Saturday, January 4, 2014

ಬೇಕಾಸ್ (BEKAS) - ಒಂದು ವಿಮರ್ಶೆ


            ಇರಾಕ್ ನಲ್ಲಿ ಸದ್ದಾಮ್ ಹುಸೈನ್ ಆಳ್ವಿಕೆಯ ಕಾಲವನ್ನು ಹಿನ್ನೆಲೆಯಾಗಿಟ್ಟುಕೊಂಡು ಇಬ್ಬರು ಅನಾಥ ಮಕ್ಕಳ ದೃಷ್ಟಿಯಿಂದ ಚಿತ್ರಿಸಿದ ಚಲನಚಿತ್ರ ಬೇಕಾಸ್(2012). ಕುರ್ದಿಶ್ ಭಾಷೆಯಲ್ಲಿರುವ ಈ ಚಿತ್ರದ ಕಥೆ ಇರಾಕ್ ನ ಕುರ್ದಿಷ್ತಾನದ ಒಂದು ಚಿಕ್ಕ ನಗರದಲ್ಲಿ ಆರಂಭವಾಗುತ್ತದೆ . ಝಾನಾ  (Zana)  ಮತ್ತು  ದಾನಾ (Dana) ಇಬ್ಬರೂ ಅಣ್ಣ ತಮ್ಮಂದಿರು. ಅದಕ್ಕಿಂತಲೂ ಹೆಚ್ಚಾಗಿ ಅನಾಥರು. ತಮ್ಮ ಹೊಟ್ಟೆಪಾಡಿಗಾಗಿ ಬೂಟ್ ಪಾಲಿಶ್ ಮಾಡಿ ಬದುಕು ಸಾಗಿಸುತ್ತಿರುವವರು. ಅವರಿಬ್ಬರಿಗೂ ಇರುವ ಒಂದೇ ಭಾವನಾತ್ಮಕ ಕೊಂಡಿಯೆಂದರೆ ಅವರ ಬೂಟ್ ಪಾಲಿಶ್ ಸಾಮಾನುಗಳನ್ನು ಸುರಕ್ಷಿತವಾಗಿರಿಸಲು ಹೋಗುವ ರೇಡಿಯೋ ಅಂಗಡಿಯ ಮಾಲೀಕ ಖಾಲೀದ್ ಅಜ್ಜ . ಜೀವನದಲ್ಲಿ ಭಾವನೆ, ಸಂಬಂಧಗಳ ಬಗ್ಗೆ ಪಾಠ ಹೇಳುವ ಅಜ್ಜ ಚಿಕ್ಕವನಾದ ಝಾನಾನಿಗೆ ಅಚ್ಚುಮೆಚ್ಚು . ಹೀಗಿರುವಾಗ ಒಮ್ಮೆ ಸ್ಥಳೀಯ ಚಿತ್ರಮಂದಿರದಲ್ಲಿ ಸುಪರ್ ಮ್ಯಾನ್ (Superman) ಚಿತ್ರ ಪ್ರದರ್ಶಿತವಾಗುತ್ತದೆ. ಒಂದು ದೀನಾರ್ ಟಿಕೆಟ್ ಗೆ ತೆರಲು ಆಗದ ಇಬ್ಬರು ಕಳ್ಳಗಿಂಡಿಯಿಂದ ಸುಪರ್ ಮ್ಯಾನ್ ಸಾಹಸಗಳನ್ನು ನೋಡಿ ರೋಮಾಂಚನಗೊಳ್ಳುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸುಪರ್ ಮ್ಯಾನ್ ನಮಗೂ ಸಹಾಯ ಮಾಡಲಾರನೆ.... ಅನ್ನೋ ಆಶಾಭಾವನೆ ಇಬ್ಬರಲ್ಲೂ ಹುಟ್ಟುತ್ತದೆ. ಈ ಮಕ್ಕಳಿಗೆ ದೇವರ  ಅವತಾರದಂತೆ ಕಾಣುವ ಸುಪರ್ ಮ್ಯಾನ್  ಹೊಸ ಕನಸುಗಳನ್ನು ಕಾಣಲು ಕಾರಣನಾಗುತ್ತಾನೆ. ಆದರೆ ಸುಪರ್ ಮ್ಯಾನ್ ಇರೋದು ಅಮೇರಿಕಾದಲ್ಲಿ ಅಲ್ಲಿಗೆ ಹೋಗಲು ಪಾಸ್ಪೋರ್ಟ್ ಬೇಕು ಎಂದು ಪತ್ತೆ ಹಚ್ಚುತ್ತಾರೆ. ಅಂದಿನ ಇರಾಕ್ ನ ರಾಜಕೀಯ ಬಿಕ್ಕಟ್ಟಿ ನಲ್ಲಿ ಪಾಸ್ಪೋರ್ಟ್ ಪಡೆಯುವುದು ಅಷ್ಟು ಸುಲಭವಿರುವುದಿಲ್ಲ. ತಲಾ ಏಳು ಸಾವಿರ ದೀನಾರು ಕೊಟ್ಟರೆ ಪಾಸ್ಪೋರ್ಟ್ ಪಡೆಯಬಹುದು ಅನ್ನೋ ವಿಚಾರ ಮಕ್ಕಳಿಗೆ ತಿಳಿಯುತ್ತದೆ. ಹೇಗಾದರೂ ಆಗಲಿ ಪಾಸ್ಪೋರ್ಟ್ ಪಡೆಯಲೇ ಬೇಕು ಎಂದು ನಿಶ್ಚಯಿಸುವ ಇಬ್ಬರು ಹೆಚ್ಚಿನ ಸಮಯ ಕೆಲಸದಲ್ಲಿ ವ್ಯಯಿಸಿ ದಿನಾಲು ಉಳಿತಾಯ ಮಾಡಲು ತೊಡಗುವರು. ಅದೇ ಸಮಯದಲ್ಲಿ ತಮ್ಮ ಅಚ್ಚುಮೆಚ್ಚಿನ ಖಾಲೀದ್ ಅಜ್ಜ ವಿಧಿವಶನಾದಾಗ ಅಪ್ಪ ಅಮ್ಮನ ಪ್ರೀತಿಯನ್ನೇ ಕಾಣದ ಝಾನಾ ಅತೀವ ದುಃಖಿತನಾಗುತ್ತಾನೆ. ಸುಪರ್ ಮ್ಯಾನ್ ಒಳ್ಳೆಯವರಿಗೆ ಜೀವ ಕೊಡಬಲ್ಲ....ಕೆಟ್ಟವರನ್ನು  ಸಾಯಿಸಬಲ್ಲ ಅನ್ನುವ ಕಲ್ಪನೆ ಅವರ ಅಮೇರಿಕ ಪ್ರಯಾಣದ ಕನಸನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಅದೇ ಸಮಯಕ್ಕೆ ಕತ್ತೆಯೊಂದು ಅವರಿಗೆ ಮಾರಾಟಕ್ಕೆ ಸಿಕ್ಕು ಅದರ ಮೇಲೆ ಸವಾರಿ ಮಾಡುತ್ತ ತಮ್ಮ ಕನಸಿನ ಅಮೆರಿಕಕ್ಕೆ  ಹೊರಡುತ್ತಾರೆ. ಈ ಮಕ್ಕಳು ಅಮೆರಿಕಾವನ್ನು ಮುಟ್ಟಿದರೆ? ಅವರ ಸುಪರ್ ಮ್ಯಾನ್ ಭೇಟಿ ಮಾಡುವ ಕನಸು ನನಸಾಗುತ್ತದೆಯೇ? ಅವರ ಅಪ್ಪ ಅಮ್ಮಂದಿರು ಮತ್ತು ಖಾಲಿದ್ ಅಜ್ಜ ಸುಪರ್ ಮ್ಯಾನ್ ಕೈಚಳಕದಿಂದ ಹುಟ್ಟಿಬಂದರೆ? ಎನ್ನುವುದು ಚಿತ್ರದ ಸಾರಾಂಶ. 

