Saturday, January 17, 2009

ಪ್ಲಾಸ್ಟಿಕ್ ಸುತ್ತ....ಮುತ್ತ....

ಹಲವು ವರ್ಷಗಳಿಂದ ಪ್ಲಾಸ್ಟಿಕ್ ನಿತ್ಯೋಪಯೋಗಿ ವಸ್ತುವಾಗಿದೆ. ಯಾವುದೇ ಅಂಗಡಿಗೆ ಹೋದರು ನಾವು ಕೊಳ್ಳುವ ಪ್ರತಿಯೊಂದು ವಸ್ತುವು ಪ್ಲಾಸ್ಟಿಕ್ ನ್ನು ಹೊದಿಕೆಯಾಗಿಸಿಕೊಂಡಿರುತ್ತದೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಾರೆ. ಕೈಚೀಲವೆಂಬ concept ಮರೆಯಾಗಲು ಪ್ಲಾಸ್ಟಿಕ್ ನ ಕೊಡುಗೆ ಅಪಾರ. ನನಗೆ ನೆನಪಿರುವ ಹಾಗೆ ನಮ್ಮ ಬಾಲ್ಯದಲ್ಲಿ ಅಂಗಡಿಯಿಂದ ಏನಾದರು ತರುವುದಿದ್ದರೆ ನಾವು ಕೈಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಸಕ್ಕರೆ, ಬೇಳೆ, ಬೆಲ್ಲ, ಹುಣಸೆ ಏನಾದರು ಆಗಲಿ ಅವನ್ನು ಕಾಗದದಲ್ಲಿ ಕಟ್ಟಿ ಕೊಡುತ್ತಿದ್ದರು. ಪ್ಲಾಸ್ಟಿಕ್ ಬಳಕೆ ಕೆಲವೇ ಕೆಲವು ಪದಾರ್ಥಗಳಿಗೆ ಸೀಮಿತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜನಗಳು ಸೋಮಾರಿಗಳಗಿದ್ದಾರೋ ಅಥವಾ ಪ್ಲಾಸ್ಟಿಕ್ ಎಂಬ ಮಾರಿಗೆ ಬಲಿಯಾಗಿದ್ದಾರೋ ನಾವು ಕೈ ಬೀಸಿಕೊಂಡು ಅಂಗಡಿಗಳಿಗೆ ಹೋಗುತ್ತೇವೆ. ಹೇಗಿದ್ದರೂ ಹ್ಯಾಂಡ್ ಕವರ್ ನಲ್ಲಿ ಹಾಕಿಕೊಡುತ್ತಾರೆಂಬ ನಂಬಿಕೆ.

ಮತ್ತೊಂದು ವಿಧದಲ್ಲಿ ನಾವು ಪ್ಲಾಸ್ಟಿಕ್ ಬಳಸುತ್ತಾ ಇರೋದು ನೀರಿನ / ಸಾಫ್ಟ್ ಡ್ರಿಂಕ್ ಬಾಟಲ್ ಗಳಿಗಾಗಿ. ಯಾವಾಗ use and throw ಯುಗ ಶುರುವಾಯಿತೋ ಈ ಪ್ಲಾಸ್ಟಿಕ್ ಬಾಟಲ್ ಸಿಗದೇ ಇರುವಂತಹ ಜಾಗವೇ ಈ ಜಗತ್ತಿನಲ್ಲಿ ಇಲ್ಲ ಎನ್ನಬಹುದು. ನನ್ನ ಈ ಲೇಖನದ ಮುಖ್ಯ ಉದ್ದೇಶ ಪ್ಲಾಸ್ಟಿಕ್ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಸುವುದೇ ಆಗಿದೆ. ನಿಮಗೆ ಪ್ಲಾಸ್ಟಿಕ್ ಬಾಟಲ್ನಲ್ಲಿ ಪಾನೀಯ / ನೀರು ಕುಡಿಯುವ ಅಭ್ಯಾಸವಿದ್ದರೆ ಯಾವತ್ತಾದರೂ ಅದರ ಕೆಳಭಾಗವನ್ನು ಗಮನಿಸಿದ್ದೀರಾ? ತ್ರಿಕೋನಾಕಾರದ ಚಿಹ್ನೆ ಯಾ ಒಳಗೆ ೧, ೨.....೭ ಯಾವುದಾದರು ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಅಲ್ಲಿ ಇರುವ ಸಂಖ್ಯೆ ಪುನರ್ಬಳಕೆಯನ್ನು ಸೂಚಿಸುತ್ತದೆ ಎಂದು ನೀವು ತಿಳಿದಿದ್ದರೆ.....you are WRONG.ಹಾಗಾದರೆ ಅದು ಏನು? ಕುತೂಹಲವಿದ್ದರೆ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಗಮನಿಸಿ.

