದುವರೆದಿತ್ತು. ಇದು ಇವಳೊಬ್ಬಳ ಕೇಸ್ ಅಲ್ಲ. ಸಾಮಾನ್ಯವಾಗಿ ಮದುವೆಯಾದ ಶುರುವಿನಲ್ಲಿ ಹೆಚ್ಚುಕಡಿಮೆ ಎಲ್ಲ ಹೆಣ್ಮಕ್ಕಳ ವರ್ತನೆ ಹೀಗೆ ಇರತ್ತೆ. ಅವರು ಹೇಳುವ ಮಾತುಗಳ ತುಣುಕುಗಳು,


೧) ಅವ್ರಿಗೆ ಜೀನ್ಸ್ ಪ್ಯಾಂಟ್ ಅಂದ್ರೆ ತುಂಬಾ ಇಷ್ಟ; ಅದನ್ನೇ ಯಾವಾಗಲು ಹಾಕ್ಕೋತಾರೆ.
೨) ಇಸ್ತ್ರಿ ಮಾಡದ ಶರ್ಟ್ ಹಾಕೋದೆ ಇಲ್ಲ. ನನಗಂತೂ ಇಸ್ತ್ರಿ ಮಾಡೋದೇ ಕೆಲಸ ಆಗ್ಬಿಟ್ಟಿದೆ.
೩) ಅವ್ರು ನಂತಾರಾನೆ ತುಂಬಾ ಕ್ಲೀನ್.
೪) ಅವ್ರಿಗೆ ಗರ್ಲ್ ಫ್ರೆಂಡ್ಸ್ [ಫ್ರೆಂಡ್ಸ್ ಹೂ ಆರ್ ಗರ್ಲ್ಸ್] ತುಂಬಾ ಜಾಸ್ತಿ.
೫) ಅವ್ರು ಮನೆಗೆ ಬಂದ ತಕ್ಷಣ ನಾನು ಅವ್ರ ಮುಂದೇನೆ ಇರಬೇಕು.
೬) ಅವ್ರು ಬದನೇಕಾಯಿ ಸಾಂಬಾರ್ ತಿನ್ನಲ್ಲ...............ಆದ್ರೆ ಪಲ್ಯ ತಿಂತಾರೆ.
೭) ಅವ್ರಿಗೆ ಹೃತಿಕ್ ರೋಶನ್ ಅಂದ್ರೆ ತುಂಬಾ ಇಷ್ಟ.
೮) ಅವ್ರಿಗೆ ಮೊಬೈಲ್ ಚೇಂಜ್ ಮಾಡೋ ಹುಚ್ಚು. ಮೊನ್ನೆ ಮದುವೆಗಿಂತ ನಾಲ್ಕು ತಿಂಗಳು ಮೊದಲು ತಗೊಂಡ ಮೊಬೈಲ್
ಫೋನ್ ಮಾರಿ ಹೊಸಾದು ತಗೊಂದಿದಾರೆ.
೯) ಟೈಮಿಗೆ ಸರಿಯಾಗಿ ತಿಂಡಿ ಆಗ್ಲಿಲ್ಲಾಂದ್ರೆ ಸಿಕ್ಕಾಪಟ್ಟೆ ಕೋಪ ಬರುತ್ತೆ ಅವ್ರಿಗೆ.
೧೦) ತಣ್ಣನೆ ಅನ್ನ ತಿನ್ನೋಲ್ಲ..........ಯಾವಾಗಲೂ ಬಿಸಿಬಿಸಿನೆ ಇರಬೇಕು.

ಅರೆ ಯಾರ್ give me a break [ಅಂತ ಹೇಳ್ಬೇಕು ಅನ್ನಿಸುತ್ತಿಲ್ವ ]. ಮದುವೆಗೆ ಮುಂಚೆ ನಮ್ಮ ಜೊತೆ ತರ್ಲೆ ಮಾಡಿಕೊಂಡು, ಕಂಡಿದ್ದಕ್ಕೆಲ್ಲ ವಾದ ಮಾಡ್ತಾ, ಎಲ್ಲರನ್ನು ರೆಗಿಸಿಕೊಂಡಿದ್ದ ಹುಡುಗಿ ಇವಳ? ಅನ್ನೋವಷ್ಟು ಬದಲಾವಣೆ. ಇದು ಮದುವೆಯಾದ ಇನ್ನು ಸರಿಯಾಗಿ ಹೇಳ್ಬೇಕೂಂದ್ರೆ ಹೊಸದಾಗಿ ಮದುವೆಯಾದ ಹೆಣ್ಮಕ್ಕಳನ್ನ ಗಮನಿಸಿದರೆ ತಿಳಿಯುವಂತ ವಿಚಾರ. ಅದೇ ನವವಿವಾಹಿತನನ್ನ ಗಮನಿಸಿ ಅವನು ಅಷ್ಟೇನೂ ತನ್ನ ಹೆಂಡತಿಯ ಬಗ್ಗೆ ಹೇಳೋಲ್ಲ [ಹೇಳಬಾರದು ಅಂತ ತೀರ್ಮಾನಿಸಿಕೊಂಡಿರ್ತಾರೆ ಅನ್ಸುತ್ತೆ]. ಅವನ ಮಾತುಗಳು ಎಂದಿನಂತೆ ನಾರ್ಮಲ್ ಆಗಿರ್ತವೆ. ಇನ್ನು "ಹ್ಯಾಗಿದೆ ಲೈಫು ಮದುವೆ ಆದ ಮೇಲೆ" ಅಂತ ಬಿಡಿಸಿ ಕೇಳಿ ಮಾಮೂಲು ಕಣೋ ಅಂತ ವಿಶೇಷ ಏನು ಇಲ್ಲ ಅಂತಾನೋ...........ನೆಂಟರ ಮನೆಗೆ / ಫಂಕ್ಷನ್ ಗಳಿಗೆ ಹೋಗೋದು ಜಾಸ್ತಿ ಆಗಿದೆ ಅಂತಾನೋ ಅವನು ಹೇಳ್ತಾನೆ. ಮದುವೆಯ ಸಂಭ್ರಮ ಕೆಲವಾರು ವರುಷ ಹೊತ್ತು ತಿರುಗೊದ್ರಲ್ಲಿ ಹುಡುಗಿಯರಿಗೆ ಇರೋ ಆಸಕ್ತಿ ಹುಡುಗರಿಗೆ ಇರೋದಿಲ್ಲ. ಹೊಸ ಜನ, ಹೊಸ ಮನೆ, ಹೊಸ ಪರಿಸರ [ಮತ್ತು ಹೊಸ ಅನುಭವ] ಹುಡುಗಿಯರ ಸಂಭ್ರಮವನ್ನು ಜತನದಿಂದ ಕಾಪಾಡಿಕೊಂಡು ಬಾರೋ ಹಾಗೆ ಮಾಡ್ತಾವೆಂತ ನನ್ನ ಅನಿಸಿಕೆ.

Thursday, July 16, 2009

Pod Slurping - ಮಾಹಿತಿ ಕಳ್ಳತನದ ಹೊಸ ರೂಪ

ಮಾಹಿತಿ ಸಂಗ್ರಹಣೆಗೆ ಉಪಯೋಗಿಸುತ್ತಿದ್ದ ಸ್ಮರಣ ಕೋಶ [ಮೆಮೊರಿ] ಸಾಧನಗಳಲ್ಲಿ ಪ್ರಮುಖವಾದವು floppy, CD-ROm/DVD, Hard Disk. ನಾನು ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ floppy ಅತ್ಯಂತ ಜನಪ್ರಿಯ, ಅಗ್ಗದ ಸಾಧನವಾಗಿತ್ತು. ನಂತರ ಆರಂಭವಾಗಿದ್ದು CD-ROm/DVD ಗಳ ಭರಾಟೆ. ಇದನ್ನೂ ಹಿಂದೆ ಹಾಕಿ ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವುದು Pen Drive ಗಳೆಂಬ ನಮ್ಮ ಹೆಬ್ಬೆರಳು ಗಾತ್ರದ ಸಾಧನಗಳು. [Pen Drive is also known as thumb drive, memory stick, USB flashdrive, key drive, jumpdrive etc]. ಇದಲ್ಲದೆ apple ಕಂಪೆನಿಯವರು ಹೊರಬಿಟ್ಟ iPod ಎಂಬ mp3 ಸಂಗೀತ ಕೇಳುವ ಸಾಧನ ಕೂಡ ಸಂಗೀತದ ಕಡತಗಳನ್ನಲ್ಲದೆ ಬೇರೆ ಮಾಹಿತಿ ಸಂಗ್ರಹಣಕ್ಕೂ ಕೂಡ ಬಳಸಬಹುದಾಗಿದೆ. [ ಸೆಪ್ಟೆಂಬರ್ ೨೦೦೮ ರ ವರೆಗೆ ಸುಮಾರು ೧೭೩,೦೦೦,೦೦೦ ಗಳಷ್ಟು ಐಪಾಡ್ ಗಳು ಮಾರಾಟಗೊಂಡಿವೆ.] ಇತ್ತೀಚಿಗೆ ಮಾರುಕಟ್ಟೆ ಪ್ರವೇಶಿಸಿರುವ mp3 ಪ್ಲೇಯರ್ ಗಳು ಮತ್ತು USB Stick ಗಳ ಸ್ಮರಣ ಸಾಮರ್ಥ್ಯ ಹೆಚ್ಚಿದ್ದು, ಅವುಗಳ ಗಾತ್ರ ನಂಬಲಸಾಧ್ಯವಾದಷ್ಟು ಚಿಕ್ಕದಾಗಿದೆ. ಮಾಹಿತಿ ವರ್ಗಾವನ್ರ್ ವೇಗ ಸಹ ಹೆಚ್ಚಿದೆ. ಮುಗ್ಧನಂತೆ ಕಾಣೋ ನಿಮ್ಮ ಈ portable storage device ತನ್ನಷ್ಟೇ ಸಾಮರ್ಥ್ಯದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ತನ್ನ ತೆಕ್ಕೆಗೆ ವರ್ಗಾಯಿಸಿಕೊಳ್ಳಬಲ್ಲದಾಗಿದೆ. ಉದಾಹರಣೆಗೆ ನಿಮ್ಮಲ್ಲಿ 60GB pen drive ಅಥವಾ mp3 player ಇದ್ದರೆ 60GB ಯಷ್ಟು ಕಾರ್ಪೋರೆಟ್ ಮಾಹಿತಿ / ಇನ್ನ್ಯಾವುದೇ ಮಾಹಿತಿ ಮಿಂಚಿನ ವೇಗದಲ್ಲಿ ನಿಮ್ಮ ಸಾಧನಕ್ಕೆ ವರ್ಗಾಯಿಸಬಹುದು.

ಈ ಸಾಧನಗಳ ಉಪಯೋಗ ಅನೇಕ ಕಂಪೆನಿಗಳಿಗೆ, ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ. Data Leakage, Data Ciphering ಎಂಬ ಮಾಹಿತಿ ಕಳ್ಳತನದ ಪ್ರಕಾರಗಳಿಗೆ Pod Slurping ಎನ್ನುವುದು ಸೇರ್ಪಡೆಗೊಂಡಿದೆ. slurp [= copy] - ನಕಲು. Pod Slurping ಎಂಬ ಪದ portable storage device ಗಳನ್ನು [Pen Drive, iPod ಇತ್ಯಾದಿ] ಉಪಯೋಗಿಸಿಕೊಂಡು ಬಹುಮುಖ್ಯ/ಅತಿಸೂಕ್ಷ್ಮ ಮಾಹಿತಿ ಕದಿಯುವುದು ಎಂದು ವಿವರಿಸಬಹುದು. ಎಲ್ಲ ಮಾಹಿತಿ ಹೊತ್ತೊಯ್ಯುವ ಸಾಧನಗಳು ಉದಾಹರಣೆಗೆ ಡಿಜಿಟಲ್ ಕ್ಯಾಮರ, ಮೊಬೈಲ್ ಫೋನ್, PDA, mp3 player ಗಳು Pod Slurping ಗೆ ಬಳಸಲ್ಪಡುತ್ತವೆ. ಇದೊಂದು ಸರಳ ಯಾಂತ್ರಿಕ ವಿಧಾನವಾಗಿದ್ದು ಯಾವುದೇ ರೀತಿಯಾದಂತಹ ತಾಂತ್ರಿಕ ಕೌಶಲ್ಯ ಇದಕ್ಕೆ ಬೇಕಾಗಿಲ್ಲ. ಕಾರ್ಪೋರೆಟ್ / ಸರ್ಕಾರಿ ಸಂಸ್ಥೆಗಳ ಮಾಹಿತಿಯ ಮೇಲೆ ಕಣ್ಣಿಟ್ಟಿರುವ ಯಾವುದೇ ವ್ಯಕ್ತಿ ಹಾಗೆ ಸುಮ್ಮನೆ ಓಡಾಡುತ್ತಲೇ / ಹಾಡು ಆಲಿಸುತ್ತಲೇ ಮಾಹಿತಿಯನ್ನು ಹೀರಬಹುದು. ಸರಿಸುಮಾರು 100MB ಯಷ್ಟು word, excel, ppt, pdf, txt ಕಡತಗಳನ್ನು ಎರಡು ನಿಮಿಷಗಳೋಳಗಾಗಿ ನಕಲು ಮಾಡಬಹುದು.

