Monday, November 10, 2008

ಕತೆ: ಪ್ರಶ್ನೆಗಳು ?

"ಇತ್ತೀಚೆಗೆ ಯಾಕೋ ಸರಿಯಾಗಿ ನಿದ್ದೆ ಬರ್ತಾ ಇಲ್ಲ. ಬೇಡದ ಯೋಚನೆಗಳು. ಕೆಲವೊಮ್ಮೆ ನಿದ್ದೆ ಬಂದಿದ್ರು ಬೆಂಬಿಡದೆ ಕಾಡಿಸುವ ಸಾವಿನ ಕನಸುಗಳು. ಕನಸುಗಳಿಗೆ ಅದೆಷ್ಟು ಶಕ್ತಿ. ನಮ್ಮಲ್ಲೇ ಹುಟ್ಟಿ, ನಮ್ಮ ಆಲೋಚನೆಗಳಲ್ಲೇ ಬೆಳೆದು, ನಮ್ಮನೆ ತಿನ್ನಲು ಬಯಸುತ್ತವೆ. ಪ್ರತಿಯೊಂದು ಕನಸಿಗೂ ಅರ್ಥ ಇದೆಯಾ? ಅವೇನು ಭವಿಷ್ಯದ ಮುನ್ಸೂಚನೆಗಳೇ, ಭೂತಕಾಲದ ಪಾಪದ ಪ್ರಜ್ನೆಗಳೆ? ವರ್ತಮಾನದ ಸತ್ಯಗಳೆ? ಮೊದಮೊದಲು ಕಾಣಿಸುತ್ತಿದ್ದ ಕನಸುಗಳು.....ಅದೇ....ಬಾಲ್ಯದಲ್ಲಿರುವಾಗ ಬೀಳುತ್ತಿದ್ದ ಕನಸುಗಳು....ಅವೇ ಚೆನ್ನಾಗಿರುತ್ತಿದ್ವು. ರಾತ್ರಿ ಅಮ್ಮ ಹೇಳೋ ಕಥೆಗಳನ್ನ ಕೇಳಿ, ಅದೇ ಕಥೆ ಕನಸಿನಲ್ಲೊಮ್ಮೆ ಪುನರಾವರ್ತನೆಗೊಂಡು.....ಒಮ್ಮೊಮ್ಮೆ ಹೆದರಿ ಅಮ್ಮನನ್ನು ಅಪ್ಪಿ ಮಲಗುತ್ತ ಇದ್ದಿದ್ದು. ಈ ನೆನಪುಗಳು ನನಸಾಗಿ ಮತ್ತೊಮ್ಮೆ ಜೀವನಚಕ್ರ ಅಲ್ಲಿಂದ ತಿರುಗಲು ಶುರುವಾಗಿದ್ದರೆ..... ಅಮ್ಮನ ಬೆಚ್ಚನೆ ಅಪ್ಪುಗೆಯಲ್ಲಿನ ಹಿತವನ್ನು ಮತ್ತೊಮ್ಮೆ ಅನುಭವಿಸುವ ಹಾಗಿದ್ದರೆ.....ಛೆ ಎಲ್ಲ ಬರಿ ಯೋಚನೆಗಳಷ್ಟೆ. ನನಗೇನು ಕಡಿಮೆ ವಯಸ್ಸಾಗಿಲ್ಲ. ಸುಮಾರು ಇಪ್ಪತ್ತಾರು ವರ್ಷದವನಿದ್ದಾಗ ಮದುವೆಯಾಗಿದ್ದು ಲಕ್ಷ್ಮಿಯನ್ನು. ಮುಂದಿನ ತಿಂಗಳು ಹದಿನೆಂಟಕ್ಕೆ ನಮ್ಮ ಮದುವೆಯಾಗಿ ಮೂವತ್ತು ವರ್ಷ ತುಂಬುತ್ತೆ ಅಂತ ಲಕ್ಷ್ಮಿ ಹೇಳ್ತಿದ್ಲು. ಅಲ್ಲಿಗೆ ನನಗೆ ಐವತ್ತಾರು ವರ್ಷ. "