ನಮ್ಮ ಉಪಯೋಗಕ್ಕೆ ತಕ್ಕಂತೆ ಪ್ಲಾಸ್ಟಿಕ್ ನ್ನು ವಿವಿಧ ಕಚ್ಚಾವಸ್ತುಗಳಿಂದ ತಯಾರಿಸಲಾಗುತ್ತದೆ. ಅಂದರೆ ಹ್ಯಾಂಡ್ ಕವರ್ ಗೆ ಉಪಯೋಗಿಸುವ ಪ್ಲಾಸ್ಟಿಕ್ ನ ಕಚ್ಚಾವಸ್ತುಗಳು ಬೇರೆ, ನೀರಿನ ಬಾಟಲ್ ಗೆ ಉಪಯೋಗಿಸುವ ಪ್ಲಾಸ್ಟಿಕ್ ನ ಕಚ್ಚಾವಸ್ತುಗಳು ಬೇರೆ. ನೀರಿನ ಬಾಟಲ್ ಗೆ ಉಪಯೋಗಿಸುವ ಪ್ಲಾಸ್ಟಿಕ್ ನಲ್ಲೂ ಹಲವು ವಿಧಗಳಿವೆ. So NUMBER inside triangle symbol tells you CHEMICAL MAKE UP of the plastic.

1) Polyethylene terephalate (PET)
2) High density polyethylene (HDPE)
3) Unplasticised polyvinyl chloride (UPVC) or Plasticised polyvinyl chloride (PPVC)
4) Low density polyethylene LDPE
5) Polypropylene (PP)
6) Polystyrene (PS) or Expandable polystyrene (EPS)
7) Other, including nylon and acrylic

ಮೇಲೆ ಕೊಟ್ಟಿರುವ ಪ್ಲಾಸ್ಟಿಕ್ ನ ವಿಧಗಳಲ್ಲಿ ಸಂಖ್ಯೆ ೩, ೬, ಮತ್ತು ೭ ಅತ್ಯಂತ ಅಪಾಯಕಾರಿ. ನೀರು / ತಂಪು ಪಾನೀಯ ವಾಸನೆಯಾಗಲು ಈ ಪ್ಲಾಸ್ಟಿಕ್ ಗಳ ಉಪಯೋಗವೇ ಕಾರಣ. ದಯವಿಟ್ಟು ಈ ಸಂಖ್ಯೆಗಳನ್ನು ನಮೂದಿಸಿರುವ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬೇಡಿ. ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಪ್ಲಾಸ್ಟಿಕ್, ಅದರ ಉಪಯೋಗ ಹಾಗು ತಯಾರಿಕೆಯಲ್ಲಿನ ವಸ್ತುಗಳ ಬಳಕೆಯನ್ನು ನೀಡಲಾಗಿದೆ.PET ಬಗ್ಗೆ ಒಂದು ಚೂರು ಮಾಹಿತಿ:
ಪೆಟ್ ಜಾರ್, ಪೆಟ್ ಬಾಟಲ್ ಗಳ ಬಗ್ಗೆ ಜಾಹಿರಾತುಗಳಲ್ಲಿ ನೋಡಿದ್ದೇ / ಕೇಳಿದ್ದೆ, ಪಠ್ಯ ಪುಸ್ತಕದಲ್ಲಿ ಓದಿದ್ದೆ. " ಆಕರ್ಷಕ ಪೆಟ್ ಜಾರ್ ನಲ್ಲಿ ನಮ್ಮ ಉತ್ಪನ್ನ ಲಭ್ಯ " ಎನ್ನುವುದೇ ಜನರನ್ನು ಸೆಳೆಯುವ ತಂತ್ರವಾಗಿತ್ತು. ನನ್ನ ಸ್ನೇಹಿತರೊಬ್ಬರು ಕಳುಹಿಸಿದ ಇಮೇಲ್ ನೋಡಿದ ಮೇಲೆ ಪೆಟ್ ಬಗ್ಗೆ ಕುತೂಹಲ ಮೂಡಿತು. ಅಂತರ್ಜಾಲ ದಲ್ಲಿ ಅಲೆದಾಡಿ ಸಂಗ್ರಹಿಸಿದ ಕೆಲವು ವಿಷಯಗಳು ಹೀಗಿವೆ.