ಮಾಹಿತಿ ಕಳ್ಳತನ ಹೊರಗಿನ ವ್ಯಕ್ತಿಗಳಿಂದಲೇ ಆಗಬೇಕೆಂದೇನಿಲ್ಲ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅತೃಪ್ತ ಕೆಲಸಗಾರನಿಂದಲೂ ಇಂತಹ ಬೆದರಿಕೆ ಬರಬಹುದು. ಯಾಕೆಂದರೆ ಈ ಮಾಹಿತಿ ಅನೇಕ ವಿಧಗಳಲ್ಲಿ ಉಪಯೋಗಕ್ಕೆ ಬರುತ್ತದೆ. Engineering plans, tender, price list, source code, data dase scheme, sound files, lyrics etc ಮಾಹಿತಿಗಳಿಂದ ಕದ್ದವನಿಗೆ ಲಕ್ಷ ಲಾಭ ತಂದುಕೊಟ್ಟರೆ ಸಂಸ್ಥೆಗೆ ಕೋಟಿಗಟ್ಟಲೆ ನಷ್ಟ ಉಂಟುಮಾಡುತ್ತದೆ. ಇಂದಿನ ಸ್ಪರ್ಧಾತ್ಮಕ ಉಗದಲ್ಲಿ ಈ ಮೇಲ್ಕಂಡ ಮಾಹಿತಿಗಲೆಲ್ಲವು ಒಂದು ಸಂಸ್ಥೆಯ / ವ್ಯಕ್ತಿಯ ವಿರೋಧಿಗಳಿಗೆ ಮೇಲುಗೈ ಸಾಧಿಸಲು ಸಹಾಯ ಮಾಡುತ್ತವೆ. ಉತ್ತಮ ಹುದ್ದೆಯಲ್ಲಿರುವ ಯಾವುದೇ ಅತೃಪ್ತ ಕೆಲಸಗಾರ ಅತಿಸೂಕ್ಷ್ಮ ಮಾಹಿತಿಗಳನ್ನು ಹೊತ್ತೊಯ್ದು ಪ್ರತಿಸ್ಪರ್ಧಿಗಳಿಗೆ ಮಾರಿಕೊಳ್ಳುವಂತಹ ಸಂಧರ್ಭಗಳಿಗೇನು ಕಡಿಮೆ ಇಲ್ಲ. Pod Slurping ಇನ್ನಷ್ಟು ದೊಡ್ಡದಾದ ಮಾಹಿತಿ ಕಳ್ಳತನದ ವಿದ್ಯಮಾನ ಆಗುವ ಮೊದಲು portable storage control poplicy ಯನ್ನು ತರಲು ಕಾರ್ಪೊರೇಟ್ ಸಂಸ್ಥೆಗಳ ಜೊತೆಗೂಡಿ ಸರ್ಕಾರ ಪ್ರಯತ್ನಿಸುತ್ತದೆಯೋ ಕಾದುನೋಡಬೇಕು.

Friday, July 3, 2009

ಕಬ್ಬಡ್ಡಿ ಚಿತ್ರ ವಿಮರ್ಶೆ

ಇತ್ತೀಚಿಗೆ ಬಂದ ಕನ್ನಡ ಚಿತ್ರಗಳಿಗೆ ಹೋಲಿಸಿದರೆ ಕಬ್ಬಡ್ಡಿ ಒಂದು ವಿಭಿನ್ನ ಪ್ರಯತ್ನ. ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಕಬ್ಬಡ್ಡಿ ಜನಪ್ರಿಯ ಕ್ರೀಡೆ. ನಿರ್ದೇಶಕರು ಇದರ ಮಹತ್ವವನ್ನು ತಿಳಿದೇ ಪ್ರೇಮಕಥೆಯನ್ನು ಕಬ್ಬಡ್ಡಿಯ ಹಿನ್ನೆಲೆಯಲ್ಲಿ ಹೇಳಲು ಹೊರಟಿದ್ದಾರೆ. ಮೂಟೆ ಹೊರುತ್ತಿದ್ದ ನಾಯಕ ಕಬ್ಬಡ್ಡಿ ಆಟಗಾರನಾಗಿ ತರಬೇತಿ ಪಡೆದು ರಾಷ್ಟ್ರೀಯ ತಂಡದಲ್ಲಿ ಆಡುವ ಕನಸು ಕಾಣುತ್ತಾನೆ. ಅದೇ ವೇಳೆ ಅವನ ಆಡುವ ತಂಡದ ಮಾಲೀಕ ಹಾಗು ಕಾಲೇಜು ಚೇರ್ಮನ್ ನ ಆದ ವೆಂಕಟೇಶನ ತಂಗಿ ಮತ್ತು ನಾಯಕ ಪ್ರೀತಿಸಲು ಆರಂಭಿಸಿರುತ್ತಾರೆ. ಖಳನಾಯಕನ ನೀಡಿದ ಪಣವನ್ನು ಗೆದ್ದು ನಾಯಕ ನಾಯಕಿಯನ್ನು ಪಡೆದನೆ? ಚಿತ್ರ ನೋಡಿ. ಚಿತ್ರದ ಮೊದಲಾರ್ಧದಲ್ಲಿ ಕಥೆ ಫ್ಲಾಶ್ ಬ್ಯಾಕಿನಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಈ ತಂತ್ರ ಹೆಚ್ಚಿನ ಮಟ್ಟಿಗೆ ಯಶಸ್ವಿಯಾಗಿದೆ. ಮಂಡ್ಯ ಕನ್ನಡವನ್ನು ಚೆನ್ನಾಗಿ ಬಳಸಿಕೊಂಡಿರುವುದು ಚಿತ್ರದ ಪ್ಲಸ್ ಪಾಯಿಂಟ್. ಹಂಸಲೇಖಾರು ಸಂಯೋಜಿಸಿರುವ ಒಂದೆರಡು ಹಾಡುಗಳು ಗುನುಗುನಿಸುವಂತಿದೆ. ಉಳಿದದ್ದೆಲ್ಲ ಬೇಡದೆ ಇರೋ ಸರಕು. ಚಿತ್ರದ ಆರಂಭದಿಂದಲೇ ಹಿನ್ನೆಲೆ ಸಂಗೀತ ಚಿತ್ರಕ್ಕೆ ಒಳ್ಳೆಯ ಸಾಥ್ ನೀಡಿದೆ. ಪ್ರತ್ಯೇಕ ಕಾಮಿಡಿ ಟ್ರಾಕ್ ಇಲ್ಲದೆ ಇರೋದು ಪ್ರೇಕ್ಷಕರಿಗೆ ರಿಲೀಫ್. ಆದರೆ ನಿರ್ದೇಶಕರು ಕಬ್ಬಡ್ಡಿಯ ಹಿನ್ನೆಲೆ, ಆಟದ ತಂತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ [ಲಗಾನ್ ಚಿತ್ರ ಇದಕ್ಕೆ ಉತ್ತಮ ಉದಾಹರಣೆ]. ಇದು ನಗರ ಕೇಂದ್ರೀಕೃತ ಪ್ರೇಕ್ಷಕರಿಗೆ ಕುತೂಹಲವನ್ನು ಮೂಡಿಸಿದ ಹಾಗಾಗುತ್ತಿತ್ತು. ಮೈದಾನದ ಕೊರತೆ, ಪ್ರೋತ್ಸಾಹದ ಕೊರತೆ, ಮಾಹಿತಿಯ ಕೊರತೆಗಳಿಂದಾಗಿ ಮತ್ತು ಕ್ರಿಕೆಟ್ ನಂತಹ ಜನಪ್ರಿಯ ಆಟಗಳಿಂದ ನಗರವಾಸಿ ಮಕ್ಕಳು ದೇಸಿ ಕ್ರೀಡೆಗಳನ್ನು ಆಡುತ್ತಿಲ್ಲ. ಇವರಿಗೆ ನಮ್ಮ ದೇಸಿ ಗಂಡು ಕ್ರೀಡೆಯಾದ ಕಬ್ಬಡ್ಡಿಯ ಬಗ್ಗೆ ಆಸಕ್ತಿ ಮೂಡಿಸಬಹುದಾಗಿತ್ತು. ಅನಗತ್ಯವಾದ ಎರಡು ಹಾಡುಗಳನ್ನು ತೆಗೆದುಹಾಕಿದ್ದಾರೆ ಚಿತ್ರದ ಓಟಕ್ಕೆ ಧಕ್ಕೆಯಗುತ್ತಿರಲಿಲ್ಲ. ದ್ವಿತೀಯರ್ದದಲ್ಲಿರುವ ಐಟಂ ಸಾಂಗ್ ಯಾಕೆ ಅನ್ನೋದು ನನಗೆ ಇನ್ನೊ ಅರ್ಥ ಆಗಿಲ್ಲ. ಇನ್ನು ಅಭಿನಯದ ವಿಚಾರಕ್ಕೆ ಬಂದರೆ ನಾಯಕನ ಪಾತ್ರ ಮಾಡಿರುವ ಪ್ರವೀಣ್ ತಮ್ಮ ಸಾಮರ್ಥ್ಯ ಮೀರಿ ಅಭಿನಯಿಸಿದ್ದಾರೆ. ಹೊಡೆದಾಟದ ಮತ್ತು ಗಂಭೀರ ದೃಶ್ಯಗಳಲ್ಲಿ ಸೈ ಎನಿಸಿದರು ಭಾವಾಭಿನಯದಲ್ಲಿ ಇನ್ನು ಪಳಗಬೇಕು. ನಾಯಕಿ ಪ್ರಿಯಾಂಕ ಚುರುಕಾಗಿ ನಟಿಸಿದ್ದರೂ ಕೆಲವೆಡೆ ಮಾತಿನ ವೇಗ ಅಗತ್ಯಕ್ಕಿಂತ ಹೆಚ್ಚು [ಅಥವಾ ಡಬ್ಬಿಂಗ್ ಸಮಸ್ಯೆ]. ಕೋಚ್ ಪಾತ್ರವನ್ನು ಕಿಶೋರ್ ಅಂಡರ್ ಪ್ಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ನಿಜವಾದ (ಖಳ?)ನಾಯಕ ಧರ್ಮ. ಉತ್ತಮ ಪಾತ್ರ ಪೋಷಣೆಯಿಂದ ಧರ್ಮ ಹೆಚ್ಚು ಕಡಿಮೆ ನೆಗೆಟಿವ್ ಅಂಶಗಳಿರೋ ನಾಯಕನಂತೆ ಕಂಡರೆ ಆಶ್ಚರ್ಯವೇನಿಲ್ಲ. ಆದರೆ ಅವಿನಾಶ್ ಮತ್ತು ಶ್ರೀರಕ್ಷಾರ ಪಾತ್ರಗಳು ಪ್ರೇಕ್ಷಕರಲ್ಲಿ ಒಂದಿಷ್ಟು ಗಲಿಬಿಲಿ ಮೂಡಿಸುತ್ತವೆ. ಆ ಪಾತ್ರಗಳ ಅಗತ್ಯವಿತ್ತೇ ಎನ್ನುವುದು ನಿರ್ದೇಶಕರೇ ಹೇಳಬೇಕು. ಉಳಿದೆಲ್ಲ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅನಂತ್ ಅರಸ್ ಮತ್ತು ಸಂತೋಷ್ ವಿಕ್ರಮಾದಿತ್ಯ ಅವರ ಛಾಯಾಗ್ರಹಣ ಉತ್ತಮವಾಗಿದೆ. ಕೆಲವೊಂದು ಅಂಶಗಳಿಗೆ ಪ್ರತ್ಯೇಕ ಗಮನ ಕೊಡದೆ ನೋಡಿದರೆ 'ಕಬ್ಬಡ್ಡಿ' ಒಂದು ಉತ್ತಮ ಸದಭಿರುಚಿಯ ಕುಟುಂಬ ಸಮೇತ ನೋಡಬಹುದಾದ ಚಿತ್ರ.

Thursday, July 2, 2009

ಅಜೇಯ - true invincible




ಅಂದು ಬೆಳಿಗ್ಗೆ ಸುಮಾರು ೧೦:೩೦ ರ ಸಮಯ ಯಾವುದೊ ವ್ಯವಹಾರದ ಸಲುವಾಗಿ ಬ್ಯಾಂಕಿನಲ್ಲಿದ್ದೆ. ನನ್ನ ಕಿವಿಗೆ ಬಿದ್ದ ಸಂಭಾಷಣೆಯ ಒಂದು ತುಣುಕು.

"ಗೊತ್ತಾಯಿತೆನ್ರಿ........ಮೈಕಲ್ ಜಾಕ್ಸನ್ ಹೋಗ್ಬಿಟ್ನಂತೆ"
"ಅಯ್ಯೋ ಹೌದ!.......ಛೆ"

ತಾನು ಎಂದೂ ನಿಜವಾಗಿ ನೋಡಿರದ, ತನಗೆ ಯಾವರೀತಿಯಲ್ಲೂ ಸಂಭಂಧಿಸದ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಇಷ್ಟೊಂದು ಕಕ್ಕುಲಾತಿ ತೋರಿಸುತ್ತನೆಂದರೆ ಅದು ಅವನಿಗೆ ಸಂದ ಗೌರವವಷ್ಟೇ ಅಲ್ಲ ಇನ್ನು ಹೆಚ್ಚಿನ ಅಭಿಮಾನವನ್ನು ತೋರಿಸುತ್ತದೆ. ಕೇವಲ ಮೈಕಲ್ ಜಾಕ್ಸನ್ ನಂತಹ ಅಪ್ಪಟ ಪ್ರತಿಭೆಗಳಿಗೆ ಮಾತ್ರ ಇಂತಹದೊಂದು ಛಾಪು ಮೂಡಿಸಲು ಸಾಧ್ಯ. ಬರಿಯ ಸಂಗೀತಕ್ಕೆ/ಕಲೆಗೆ ಮಾತ್ರವಲ್ಲ ಸಂಗೀತಗಾರನಿಗೂ ಗಡಿರೇಖೆಗಳಿಲ್ಲ. ವಿಶ್ವದ ಯಾವುದೊ ಮೂಲೆಯಲ್ಲಿ ಕುಳಿತ ವ್ಯಕ್ತಿಗೆ ಮೈಕಲ್ ಜಾಕ್ಸನ್ ದಿವಂಗತನಾದಾಗ ಅವನ ಮನ ಮಿಡಿದ ಸಂದರ್ಭ ಮೈಕಲ್ ಜಾಕ್ಸನ್ ನ ಕಲೆಯ ಮೋಡಿಗೆ ಕೊಡಬಹುದಾದ ಒಂದು ಚಿಕ್ಕ ಉದಾಹರಣೆ. ಮೈಕಲ್ ಜಾಕ್ಸನ್ ತನ್ನ ಕಲೆಯ ಮೂಲಕ ಗಡಿಗಳನ್ನು ದಾಟಿ ಹೃದಯಗಳನ್ನು ಮೀಟಿದ ನಿಜವಾದ ವಿಶ್ವಮಾನವ. ಮೈಕಲ್ ಜೋಸೆಫ್ ಜಾಕ್ಸನ್ ಸಂಗೀತಗಾರರ ತುಂಬು ಕುಟುಂಬದಲ್ಲಿ ಹುಟ್ಟಿದವನು. ಸಂಗೀತ ಅವನ ರಕ್ತದಲ್ಲೇ ಇತ್ತು. ಅದಕ್ಕೆ ತಕ್ಕಂತೆ ಅವನ ಅಪ್ಪ ಬಾಲ್ಯದಿಂದಲೇ ತನ್ನ ಮಕ್ಕಳಿಗೆ ಸಂಗೀತ ಕಲಿಸಿದ, ತಪ್ಪಿದಾಗ ಹೊಡೆದು ತಿದ್ದಿದ, ತನ್ನ ಮಕ್ಕಳದೇ ಒಂದು ಬ್ಯಾಂಡ್ ಮಾಡಲು ಶ್ರಮಿಸಿದ. ಅಪ್ಪನ ಅತಿಶಿಸ್ತಿನ ಉಳಿಯ ಏಟುಗಳು ಮೈಕಲ್ ಜಾಕ್ಸನ್ ಎಂಬ ಶಿಲ್ಪವನ್ನು ಕೆತ್ತತೊಡಗಿದ್ದವು. ಇದರ ನಂತರ ಆದದ್ದೆಲ್ಲವು HIStory [ ಇದು ಕೂಡ ಅವನ ಒಂದು ಆಲ್ಬಮ್ ಹೆಸರು ].