" ವಯಸ್ಸಾದಂತೆ ನಾವೇನಾದರೂ ಮಕ್ಕಳಾಗ್ತೀವ? ಈಗ ಒಂಥರಾ ಮಂಪರು.....ಎಚ್ಚರದ ಮತ್ತು ನಿದ್ರೆಯ ಮಧ್ಯ ಸ್ಥಿತಿ. ಇಲ್ಲಿಯೂ ಯೋಚನೆಗಳ, ಕನಸುಗಳ ಕಲಸುಮೇಲೋಗರ. ಚಿಕ್ಕವರಿರುವಾಗ ಯಾವಾಗ ದೊಡ್ದವರಾಗ್ತೀವೋ ಅನ್ನೋ ಕಾತುರ. ದೊಡ್ಡವರಾದ ಮೇಲೆ ಯಾಕೆ ದೊಡ್ಡವರಾಗಿಬಿಟ್ಟೆವಪ್ಪ ಅನ್ನೋ ಅಸಹನೆ. ಜೀವನದಲ್ಲಿ ಯಾಕಿಷ್ಟು ತಾಕಲಾಟ? ಅರೆರೆ ಯಾಕಿಷ್ಟು ಪ್ರಶ್ನೆಗಳು? ಯಾಕಿಲ್ಲ ಉತ್ತರಗಳು? ಮೊದಲೆಲ್ಲ ಈ ಆಲೋಚನೆಗಳೇ ಇರಲಿಲ್ಲ. ಇವೊಂತರ ಮನಸ್ಸನ್ನು ಭಾರವಾಗಿಸುವಂತಹ, ಕಸಿವಿಸಿಗೊಲೋಸುವಂತಹ ಯೋಚನೆಗಳು. ನನ್ನ ಬದುಕಿನ ಪುಟಗಳ ನಡುವೆ ನನ್ನನ್ನು ನಾನೇ ಹುಡುಕಲು ಪ್ರಚೋದಿಸುವ ಯೋಚನೆಗಳು. ನನ್ನನು ನಾನೇ ಹುಡುಕುತ್ತ ಇದ್ದೆನಿ ಅಂದ್ರೆ ನಾನೆಲ್ಲೋ ಕಳೆದುಹೊಗಿದ್ದೀನಿ ಅನ್ನೋ ಅರ್ಥ ಬರುತ್ತೆ. ನಾನು ಇಲ್ಲೇ ಇದ್ರೂ ಹೇಗೆ ಕಳೆದುಹೋದೆ? ಎಲ್ಲಿ ಕಳೆದುಹೋದೆ? ಒಂಥರಾ ಪೀಕಲಾಟ, ತೊಳಲಾಟ. ಒಮ್ಮೊಮ್ಮೆ ಅಲ್ಲೆಲ್ಲೋ ಮರುಭೂಮಿಯಲ್ಲಿನ ಓಯಸಿಸ್ ನ ಹಾಗೆ ಬರುವ ಮಧುರ ನೆನಪುಗಳ ತುಂಟಾಟ. ಕಳೆದುಹೊದದ್ದೆಲ್ಲಿಗೆ, ಹುಡುಕುತ್ತಿರೋದು ಯಾಕೆ? ಪ್ರಶ್ನೆಗಳೋ ಪ್ರಶ್ನೆಗಳು. ಮರುಭೂಮಿಯ ಮರಳಿನ ಕಣಗಳ ಹಾಗೆ.....ಅಗಾಧ....ಅಳದಲ್ಲೂ, ವಿಸ್ತಾರದಲ್ಲೂ. ಆಲೋಚನೆಯೆಂಬ ಬಿರುಗಾಳಿಯ ಜೊತೆಗೆ ಪ್ರಶ್ನೆಗಳೆಂಬ ಮರಳುಗುಡ್ಡೆಗಳ ಅಲೆದಾಟ. ಇಷ್ಟು ವರ್ಷ ಹಿಂದಿರುಗಿ ನೋಡದೆ ನಡೆದು ಈಗ ಕವಲುದಾರಿಯಲ್ಲಿ ನಿಂತ ಅನುಭವ. ಜೀವನ ಇಷ್ಟೇನಾ? ಬೇರೆಯವರು ನನ್ನ ಹಾಗೆ ಅನುಭವಿಸಿದ್ದಾರ ಈ ಸಂಕಟವನ್ನು? ಎಲ್ಲರ ಹಾಗೆ ಓದಿದ್ದಾಯಿತು, ಕೆಲಸಕ್ಕೆ ಸೇರಿದ್ದಾಯಿತು, ಮದುವೆಯಾಯಿತು, ಮಕ್ಕಳಾದವು.....