೧. ೧೯೪೧ ರಲ್ಲಿ British Calico Printers ಎಂಬ ಕಂಪನಿ synthetic fibre ನಿಂದ ಪೆಟ್ ನ್ನು ತಯಾರಿಸಿತು.
೨. ಎಥಿಲೀನ್ ಮತ್ತು ಪ್ಯರಾಕ್ಸಿನ್ ವಸ್ತುಗಳು ಪೆಟ್ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ.
೩. ಪೆಟ್ ನ ಮತ್ತೊಂದು ಅನುಕೂಲವೆಂದರೆ It is fully recyclable.
೪. ಪೆಟ್ ಮಾರುಕಟ್ಟೆಯಲ್ಲಿ ಇಷ್ಟೊಂದು ಪ್ರಸಿದ್ದವಾಗಳು ಕಾರಣ ಅದು unbreakable.
೫. ಪೆಟ್ ತುಂಬ ಹಗುರ, ಪಾರದರ್ಶಕ, ಅಗ್ಗ ಹಾಗು ಪುನರ್ಬಳಕೆಗೆ ಸಹಕಾರಿ.
೬. ಪೆಟ್ ಗೆ ಯಾವುದೇ ಆಕೃತಿಯನ್ನು ಸುಲಭವಾಗಿ ಕೊಡಲು ಸಾಧ್ಯ.

ಕೊನೆ ಹನಿ:
ಪ್ಲಾಸ್ಟಿಕ್ ನ್ನು ನಮ್ಮ ದಿನನಿತ್ಯ ಉಪಯೋಗದಿಂದ ತೆಗೆದುಹಾಕುವುದು ಕಷ್ಟ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ ಪ್ಲಾಸ್ಟಿಕ್ ನ್ನು ಕಡಿಮೆ ಉಪಯೋಗಿಸಲು ಪ್ರಯತ್ನಿಸೋಣ. ಕಡಿಮೆ ಉಪಯೋಗದ ಜೊತೆ ಸುರಕ್ಷಿತ ಉಪಯೋಗದೆಡೆಗೆ ನಮ್ಮ ಗಮನವಿರಬೇಕಾದದ್ದು ಆನಿವಾರ್ಯ.

-- ನವೀನ ಕೆ. ಎಸ್.

ಹೆಚ್ಚಿನ ಮಾಹಿತಿಗೆ:

1. http://www.napcor.com/plastic/bottles/whatispet.html

2. http://www.petcore.org/Content/Default.asp?PageID=6

Tuesday, January 6, 2009

ಇದೀಗ ಬಂದ ಸುದ್ದಿ...........