ನಾವು ನೋಡಿದ್ದು, ಆನಂದಿಸಿದ್ದು, ಆರಾಧಿಸಿದ್ದು ಮೈಕಲ್ ಜಾಕ್ಸನ್ ನ ನೃತ್ಯ ಪ್ರತಿಭೆಯನ್ನು. ಚಾಲ್ತಿಯಲ್ಲಿರುವ ಅನೇಕ ಪ್ರತಿಭಾವಂತ ನೃತ್ಯಗಾರರು, ನೃತ್ಯ ಸಂಯೋಜಕರು ಮೈಕಲ್ ಜಾಕ್ಸನ್ ನನ್ನು ತಮ್ಮ ಗುರುವೆಂದು ಆದರದಿಂದ ಒಪ್ಪಿಕೊಂಡಿದ್ದಾರೆ. ಬಹುಷಃ ನ್ರುತ್ಯಾಸಕ್ತಿ ಉಳ್ಳವರೆಲ್ಲರೂ ಅವನ ಒಂದಾದರು ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. ನಮ್ಮಲ್ಲಿ ಡಾನ್ಸ್ ಗೆ ಮತ್ತೊಂದು ಹೆಸರೇ ಮೈಕಲ್ ಜಾಕ್ಸನ್.

ನಾನು ಮೈಕಲ್ ಜಾಕ್ಸನ್ ಬಗ್ಗೆ ತಿಳಿದುಕೊಂಡಿದ್ದು ಬರಿಯ ಪತ್ರಿಕೆಗಳಿಂದ. ಅದು ಹೆಚ್ಚೇನು ಅಲ್ಲ. ಇತ್ತೀಚಿನ ದಿನಗಳಲ್ಲಿ ಮೈಕಲ್ ಜಾಕ್ಸನ್ ತನ್ನ ಕಲೆಗಿಂತ ವಿವಾದಗಳಿಂದಾಗಿಯೇ ಹೆಚ್ಚು ಪ್ರಸಿದ್ಧಿ ಪಡೆದಿದ್ದ. ನಾನು ಓದಿದ್ದು ಹೆಚ್ಚು ಇಂತಹ ವಿಷಯಗಳನ್ನೇ. ತಾನು ಸಂಪಾದಿಸಿದ ಕೋಟ್ಯಾಂತರ ರೂಪಾಯಿಗಳನ್ನು ದೇಣಿಗೆ ನೀಡಿದ ವಿಚಾರ ಅವನ ವಿವಾದಗಳಿಂದ ಮಸುಕಾಯಿತು. ಸರಿಸುಮಾರು ೩೯ ವಿವಿಧ ಸಂಸ್ಥೆಗಳ ಮೂಲಕ ದೇಣಿಗೆ ನೀಡಿದ್ದು ಇಂದಿಗೂ ವಿಶ್ವದಾಖಲೆ.

2001 ರಲ್ಲಿ ನಾನು ಬ್ರಿಗೇಡ್ ರಸ್ತೆಯಲ್ಲಿರುವ Music World ಗೆ ಹೋಗಿದ್ದೆ. ಆವಾಗ ಅಲ್ಲಿನ ಆಲ್ಬಂ ಸಂಗ್ರಹವನ್ನು ವೀಕ್ಷಿಸುತ್ತಿರುವಾಗ world music ವಿಭಾಗದಲ್ಲಿ ನನ್ನ ಕಣ್ಣಿಗೆ ಅಚಾನಕ್ಕಾಗಿ ಕಣ್ಣಿಗೆ ಬಿದ್ದದ್ದು ಮೈಕಲ್ ಜಾಕ್ಸನ್ ನ ಆಗಷ್ಟೆ release ಆದ ಆಲ್ಬಮ್ 'Invincible'. ನನಗೆ ಪಾಶ್ಚಿಮಾತ್ಯ ಸಂಗೀತದ ಬಗ್ಗೆ ಅಷ್ಟೇನೂ ಒಲವು ಇರದಿದ್ದ ಕಾರಣ Invincible ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅದರ ಅರ್ಥವನ್ನು ಪದಕೋಶದಲ್ಲಿ ಹುಡುಕಿದ್ದೇ[Invincible - ಅಜೇಯ ]. ಅವನ ವಿಶ್ವವಿಖ್ಯಾತ ಹಾಡುಗಳಾದ thriller, Beat it, Black & White, Belli Jeans, Smooth Criminal ವೀಡಿಯೊಗಳನ್ನ ನೋಡಿದ್ದೇ. ಆದರೆ ನನಗೆ ಕುತೂಹಲವಿದ್ದದ್ದು ಅವನ ನೃತ್ಯದ ಬಗ್ಗೆ ಮಾತ್ರ. [ಹಾಡುಗಳು ತಲೆಬುಡ ಅರ್ಥವಾಗುತ್ತಿರಲಿಲ್ಲ ಬಿಡಿ]. ಈಗ ಪಾಶ್ಚಿಮಾತ್ಯ ಸಂಗೀತದ ಬಗ್ಗೆ ಈಗೇನು ಒಲವು ಮೂಡದಿದ್ದರೂ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದರಿಂದ ಮೈಕಲ್ ಜಾಕ್ಸನ್ ನ ಸಂಗೀತ ಎಷ್ಟು ಸಂಪತ್ಭರಿತವಾಗಿದೆ ಎಂದು ಗೊತ್ತಾಯಿತು.



ಕೆಲವರು ಇದ್ದಾಗ ಸುದ್ದಿ ಮಾಡ್ತಾರೆ; ಕೆಲವರು ಸತ್ತ ಮೇಲೆ ಸುದ್ದಿ ಮಾಡ್ತಾರೆ; ಇನ್ನೂ ಕೆಲವರು ಇದ್ದಾಗ ಸುದ್ದಿ ಮಾಡಿದ್ದಲ್ಲದೆ, ಹೋದನಂತರವೂ ಸುದ್ದಿ ಮಾಡ್ತಾರೆ. ಕೊನೆಯದು ತುಂಬಾ rare category. ಇದಕ್ಕೆ ಸೇರುವ ಅಪರೂಪದ ವ್ಯಕ್ತಿ MJ. MJ ಯೊಡನೆ ಸ್ಪರ್ಧಿಸಲು MJ ಯೆ ಹುಟ್ಟಿಬರಬೇಕು. He is truly invincible. Hats off to you MJ. May your soul rest in peace.

Sunday, June 28, 2009

ಕನಸು - ನಕ್ಷತ್ರ

ನಿನ್ನ ಬಗ್ಗೆ
ಬೀಳುವ
ಕನಸುಗಳೆಲ್ಲ
ರಾತ್ರಿ
ಎದ್ದು
ನಕ್ಷತ್ರಗಳಾದವೆ........?