              ಇದೊಂದು ಮಕ್ಕಳ ಬಗೆಗಿನ ಚಿತ್ರವಾದರೂ ಕೇವಲ ಮಕ್ಕಳ ಚಿತ್ರ  ಎಂಬ ವರ್ಗಕ್ಕೆ ಖಂಡಿತ ಸೇರುವುದಿಲ್ಲ. Children of Heaven  , Colors of Paradise (both the movies directed by Majid Majidi) ಮುಂತಾದ ಅತ್ಯುತ್ತಮ ಎನಿಸುವ ಚಿತ್ರಗಳ ಸಾಲಿಗೆ ಬೇಕಾಸ್ ಮತ್ತೊಂದು ಸೆರ್ಪಡೆ. ಚಿತ್ರಕಥೆಯಲ್ಲಿನ ಬಿಗಿ ನೆರೂಪಣೆ ಕೊನೆಯವರೆಗೂ ನಮ್ಮನ್ನು ಆಸಕ್ತಿಯಿಂದ ನೋಡುವಂತೆ ಮಾಡುತ್ತದೆ. ಮಕ್ಕಳ ಪ್ರಪಂಚದ ಸೂಕ್ಷ್ಮಗಳನ್ನು ತಮಾಷೆಯಾಗಿ ನಿರೂಪಿಸುವಲ್ಲಿ  ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸದ್ದಾಮ್ ಆಳ್ವಿಕೆಯ ಸಂಕಷ್ಟಗಳು ಮತ್ತು ರಾಜಕೀಯ ಬಿಕ್ಕಟ್ಟು ನೇರವಾಗಿ ಅರ್ಥವಾಗದಿದ್ದರೂ ಬಾಲಕ ಝಾನಾ  ಮಾಡಿರುವ ಕೆಟ್ಟವರ ಪಟ್ಟಿಯ ಆಗ್ರಸ್ಥಾನದಲ್ಲಿ ಸದ್ದಾಂ ಹುಸೈನ್ ಹೆಸರು ಇರುತ್ತದೆ. ಅಪ್ಪ ಅಮ್ಮನ ಪ್ರೀತಿಯ ಪರಿಚಯವಿಲ್ಲದಿದ್ದರೂ ಅಜ್ಜ ಖಾಲೀದ್ 'ಮಗ' ಎಂದು ಅವನನ್ನು ಕರೆದಾಗ ಝಾನಾ ಪುಳಕಿತನಾಗುತ್ತಾನೆ. ಅಷ್ಟೇ ಅಲ್ಲದೆ.. ನೀನು ನನಗೆ ಮಗ ಎಂದು ಕರೆದರೆ ನನಗೆ ಸಂತೋಷವಾಗುತ್ತದೆ ಎಂದು ಅಜ್ಜನಿಗೆ ಹೆಳುತ್ತಾನೆ. ಇದೊಂದು ಸನ್ನಿವೇಶದಲ್ಲಿ ಒಬ್ಬ ಅನಾಥ ಹುಡುಗ ತಂದೆ ತಾಯಿಯರ ವಾತ್ಸಲ್ಯಕ್ಕೆ ತೊಳಲಾಡುವುದು ಅರ್ಥಗರ್ಭಿತ ವಾಗಿ ಚಿತ್ರಿತವಾಗಿದೆ. ಒಟ್ಟಿನಲ್ಲಿ 'ಬೇಕಾಸ್' ಮಕ್ಕಳ ಮುಗ್ಧತೆಯನ್ನು ಯಶಸ್ವಿಯಾಗಿ ಚಿತ್ರಿಸುತ್ತಲೇ ಅವರ ಕನಸು....ಕನಸನ್ನು ಸಾಕಾರಗೊಳಿಸಲು ಅವರು ಪಡುವ ಕಷ್ಟ , ಕಷ್ಟವನ್ನು ಬುದ್ದಿವಂತಿಕೆಯಿಂದ ಎದುರಿಸುವ ಅವರ ಧೈರ್ಯ, ಎಂಥವ ಸನ್ನಿವೇಶದಲ್ಲೂ ತಮ್ಮ ಪ್ರಯತ್ನವನ್ನು ಬಿಡದೆ ಮುನ್ನೆಡೆಯುವ ಮಕ್ಕಳ ಛಲ ಇವುಗಳನ್ನು ಅತ್ಯಪೂರ್ವವಾಗಿ ದಾಖಲಿಸುತ್ತದೆ. ಝಾಮದ್ ತಾಹ (ಝಾನಾ ) ಮತ್ತು ಸರ್ವಾರ್ ಫಾಜ್ಹಿಲ್ (ದಾನಾ) ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಮಕ್ಕಳಲ್ಲಿ  ಅಭಿನಯವನ್ನು ಹದಗೊಳಿಸುವಲ್ಲಿ ನಿರ್ದೇಶಕರ ಪಾತ್ರವೂ ತುಂಬಾ ಇದೆ. ಕೇವಲ ಎರಡೇ ಮುಖ್ಯಪಾತ್ರಗಳಲ್ಲಿ ಇಡೀ ಚಿತ್ರವನ್ನು ಯಶಸ್ವಿಯಾಗಿ  ಕೊಂಡೊಯ್ದ ನಿರ್ದೇಶಕರಿಗೆ ನನ್ನ  "ಹ್ಯಾಟ್ಸ್ ಆಫ್". ಛಾಯಾಗ್ರಹಣ ಮತ್ತು  ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿವೆ. 