ಇದೀಗ ಬಂದ ಸುದ್ದಿ....................ಏನಪ್ಪಾಂದ್ರೆ ವೈಕುಂಠ ಏಕಾದಶಿಯ ಪ್ರಯುಕ್ತ ಸರ್ಕಾರದಿಂದ ಲಾಡು ಹಂಚಿಕೆ. ಇದು ಮುಗ್ಧತೇನೋ , ಮೂರ್ಖತನಾನೋ, ಜನರನ್ನು ಸೆಳೆಯುವ ತಂತ್ರಾನೋ, ಭಕ್ತಿನೋ ನನಗೆ ಅರ್ಥ ಆಗುತ್ತಿಲ್ಲ. ಧಾರ್ಮಿಕ ದತ್ತಿ ಇಲಾಖೆಗೆ ಲಾಡು ಹಂಚುವ ಅಧಿಕಾರ ಇರಬಹುದು. ಇದು ಖಜಾನೆಯ ದುಡ್ಡನ್ನು ಪ್ರಸಾದ ವಿನಿಯೋಗಕ್ಕೆ ಹಂಚುವ ಸಮಯವೇ? ದೇವರ ಬಗ್ಗೆ, ದೇವಸ್ಥಾನಗಳ ಬಗ್ಗೆ, ಸರ್ಕಾರದ ಬಗ್ಗೆ ನನಗೆ ದ್ವೇಷವಿಲ್ಲ. ನಾನೂ ಜನತೆಯ ಭಾಗವಾಗಿದ್ದೇನೆ. ಇಲ್ಲಿ ಪ್ರಶ್ನೆ ಏಳೋದು ಇದರ ಅಗತ್ಯ ಇತ್ತೇ ಎನ್ನುವುದು? ಅದೇ ದುಡ್ಡನ್ನು ಶಿಥಿಲಗೊಂಡ ದೇವಸ್ಥಾನಗಳ ಜೀರ್ಣೋದ್ಧಾರಕ್ಕೋ, ಅರ್ಚಕರ ಸಂಬಳ ಹೆಚ್ಚು ಮಾಡುವುದಕ್ಕೋ, ಅಥವ ಇದಕ್ಕೆ ಸಂಬಂಧಿಸಿದ ಇನ್ನಿತರ ಕಾರ್ಯಗಳಿಗೆ ಉಪಯೋಗಿಸಬಹುದಲ್ಲವೇ? ಲಾಡು ತಯಾರಿಸಲು ಮತ್ತು ಹಂಚಲು ಕೆಲವೇ ಲಕ್ಷಗಳು ಬೇಕಾಗಿರಬಹುದು. ಕೆಲವೇ ಲಕ್ಷಗಳನ್ನು ಉಪಯುಕ್ತ ರೀತಿಯಲ್ಲಿ ಉಪಯೋಗಿಸಬಹುದಲ್ಲವೇ? ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ನೀಡಲಾಗದಷ್ಟು ಹಣ ಸಂಗ್ರಹಣೆ ಇರಲಿಕ್ಕಿಲ್ಲ. ಹಾಗೆಂದು ಸರ್ಕಾರ ಲಾಡು ವಿತರಣೆಗೆ ತೊಡಗುವುದೇ ? ನಿಜವಾದ ಭಕ್ತನಿಗೆ ಭಕ್ತಿಯೇ ಮುಖ್ಯ. ಪ್ರಸಾದ ವಿತರಣೆ ನಮ್ಮ ಆಚರಣೆಯ ಒಂದು ಭಾಗ ಎಂದು ನಾನು ಒಪ್ಪುತ್ತೇನೆ. ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಸರ್ಕಾರದ ಸಹಾಯವಿಲ್ಲದೆ ದೇವಸ್ಥಾನಗಳು ಹಬ್ಬ ಹರಿದಿನಗಳನ್ನು ಆಚರಿಸಿಲ್ಲವೇ? ಜನರು ಅಥವಾ ಭಕ್ತರು ಅದರ ಬಗ್ಗೆ ಚಿಂತಿಸುತ್ತಾರೆ. ಸರ್ಕಾರಕ್ಕೆ ತಲೆಕೆಡಿಸಿಕೊಳ್ಳಲು ಬೇರೆ ಸಮಸ್ಯೆಗಳಿಲ್ಲವೇ? ವೈಕುಂಠ ಏಕಾದಶಿಗೆ ಲಾಡು, ಶಿವರಾತ್ರಿಗೆ ಫಲಹಾರ, ಗಣೇಶನ ಹಬ್ಬಕ್ಕೆ ಮೋದಕ/ಕಡಬು ಹಂಚುತ್ತ ಕುಳಿತರೆ ನಮ್ಮ ರಾಜ್ಯದ ಭವಿಷ್ಯವೇನು? ಸರ್ಕಾರ ಜಪಿಸಬೇಕಾದದ್ದು ಅಭಿವೃದ್ಧಿಯ ಮಂತ್ರ; ತೋರಿಸಬೇಕಾಗಿದ್ದು ಕೆಲಸದಲ್ಲಿ ಶ್ರದ್ಧೆ ಮತ್ತು ಭಕ್ತಿ; ಹಂಚಬೇಕಾಗಿದ್ದು ಸಮೃದ್ಧ ಕರ್ನಾಟಕವೆಂಬ ಪ್ರಸಾದ. ಇನ್ನಾದರೂ ಎಚ್ಚೆತ್ತು ಕೊಳ್ಳುತ್ತೀರ ಯಡ್ಯುರಪ್ಪನವರೆ.