Saturday, June 27, 2009

ಅಪರಿಚಿತ ಸುಂದರಿ

ಚಿಕ್ಕಂದಿನಿಂದ ಬಸ್ಸಿನಲ್ಲಿ ಪ್ರಯಾಣಿಸುವಾಗ ಕಿಟಕಿ ಪಕ್ಕದ ಸೀಟಿನಲ್ಲೇ ಕೂರಬೇಕೆಂಬ ಆಸೆ. ಆ ಆಸೆ ಇನ್ನು ನನ್ನ ಬಿಟ್ಟಿಲ್ಲ ಅಥವಾ ನಾನು ಅದನ್ನು ಬಿಟ್ಟಿಲ್ಲ. ಈಗಲೂ ಬಸ್ಸು ಹತ್ತಿದ ಕೂಡಲೇ ನಾನು ಮಾಡುವ ಮೊದಲ ಕಸರತ್ತು ಕಿಟಕಿ ಸೀಟು ಖಾಲಿ ಇದೆಯಾ ನೋಡೋದು. ಚೆನ್ನಾಗಿ ಗಾಳಿ ಬೀಸುತ್ತೆ ಅಂತಲೋ, ಹೊರಗಿನ ಒಂದಷ್ಟು 'ನೋಟಗಳು' ಕಾನಬಹುದೆಂದೋ ಹೀಗೆ ಕಾರಣಗಳು. ಊರಿಗೆ ಹೋಗುವಾಗ KSRTC ಬಸ್ಸಿನಲ್ಲಿ reservation ಮಾಡಿಸುವುದು ಕಿಟಕಿ ಸೀಟ್ ಸಿಕ್ಕರೆ ಮಾತ್ರ. ಇಲ್ದಿದ್ದ್ರೆ ordinary ಬಸ್ಸಲ್ಲೇ ನನ್ನ ಪ್ರಯಾಣ. ಹೀಗೆ ಒಂದು ಸಲ ಕಿಟಕಿ ಸೀಟ್ ಕಾಯ್ದಿರಿಸಿ 'ಹರಿ ಹರಿ' ಅಂತ ನನ್ನ ಕನಸಿನ ಪ್ರಯಾಣಕ್ಕೆ ಕಾಮತ್ ಹೋಟೆಲಿನಲ್ಲಿ ಭರ್ಜರಿಯಾಗಿ ಊಟ ಮಾಡಿ KSRTC ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿನ ಬರುವಿಕೆಗಾಗಿ ಕಾಯತೊಡಗಿದೆ. ವೀಕೆಂಡ್ ಆಗಿದ್ದರಿಂದ ಜನರು ಜಾಸ್ತಿ ಇದ್ದರು, ಬಸ್ಸುಗಳು ಜಾಸ್ತಿ ಇದ್ದವು. ಸ್ವಲ್ಪ ಹೊತ್ತಿನ ನಂತರ ಪ್ರವಾಹದೊಪಾದಿಯ ಜನರನ್ನು ಮತ್ತು ಆತ್ತಿತ್ತ ನೋಡಲಾಗದೆ, ಎಲ್ಲೂ ಹೊರಳಾಡಲಾಗದೆ ಉಸಿರುಕಟ್ಟಿ ನಿಂತ ದೈತ್ಯ ಬಸ್ಸುಗಳನ್ನು ಸಂಭಾಳಿಸಲಾಗದೇ ಹೆಣಗುತ್ತಿದ್ದ ಒಬ್ಬ ಸುಪೆರ್ವೈಸರ್ ಗೆ ನನ್ನ ಟಿಕೆಟ್ ತೋರಿಸಿದೆ. ಆಗಲೇ ಸಿಕ್ಕಾಪಟ್ಟೆ ಟೆನ್ಶನ್ ನಲ್ಲಿದ್ದ ಅವನು "ನಿಮ್ಮೆದುರಿಗೆ ಇದಿಯಲ್ರಿ. ಅಷ್ಟು ಗೊತ್ತಾಗಲ್ವ" ಅಂತ ಉಗಿದ. ನನ್ನೆದುರಿಗೆ ಇದ್ದ ಬಸ್ಸನ್ನು ಸರಿಯಾಗಿ ಗಮನಿಸದೆ ಅವನನ್ನು ಕೇಳಿದ್ದಕ್ಕೆ ನನಗೆ ನಾನೇ ಶಾಪ ಹಾಕಿಕೊಳ್ಳುತ್ತಾ ಬಸ್ಸಿನೆಡೆಗೆ ನಡೆದೆ. ಆಗಲೇ ತುಂಬ ಪ್ರಯಾಣಿಕರು ತಮ್ಮ ತಮ್ಮ ಸ್ಥಾನಗಳಲ್ಲಿ ಸ್ವಸ್ಥವಾಗಿ ವಿರಾಜಮಾನರಾಗಿದ್ದರು. ಒಂದು, ಎರಡು ಎಣಿಸುತ್ತ ಪ್ರೈಮರಿ ಸ್ಕೂಲ್ ಜ್ಞಾಪಿಸಿಕೊಳ್ಳುತ್ತ ನನ್ನ ಸೀಟ್ ಎದುರಿಗೆ ಬಂದು ನಿಂತೆ. ನೋಡಿದರೆ ಕಿಟಕಿ ಪಕ್ಕ ಸೀಟ್ ಖಾಲಿ, ಅದರ ಪಕ್ಕದ ಸೀಟ್ ಭರ್ತಿ. ಅದರಲ್ಲೇನು ವಿಶೇಷ ಇಲ್ಲ ಬಿಡಿ. ವಿಶೇಷ ಇರೋದು ಅದನ್ನು ಭರ್ತಿ ಮಾಡಿದ ವ್ಯಕ್ತಿಯಲ್ಲಿ. ಆ ವ್ಯಕ್ತಿಯನ್ನು ನೋಡಿದ ನನಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. my heart rate increased, temperature raised, palms got sweaty, stomach fluttered, throat tightened etc etc. ಇಷ್ಟೆಲ್ಲಾ ಒಂದೇಸಲ ಆದರೆ ಹೇಗಾಗಿರಬೇಡ 'ಒಂದೇ ನೋಟಕ್ಕೆ'. ಬ್ಯಾಗನ್ನು ಮೇಲಿರಿಸಿ ಅಲ್ಪ ಸ್ವಲ್ಪ ತದಬಡಾಯಿಸುತ್ತಲೇ "execuse me" ಎಂದೆ. ಕಿವಿಗೆ ಹೆಡ್ ಫೋನ್ ಸಿಕ್ಕಿಸಿಕೊಂಡು ಅದೇನೋ ಕೇಳುತ್ತಿದ್ದ 'ಅವಳು' ತಲೆಯೆತ್ತಿ ನಸುನಕ್ಕು "Hi" ಎಂದಳು. ನಾನು ಅವಳಿಗೆ ವಿಶ್ ಮಾಡಿ ಸ್ವಲ್ಪ ಜಾಸ್ತಿನೆ ಸಭ್ಯತೆ ತೋರುತ್ತ ಪಕ್ಕದಲ್ಲಿ ಕುಳಿತೆ. ನಾನು ಕೂರುವ ಹೊತ್ತಿಗೆ ಅವಳ ಮೊಬೈಲ್ ಗೆ ಯಾರದ್ದೋ ಕರೆ ಬಂದು ಅವಳು ಇಂಗ್ಲೀಷಿನಲ್ಲಿ ಉತ್ತರಿಸತೊಡಗಿದಳು. ಇಂಗ್ಲಿಷ ಮಾತಾಡೋ ಹುಡುಗಿ ಜೊತೆ ಇಡೀ ರಾತ್ರಿ ಪ್ರಯಣಿಸಬೇಕಲ್ಲ ಎಂದು ಕಸಿವಿಸಿನೂ ಆಯಿತು. [ನನಗೇನು ಇಂಗ್ಲಿಷ ಬಗ್ಗೆ ದ್ವೇಷವಿಲ್ಲ. ಆದರೆ ಕನ್ನಡ ಮಾತಾಡಲು ಬಂದರೂ ಇಂಗ್ಲಿಷ್ ಬಳಸುವರ ಬಗ್ಗೆ ಅಸಹನೆ ಅಷ್ಟೇ]. ಶಿವಮೊಗ್ಗಕ್ಕೆ ಹೊರಟಿರೋದ್ರಿಂದ ಕನ್ನಡ ಬಂದ್ರು ಬರಬಹುದೆಂಬ ಆಸೆ ದೂರದಲ್ಲಿ ಮನೆಮಾಡತೊಡಗಿತು. ಅದೂ ಅಲ್ಲದೆ ಕರೆ ಮಾಡಿದ ಆ ಕಡೆಯ ವ್ಯಕ್ತಿಗೆ ಕನ್ನಡ ಬಾರದಿದ್ದರೆ [ ಪಾಪ ]ಇವಳದೆನು ತಪ್ಪು ಅಲ್ವೇ! ಅವಳು ಮಾತು ಮುಗಿಸಿ ಮೊಬೈಲ್ ಮಡಿಲಲ್ಲಿ ಮಡಗುವ ವೇಳೆಗಾಗಲೆ ನಾನು ಹಾಡುಗಳಿಗಿಂತ ಜಾಹಿರಾತುಗಳನ್ನೇ ಹೆಚ್ಚಾಗಿ ಪ್ರಸರಿಸುವ ರೇಡಿಯೋ ಸ್ಟೇಷನ್ ಒಂದನ್ನು ಕೇಳತೊಡಗಿದ್ದೆ. ಬ್ಯಾಗಿನಲ್ಲಿ ಏನೋ ತಡಕಾಡುತ್ತಾ ಒಂದು ಪ್ಲಾಸ್ಟಿಕ್ ಕವರ್ ತೆಗೆದು ತನ್ನ ಕಾಲ ಮೇಲೆ ಇಟ್ಟುಕೊಂಡಿದ್ದು ಓರೆಗಣ್ಣಿನಿಂದ ಗಮನಿಸಿದೆ. ತಿರುಗಿ ನೋಡುವುದು ಒಳ್ಳೆ manners ಅಲ್ಲ ಎಂದು ಕಷ್ಟಪಟ್ಟು ಮುಖ ಕಿಟಕಿಯ ಕಡೆಗೆ ತಿರುಗಿಸಿದೆ. " ಶಿವಮೊಗ್ಗಕ್ಕಾ ? " ಅವಳ ಮೊದಲ ಪ್ರಶ್ನೆ. ನಾನು ಅವಳತ್ತ ತಿರುಗಿ "ಹಾಂ... .ಹೌದು ". ಮತ್ತೆ ಸ್ವಸ್ಥಾನಕ್ಕೆ ಮುಖ ತಿರುಗಿಸಿದೆ. "ನೀವಿದನ್ನ ತಗೊಳ್ಳಲೇಬೇಕು.......ಇಲಾಂದ್ರೆ ನನಗೆ ಕಷ್ಟ ಆಗುತ್ತೆ. ......please ". ಇದೇನಪ್ಪ ಇದು ಅಪರಿಚಿತ, ಅನಾಮಿಕ ಸುಂದರಿ ಏನೋ ಕೊಡ್ತಾ ಇದಾಳೇಂತ ಒಳಗೊಳಗೇ ಖುಷಿಪಟ್ಟು ಅವಳತ್ತ ತಿರುಗಿದೆ. ಅವಳ ಆ ಭಂಗಿ ನೋಡಿ my heart rate increased, temperature raised, palms got sweaty, stomach fluttered, throat tightened etc etc. ಒಂದು ಕೈಯಲ್ಲಿ ಕತ್ತರಿಸಿದ ಸೇಬು....ಮತ್ತೊಂದು ಕೈಯಲ್ಲಿ ಚಾಕು ಹಿಡಿದು ಒಂದಿಷ್ಟು ವಿನಂತಿಸುವ ಜಾಸ್ತಿ ಆಜ್ಞಾಪಿಸುವ ಮುಖಭಾವದೊಂದಿಗೆ ನನ್ನ ಪಕ್ಕದ ಸೀಟಿನ ಸುಂದರಿ...........! ಹಾಗೆ ಸಾವರಿಸಿಕೊಂಡು "ಚಾಕು ತಗೊಳ್ಳಲ.......ಸೇಬು ತಗೊಳ್ಳಲ" ಎಂದೆ. ಇಂತ ಸಮಯದಲ್ಲಿ ಇನ್ನೇನು ಮಾಡೋಕಾಗುತ್ತೆ ಹೇಳಿ. ನಾನೇನೋ ಪಕ್ಕದ ಸೀಟಿನಲ್ಲಿ ಹುಡುಗಿ...ಪ್ರಯಾಣ ಮುಂದುವರೆಯುತ್ತಿರುವಂತೆ...ಹಾಗೆ ಅಲ್ಪ ಸ್ವಲ್ಪ ಮಾತುಕತೆ [ಹುಡುಗಿ IT ಫೀಲ್ಡಿನಲ್ಲಿ ಇದಾಳೆಂತ ಅವಳ ಮಾತುಕತೆಯಲ್ಲೇ ಕಂಡಿಕೊಂಡಿದ್ದೆ ]....ಮೊಬೈಲ್ ನಂಬರ್ exchange........ಆಮೇಲೆ ದಿನಾಲು sms........ಸ್ವಲ್ಪ ದಿನದ ನಂತರ ಕ್ಷೆಮಸಮಾಚಾರಕ್ಕಾಗಿ.....ಕರೆ ಮಾಡೋದು....ಹೀಗೆ ನನ್ನ ಕನಸಿನ ಬಲೂನ್ ಊದಿತ್ತು. ಆದರೆ ಚಾಕು ತೋರಿಸಿನೆ ಚುಚ್ಚದೆ ಒಡೆದಿದ್ದಳು ನನ್ನ ಕನಸಿನ ಬಲೂನನ್ನು. ಅವಳಿಗೂ ನನ್ನ ಕೆಟ್ಟ ಜೋಕು ಹಿಡಿಸಿರ ಬೇಕು. " ಒಬ್ಬಳೇ ತಿನ್ನೋಕೆ ಕಷ್ಟ ಆಗುತ್ತೆ; ನೀವು ತಗೊಳ್ಳಿ " ಅಂತ ಮತ್ತೊಮ್ಮೆ ಹೇಳಿದ್ಲು ಸುಂದರಿ. ಈ ಸಾರ್ತಿ ಧ್ವನಿ ಕೊಮಲವಾಗಿತ್ತು. " ಥ್ಯಾಂಕ್ಸ್ " ಹೇಳುತ್ತಾ ಹಣ್ಣನ್ನು ತೆಗೆದುಕೊಂಡು ಹೊರಗಡೆ ನೋಡುತ್ತಾ ನಿಧಾನವಾಗಿ ಮೆಲ್ಲತೊಡಗಿದೆ. ಅವಳು ಉಳಿದ ಹಣ್ಣು ತಿನ್ನುತ್ತಾ ಮಧ್ಯೆ ಮಧ್ಯೆ ಬಂದ ಕರೆಗಳಿಗೆ ಉತ್ತರಿಸುತ್ತ ಕುಳಿತಳು. ನಾನು ನನ್ನ favourite timepass ಆದ ಹೊರನೋಟಕ್ಕೆ ಮನಕೊಟ್ಟು ಸಮಯ ಕೊಲ್ಲತೊಡಗಿದೆ. ಇಲ್ಲನ್ದಿದ್ರೆ ಕೆಲ ನಿಮಿಷಗಳ ಹಿಂದೆ ಸಮಯವೇ ಹುಡುಗಿಯಾಗಿ ಬಂದು ನನ್ನ ಕೊಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿತ್ತಲ್ಲ! ಈ ವೇಳೆಗಾಗಲೆ ಬಸ್ಸು ಬೆಂಗಳೂರು ಸರಹದ್ದು ದಾಟಿ ಶಿವಮೊಗ್ಗದ ಹಾದಿ ಹಿಡಿದಾಗಿತ್ತು. ನಾನು ನಿದ್ರೆಯ ದಾರಿಯನ್ನು ಹಿಡಿಯತೊಡಗಿದೆ. " ಸುಖಕರ ಪ್ರಯಾಣಕ್ಕೆ KSRTC ಬಳಸಿ " ಎಂಬ ಸ್ಲೋಗನ್ ಸಾರ್ಥಕಗೊಳಿಸುವಂತೆ ಸುಖವಾಗಿ ಮತ್ತು 'ಸುರಕ್ಷಿತವಾಗಿ' ಶಿವಮೊಗ್ಗ ತಲುಪಿ ಬಸ್ ಸ್ಟ್ಯಾಂಡ್ ಮುಂದೆ ನಿಂತೆ. ಅದೇ ವೇಳೆ ತನ್ನ ತಂದೆ [ ಇರಬಹುದು ] ಜೊತೆ ಆ ಹುಡುಗಿ ನನ್ನ ಮುಂದೆ ಹೋದಾಗ ಚಾಕು ಹಿಡಿದ ಅವಳ ಭಂಗಿ ನನ್ನ ಸ್ಮೃತಿಪಟಲದ ಮುಂದೆ ತೇಲಿ ಬಂತು. ಒಂದೆರಡು ಹೆಜ್ಜೆ ಮುಂದೆ ಹೋದ ಹುಡುಗಿ ಹಿಂದಿರುಗಿ ನೋಡುತ್ತಾ ದೊಡ್ಡ ಧ್ವನಿಯಲ್ಲಿ ಬೈ ಹೇಳಿದಳು. ವಿಶ್ ಮಾಡಿದ್ದು ನನಗೇನೆ ? ಎಂದು ಆಶ್ಚರ್ಯ ಪಡುತ್ತ ನಾನೂ ಬೈ ಹೇಳಿದ್ದೆ. ಬಸ್ಸಿನಲ್ಲಿ ತಿನ್ನೋಕೆ ಹಣ್ಣು ಮಾತ್ರ ಅಲ್ಲ ಅದನ್ನು ಕತ್ತರಿಸೋಕೆ [ಹಣ್ಣನ್ನು ಕತ್ತರಿಸೋಕೆ ಮಾತ್ರಾನ?] ಚಕೂನು ತಂದಿರ್ತಾರೆ ಅಂತ ಆವತ್ತೇ ನನಗೆ ಗೊತ್ತಾಗಿದ್ದು. ಪ್ರತಿಸಲ KSRTC ಯಲ್ಲಿ ಪ್ರಯಾಣಿಸುವಾಗ ಈ ಘಟನೆ ನನಗೆ ಜ್ಞಾಪಕಕ್ಕೆ ಬರುತ್ತೆ. ಆ ಚಾಕು ತೋರಿಸಿದ ಸುಂದರಿ ಈ ಬೆಂಗಳೂರಿನ ಕಾಂಕ್ರೀಟ್ ಜಂಗಲ್ ನಲ್ಲಿ ಎಲ್ಲಿದ್ದಾಳೋ.............? ಮತ್ತೆ ಏನಾದ್ರು ಸಿಗ್ತಾಳೋ...........ಕಾಲಾನೇ ನಿರ್ಧರಿಸಬೇಕು.