               BEKAS  is a celebration of innocence, hope, dream and never quit attitude. ನಮ್ಮ ಕನ್ನಡ ಚಿತ್ರರಂಗ ಇದರಿಂದ ಕಲಿಯುವ ಅಂಶ ಬಹಳ ಇದೆ. 

Saturday, October 20, 2012

ಎಮೋಷನಲ್ ಬ್ಲಾಕ್ ಮೇಲ್

ಮಾಜಿ ಮುಖ್ಯಮಂತ್ರಿ  ಎಚ್. ಡಿ. ಕುಮಾರಸ್ವಾಮಿ ಯವರು ತಮ್ಮ ಬತ್ತಳಿಕೆಯಲ್ಲಿರೋ ಒಂದೊಂದೇ ಬಾಣಗಳನ್ನು ಪ್ರಯೋಗಿಸತೊಡಗಿದ್ದಾರೆ.  ಹಿಂದುಳಿದ ವರ್ಗದ ಹಾಗು ಅಲ್ಪ ಸಂಖ್ಯಾತರ ಸಮಾವೇಶಗಳ ನಂತರ ಈಗ ಅವರ ಹೊಸ ಪ್ರಯೋಗ 'ಎಮೋಷನಲ್ ಬ್ಲಾಕ್ಮೇಲ್'. ಅಧಿಕಾರದ ಮೋಹ ರಾಜಕಾರಣಿಗಳನ್ನು ಯಾವ ಮಟ್ಟಕ್ಕೆ ಇಳಿಸುತ್ತೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ. ಇವತ್ತಿನ thatskannada.com ನಲ್ಲಿ "ನನಗೆ ಹೃದಯ ಕಾಯಿಲೆ ಇದೆ. ಇನ್ನೆಷ್ಟು ದಿನ ಬದುಕುತ್ತಿನೋ ಗೊತ್ತಿಲ್ಲ. ಆದರೆ ನಾನು ಮಣ್ಣಾಗುವ ಮುನ್ನ ಈ ರಾಜ್ಯದ ಬಗ್ಗೆ ನಾನು ಕಂಡ ಕನಸು ನನಸಾಗಬೇಕೆಂಬುವುದೇ ನನ್ನ ಗುರಿ" ಎನ್ನುವ ಕುಮಾರಸ್ವಾಮಿಯವರ ಈ ಹೇಳಿಕೆ ಪ್ರಕಟವಾಗಿದೆ. ಒಬ್ಬ ಹತಾಶ ರಾಜಕಾರನಿಯಷ್ಟೇ ಈ ರೀತಿಯಹೇಳಿಕೆಗಳನ್ನು ಕೊಡಬಲ್ಲ. ಹಿಂದೆ ಕುಮಾರಸ್ವಾಮಿ ಯವರು ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದಾಗ ಎಲ್ಲರಲ್ಲೂ ಒಂದು ಆಶಾವಾದ ಇತ್ತು. ಅದಲ್ಲದೆ ತಮ್ಮ ತಂದೆಯವರನ್ನು ದಿಕ್ಕರಿಸಿ ಕೋಮುವಾದಿ ಪಕ್ಷವೆಂದು ಬ್ರಾಂಡ್ ಆಗಿರೋ ಬಿಜೆಪಿ ಜೊತೆಗೆ ಕೈಜೋಡಿಸಿದ್ದು ಸಹ ಅವರನ್ನು ಹೀರೋ ಆಗಿ ಮಾಡಿತ್ತು. ನನ್ನ ಪ್ರಕಾರ ಆ ಸಮಯದಲ್ಲಿ ಕುಮಾರಸ್ವಾಮಿ ಯವರಿಗೆ ನಿಜವಾಗಲು ಒಂದು ಒಳ್ಳೆ ಸರ್ಕಾರ, ಒಳ್ಳೆ ಆಡಳಿತ ಕೊಡಬೇಕೆಂಬ ಹಂಬಲ ಇದ್ದಿರಬಹುದು. ಅದು ಅವರು ಜಾರಿಗೆ ತಂದ ಹಲವು ಕಾರ್ಯಕ್ರಮಗಳಲ್ಲೇ ಗೊತ್ತಾಗುತ್ತದೆ. ಅಲ್ಲದೆ ಗ್ರಾಮವಾಸ್ತವ್ಯ ಪ್ರಾರಂಭದಲ್ಲಿ ಗಿಮಿಕ್ ಆಗಿರಲಿಲ್ಲ. ರೈತಾಪಿ ಜನರ ಬಗ್ಗೆ ನಿಜವಾದ ಕಾಳಜಿಯನ್ನು ಕುಮಾರಸ್ವಾಮಿ ಹೊಂದಿದ್ದರು. ತಮ್ಮ ಡೈನಾಮಿಕ್ ಪರ್ಸನಾಲಿಟಿ ಯಿಂದಾಗಿ ಕರ್ನಾಟಕದ ಜನತೆಯಲ್ಲಿ  2006-07 ರ ಸಂದರ್ಭದಲ್ಲಿ ಒಳ್ಳೆಯ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಯಾಕೆಂದರೆ ಕರ್ನಾಟಕ ಅಲ್ಲಿಯವರೆಗೆ ಒಬ್ಬ ಯುವ ಮುಖ್ಯಮಂತ್ರಿ [ಬೇರೆಯವರಿಗೆ ಹೋಲಿಸಿದಾಗ] ಯನ್ನು ನೋಡಿರಲಿಲ್ಲ. ಕೆಲಸದ ವೇಗ, ದಿಟ್ಟ  ನಿರ್ಧಾರಗಳು, ಒಳ್ಳೆಯ ಆಡಳಿತ ಕೊಡಬೇಕೆಂಬ ತುಡಿತ ಇವುಗಳಿಂದಾಗಿ ಜನರ ಮನಸ್ಸಿನಲ್ಲಿ ಒಂದು ಹೊಸ ಆಶಾಕಿರಣ ಮೂಡಿದ್ದಂತೂ ಹೌದು. "ಈ ಕುಮಾರಸ್ವಾಮಿ ಏನಾದ್ರು ಮಾಡಬಹುದು ನೋಡು" ಅಂತ ನಮ್ಮಮ್ಮ ಹೇಳಿದ್ದು ಇನ್ನು ನನಗೆ ನೆನಪಿದೆ. ಇಷ್ಟೊಂದು ಪಾಸಿಟಿವ್ ಅಂಶಗಳನ್ನು ಇಟ್ಟುಕೊಂಡು ಕುಮಾರಸ್ವಾಮಿ ರಾಜ್ಯದ ಉದ್ದಗಲಕ್ಕೂ ಓಡಾಡಿದರು. ಜನ ಭರವಸೆಯ ಮಂಟಪ ಕಟ್ಟಿದರು, ನಂಬಿಕೆ ಇಟ್ಟರು. ಆದರೆ ಅಧಿಕಾರದ ಕೊನೆಯ ದಿನಗಳಲಿ ಏನಾಯಿತು ? ಕೌಟುಂಬಿಕ ಒತ್ತಡಗಳಿಗೆ ಸಿಲುಕಿ, ಕೊಟ್ಟ ಮಾತಿಗೆ ತಪ್ಪಿ, ಕರ್ನಾಟಕದ ಜನತೆಯ ಮುಂದೆ ತಲೆತಗ್ಗಿಸಿ ನಿಂತರು. ಮನುಷ್ಯ ಯಾವುದನ್ನೂ ಬೇಕಾದರೂ ಕ್ಷಮಿಸುತ್ತಾನೆ ಆದರೆ ವಿಶ್ವಾಸ ದ್ರೋಹವನ್ನಲ್ಲ.  ಕುಮಾರಸ್ವಾಮಿ ಬಿಜೆಪಿ ಗೆ ಅಧಿಕಾರ ಹಸ್ತಾಂತರ ಮಾಡದೆ ಕೈಕಟ್ಟಿ ಕುಳಿತರು. ಅದು ಕೇವಲ ರಾಜನೀತಿ ಅಥವಾ ರಾಜಕಾರಣ ಎನಿಸಲಿಲ್ಲ. ಅದು ಕೇವಲ ಬಿಜೆಪಿಗಷ್ಟೇ ಮಾಡಿದ ದ್ರೋಹ ಆಗಿರಲಿಲ್ಲ ಬದಲಿಗೆ ಕರ್ನಾಟಕದ ಜನತೆಗೆ ಮಾಡಿದ ವಿಶ್ವಾಸ ದ್ರೋಹ ಆಗಿತ್ತು. ಒತ್ತಡಗಳಿಗೆ ಮಣಿಯದೆ ಸ್ಥಿರವಾಗಿ ನಿಂತಿದ್ದರೆ ಬಹುಷಃ ಈಗಲೂ ಮುಖ್ಯಮಂತ್ರಿ ಗಳಾಗಿ ಅಧಿಕಾರ ನಡೆಸುತ್ತಿದ್ದರು ಅನ್ಸುತ್ತೆ. ಅದೊಂದು ಪರೀಕ್ಷೆಯ ಸಮಯ. ಪರೀಕ್ಷೆ ಏನು? ಅವರ ನಿರ್ಧಾರ, ಜನತೆಯ ಬಗ್ಗೆ ಕಾಳಜಿ, ಅಭಿವೃದ್ಧಿಯ ಬಗೆಗಿನ ಒಲವು ಎಲ್ಲವು ನಿಜ ಎನ್ನುವುದನ್ನು ಪ್ರಮಾಣೀಕರಿಸಲು ಸಿಕ್ಕಂತ ಪರೀಕ್ಷೆ.  