Friday, January 2, 2009

ಬರೆಯಲು ಏನೂ ತೋಚದೆ.......ಹಾಗೆ ಸುಮ್ಮನೆ

ಪೆನ್ನು ಹಿಡಿಯುವವರೆಗೂ ಏನಾದರು ಬರೆಯಬೇಕೆಂಬ ತುಡಿತ. ಆದರೆ ಬರೆಯಲು ವಿಷಯ ಕೈಗೆ ಸಿಗದೆ ಒದ್ದಾಡುವ ಸ್ಥಿತಿ. ಪದೇ ಪದೇ ಆಲೋಚನೆಗಳ ಬಲೆಯಲ್ಲಿ ಸಿಲುಕೋ ವಿಚಾರಗಳನ್ನ ವಿವರವಾಗಿ ಚಿಂತಿಸಿ ಬರೆಯುವುದು ನನ್ನ ಅಭ್ಯಾಸ. ಬರೆಯುವ ಕೌಶಲ್ಯ ನನಗೆ ಸಿದ್ಧಿಸದಿದ್ದರೂ, ಅದನ್ನು ಕರಗತ ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾನು ತೊಡಗಿದ್ದೇನೆ. ಬರೆಯುವ ಆಸಕ್ತಿಯೊಂದೆ ನನ್ನ ಬರವಣಿಗೆಗಳಿಗೆ ಸಾಥಿ. ಆದರೂ ಸವೆಸಬೇಕಾದ ಹಾದಿ ಬಹಳಷ್ಟಿದೆ. ಚಿಂತನೆಗಳಿಗೆ ಸ್ಪಷ್ಟವಾದ ರೂಪ ಕೊಡಲು ಓದುವ ಅಗತ್ಯ ತುಂಬ ಇದೆ ಎಂದು ನಂಬುವವನು ನಾನು. ಓದು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ, ಹೊಸ ಆಲೋಚನೆಗಳ ಉದಯಕ್ಕೆ ಕಾರಣವಾಗುತ್ತದೆ. ಆದರೆ ಇತ್ತೀಚಿಗೆ ಓದುವ ಅಭ್ಯಾಸವನ್ನು ಮೂಲೆಗೆ ಕೂರಿಸಿಬಿಟ್ಟಿದ್ದೇನೆ. ಇವತ್ತಿನಿಂದಲೇ ಅದನ್ನು ಪುನಃ ಪ್ರಾರಂಭಿಸಬೇಕು. ಸದ್ಯಕ್ಕೆ ನಾನು ಓದುತ್ತ ಇರುವುದು ಬ್ಲಾಗ್ಗಳನ್ನು, newsportal ಗಳನ್ನು ಮಾತ್ರ.


-- ನವೀನ ಕೆ.ಎಸ್.