Thursday, June 18, 2009

ನಾನು, ನೀನು ಮತ್ತು ಮಳೆ

ಮಳೆಯ ಆರ್ಭಟಕ್ಕೆ ಸೋತು ಬೆಚ್ಚಗಿನ ಗೂಡು ಸೇರಿದರೂ ಅಂದು ನಾವಿಬ್ಬರು ಮಳೆಯಲಿ ತೊಯ್ದು ತೊಪ್ಪೆಯಾದ ನೆನಪು ಸಾಗರದ ಅಲೆಗಳಂತೆ ಮರಳಿಬರುತ್ತಿದೆಯಲ್ಲ! ಇಂದಾದರೂ ಮನೆ ಬೇಗ ತಲುಪಬೇಕೆಂದುಕೊಂಡರೂ ನಿನ್ನ ಜೊತೆಯಲ್ಲಿರುವಾಗ ಸಮಯಸರಿದಿದ್ದು ತಿಳಿಯದೆ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಲ್ಲವೇ? ನಾವು ಹೊರಡುವಾಗ ಮಬ್ಬುಗತ್ತಲು ಒಂದೆರಡು ಹೆಜ್ಜೆ ನಿನ್ನ ಜೊತೆ, ಆ ಕ್ಷಣದಲ್ಲೇ ಕಾರ್ಮೋಡ ಆವರಿಸಿ ನಿನ್ನ ಮಾತಿನಂತೆಯೆ ಪಟಪಟನೆ ಸುರಿಯ ತೊಡಗಿತ್ತು ಮಳೆ. ನಿನಗೆಲ್ಲಿ ಹುಷಾರು ತಪ್ಪುವುದೋ ಎಂಬ ಆತಂಕದಲ್ಲಿ ನಾನಿದ್ದರೆ "ಮಳೆಯಲ್ಲೇ ಹೋಗೋಣ; ಸಖತ್ತಾಗಿರತ್ತೆ" ಎಂದು ಹುರಿದುಂಭಿಸಿದ್ದು ನೀನು ತಾನೇ. ನನಗೆ ನೀನು ನಿನಗೆ ನಾನು ಕೊಡೆಯಾಗಿ ಇಡತೊಡಗಿದ್ದೆವು ಒಟ್ಟಿಗೆ ಹೆಜ್ಜೆ. ಮೊದಮೊದಲು ಹನಿಗಳ ಸಂಗ ಬೇಸರವಾದರೂ ನಮ್ಮ ನಡಿಗೆಗೇನೂ ಅವು ತರಲಿಲ್ಲ ಭಂಗ. ನೀನಿದ್ದಿದ್ದರಿಂದಲೇ ಒಂದಿಷ್ಟು ಹುಮ್ಮನಸ್ಸು ಮೂಡಿ ಒಂಟಿಯಾಗಿ ಸುರಿವ ಮಳೆಗೆ ನಾವು ಜೊತೆಗಾರರಾಗಿದ್ದು. ತಲೆಯ ಮೇಲೆ ಬಿದ್ದ ಮಳೆಯಹನಿಗಳ ಬಳಗ ಚಿಕ್ಕ ತೊರೆಗಳಾಗಿ ಮುಖದಮೇಲೆ ಬಂದಾಗ ಅವನ್ನು ಕೈಯಿಂದ ಒರೆಸಿ ತೆಗೆಯುತ್ತಿದ್ದರೆ 'ಅವು ಮಳೆಯ ಹನಿಗಳಲ್ಲವೋ ಹುಡುಗ ನಿನ್ನ ಪ್ರೀತಿಗೆ ನನ್ನ ಆನಂದಬಾಷ್ಪ ಎಂದಿದ್ದೆ ನೀನು'. ಅಲ್ಲೆಲ್ಲೋ ಮಿಂಚು ಆಗಸದ ಮೂಲೆಯನು ಕ್ಷಣಕಾಲ ಬೆಳಗಿ ಮರೆಯಾದಾಗ ನನ್ನ ಕೈಹಿಡಿದು ಅದಕ್ಕೆ ಕೈತೋರಿಸಿ ಸಂಭ್ರಮಿಸಿದ್ದೆ ನೀನು. ತಣ್ಣಗಿನ ಮಳೆಯಲ್ಲಿಯೂ ಬೆಚ್ಚಗಿತ್ತು ನಿನ್ನ ಸ್ಪರ್ಶ. ಇದು ಆಶ್ಚರ್ಯ! ಸುಳ್ಳಲ್ಲ. ಗುಡುಗಿಗೆ ಬೆದರಿಸೋ ಉತ್ಸಾಹದಲ್ಲಿದ್ದವಳು ನಮ್ಮನು ಹೆದರಿಸಲು ಬಂದ ಗುಡುಗಿಗೆ ಬೆದರಿ ಪುಟ್ಟ ಮಗುವಿನಂತೆ ನನ್ನ ತಬ್ಬಿ ನಡೆಯಲಿಲ್ಲವೆ? ಮನೆಯ ಹೊರಗೆ ನಿಂತು ಬೆಂಬಿಡದೆ ನಮ್ಮ ಪ್ರೀತಿಯ ಕಾಯ್ದ ಮಳೆಗೆ ಥ್ಯಾಂಕ್ಸ್ ಹೇಳುತ ಇಷ್ಟವಿಲ್ಲದೆ ನನ್ನ ಕೈಬಿಟ್ಟು ಒಳನಡೆದದ್ದು ನೀನು ತಾನೇ ? ನಿನ್ನ ಪ್ರೀತಿಗೆ, ಜೀವನೋತ್ಸಾಹಕೆ ಮನಸೋತು ಬಂದ ಕಣ್ಣೀರು ಮಳೆಯಲ್ಲಿ ಬೆರೆತು ಮಳೆಯಾಗಿದ್ದು ನೀ ನೋಡಲಿಲ್ಲ ಹುಡುಗಿ.

Friday, June 12, 2009

ಕನ್ನಡದಲ್ಲಿ ಚಾಟ್ ಮಾಡಿ

ಕನ್ನಡದಲ್ಲಿ ಚಾಟ್ ಮಾಡಲು ಸರಿಯಾದ tool ಇಲ್ಲದೆ ಒಂದಿಷ್ಟು ಅಸಮಾಧಾನದಿಂದಲೇ ಕನ್ನಡವನ್ನು ಇಂಗ್ಲೀಷ್ನಲ್ಲಿ ಟೈಪಿಸುತ್ತಿದ್ದೆ. ಆದರೆ ಗೂಗಲ್ ಲ್ಯಾಬ್ಸ್ ಹೊರತಂದಿರುವ transliteration bookmarklet ಈ ಸಮಸ್ಯೆಯನ್ನು ನೀಗಿಸಿದೆ. transliteration bookmarklet ಎಂಬ ಪುಟ್ಟ ಸಾಫ್ಟವೇರ್ codeನ್ನು ನಿಮ್ಮ ಬ್ರೌಸರ್ನಲ್ಲಿ ಸ್ಥಾಪಿಸಿ ನಿಮ್ಮಿಷ್ಟದ ವೆಬ್ಸೈಟಿನಲ್ಲಿ ಸಿರಿಗನ್ನಡವನ್ನು ಟೈಪಿಸಿ ಕಳುಹಿಸಬಹುದಾಗಿದೆ. Gmail, Orkut, Knool, blogger, ಹಾಗು iGoogle Gadget ಗಳಲ್ಲಿ ಈ ಸೌಲಭ್ಯ ಅಂತರಿಕವಾಗಿ [ inbuilt ] ಲಭ್ಯವಿದೆ. ಆದರೆ gmail, orkut ಗಳಲ್ಲಿ ಚಾಟ್ ಮಾಡಲು bookmarklet ಅತ್ಯಂತ ಉಪಯುಕ್ತ. ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ, ಮಲಯಾಳಂ, ತೆಲುಗು ಹಾಗು ತಮಿಳು ಭಾಷೆಗಳಲ್ಲಿ ಸಹ ಈ ಸೇವೆ ದೊರೆಯುತ್ತದೆ. ಇದರ ಕೆಲವು ನಿಯಮಿತ ಸೇವೆಗಳು ಹೀಗಿವೆ.
೧) ನೆಟ್ವರ್ಕಿಂಗ್ ವೆಬ್ಸೈಟ್ ಗಳಲ್ಲಿ ಕನ್ನಡದಲ್ಲೇ ಸಂದೇಶಗಳನ್ನು ಕಳುಹಿಸಬಹುದು.
೨) ಕನ್ನಡ ವಿಕಿಪೀಡಿಯ ಸಂಪಾದಿಸಬಹುದು.
೩) ಗೂಗಲ್ ನ್ಯೂಸ್ ನಲ್ಲಿ ಕನ್ನಡ ವಾರ್ತೆಗಳಿಗೆ ಹುಡುಕಾಟ ನಡೆಸಬಹುದು.
೪) ಗೂಗಲ್ ಸರ್ಚ್ ನಲ್ಲಿ ಕನ್ನಡದ ಮಾಹಿತಿಗಾಗಿ ಹುಡುಕಾಟ ನಡೆಸಬಹುದು.
೫) gmail, orkut ಗಳಲ್ಲಿ ಕನ್ನಡದಲ್ಲೇ ಚಾಟ್ ಮಾಡಬಹುದು.

ನಿಮ್ಮ ಬ್ರೌಸರ್ ನಲ್ಲಿ ಈ codeನ್ನು ಅನುಸ್ಥಾಪಿಸಲು ಹಾಗು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.
http://t13n.googlecode.com/svn/trunk/blet/docs/help_kn.html

Thursday, June 11, 2009

I have taken a CHANCE


ಕಳೆದಿದ್ದು ಕೆಲವು ಪಡೆದಿದ್ದು ಹಲವು

ಕಳೆದೆರಡು ದಿನಗಳು ಜೀವನ ಹಳಿ ತಪ್ಪಿದ ರೈಲಿನಂತೆ ಅಡ್ಡಾದಿಡ್ಡಿ ಮಲಗಿತ್ತು. ಎಂದಿನ ಉತ್ಸಾಹ ಇರದೆ ಪೇಲವವಾಗಿತ್ತು. ಇದೆಲ್ಲ ಶುರುವಾಗಿದ್ದು ನಾನು ಬಸ್ಸಿನಲ್ಲಿ ಬಿಟ್ಟುಬಂದ ಬ್ಯಾಗಿನಿಂದ. ಹೆಚ್ಚಿನ ಬೆಲೆಬಾಳುವ ವಸ್ತುಗಳಿರದಿದ್ದರೂ ತುಂಬಾ ಅಗತ್ಯವಾದ ಕೆಲವು ಮಿಸ್ಸಾದವು. ಕಳೆದುಕೊಂಡಿದ್ದು mobile charger, hands free, ಒಂದೆರಡು ಜೊತೆ ಬಟ್ಟೆ, ಹಲ್ಲುಜ್ಜುವ ಬ್ರಷ್, ಸ್ನೇಹಿತನಿಂದ ಎರವಲು ಪಡೆದ ಪುಸ್ತಕ ಹಾಗು ಮನೆಯ ಬೀಗದ ಕೈ ಮತ್ತು ಅಮ್ಮ ಪ್ರೀತಿಯಿಂದ ಮಾಡಿ ಕಳಿಸಿದ ತಿಂಡಿ. Duplicate key ಮಾಡಿಕೊಟ್ಟವನಿಗೆ ಕೊಟ್ಟ ಇನ್ನೂರೈವತ್ತು ರೂಪಾಯಿಗಳಿಂದ ಶುರುವಾಗಿ ಕಳೆದುಕೊಂಡ ಅಗತ್ಯವಾದ ವಸ್ತುಗಳನ್ನು ಖರೀದಿಸಲು ತೆರಬೇಕಾದ ದುಡ್ಡು ಎಲ್ಲ ಸೇರಿದರೆ ನನಗೆ ನಷ್ಟದ ಬಾಬತ್ತೆ! ಜೊತೆಗೆ ವ್ಯರ್ಥವಾದ ಸಮಯ.

ತಿಳಿನೀರಿನಂತೆ ಇದ್ದ ಜೀವನ ಕಲ್ಲೆಸೆದಂತೆ ಒಂದಿಷ್ಟು ಹೊಯ್ದಾಡಿ, ಅಲೆಗಳನ್ನೆಬ್ಬಿಸಿ ಶಾಂತವಾಗಲು ಸಮಯ ಬೇಡುತ್ತೆ. ಆದರೆ ಈ ಅನುಭವದಿಂದ ಕಲಿತ ಪಾಠ ಬಹುಷಃ ಅಮೂಲ್ಯವಾದುದು. ಎಲ್ಲೋ ಒಂದು ಕಡೆ ಬೇಜವಬ್ದಾರಿತನದೆಡೆಗೆ ಜಾರುತ್ತಿದ್ದ ನನ್ನನ್ನು ಈ ಘಟನೆ alert ಮಾಡಿದೆ. ಮುದುಡಿದ್ದ ಮನಸ್ಸು ಬಹುಬೇಗ normal ಆಗಿದೆ. ಸಮಸ್ಯೆಗೆ ಬೆನ್ನು ತೋರಿ ಕಾಲ ಕಳೆಯದೆ ಅದನ್ನು ಬಹುಬೇಗ ಬಗೆಹರಿಸಿದ ತೃಪ್ತಿ ನನಗಿದೆ. Totally ಕಳೆದಿದ್ದು ಕೆಲವು ಪಡೆದಿದ್ದು ಹಲವು.