ಧೃಡ ಮನಸ್ಸು ಮಾಡಿ, ಒತ್ತಡಗಳಿಗೆ ತಲೆಬಾಗದೆ ಭರವಸೆ ಕೊಟ್ಟಂತೆ ನಡೆದಿದ್ದರೆ.......ಇವತ್ತು ಜನ ಕುಮಾರಸ್ವಾಮಿ ಯವರನ್ನು ಆರಾಧಿಸುತ್ತಿದ್ದರು. ಆದರೆ ಎಲ್ಲ ರಾಜಕಾರಣಿಗಳಂತೆ ನಾನು, ನಾನೇನು ಭಿನ್ನ ಅಲ್ಲ ಎಂಬುದು ಪರೀಕ್ಷೆಯಲ್ಲಿ ಸಾಬೀತಾಯಿತು.  ಪ್ರತಿಯೊಬ್ಬ ಮನುಷ್ಯನಿಗೂ ಒಂದು ಮಹತ್ತರವಾದುದನ್ನು ಮಾಡುವ ಅವಕಾಶ ಜೀವನದಲ್ಲಿ ಬರುತ್ತೆ. ಆದರೆ ಹೆಚ್ಚಿನ ಮನುಷ್ಯರು ಈ ಅವಕಾಶವನ್ನು ಕೈಚೆಲ್ಲುತ್ತಾರೆ. ಅದಕ್ಕೆ ಒಳ್ಳೆಯ ಉದಾಹರಣೆ ಕುಮಾರಸ್ವಾಮಿ. ಈಗ ಕರ್ನಾಟಕದಲ್ಲಿ ಬಿಜೆಪಿ ಪಕ್ಷದವರು ತಾವು ಸರ್ಕಾರ ನಡೆಸುತ್ತ ಇದೀವಿ, ಜನರಿಗೋಸ್ಕರ ದುಡಿಯುವುದಕ್ಕೆ ಬಂದಿದ್ದೀವಿ,  ಒಳ್ಳೆಯ ಆಡಳಿತ ಕೊಡೋಣ ಎನ್ನುವ ವಿಚಾರಗಳನ್ನು ಮರೆತು ತಮ್ಮಲ್ಲೇ ಕಚ್ಚಾಡಲು ಶುರುಮಾದಿಕೊಂಡಿದ್ದಾರೆ.  ಬಿಜೆಪಿ ಯವರು ಏನಾದ್ರು ಬಂದು ಸಾಧನೆ ಮಾಡ್ತಾರೆ ಅನ್ನೋ ಭರವಸೆ ಆಗಲೇ ಹುಸಿಯಾಗಿದೆ. ಇಂಥ ಸಂದರ್ಭ ದಲ್ಲಿ ಯಾವಾಗ ಬೇಕಾದರೂ ಚುನಾವಣೆಗಳು ನಡೆಯಬಹುದು ಎಂಬ ತರ್ಕವನ್ನಿಟ್ಟುಕೊಂಡು ಕುಮಾರಸ್ವಾಮಿ ಯವರು ಸಿದ್ಧತೆ ನಡೆಸುತ್ತ ಇದ್ದಾರೆ. ಹಾಗಾಗಿ ಸಮಾವೇಶಗಳು, ಹೇಳಿಕೆಗಳು ಒಂದರ ಹಿಂದೆ ಒಂದು ಬರುತ್ತಿವೆ. ಅಧಿಕಾರ ಹಿಡಿಯುವುದಕ್ಕೆ ರಾಜಕಾರಿಣಿಗಳು ಏನೆಲ್ಲಾ ಸರ್ಕಸ್ ಮಾಡ್ತಾರೆ ಅನ್ನೋದಕ್ಕೆ ಇದೊಂದು ಸರಳ ಉದಾಹರಣೆ.  ಆದರೆ ಜನ ಇದನ್ನೆಲ್ಲಾ ಗಮನಿಸುತ್ತಾರೆ ಅನ್ನೋದು ಕುಮಾರಸ್ವಾಮಿ ಯವರು ಚೆನ್ನಾಗಿ ಗಮನಿಸಬೇಕು. ಯಾಕೆಂದರೆ ಕುಮಾರಸ್ವಾಮಿ ಯವರು ಈಗ ಹತ್ತರಲ್ಲೊಬ್ಬ ರಾಜಕಾರಿಣಿ. ಎಲ್ಲ ರಾಜಕಾರಿಣಿ ಗಳ ಬಗ್ಗೆ ಯಾವ ಅಭಿಪ್ರಾಯವಿದೆಯೋ ಅದೇ ಅಭಿಪ್ರಾಯ ಅವರ ಮೇಲೂ ಇದೆ. 