ಅವರೆಲ್ಲ ದೊಡ್ದವರಾಗಿಯು ಆಯ್ತು. ಹಾಗಾದರೆ ಜೀವನದಲ್ಲಿ ಮುಂದೇನು? ಓದು...ಮದುವೆ....ಮಕ್ಕಳು....ಮೊಮ್ಮಕ್ಕಳು....ಉಹುಂ....ಎಲ್ಲರು ಮಾಡೋದೇ. ನನ್ನದೇನು ವಿಶೇಷ ಇಲ್ಲ. ತುಂಬ ಆರ್ಡಿನರಿ ಅನಿಸೋದಿಲ್ವಾ ನಾನು? ನನ್ನ ಜೀವನವನ್ನ ನೆನಸಿಕೊಂಡಾಗ ತ್ರುಪ್ತಿನೆ ಇಲ್ಲವಲ್ಲ! ಓದುವಾಗ ಕೆಲಸಕ್ಕೆ ಸೇರಿದರೆ ಲೈಫ್ ಆದ ಹಾಗೆ ಅಂತ....ಕೆಲಸಕ್ಕೆ ಸೇರಿದ ಮೇಲೆ ಮದುವೆಯಾದರೆ ಲೈಫ್ ಆದ ಹಾಗೆ ಅಂತ. ಕೆಲಸಕ್ಕೆ ಸೇರಿಯಾಯಿತು, ಮದುವೆಯು ಆಯಿತು, ಮಕ್ಕಳಾದವು, ಅವರ ವಿದ್ಯಾಭ್ಯಾಸವು ಒಂದು ಹಂತಕ್ಕೆ ಬಂದು ಅವರ ಮದುವೆಯು ಆಯಿತು. ಹಾಗಾದರೆ ನನಗೆ ತೃಪ್ತಿ ಯಾಕಿಲ್ಲ? ನಾನು ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳೆಲ್ಲ ತುಂಬ ಚೀಪ್ ಅಂತ ಯಾಕೆ ಅನಿಸತೊಡಗಿದೆ ನನಗೆ? ಆಗ ಸಿಕ್ಕ ಸಂತೋಷಗಳೆಲ್ಲ ಕೇವಲ ಸಾಂಧರ್ಭಿಕ ಸಂತೋಷಗಳೇ? ಬಾಲ್ಯದ ಆಟ ಪಾಠಗಳನ್ನು ನೆನೆಸಿಕೊಂಡಾಗ ಆಗುವ ಆನಂದ.....ದೊಡ್ಡವರಾದ ನಂತರ ಜೀವನವನ್ನು ನೆನೆದಾಗ ಆಗೋದಿಲ್ಲ ಯಾಕೆ? ಇಲ್ಲಿಯವರೆಗೂ ಅಪ್ಪ ಅಮ್ಮನನ್ನ, ಹೆಂಡತಿಯನ್ನ, ಮಕ್ಕಳನ್ನ, ಸಮಾಜವನ್ನ ಸರಿದೂಗಿಸುವಂತಹ ಸಾಹಸವನ್ನಲ್ಲವೇ ಮಾಡಿರಿವುದು? ನಾನು ಇಂತಹ ಸಾಧನೆ ಮಾಡಿದೀನಿ ಅಥವಾ ಇಂತಹ ಒಳ್ಳೆ ಕೆಲಸ ಮಾಡಿದ್ದೀನಿ ಅನ್ನುವ, ಗರ್ವಪಡುವ, ಆನಂದಿಸುವ ಸಂಗತಿಗಳೇ ನನ್ನ ಸ್ಮೃತಿಪಟಲಕ್ಕೆ ಬರ್ತಾ ಇಲ್ವೆ? ಅಪ್ಪನ ಮಾತನ್ನ ಕೇಳಿ ಅವರ ಸಂತೋಷಕ್ಕೋಸ್ಕರ ನನ್ನ ಇಷ್ಟದ ಮೇಷ್ಟ್ರ ಕೆಲಸವನ್ನ ಬಿಟ್ಟದ್ದು ಅವರನ್ನು ಆ ಸಂಧರ್ಭದಲ್ಲಿ ಖುಷಿಯಾಗಿಡಲು ಮಾತ್ರ. ಮತ್ತೊಂದು ಚೆನ್ನಾಗಿರುವ ಕೆಲಸಕ್ಕೆ.....ಚೆನ್ನಾಗಿರುವ ಅಂದ್ರೆ ಹೆಚ್ಚು ಸಂಬಳ ಬರುವ ಕೆಲಸಕ್ಕೆ ಸೇರಿದ್ದಾಗಿದ್ದ್ರು ಅದರಲ್ಲಿ ನನ್ನತನ ಇರಲಿಲ್ಲ. ಏಕೆಂದರೆ ಅದು ಮಾವನ influence ನಿಂದ ಸಿಕ್ಕಿದ ಕೆಲಸವಾಗಿತ್ತು. ಸ್ವತಂತ್ರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶವಿದ್ದರೂ ಅಪ್ಪನನ್ನು ಮೀರದೆ ನಡೆದು ಬಂದದ್ದಾಗಿತ್ತು. ಮೇಷ್ಟ್ರ ಕೆಲಸವನ್ನೇ ಮಾಡುವಂತಹ ಗಟ್ಟಿ ನಿರ್ಧಾರವನ್ನು ಏಕೆ ಮಾಡಲಾಗಲಿಲ್ಲ? ಅಂತಹ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಒಳ್ಳೆ ಮೇಷ್ಟ್ರೇ ಆಗ್ತಿದ್ದೆ. ಯಾಕೆಂದರೆ ನನಗೆ ಮಕ್ಕಳಿಗೆ ಹೇಳಿಕೊಡೋದು ಗೊತ್ತಿತ್ತು. ಎಲ್ಲರಿಗಿಂತ ನಾನು ಚೆನ್ನಾಗಿ ಪಾಠ ಹೇಳ್ತೀನಿ ಅನ್ನೋ ವಿಶ್ವಾಸಾನು ಇತ್ತು. ನನ್ನ ಮಕ್ಕಳು ಈವಾಗ್ಲು ನಾನು ಅವರಿಗೆ ಚಿಕ್ಕಂದಿನಲ್ಲಿ ಹೇಳಿಕೊಟ್ಟ ಪಾಠಗಳನ್ನ ನೆನೆಸಿಕೊಳ್ತಾರೆ. ಅವರ ಮಾತು ಕೇಳಿ ನನಗೊಂತರ ಆನಂದ. ಅರೆರೆ....ಹೌದಲ್ಲ ನಾನು teaching ನ ಎಂಜಾಯ್ ಮಾಡ್ತಿದ್ದೆ....ಮತ್ತೆ..ಮತ್ತೆ ಈಗಲೂ ಅದರ ಬಗ್ಗೆ ಆಸಕ್ತಿ ಇದೆ. ಇಷ್ಟದ ಕೆಲಸವನ್ನೇ ಕಷ್ಟಪಟ್ಟು ಮಾಡಬಹುದಿತ್ತಲ್ವ? ಈಗಲೂ ಅದಕ್ಕೆ ಅವಕಾಶಗಳಿವೆಯಾ? ಹಾಗಾದರೆ ಮುಂದೇನು ಮಾಡಬಹುದು? ಈಗಿನ ಕೆಲಸ ಬಿಟ್ಟು ಪಾಠ ಹೇಳೋದೇ? ನೋಡಿದವರು ಏನೆಂದುಕೊಳ್ಳೋದಿಲ್ಲ!??? ಲಕ್ಷ್ಮಿಗೆ ಈ ಕೆಲಸ ಬಿಟ್ಟು ಮೇಷ್ಟ್ರ ಕೆಲಸ ಮಾಡ್ತೀನಿ ಅಂತ ಹೇಳೋದ? ಅವಳು ಅದನ್ನು ಒಪ್ಕೊತಾಳ? ಮಕ್ಕಳು ಈ ನಿರ್ಧಾರವನ್ನು ಬೆಂಬಲಿಸುತ್ತಾರ? ಛೆ...