Wednesday, June 10, 2009

ನನ್ನ ಇಮೇಲ್ ಪುರಾಣ

ಇಂಟರ್ನೆಟ್ ಬಗ್ಗೆ ನಾನು ಮೊದಲು ಕೇಳಿದ್ದು ಪೀಯುಸಿ ಓದಬೇಕಾದರೆ. ಅಂದರೆ ಸುಮಾರು ೧೯೯೬-೧೯೯೭ ಸಮಯದಲ್ಲಿ. ಕಂಪ್ಯೂಟರನ್ನು ನೋಡಿದ್ದು ೮ ನೆ ತರಗತಿ ಓದುವಾಗ. 8thB ಸೆಕ್ಷನ್ನಲ್ಲಿ ನಮ್ಮೆಲರನ್ನು ಕೂಡಿಹಾಕಿ ಕಂಪ್ಯೂಟರ್ ಎಂಬ ಮಾಯಾ ಯಂತ್ರವನ್ನು ತೋರಿಸಿದಾಗ ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡಿದ್ದೆವು. ಅದರಲ್ಲೂ ನಮಗೆ ಆಶ್ಚರ್ಯವೆನಿಸಿದ್ದು ಕಂಪ್ಯೂಟರ್ 1, 0 ಗಳ ಭಾಷೆಯನ್ನು ಆಂತರಿಕವಾಗಿ ಉಪಯೋಗಿಸುತ್ತದೆ ಎಂಬ ಸಂಗತಿ. ನಂತರ ಪಿಯುಸಿ ಮುಗಿಸುವವರೆಗೂ ಕಂಪ್ಯೂಟರ್ ನೊಡನೆ ನನ್ನ ಒಡನಾಟ ಇರಲಿಲ್ಲ. ಇಂಜಿನಿಯರಿಂಗ್ 1st ಸೆಮಿಸ್ಟರ್ ನಲ್ಲಿ [chemistry cycle] ಮೊಟ್ಟ ಮೊದಲಬಾರಿಗೆ ಕಂಪ್ಯೂಟರ್ ಮುಟ್ಟುವ, ಉಪಯೋಗಿಸುವ, ಅದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಅವಕಾಶ. Thanks to C Programming Lab. ಮೊದಲೆಲ್ಲ ಲ್ಯಾಬ್ ನಲ್ಲಿ ಕಂಪ್ಯೂಟರ್ switch on ಮಾಡುವುದೇ ಒಂದು ದೊಡ್ಡ ಸಂಭ್ರಮ ಆಗಿತ್ತು ನನಗೆ. MSOffice ಓಪನ್ ಮಾಡುವಾಗ ಭಯ ಮಿಶ್ರಿತ ಕುತೂಹಲ. MSWord/Excel ನಲ್ಲಿ ಒಂದಿಷ್ಟು ಸರಕು ತುಂಬಿ save ಮಾಡಿದರೆ ಮನದಲ್ಲಿ ಸಿಹಿಯಾದ ಕೋಲಾಹಲ. ಟೈಪಿಸುವಾಗ ಅಕ್ಷರಗಳನ್ನು ಹುಡುಕಿ ಹುಡುಕಿ "Q ಎಲ್ಲೋ ಕಾಣಿಸ್ತ ಇಲ್ವಲ" ಎಂದೋ , "capital letter ಮೂಡಲು shift ಒತ್ತಬೇಕೋ ಅಥವಾ Ctrl ಒತ್ತಬೇಕೋ" ಎಂದು ಪಕ್ಕದವನನ್ನು ತಿವಿದು ಪದೇ ಪದೇ ಕೇಳುತ್ತಿದ್ದ ದೃಶ್ಯ ಇನ್ನು ನನ್ನ ಕಣ್ಣ ಮುಂದೆ ಇದೆ. ಈ ಎಲ್ಲ ಅನುಮಾನಗಳು ಪರಿಹಾರವಾಗಿ ಕಂಪ್ಯೂಟರ್ ಬಗ್ಗೆ ಒಂದಿಷ್ಟು ಜ್ಞಾನ ವ್ರುದ್ಧಿಯಗಬೇಕಾದರೆ ಒಂದು ಸೆಮಿಸ್ಟರ್ ಕಳೆದಿತ್ತು.

ಇದೆಲ್ಲದರ ನಡುವೆ ಈ ಇಮೇಲ್ ಎಂಬ ಒಂದು ಹೊಸದಾದ ಕಲ್ಪನೆಗೂ ನಿಲುಕದ ಸಂಗತಿಯೊಂದು ನನ್ನ ತಲೆಯನ್ನು ಕೊರೆಯುತ್ತಿತ್ತು. ೧೯೯೮-೯೯ ರ ಸಮಯದಲ್ಲಿ ಆಲ್ಲೊಂದು ಇಲ್ಲೊಂದು cyber cafe ಗಳಿದ್ದವು. ಒಂದು ಘಂಟೆಗೆ ೪೫ ರೂಗಳಷ್ಟು ಇಂಟರ್ನೆಟ್ ಉಪಯೋಗಕ್ಕಾಗಿ ತೆರಬೇಕಾಗಿತ್ತು. ಹಾಗಾಗಿ ಅದರ ಸಹವಾಸಕ್ಕೆ ನಾನು ಹೋಗಿರಲಿಲ್ಲ. ಅದೇ ವೇಳೆ ಕಾಲೇಜಿನಲ್ಲಿ internet ಸೌಲಭ್ಯವನ್ನು ನಾವು ಸ್ಟ್ರೈಕ್ ಎಂಬ ನಾಟಕ ಆಡಿದ ಮೇಲೆ ಕಲ್ಪಿಸಿದ್ದು ನನ್ನ ಇಮೇಲ್ ಬಗ್ಗೆ ಇದ್ದ ಕುತೂಹಲಕ್ಕೆ ಇಂಬು ಕೊಟ್ಟಿತು. ಈ ಕುತೂಹಲ ಒಂದು ಘಂಟೆಯಷ್ಟು [ಆಮೆಗತಿಯಲ್ಲಿ ಇದ್ದ download speed] internet ಉಪಯೋಗಕ್ಕೆ ಹಾತೊರೆದು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಸುಳ್ಳಲ್ಲ. ಮೊದಲನೆಯ ದಿನ practicles ಇದ್ದಿದ್ದರಿಂದ ಇಂಟರ್ನೆಟ್ lab ಗೆ ಹೋಗೋದಿಕ್ಕೆ ಆಗಿರಲಿಲ್ಲ. ಅದೇ ವೇಳೆ ನನ್ನ ಸ್ನೇಹಿತ ಸಂದೀಪ್ ಹುರುಪಿನಿಂದ ಬಂದು ಇಂಟರ್ನೆಟ್ ಬಗ್ಗೆ ಹೇಳುತ್ತಿದ್ದುದನ್ನು ಕೇಳಿ ಅವನ ಹತ್ತಿರ ಹೋಗಿ ಕೇಳಿದೆ,
"ಏನ್ ಮಾಡಿದ್ಯೋ ಇಂಟರ್ನೆಟ್ ನಲ್ಲಿ " ಅಂತ.
"ಏನೂ ಇಲ್ವೋ ಇಮೇಲ್ ಅಕೌಂಟ್ create ಮಾಡಿದೆ, yahoo.com, amezon.com ಎಲ್ಲ ನೋಡಿದೆ " ಅಂದ.
ಇಮೇಲ್ ಅನ್ನೋ ಪದ ಕಿವಿಗೆ ಬಿದ್ದಕೂಡಲೇ ನನ್ನ ಮೈ ಮನಗಳು ರೋಮಾಂಚನಗೊಂಡವು. ಮತ್ತೊಂದಿಷ್ಟು ಕೆದಕಿ ಕೇಳಲು ಅನುವಾದೆ.
"ಇಮೇಲ್ ಅಕೌಂಟ್ create ಮಾಡೋದು ಹೆಂಗೆ? "
"www.yahoo.com ಅಂತ ಟೈಪ್ ಮಾಡು. ಆ ವೆಬ್ಸೈಟ್ ಓಪನ್ ಆಗುತ್ತೆ. ಅಲ್ಲಿ register ಅಂತ ಇರತ್ತೆ, ಅಲ್ಲಿ ಕ್ಲಿಕ್ ಮಾಡಿದ್ರೆ ಒಂದು form open ಆಗುತ್ತೆ ಅಲ್ಲಿ ನಿನ್ details ತುಂಬಿ ok ಬಟನ್ ಒತ್ತು ಅದು ಹೋಗುತ್ತೆ."

websiteಉ, yahoo.comಉ ಯಾವುದೂ ತಲೆಗೆ ಹೋಗಲಿಲ್ಲ. ಅಲ್ಲದೆ ಫಾರಂ ತುಂಬಿಸೋದು ಯಾಕೆ ? ಇಲ್ಲೀವರೆಗೂ ಫಾರಂ ಅಂದ್ರೆ ಸರ್ಕಾರಿ ಕಛೇರಿಗಳಲ್ಲಿ ಅಥವಾ ಕಾಲೇಜಿನಲ್ಲಿ ತುಂಬಿಸುತ್ತಿದ್ದ ಫಾರಂ ಬಗ್ಗೆ ತಿಳಿದಿದ್ದ ನನಗೆ account opening form ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿಲ್ಲ. ಅಲ್ಲದೆ ಇನ್ನೊಂದು ಪ್ರಶ್ನೆ ನನ್ನ ನಾಲಿಗೆ ತುದಿಗೆ ಬಂದು ನಿಂತಾಗಿತ್ತು.

"ಫಾರಂ ಹೋಗುತ್ತೆ ಅಂದ್ಯಲ್ಲ ಎಲ್ಲಿಗೆ ಹೋಗುತ್ತೆ?"
ಹೌದಲ್ವಾ ಎಲ್ಲಿಗೆ ಹೋಗುತ್ತೆ? ಪ್ರಶ್ನೆ ಸಹಜವಾಗಿತ್ತು. . . . . . . . . . ಆದರೆ ಉತ್ತರ ಅವನ ಬಳಿ ಇರಲಿಲ್ಲ. ಹ್ಯಾಗಿರೋಕೆ ಸಾಧ್ಯ ಅವನು ನನಗಿಂತ one day ಸೀನಿಯರ್ ಆಗಿದ್ದ ಅಷ್ಟೆ.

ಅಂತೂ ಇಂತೂ ಅವರಿವರ ಬಳಿ ಅಷ್ಟು ಇಷ್ಟು ಮಾಹಿತಿ ಪಡೆದು ಇಮೇಲ್ ಅಕೌಂಟ್ ರಚಿಸಿದ್ದಾಯಿತು, ಉಪಯೋಗಿಸಿದ್ದೂ ಆಯಿತು. ಆದರೂ ಇಮೇಲ್ ನಲ್ಲಿ ಉಪಯೋಗಿಸುವ @ [at the rate] ಚಿಹ್ನೆ ಬಗ್ಗೆ ಎಲ್ಲೋ ಮೂಲೆಯಲ್ಲಿ ಇದ್ದ ಒಂಚೂರು ಕುತೂಹಲ ಇನ್ನು ತಣಿದಿರಲಿಲ್ಲ. ಮೊದಲು ಅದರ ಬಗ್ಗೆ ಮಾಹಿತಿ ಅಷ್ಟಾಗಿ ಸಿಕ್ಕಿರಲಿಲ್ಲ. ಅಲ್ಲದೆ ನನಗೆ google ಉಪಯೋಗ ಕೂಡ ಮೊದಮೊದಲು ತಿಳಿದಿರಲಿಲ್ಲ. ಆದರೆ ಇಂದು ಏನೋ ಗೂಗಲಿಸುವಾಗ @ ಬಗ್ಗೆ ಸಿಕ್ಕ ಮಾಹಿತಿ ನನ್ನ ಮನ ತಣಿಸಿತು.

೧೯೭೧ ರಲ್ಲಿ BBN [Bolt Bernek and Newman] ಕಂಪೆನಿಗೆ ಕಂಪ್ಯೂಟರ್ ಇಂಜಿನಿಯರ್ ಆಗಿ ಕೆಲಸಮಾಡುತ್ತಿದ್ದ ರೆ ಟಾಮ್ಲಿನ್ಸನ್ [Ray Tomlinson]ಎಂಬಾತ ಇಮೇಲ್ ಕಂಡುಹಿಡಿದವನು. ಜನರ ಹೆಸರಿನಲ್ಲಿ ಉಪಯೋಗಿಸುವ ಅಕ್ಷರಗಳನ್ನು ಬಿಟ್ಟು ಬೇರ್ಯಾವುದಾದರೂ ಕೀಲಿಮಣೆ ಅಕ್ಷರವನ್ನು ಉಪಯೋಗಿಸುವ ಚಿಂತನೆಯಲ್ಲಿರಬೇಕಾದರೆ ಅವನಿಗೆ ಹೊಳೆದ ಚಿಹ್ನೆ @. ಹಾಗಾಗಿ ನಾವು ಉಪಯೋಗಿಸುವ ಇಮೇಲ್ ನಲ್ಲಿ @ ಇದೆ. ಇನ್ನೊದು ಸಂಗತಿಯೇನೆಂದರೆ ಮೊದಲ ಇಮೇಲ್ ಸಂದೇಶದಲ್ಲಿದ್ದುದು "QWERTYUIOP" ಎಂಬ QWERTY ಕೀಲಿಮಣೆಯ ಮೊದಲನೆಯ ಸಾಲಿನ ಅಕ್ಷರಗಳು ಮಾತ್ರ ಎಂಬಲ್ಲಿಗೆ ನನ್ನ ಇಮೇಲ್ ಪುರಾಣವು ಮುಕ್ತಾಯವು.

Wednesday, June 3, 2009

Life as a Game

"Imagine life as a game in which you are juggling some five balls in the air.

You name them - Work, Family, Health, Friends and Spirit and you're keeping all of these in the Air.

You will soon understand that work is a rubber ball.

If you drop it, it will bounce back.

But the other four Balls - Family, Health, Friends and Spirit - are made of glass.

If you drop one of these; they will be irrevocably scuffed, marked, nicked, damaged or even shattered.

They will never be the same. You must understand that and strive for it."

