Thursday, February 12, 2009

ನೀನು

ಒಂಥರಾ ಸಮುದ್ರದ ದಡ
ನನ್ನ ಭಾವದ ಅಲೆಗಳು
ಬಂದು
ಮತ್ತೆ ಮತ್ತೆ ಸ್ಪರ್ಶಿಸಿದರೂ
ಮಣಿಯದ ಹಠಮಾರಿ

ನಾನೇ ಬರಬೇಕೆ
ಹಗಲೂ..........ಇರುಳೂ.........?
ನನಗ್ಯಾಕಿಂತ ಅರಳು.....ಮರುಳು.......!

ಉಬ್ಬರದಲ್ಲೊಮ್ಮೆ ಗೆಲುವಿನ ಕಾತುರ
ಇಳಿತದಲ್ಲಿ ನೋವುಣುವ ಹಣೆಯಬರಹ

ಬಿಡಿಸಲಾಗದ್ದು ನಮ್ಮಿಬ್ಬರ ಸಂಭಂಧ
ದಡವಿದ್ದರೆ ನಾನೋ.....?
ನಾನಿದ್ದರೆ ದಡವೋ......?

--ನವೀನ ಕೆ.ಎಸ್.

ಬದುಕು

ಬದುಕು ಒಂಟಿಮರ
ಒಮ್ಮೊಮ್ಮೆ ಜೀವಕಳೆ
ನನ್ನಂತೆ ಪರರು

ಬೇಸಿಗೆಯ ಬರದಲ್ಲಿ
ಸೋತಿಹುದು ಎಲೆಚಿಗುರು
ವರ್ಷಧಾರೆ ಹರಿದರೆ
ಮಾತ್ರ ಹರುಷದ ನಗೆ

ಚಳಿಯ ಚಾಟಿ ಏಟಿಗೆ
ಉದುರಿದ್ದು .........ಎಲೆ
ಉಳಿದಿದ್ದು ..........ನೆನಪು


-- ನವೀನ ಕೆ.ಎಸ್.