ಮತ್ತದೇ ಮನೆಯವರನ್ನು, ಸಮಾಜವನ್ನು ಎದುರಿಸಲಾಗದ ಹೇಡಿತನ. ಈ ನಿರ್ಧಾರ ಅಷ್ಟೊಂದು ಕಠಿಣವೇ? ನನಗೆ ಯಾರನ್ನ ಎದುರಿಸಲಿಕ್ಕೆ ಆಗ್ತ ಇಲ್ಲ? ಹೆಂಡತಿಯನ್ನೇ? ಮಕ್ಕಳನ್ನೇ? ಈ ಸಮಾಜವನ್ನೇ?....................ಹೌದು ಹೆಂಡತಿಯನ್ನ ಒಪ್ಪಿಸಬಹುದು. ಮಕ್ಕಳು ಈಗ ಅರ್ಥ ಮಾಡಿಕೊಳ್ಳದಿದ್ದರೂ ಮುಂದೆ ಮಾಡಿಕೊಳ್ಳಬಹುದೇನೋ. ಇನ್ನು ಸಮಾಜ.........ಅದನ್ನ ಬಿಟ್ಹಾಕು. ಜಾಸ್ತಿ ಏನಾಗಬಹುದು? ನನ್ನನ್ನು ನೋಡಿ ನಗಬಹುದು. ಅಷ್ಟೆತಾನೆ. ನನಗೆ ನನ್ನ ನಿರ್ಧಾರ ಮುಖ್ಯ. ಮನಸ್ಸಿಗೆ ತ್ರುಪ್ತಿಯಗುವಂತ ಕೆಲಸ ಮಾಡೋದು ಮುಖ್ಯ. ಹೌದು ಇನ್ನು ತಡಮಾಡಲ್ಲ........Better late than never. ನನ್ನ ಜೀವನದ ಕೊನೆಯಲ್ಲೊಂದು ಹೊಸ ಅಧ್ಯಾಯ ಶುರುವಾಗಲಿ. ಈಗ್ಯಾಕೋ ಒಂಥರಾ ಹಿತವಾದ ಅನುಭವ.....ಅಮ್ಮನ ಅಪ್ಪುಗೆಯಂತೆ......ನಾನು ಮಗುವಾದಂತೆ. ಕಾರ್ಗತ್ತಲೆಯ ಸುರಂಗದ ಮಧ್ಯದಿಂದ ಕಾಣುತ್ತಿದೆ ಚುಕ್ಕೆಯಂತಹ ಬೆಳಕು. ಅದು ಕೇವಲ ಬೆಳಕಲ್ಲ....ನಾನು ಹೋಗಬೇಕಿರುವ ದಾರಿಯ ದ್ವಾರ. ನಡೆ...ನಡೆ...ನಡೆ...ಮುಂದೆ ನಡೆ. ಈಗ್ಯಾಕೋ ಒಂಥರಾ ಹಿತವಾದ ಅನುಭವ.....ಅಮ್ಮನ ಅಪ್ಪುಗೆಯಂತೆ......ನಾನು ಮಗುವಾದಂತೆ. ಈಗ್ಯಾಕೋ ಒಂಥರಾ ಹಿತವಾದ ಅನುಭವ.....ಅಮ್ಮನ ಅಪ್ಪುಗೆಯಂತೆ......ನಾನು ಮಗುವಾದಂತೆ. "


--ನವೀನ ಕೆ. ಎಸ್.