- Bryan Dyson(CEO of CocaCola)

ಒಮ್ಮೆ ನೋಡಿ ಚಂದಿರನನು

ಕುರಿಗಳು ಸಾಗುತಿವೆ
ಮರ್ಕ್ಯುರಿ ದೀಪದ ಬೆಳಕಲಿ
ಕಳೆದು ಹೋಗುತಿವೆ
ಲಕ್ಷ ಲಕ್ಷ......
ಸುತ್ತಮುತ್ತಲಿನ ಬಗ್ಗೆ ಅವಕೆ ಅಲಕ್ಷ
ಕೆಲಸ, ದುಡ್ಡು, ಮನೆ, ವೀಕೆಂಡಿನಲ್ಲಿ
ಸಿನೆಮಾ, ಶಾಪಿಂಗು
ಬೇಸರ ಕಳೆಯಲು ಬಾರು
ಇವೆ ಕುರಿಗಳ ಕಾರುಬಾರು
ತಲೆಯೆತ್ತಿ ನೋಡಿ ಒಮ್ಮೆ
ಸಿನೆಮಾ ಪೋಸ್ಟರನಲ್ಲ
ಹೊಕ್ಕಳು ತೋರಿಸುತ್ತಿರುವ ಹುಡುಗಿಯ
ಜಾಹಿರಾತನಲ್ಲ
ಆರಿಹೋದ ಮರ್ಕ್ಯುರಿ ದೀಪವನಲ್ಲ
ಆಗಸದಲಿ ಇಣುಕುವ ಮುದ್ದಿನ
ಚಂದಿರನನು
ನಿಮ್ಮೊಡನೆ ಕರೆದಲ್ಲಿ ಬರುವ
ತಂಪಿನ ಹೂಮಳೆ ಸುರಿಸುವ
ನನ್ನ ಮುದ್ದಿನ ಬೇಟೆಗಾರನನು
ಕರೆಂಟ್ ಕೈಕೊಟ್ಟ ಕ್ಷಣದಲ್ಲಾದರೂ
ಹೊರಬಂದು ನೋಡಿ ಅವನನು
ಪಕ್ಷಗಳಿಗೊಮ್ಮೆ ಮರೆಯಾದರೂ
ಮನದಂಗಳದಲಿ ಮೂಡುವನು
ಒಮ್ಮೆ ನೋಡಿ ಚಂದಿರನನು

Tuesday, May 5, 2009

ಆಮೆಗತಿಯಲ್ಲಿ ಅಂತರ್ಜಾಲ.....!

ಮುಂದಿನ ಎರಡು ವರ್ಷಗಳಲ್ಲಿ ಅಂತರ್ಜಾಲ ಸಂಪರ್ಕವಿರುವ ನಿಮ್ಮ ಕಂಪ್ಯೂಟರ್ ನಿಧಾನಗತಿಯಲ್ಲಿ ಕೆಲಸಮಾಡುತ್ತಿದ್ದರೆ ಅಥವಾ ಹತ್ತಾರು ನಿಮಿಷಗಳ ಕಾಲ ಸ್ಥಬ್ಧವಾದರೆ ಅಥವಾ offline ಗೆ ಹೋದರೆ ನೀವು ಆಶ್ಚರ್ಯ ಪಡಬೇಕಿಲ್ಲ. ಈ ಸಮಸ್ಯೆಗೆ ಇಂಟರ್ನೆಟ್ ಬ್ರೌನ್ ಔಟ್ ಎಂಬ ವಿದ್ಯಮಾನವೇ ಕಾರಣವಾಗಿರಬಹುದು. ಸಾಮಾನ್ಯವಾಗಿ ಬ್ರೌನ್ ಔಟ್ (Brownout) ಪದವನ್ನು ಕಡಿಮೆಯಾಗುತ್ತಿರುವ / ನಶಿಸುತ್ತಿರುವ ಎಂಬರ್ಥದಲ್ಲಿ ಉಪಯೋಗಿಸಲಾಗುತ್ತದೆ. ಇಂಟರ್ನೆಟ್ ಬ್ರೌನ್ ಔಟ್ ಅನ್ನು ಅಂತರ್ಜಾಲದ ಬಳಕೆಯ ವೇಗ ಕಡಿಮೆಯಾಗುವ ಒಂದು ವಿದ್ಯಮಾನವೆನ್ನಬಹುದು.

ಅಂತರ್ಜಾಲವು ೧೯೮೯ ರಲ್ಲಿ ಸಾರ್ವಜನಿಕ ಬಳಕೆಗೆ ಬಂದಾಗ ಅದು ತಂದ ಸಾಧ್ಯತೆಗಳು ಅಗಾಧವಾಗಿದ್ದವು. ಅಂತರ್ಜಾಲವು ಅಪರಿಮಿತ ಮಾಹಿತಿ ಕಣಜವಾಗಿ ಮಾರ್ಪಡುವುದರಲ್ಲಿ ಯಾವುದೇ ಅನುಮಾನಗಳಿರಲಿಲ್ಲ. ಭೂಮಿಯಲ್ಲಿ ದೊರೆಯುವ ಬೇರೆ ಸಂಪನ್ಮೂಲಗಳಂತೆ ಅಂತರ್ಜಾಲಕ್ಕೂ ಅದರದೇ ಆದ ಮಿತಿಗಳಿವೆ ಎಂಬ ಸಂಗತಿ ಇತ್ತೆಚಿಗೆ ನಡೆಸಿದ ಸಂಶೋಧನೆಗಳಿಂದ ತಿಳಿದುಬಂದಿದೆ. ಈಗ ಚಾಲ್ತಿಯಲ್ಲಿರುವ VOIP, Video Conference, Video Sharing, File sharing, Multimedia download ಗಳ ಬಳಕೆ ವರ್ಷದಿಂದ ವರ್ಷಕ್ಕೆ ಅಂತರ್ಜಾಲದ ಉಪಯೋಗ ಶೇಕಡಾ ೬೦ ರಷ್ಟು ಹೆಚ್ಚುತ್ತಿದೆ. ಇದೆ ಪರಿಸ್ಥಿತಿ ಮುಂದುವರೆದರೆ ಮಾಹಿತಿ ಹೊತ್ತೊಯ್ಯುವ [physcal medium] ಜಾಲದ ಸಾಮರ್ಥ್ಯವು ಸಾಲದೇ ಇಂಟರ್ನೆಟ್ ಬ್ರೌನ್ ಔಟ್ ಗೆ ಕಾರಣವಾಗಬಹುದೆಂಬ ಕುತೂಹಲಕಾರಿ ಅಂಶವನ್ನು ಬೆಳಕಿಗೆ ತರಲಾಗಿದೆ. ಹಾಗಾದರೆ ಇಂಟರ್ನೆಟ್ ಬ್ರೌನ್ ಔಟ್ ನ ಉದ್ಭವಕ್ಕೆ ಕಾರಣಗಳೇನು? ಅದರ ಅನಾನುಕೂಲಗಳೇನು? ಎಂಬ ಪ್ರಶ್ನೆಗಳು ಮೂಡುತ್ತವೆ.

ಎಲ್ಲರಿಗೂ ತಿಳಿದಿರುವಂತೆ ಅಂತರ್ಜಾಲವು ಸಹಸ್ರಾರು ಗಣಕಯಂತ್ರಗಳ ಜಾಲಗಳ ನಡುವೆ ಸಂಪರ್ಕವನ್ನು ಏರ್ಪಡಿಸಿ ನಿರ್ಮಿಸಲಾದ ಬೃಹತ್ ಜಾಲ. ಇದು ಇಂಟರ್ನೆಟ್ ಪ್ರೋಟೋಕೋಲ್ ಎಂಬ ವ್ಯವಸ್ಥೆಗಳ ಮುಖಾಂತರ ಮಾಹಿತಿ ಸಂವಹನ ನಡೆಸುತ್ತದೆ. ಇಂತಹ ಬೃಹತ್ ಜಾಲದಲ್ಲಿ ಮಾಹಿತಿ ರವಾನೆ ನಡೆಯುವುದು ಫೈಬರ್ ಆಪ್ಟಿಕ್ / ಕಾಪರ್ ಕೇಬಲ್ ಗಳ ಮೂಲಕ. ಈ ತಂತಿಗಳ ಜಾಲಕ್ಕೆ ತನ್ನದೇ ಆದ ಮಾಹಿತಿ ಹೊತ್ತೊಯ್ಯುವ ಸಾಮರ್ಥ್ಯವಿರುತ್ತದೆ. ಯುಟ್ಯೂಬ್ ನಂತಹ ವೀಡಿಯೊ ಹಂಚಿಕೊಳ್ಳುವಂತಹ ವೆಬ್ ಸೈಟ್ ಗಳ ಬಳಕೆಯಿಂದ ಉಂಟಾಗುತ್ತಿರುವ ಮಾಹಿತಿ ದಟ್ಟಣೆ [traffic] ಪ್ರತಿವರ್ಷ ಹೆಚ್ಚುತ್ತಿದೆ. ಇದರಿಂದಾಗಿ ಫೈಬರ್ ಆಪ್ಟಿಕ್ / ಕಾಪರ್ ಕೇಬಲ್ ಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಾಹಿತಿಯನ್ನು ರವಾನಿಸಬೇಕಾಗುತ್ತದೆ. ಉದಾಹರಣೆಗೆ ಯುಟ್ಯೂಬ್ ನ ಒಂದು ತಿಂಗಳ ಬಳಕೆಯಿಂದ ಉಂಟಾಗುವ ಮಾಹಿತಿ ದಟ್ಟಣೆ ೨೦೦೨ ರ ವರ್ಷದಲ್ಲಿ ಆದ ಮಾಹಿತಿ ದಟ್ಟಣೆಗೆ ಸಮ. ತಜ್ಞರು ಈ ದಟ್ಟಣೆಯನ್ನು exabyte [=10^18] ನಿಂದ ಅಳೆಯುತ್ತಾರೆ. ಒಂದು exabyte ಸುಮಾರು ಐವತ್ತು ವರ್ಷಗಳ DVD ಮಾಹಿತಿಗೆ ಸಮ. ಹೆಚ್ಚಿನ ಮಾಹಿತಿ ಉಪಯೋಗದಿಂದ ಹೆಚ್ಚಿನ ದಟ್ಟಣೆ ಇದರಿಂದ ಮಾಹಿತಿ ಸಂಗ್ರಹಣಾ ವೇಗದಲ್ಲಿ ಕಡಿತ.

ಈ ಸಮಸ್ಯೆಗೆ ಪರಿಹಾರವೆಂದರೆ ಮಾಹಿತಿ ರವಾನಿಸುವ physical medium ನ ಸಾಮರ್ಥ್ಯವನ್ನು ಹೆಚ್ಚಿಸುವುದು. ಅರ್ಥಾತ್ ಅಂತರ್ಜಾಲದ ಮೂಲಭೂತ ಸೌಕರ್ಯಗಳನ್ನು [infrastructure] ಮೇಲ್ದರ್ಜೆಗೆ ಏರಿಸುವುದು / ಅಭಿವೃದ್ಧಿಪಡಿಸುವುದು. ಈ ಸೇವೆಯನ್ನು ಒದಗಿಸುವ ಕಂಪೆನಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಇಂಟರ್ನೆಟ್ ಬ್ರೌನ್ ಔಟ್ ಉನ್ನತ ಮಟ್ಟದ ತಾಂತ್ರಿಕ ಸಮಸ್ಯೆಯಾಗಿದ್ದು ಜನ ಸಾಮಾನ್ಯರಿಗೆ ಅಷ್ಟಾಗಿ ಸಂಭಂಧಿಸಿಲ್ಲದಿದ್ದರೂ ಈಬಗ್ಗೆ ತಿಳಿದಿಕೊಂಡಿರುವುದು ಅವಶ್ಯ ಎಂಬುದು ನನ್ನ ಭಾವನೆ.