Thursday, January 1, 2009

ಹೊಸ ವರುಷ ಮತ್ತು resolution ಗಳು

ನಾನು ಹೈಸ್ಕೂಲ್ ಮುಗಿಸುವವರೆಗೂ ಹೊಸವರುಷದ ಆಚರಣೆಯ ಸುದ್ದಿಗಳನ್ನ ದಿನಪತ್ರಿಕೆಗಳಲ್ಲಿ ಓದುತ್ತ ಇದ್ದೆ. ನಾನು ಇದ್ದ ಪರಿಸರಕ್ಕೆ ಹೊಸವರುಷದ ಆಚರಣೆಯ ಗಾಳಿ ತಗುಲಿರಲಿಲ್ಲ. ಪಿಯುಸೀ ಸೇರಿದ ನಂತರ ಹೊಸವರುಷದ ಸಂಭ್ರಮಾಚಾರಣೆಗಳನ್ನು ಹತ್ತಿರದಿಂದ ನೋಡುವ, ಪಾಲ್ಗೊಳ್ಳುವ ಅವಕಾಶಗಳು ದೊರೆತವು. ಮೊದಲು ಕುತೂಹಲವಿದ್ದರೂ, ನಂತರ ನನಗೆ ಸೆಲೆಬ್ರಶನ್ ನಲ್ಲಿ ಅಷ್ಟೇನೂ ಆಸಕ್ತಿ ಮೂಡಲಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಹೊಸ ವರುಷವನ್ನು ಸ್ವಾಗತಿಸುವ ಆಚರಣೆಗಳು excitement ತಂದಿಲ್ಲ. ಸ್ನೇಹಿತರೊಂದಿಗೆ ತಿಂದು, ಕುಡಿದು [ಎಲ್ಲರಿಗು ಅನ್ವಯಿಸುವುದಿಲ್ಲ], ಕಿರುಚಿ, ನರ್ತಿಸಿ, ತಲೆಹರಟೆ ಮಾಡಿ ಹೊಸ ವರುಷವನ್ನು ಬರಮಾಡಿಕೊಳ್ಳುವ ಬಗೆ ನನಗೆ ಅಷ್ಟೊಂದು ಆಸಕ್ತಿ ಇಲ್ಲ. ಆದರೆ ಇದು ನನ್ನ ಅಭಿಪ್ರಾಯವಷ್ಟೆ. ಬೇರೆಯವರ ಉತ್ಸಾಹವನ್ನು ಕಡಿಮೆ ಮಾಡುವಂತಹ ಮಾತುಗಳನ್ನು ನಾನು ಆಡೋದಿಲ್ಲ. ಆದರೆ ನನಗೆ ಇಲ್ಲಿಯವರೆಗೂ ಗಮನಿಸುತ್ತಾ ಬಂದಿರೋದು "New Year Resolution" ಗಳನ್ನು ಮಾಡುವ ಜನರನ್ನು. ಆ ದಿನದಿಂದ ಎಷ್ಟೋ ಜನ ತುಂಬ ಉತ್ಸಾಹದಿಂದ ಜೀವನವನ್ನು ನಡೆಸುವ ಅಥವಾ ಉತ್ಸಾಹದಿಂದ ಜೀವನದಲ್ಲಿ ನಡೆಯುವ ದಾರಿಗಳನ್ನು ಹುಡುಕುವ ಬಗ್ಗೆ ಸಂಕಲ್ಪ ತೊಡುತ್ತಾರೆ. ನಾನು ಯಾವುದೇ ರೀತಿಯಾದಂತಹ ರೆಸೋಲುಶನ್ ಗಳನ್ನು ಮಾಡದೆ ಇದ್ದರೂ ಹಲವರನ್ನು ಗಮನಿಸಿದ್ದೇನೆ. ಕೆಲವೊಂದು ಬಾರಿ ಇದು ತುಂಬ funny ಅನಿಸಿದರೂ ಅದು ಅವರು ನಡೆಸಿಕೊಂಡು ಹೋಗುವವರೆಗೂ ಗಂಭೀರ ಸಂಗತಿಯೆ. ತುಂಬ ಸಾಮಾನ್ಯವಾದ resolution ಗಳಲ್ಲಿ ಮುಖ್ಯವಾದವು ಅಂದ್ರೆ

೧. ಸಿಗರೇಟು ಸೇದೋದು ಬಿಡ್ತೀನಿ .
[ಧೂಮಪಾನ ವ್ಯಸನಿಗಳ ಸಂಕಲ್ಪ. ಹೆಚ್ಚಿನವರಲ್ಲ, ಕೆಲವರು.]

೨. ಇವತ್ತಿಂದ (ಅಥವ ನಾಳೆಯಿಂದ,)ಬೇಗ ಏಳ್ತೀನಿ.
[ಸೂರ್ಯವಂಶಸ್ತರು ಮಾಡೋ ಸಂಕಲ್ಪ]

೩. ಕಡಿಮೆ ಸುಳ್ಳು ಹೇಳ್ತೀನಿ.

೪. ದುಂದು ವೆಚ್ಚ ಮಾಡೋದಿಲ್ಲ.

೫. ಟಿವಿ ನೋಡೋದು ಕಮ್ಮಿ ಮಾಡ್ತೀನಿ.