Monday, September 24, 2012

ಕಿರಿಕಿರಿ

ಕೆಲವು ದಿನಗಳು ಶುರುವಾಗೋದೇ ಹಾಗೆ..........ಬೆಳಗಿನಿಂದಲೇ ಒಂದಿಷ್ಟು  ಬೇಸರ, ಅಸಹಾಯಕತೆ. ನಿನ್ನೆ ಕೂಡ ಹಾಗೆ ಆಯಿತು. ಶನಿವಾರ ರಾತ್ರಿ  ಬರ್ಫಿ ಪಿಕ್ಚರ್ ನೋಡಿ ಬರುವಷ್ಟರಲ್ಲಿ  ಮಧ್ಯರಾತ್ರಿ ಆಗಿತ್ತು. ಹಾಗಾಗಿ ನಿನ್ನೆ ಭಾನುವಾರ ಎದ್ದಿದ್ದು  ತಡವಾಗಿತ್ತು.  ಬಿಸಿ ಬಿಸಿ ಕಾಫಿ ಹೀರಿ ವಾರಕ್ಕೆ ಬೇಕಾಗುವ ತರಕಾರಿಗಳನ್ನು ತರೋಣ ಅಂತ ಹೊರಟ್ವಿ. ಇನ್ನೇನು ಕಾಂಪೌಂಡ್     ದಾಟುತ್ತಿರುವಾಗ ಓನರ್ ಮನೆಯವರು ಬಂದು "ನಿಮ್ಮ ಬೈಕಿನ ಪೆಟ್ರೋಲ್  ಯಾರೋ ಬೆಳಗಿನ ಜಾವದಲ್ಲಿ ಕದ್ದಿದ್ದಾರೆ . ಮೇಲಿನ ಮನೆಯವರು ನೋಡಿ ಜೋರು ಮಾಡಿದ ಮೇಲೆ ಓಡಿ  ಹೋಗಿದ್ದಾರೆ" ಅಂತ ಹೇಳಿದ ಕೂಡಲೆ ನನಗೆ ಒಂದು ಶಾಕ್. ಇಷ್ಟು ದಿನದಲ್ಲಿ ಯಾವತ್ತು ಈ ತರ ಆಗಿರಲಿಲ್ಲ. ನಮಗೆ ಬೈಕ್ ನಿಲ್ಲಿಸೋಕೆ ಜಾಗ ಸರಿ ಇಲ್ಲದೆ ಇರೋದ್ರಿಂದ ಕಾಂಪೌಂಡ್ ಹೊರಗಡೆ ನಿಲ್ಲಿಸುವ ಅನಿವಾರ್ಯತೆ . ಆದರೆ ದೊಡ್ಡ ರಾಜಕಾರಣಿಗಳು , ಪ್ರತಿಷ್ಠಿತ ವ್ಯಕ್ತಿಗಳು ವಾಸಿಸುವ ಬಡಾವಣೆ ಯಾದ್ದರಿಂದ ಯಾವಾಗಲು ಪೋಲೀಸರ ಓಡಾಟ ಇರುವುದರಿಂದ ಇಷ್ಟು ದಿನ ನಿರಾಳವಾಗಿದ್ದೆ . ನಿನ್ನೆ  ಮಾತ್ರ ಏಮಾರಿದ್ದಾಗಿತ್ತು . ಮತ್ತೆ ಯಾವುದೊ ಆಟೋಮೊಬೈಲ್ ಅಂಗಡಿಗೆ ಹೋಗಿ ಪೆಟ್ರೋಲ್ ಪೈಪ್, ಫ್ಯುಎಲ್ ಲಾಕ್ ತಂದು ಮನೆಯ ಹತ್ತಿರದಲ್ಲೇ ಇದ್ದ ಒಬ್ಬ ಮೆಕನಿಕ್ ನ ಕರೆತಂದು ರಿಪೇರಿ ಮಾಡಿಸಿದೆ. ಓದಿಷ್ಟು ಕಾಸು ಖರ್ಚು , ಸಮಯ ವ್ಯರ್ಥ , ಮನಸ್ಸಿಗೆ ಕಿರಿಕಿರಿ.  ಶನಿವಾರ ಸಹ ಕೆಲಸ ಮಾಡಿದ್ದರಿಂದ ಸಿಕ್ಕಿದ ಒಂದು ರಜಾದಲ್ಲಿ ಅರ್ಧ ದಿನ ಈ ರೀತಿ ಕಳೀತು. 