Thursday, April 30, 2009

ನಿಷ್ಪ್ರಯೋಜಕ ಕ್ಷಮಾಪಣೆಗಳು


ಕಳೆದ ಸೋಮವಾರ ಸರ್ವೋಚ್ಚ ನ್ಯಾಯಾಲಯ ೨೦೦೨ ರ ಗುಜರಾತ್ ಗಲಭೆಗಳಲ್ಲಿ ನರೇದ್ರ ಮೋದಿ ಮತ್ತು ಅವರ ಸಹದ್ಯೋಗಿಗಳ ಪಾತ್ರದ ಬಗ್ಗೆ ವಿಶೇಷ ತನಿಖಾ ದಳ ರಚಿಸಲು ಆಜ್ನಾಪಿಸಿದಾಗ, ಮೋದಿ ಯವರ ರಾಜಕೀಯ ಶತ್ರುಗಳು ಅವರಿಂದ ಕ್ಷಮಾಪಣೆ, ರಾಜೀನಾಮೆ ಅಥವಾ ಎರಡನ್ನು ಬಯಸಿದ್ದು ಸರಿಯಷ್ಟೇ. ವಿರೋಧಿಗಳ ಯಾವುದೇ ಬೇಡಿಕೆಗಳಿಗೆ ಒಪ್ಪಿಕೊಂಡಿದ್ದರೂ ಅವರ ಬಲೆಗೆ ಬಿದ್ದಂತೆ. ಕ್ಷಮಾಪಣೆ ಕೇಳಿದ್ದರೆ ತಪ್ಪು ನಡೆದಿದೆ ಎನ್ನುವ ಅರ್ಥ, ಇಲ್ಲದಿದ್ದರೆ ಏನು ಮುಚ್ಚಿಡುತ್ತಿದ್ದಾರೆ ಎನ್ನುವ ಅರ್ಥ. ಹಾಗಾಗಿ ಬುದ್ಧಿವಂತ ಮೋದಿ ವಿರೋಧಿಗಳ ಒತ್ತಾಯಕ್ಕೆ ಮಣಿಯದೆ ತನಿಖೆಗೆ ಸಿದ್ಧವೆಂದು ಘೋಷಿಸಿದರು. ವಿವೇಕಯುತ ತೀರ್ಮಾನಕ್ಕೆ ಒಂದು ಚಿಕ್ಕ ಉದಾಹರಣೆ. ತಪ್ಪನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿ, ನಂತರ ಬಂದೆರಗುವ ಪರಿಣಾಮಗಳನ್ನು ಎದುರಿಸಲು ಸಿದ್ಧವಿಲ್ಲದಿದ್ದರೆ ರಾಜಕೀಯ ಕ್ಷಮಾಪಣೆಗಳಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಹೊಸ ಬದಲಾವಣೆಯನ್ನು ತರುವಂತಹ ಅವಕಾಶವಿದ್ದರೆ ರಾಜಕೀಯ ಕ್ಷಮಾಪಣೆಗಳಿಗೆ ಅರ್ಥ ಬರುತ್ತದೆ.
ವಯಕ್ತಿಕ ಕ್ಷಮಾಪಣೆಗಳು ಮಾತ್ರ ಜೀವನದಲ್ಲಿ ಉತ್ತಮ ಪರಿಣಾಮಗಳನ್ನು ಕೇಳಿದವನಿಗೂ, ಪಡೆದವನಿಗೂ ಬೀರಬಹುದು. ಒಬ್ಬನು ತಪ್ಪು ಮಾಡಿ ಕ್ಷಮೆ ಕೇಳಿದರೆ ಮತ್ತೊಬ್ಬನು ಅವನನ್ನು ಕ್ಷಮಿಸಬಹುದು. ಕ್ಷಮಿಸದಿದ್ದರೂ ತಪ್ಪು ಒಪ್ಪಿಕೊಂದಂತಹ ತೃಪ್ತಿ ನಮ್ಮಲ್ಲಿ ಉಳಿಯುತ್ತದೆ. ಅದಕ್ಕೆ ವಿರುದ್ಧವಾಗಿ ರಾಜಕೀಯ ಕ್ಷಮಾಪಣೆಗಳು ಯಾವುದೇ ರೀತಿಯಾದ ಪರಿಣಾಮಗಳನ್ನು ಕೇಳಿದವರ ಮೇಲೂ, ಬಯಸಿದವರ ಮೇಲೂ ಬೀರುವ ಪರಿಣಾಮ ಅಷ್ಟಕಷ್ಟೇ.
ಬಾಬರಿ ಮಸೀದಿ ಕೆಡವಿದ ಬಗ್ಗೆ ಅದ್ವಾನಿಯವರು "ನನ್ನ ಜೀವನದಲ್ಲಿ ಅತ್ಯಂತ ದು:ಖದ ದಿನ" ಎಂದು ಕೆಡವಿದ ದಿನ ಹೇಳಿದ್ದರೂ, ನಂತರ ಹೇಳಿದ್ದರೂ ಅವರನ್ನು ಕೋಮುವಾದಿ ಎಂದು ಕರೆಯುವ ವಿರೋಧಿಗಳ ಧ್ವನಿ ತಗ್ಗುತ್ತಿರಲಿಲ್ಲ. ಜಾತ್ಯತೀತ ಶಕ್ತಿಗಳು ಈಗಲೂ ಹಾಗೆ ಕರೆಯುತ್ತವೆ. ಸಂಘಪರಿವಾರ ಈ ಕ್ಷಮಾಪಣೆಯಿಂದ ಅವರನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದೆ. ಇದರಿಂದ ಅದ್ವಾನಿಯವರು ರಾಜಕೀಯವಾಗಿ ಒಂಟಿಯಾದರೆ ಹೊರತು ಹೆಚ್ಚೇನು ಸಂಭವಿಸಲಿಲ್ಲ.
ಇನ್ನು ೧೯೮೪ ರಲ್ಲಿ ನಡೆದ ಸಿಖ್ ನರಮೆಧಕ್ಕೆ ಸಂಭಂಧಿಸಿದಂತೆ ಸ್ವತಹ ಸಿಖ್ ಆದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಕೇಳಿದ ಕ್ಷಮಾಪಣೆ. ಆದರೆ ಈ ವಿಚಾರವನ್ನು ಕೂಲಂಕುಶವಾಗಿ ನೋಡಿದಾಗ ನಮಗೆ ತಿಳಿಯುವ ವಿಚಾರವೆಂದರೆ "ತಪ್ಪು ಯಾರದ್ದೋ, ಕ್ಷಮೆ ಕೇಳಿದ್ದು ಯಾರೋ" ಎಂಬುದು. ಸಿಖ್ ನರಮೆಧಕ್ಕೆ ಸಂಭಂದಿಸದಂತಹ ಒಬ್ಬ ವ್ಯಕ್ತಿ ಕ್ಷಮೆ ಕೇಳುತ್ತಿದ್ದಾರೆ ಅದೇ ಪಕ್ಷ ತಾನು ಆ ಘಟನೆಗೆ ಕಾರಣವಲ್ಲ ಎಂಬ ಹೇಳಿಕೆ ನೀಡುತ್ತಿತ್ತು. ಮತ್ತೊಮ್ಮೆ ಸಿಖ್ ರ ಕೋಪ ಕೆರಳುವವರೆಗೂ ಕಾಂಗ್ರೆಸ್ಸ್ ಪಕ್ಷ ಘಟನೆಯಲ್ಲಿ ಪ್ರಮುಖ ಆರೋಪಿಗಳಾದ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರನ್ನು ಬೆಂಬಲಿಸುತ್ತಿತ್ತು. ಈ ಕ್ಷಮಾಪಣೆಯಿಲ್ಲದಿದ್ದರೆ ಸಾವಿರಾರು ಸಿಖ್ ರನ್ನು ಕೊಂದ ಪಕ್ಷದಲ್ಲಿ ಒಬ್ಬ ಸಿಖ್ ನಾಯಕನಾಗಿರಲು ಸಾಧ್ಯವಾಗುತ್ತಿರಲಿಲ್ಲ. ಈ ಕ್ಷಮಾಪಣೆ ಇದಕ್ಕಿಂತ ಹೆಚ್ಚಿನದೇನು ಸಾಧಿಸಿದ್ದು?
ಆದ್ರೆ ಇಲ್ಲಿ ಪ್ರಶ್ನೆ ಇರುವುದು ಕಾಂಗ್ರೆಸ್ ಕ್ಷಮಾಪಣೆ ಕೇಳುತ್ತಿರುವುದು ಯಾವುದಕ್ಕಾಗಿ ಎಂಬುದು? ಮೂರು ಸಾವಿರ ಸಿಖ್ ರನ್ನು ಕೊಲೆಮಾಡಲು ಸಹಾಯ ಮಾಡಿದ್ದಕ್ಕೆ ? ಅಥವಾ ಅವರ ಅವಧಿಯಲ್ಲಿ ಈ ದುರಂತ ನಡೆಯಿತು ಎಂಬುದಕ್ಕೋ? ಅದು ಮೊದಲಿನದ್ದಗಿದ್ದರೆ ಹಲವಾರು ಕಾಂಗ್ರೆಸ್ ನಾಯಕರು ಜೈಲಿನಲ್ಲಿರಬೇಕಗಿತ್ತು. ಮತ್ತು ರಾಜೀವ್ ಗಾಂಧಿ ಯವರು ತಾವು ಕೊಟ್ಟಂತಹ ಹೇಳಿಕೆಗಳಿಗಾಗಿ ಸಾರ್ವಜನಿಕ ಖಂಡನೆಗೆ ಒಳಗಾಗಬೇಕಿತ್ತು.
ಮೋದಿ ಯವರು ಏತಕ್ಕಾಗಿ ಕ್ಷಮೆ ಕೇಳಬೇಕು? ರಕ್ತಪಾತವನ್ನು ಅಸಹಾಯಕರಾಗಿ ನೋಡಿದ್ದಕ್ಕೆ ? ಅಥವಾ ಗಲಭೆಗಳಿಗೆ ಬೆಂಬಲ ನೀಡಿದ್ದಕ್ಕೆ ? ಮೊದಲನೆಯ ಅಪರಾಧಕ್ಕೆ ಕ್ಷಮೆ ಕೇಳುವುದು ಹೆಡ್ಡತನ . ಮೊದಿಯಂತ ಸ್ಥಾನದಲ್ಲಿರುವ ಯಾವ ರಾಜಕಾರಣಿಯೂ ಇಂತ ಕೆಲಸ ಮಾಡೋದಿಲ್ಲ. ಎರಡನೆಯದಕ್ಕೆ ಕೇಳಿದ್ದರೆ ಮೋದಿ ಇಷ್ಟುಹೊತ್ತಿಗೆ ಜೈನಲ್ಲಿ ಇರಬೇಕಾಗಿರುತ್ತಿತ್ತು. ಹಾಗಾಗಿ ಮೋದಿಯವರಿಂದ ಕ್ಷಮಾಪಣೆ ಕೇಳಿಸುವುದು ರಾಜಕೀಯ ಪಿತೂರಿ ಅಲ್ಲದೆ ಮತ್ತೇನು ಅಲ್ಲ.
ಸಾರ್ವಜನಿಕ ಕ್ಷಮಾಪಣೆಯ ಇತಿಹಾಸವನ್ನು ನೋಡಿದಾಗ ನಮಗೆ ತಿಳಿದುಬರುವುದೇನೆಂದರೆ ರಾಜಕಾರಣಿಗಳು ತಮಗೆ ಯಾವ ರೀತಿಯ ತೊಂದರೆ ಇಲ್ಲದಿದ್ದರೆ ಮಾತ್ರ ಅಪಾಲಜಿ ಕೇಳುತ್ತಾರೆ ಎಂಬುದು. ವಾಟರ್ ಗೇಟ್ ಹಗರಣ ನಡೆದಿದ್ದು ನಿಕ್ಸನ್ ಅವಧಿಯಲ್ಲಾದರೂ ಅವರನ್ನು ಕ್ಷಮಿಸಿದ್ದು ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಅವಧಿಯಲ್ಲಿ. ಬರಾಕ್ ಒಬಾಮ ಯಾವ ಅಮೆರಿಕನ್ ಕೂಡ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಪಡದಂತೆ ಎಚ್ಚರ ವಹಿಸಿದ ನಂತರವೇ CIA ಯಾ ಕಿರುಕುಳಗಳ ಬಗ್ಗೆ ಅಪಾಲಜಿ ಕೇಳಿದ್ದು. ಪ್ಯಲಸ್ತೆನಿಯರ ತಾವು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಇಸ್ರೆಲಿಯರು ಎಂದಿಗೂ ಕ್ಷಮಾಪಣೆ ಕೇಳುವುದಿಲ್ಲ.
ಕಳಿಂಗ ಯುದ್ಧದಲ್ಲಿ ಸತ್ತಂತಹ ಸಾವಿರಾರು ಜನರನ್ನು ನೋಡಿದ ಸಾಮ್ರಾಟ್ ಅಶೋಕ ಅಹಿಮ್ಸಾವಾದಿಯಾದರೂ ಅವನ ತಪ್ಪುಗಳಿಗೆ ಶಿಕ್ಷೆಯಾಗದೆ ಉಳಿಯಿತು. ತನ್ನಿಂದಾದ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟ ಅವನಿಗೆ ಶಿಕ್ಷೆ ವಿಧಿಸುವ ಅಧಿಕಾರವೆನಿದ್ದರು ಕಳಿಂಗದವರಿಗಿದ್ದಿದ್ದರೆ ಅವನು ಕ್ಷಮೆಕೇಳುತ್ತಿದ್ದನೆ? Victors do sometime apologise, but only when they need not fear of retribution.
ಅಧಿಕಾರದಲ್ಲಿರುವವರು ಕೇಳುವ ಯಾವ ಕ್ಷಮಾಪಣೆಗಳೂ ಅವರ ಹೃದಯದಿಂದ ಬಂದತಾಗಿರುವುದಿಲ್ಲ. ಕ್ಷಮಾಪಣೆ ಕೇಳುವುದರಿಂದ ಏನು ನಷ್ಟವಿಲ್ಲ ಎಂಬ ಸುಳಿವಿದ್ದರೆ ಮಾತ್ರ ಅವರು ಅದಕ್ಕೆ ಮುಂದಾಗುತ್ತಾರೆ. [ಅಶೋಕನಿಗಿಂತ ಒಳ್ಳೆ ಉದಾಹರಣೆ ಬೇರೆ ಇಲ್ಲ]. ರಾಜಕಾರಣಿಗಳು ನಿಜವಾಗಿ ಕ್ಷಮೆ ಕೇಳುವುದು ಬೇರೆ ಎಲ್ಲ ದಾರಿಗಳು ಮುಚ್ಚಿದ್ದರೆ ಅಥವಾ ತಮ್ಮ ತಪ್ಪುಗಳಿಗೆ ತಲೆ ಕೆಡಿಸಿಕೊಳ್ಳದಿದ್ದರೆ ಮಾತ್ರ. ರಾಜಕೀಯದಲ್ಲಿರುವವರಿಂದ ಅಪೇಕ್ಷಿಸಬಹುದಾದ ಉತ್ತಮ ಕ್ಷಮಾಪಣೆ ಎಂದರೆ ಅವರ ರಾಜಕೀಯ ಪ್ರಾಧಾನ್ಯತೆ ಯನ್ನು ವರ್ಗಾಯಿಸಿಕೊಳ್ಳುವುದು. ಅಡ್ವಾಣಿ ಮತ್ತು ಮೋದಿ ಇಬ್ಬರು ತಮ್ಮ ರಾಜಕೀಯ ಪ್ರಾಧಾನ್ಯತೆಯನ್ನು ಶುದ್ಧ ಹಿಂದುತ್ವದಿಂದ ಅಭಿವೃದ್ಧಿಯೆಡೆಗೆ ಬದಲಾಯಿಸಿಕೊಂಡಿದ್ದಾರೆ. ಕೇವಲ ಜಾತ್ಯಾತೀತ ಶಕ್ತಿಗಳು ಮಾತ್ರ ಅವರನ್ನು ಕ್ಷಮಿಸದೆ ಇನ್ನು ಕೋಮುವಾದದ ಕಡೆಗೆ ತಳ್ಳುತ್ತಿವೆ. ಕ್ಷಮೆ ಕೇಳುವಂತಹ ಯಾವುದೇ ಅಧಿಕಾರ ಅವುಗಳಿಗೆ ಇಲ್ಲ.


Note: tranlation of editorial from R JAGANNATHAN - DNA executive editor. Editorial dated 30/04/09