೬. ಓದೋದರ ಬಗ್ಗೆ ಗಮನ ಕೊಡ್ತೀನಿ.
[ವಿದ್ಯಾರ್ಥಿಗಳು ಮಾಡೋ ಸಂಕಲ್ಪ]
ಇತ್ಯಾದಿ ಇತ್ಯಾದಿ.
ಈ ಎಲ್ಲ resolution ಗಳು [ಶೇಕಡ ೮೫%] ಸ್ವಲ್ಪ ದಿನ ಮಾತ್ರ ನಡೆಯೋದು, ನಾನು ಗಮನಿಸಿದ ಹಾಗೆ. ಕ್ರಮೇಣ ಅವರಿಗೆ ಗೊತ್ತಿಲ್ಲದೇನೆ ಈ ಅಭ್ಯಾಸಗಳು, ಚಟಗಳು ಅವರಲ್ಲಿ ಪುನಃ ಸ್ಥಾಪನೆಗೊಂಡಿರುತ್ತವೆ. ನನಗೆ funny ಅಂತ ಅನಿಸೋದು ಇದೆ ವಿಚಾರ.

ಉದಾಹರಣೆಯಾಗಿ ತಗೊಂಡರೆ ' ಸಿಗರೇಟು ಬಿಡ್ತೀನಿ ' ಅನ್ನೋ resolution. ದಿನ ನಾಲ್ಕು ಸೇದೊದ್ರಲ್ಲಿ ಮೊದಲ ವಾರ ಎರಡು, ಎರಡನೇ ವಾರ ಒಂದು ಹೀಗೆ gradually ಕಡಿಮೆ ಮಾಡ್ತಾ ಪೂರ್ತಿ ಬಿಟ್ಟು ಬಿಡ್ತೀನಿ ಅನ್ನೋ ಉತ್ಸಾಹ ಮೊದಲವಾರದ ಕೊನೆಯವರೆಗೂ ಇರುತ್ತೆ. ಮನಸ್ಸು ಮೊದಲವಾರ ಅಷ್ಟೇನೂ ತರ್ಲೆ ಮಾಡೋಲ್ಲ. ಯಾಕೆಂದರೆ ಎರಡು ಸಿಗರೇಟು ಕಮ್ಮಿ ಮಾಡಿದರು ಇನ್ನೆರಡು ಇರುತ್ತಲ್ಲ ಅನ್ನೋ ಒಳ ಸಮಾಧಾನ. ಆದರೆ ಚಡಪಡಿಕೆ, ಅಸಹನೆ ಶುರುವಾಗೋದು ಎರಡು ವಾರಗಳ ನಂತರ. ಒಂದೇ ಒಂದು ಸಿಗರೆಟಿನಲ್ಲಿ ದಿನವೆಲ್ಲ ಕಳೆಯಬೇಕಲ್ಲ ಎಂಬ ನಿರಾಸೆ. ಆ ಒಂದು ಸಿಗರೇಟು ಮುಟ್ಟುವವರೆಗೆ ಅಪರಿಮಿತ ಉತ್ಸಾಹ, ಸೇದುವಾಗ ಮಹದಾನಂದ, ಮುಗಿಯುವ ಹೊತ್ತಲ್ಲಿ ನಿರಾಶಾವಾದ; ಯಾಕಾದರೂ ಸಿಗರೇಟು ಬಿಟ್ಟೆ ಅಂತ. ಮುಂದೆರಡು ವಾರಗಳು ಮನಸ್ಸು ಕುಡಿದ ಕೋತಿಯಾಗಿರತ್ತೆ. ನಾಲ್ಕನೆಯ ವಾರದ ಹೊತ್ತಿಗೆ ನಮ್ಮ resolution ಗುಡ್ಡ ಹತ್ತುತ್ತ ಇರುತ್ತೆ. ಅದೊಂತರ ಅಸ್ತಮಿಸೋ ಸೂರ್ಯನನ್ನು ಕಡಲ ದಂಡೆಯಲ್ಲಿ ನೋಡೋ ಹಾಗೆ. ನಮ್ಮ resolution ಆನ್ನೋ ಸೂರ್ಯ ಮರೆವಿನ ಮಹಾಸಾಗರದಲ್ಲಿ ಇಂಚಿಂಚಾಗಿ ನಮಗೆ ಗೊತ್ತಿಲ್ಲದ ಹಾಗೆ ಮುಳುಗಿರತ್ತೆ. ಈ ಸೂರ್ಯನ ಆಗಮನ ಆಗೋದು ಅದೇ ವರುಷದ ಕೊನೆಯಲ್ಲಿ.