Friday, May 27, 2011

Good Morning......

ನಿನ್ನೆ ರಾತ್ರಿ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್  ಪಂದ್ಯ ನೋಡಿ ಮಲಗಿದವನಿಗೆ ಸೊಂಪಾದ ನಿದ್ದೆ. ವಾತಾವರಣ ಕೂಡ ತಂಪಾಗಿದ್ದರಿಂದ ಬೆಳಿಗ್ಗೆ ಏಳು ಗಂಟೆಗೆ ಎಚ್ಚರವಾಗಿದ್ದು. ಊರಿನಲ್ಲಿ ನನಗೆ ಈ ರೀತಿ ನಿದ್ದೆ ಬರುತ್ತೆ. ತುಂಬಾ ದಿನದ ನಂತರ ಮೈಮರೆತು ನಿದ್ದೆ ಮಾಡಿದೀನಿ. ಬೆಳಿಗ್ಗೆ ಏಳುವಾಗ ದೇಹ, ಮನಸ್ಸು ಎರಡೂ ಉಲ್ಲಾಸದಿಂದ ಕೂಡಿದ್ದವು. ವಾರಾಂತ್ಯದ ಎರಡೂ ದಿನಗಳಲ್ಲೂ ಮಾಡಲು ಅನೇಕ ಕೆಲಸಗಳಿವೆ. ಅದನ್ನು ಪಟ್ಟಿ ಮಾಡಬೇಕು. ತುಂಬಾ ದಿನಗಳಿಂದ ಒಂದು ವಿಚಾರ ತಲೆನಲ್ಲಿ ಕೊರೀತಿದೆ. ಅದನ್ನು ಕಾರ್ಯರೂಪಕ್ಕೆ ತರಬೇಕಿದೆ. ಇಂದಿನಿಂದ ಅದಕ್ಕೆ ಸಿದ್ಧತೆ ಮಾಡಲು ಶುರು ಮಾಡಬೇಕು. ಇದೆ ಉತ್ಸಾಹ, ಉಲ್ಲಾಸ ದಿನವಿಡೀ ಇರಲಿ ಅನ್ನೋ ಆಸೆ ನನ್ನದು.

Monday, May 9, 2011

ಸೋಮಾರಿತನ.....


ನಾಳೆಯಿಂದ ಒಂದಿಷ್ಟು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಇತ್ತೀಚಿಗೆ ದಿನದಲ್ಲಿ ಸಿಗೋ ಅಮೂಲ್ಯವಾದ ಸಮಯವನ್ನು ಹಾಳು ಮಾಡ್ತಾ ಇದ್ದೀನಿ ಅನ್ನೋ ಭಾವನೆ ಬಲವಾಗಿ ಬೇರೂರಿದೆ. ಬೆಳಿಗ್ಗೆ ಮುಂಚೆ ಎದ್ದು ಒಂದಿಷ್ಟು ಲವಲವಿಕೆಯಿಂದ ದಿನವನ್ನು ಆರಂಭಿಸದೆ ಸೋಮಾರಿತನ ಮನಸ್ಸು ದೇಹ ಆವರಿಸಿ ದಿನಗಳು ವ್ಯರ್ಥವಾಗುತ್ತಿವೆ. ಇದರಿಂದ ನನ್ನ ಮನಸ್ಸಿಗೆ ಯಾಕೋ ಕಸಿವಿಸಿ. ನಾಳೆಯಿಂದಾದರೂ ಬೆಳಿಗ್ಗೆ ಬೇಗ ಎದ್ದು ಉಲ್ಲಾಸವನ್ನು ಉತ್ಸಾಹವನ್ನು ತುಂಬಿಕೊಂಡು ಜೀವನ ನಡೆಸಬೇಕಿದೆ.

Friday, April 15, 2011

My Black Lady


Finally I got my 'Black Lady'. She is very beautiful, very very sexy. Riding on her is a great pleasure. Please welcome my Pulsar 150 DTSi. I got her today evening at 06:00PM.


Saturday, April 2, 2011

ವರ್ಲ್ಡ್ ಕಪ್ 2011ಹುರ್ರೇ........ವರ್ಲ್ಡ್ ಕಪ್ ಭಾರತಕ್ಕೆ ಮತ್ತೆ ಸಿಕ್ಕಿದೆ. ಎಲ್ಲರಿಗೂ ಶುಭಾಶಯಗಳು.

Bye the way, Where is Poonam Pandey?