ಇನ್ನೊಂದು ಉದಾಹರಣೆಯೆಂದರೆ ' ಬೆಳಿಗ್ಗೆ ಬೇಗ ಏಳ್ತೀನಿ '. ಈ resolution ಮಾಡೋರು ತಮ್ಮ ದೀರ್ಘವಾದ ಶಯನಯಾತ್ರೆಯಿಂದ office ಗೆ, ಶಾಲೆಗೆ/ ಕಾಲೇಜಿಗೆ ತಡವಾಗಿ ಹೋಗಿ, ಬಾಸ್/ಟೀಚರ್ ಗಳಿಂದ ಉಗಿಸಿಕೊಳ್ಳೋರು. ಅವರಿಗೂ ತಮ್ಮ ಯಾತ್ರೆಯ ದೆಸೆಯಿಂದಲೇ ಇದೆಲ್ಲ ಎಂದು ತಿಳಿದಿದ್ದರೂ ಅದನ್ನು ಬಿಡಲು ಆಗದಂತಹ ಸೋಮಾರಿತನ. ನಿದ್ರಾ ದೇವಿಯ ಭಕ್ತಿಯಲ್ಲಿ ಮುಳುಗಿ ಏಳಲಾಗದೆ ದಿನವು ಕೈ ಹಿಸುಕಿಕೊಳ್ಳುವ ಜನ ವರ್ಷದ ಕೊನೆಯಲ್ಲಿ ಮಾಡುವ ಒಂದು ಕೊನೆಯ ಪ್ರಯತ್ನವೇ ಈ resolution. ಈ resolution ಅಸಫಲವಾಗಲು "ಹೊಸವರುಷ ಚಳಿಗಾಲದಲ್ಲಿ ಬರೋದೆ" ಮುಖ್ಯ ಕಾರಣ. ಜನವರಿ ಒಂದರ ಬೆಳಿಗ್ಗೆ resolution ನೆನೆಸಿಕೊಂಡು ಬೇಗ ಎದ್ದು , ತಲುಪುವ ಸ್ಥಳ ಬೇಗ ತಲುಪಿ, ಮಹಾಯುದ್ಧವನ್ನು ಗೆದ್ದಂತೆ ಬೀಗಿ, ಮಾರನೆಯದಿನವು ಬೇಗ ಏಳುವ ಆಶಯದೊಂದಿಗೆ ಮಲಗಿ, ಮರುದಿನ ಬೆಳಗ್ಗಿನ ಚುಮು ಚುಮು ಚಳಿಯಲ್ಲಿ, ಇನ್ನೊಂದು ಐದು ನಿಮಿಷ ಮಲಗಿದರೆ ಏನಾಗುತ್ತೆ, ನಿನ್ನೆ ತುಂಬ ಬೇಗ ಎದ್ದಿದ್ದೆ ಎಂದು ಶುರುವಾಗಿ, ವಾರ ಕಳೆಯುವ ಹೊತ್ತಿಗೆ resolution ಇವರ ಜೊತೆ ಬೆಚ್ಚಗೆ ಮಲಗಿರತ್ತೆ.


ಮನುಷ್ಯನಿಗೆ, ಕೆಟ್ಟ ಅಭ್ಯಾಸಗಳು, ಚಟಗಳು ಬೇಗನೆ ಹೊಂದಿಕೊಳ್ಳುತ್ತವೆ ಅಥವಾ ಅವನು ಅವುಗಳಿಗೆ ಬೇಗ ಹೊಂದಿಕೊಳ್ಳುತ್ತಾನೆ. ಆದರೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಮತ್ತು ತುಂಬ ಪ್ರಯತ್ನದ ಅಗತ್ಯ ಇದೆ. ಆದರೆ ನಮಗೆ ಅವಕಾಶ ತುಂಬ ಇದ್ದರೂ ಪ್ರಯತ್ನ ಸ್ವಲ್ಪ ಕಡಿಮೆ ಆಗೋದ್ರಿಂದ ಹಲವಾರು ಒಳ್ಳೆಯ ಅಭ್ಯಾಸಗಳು ನಮ್ಮಲ್ಲಿ ಸೇರಿಕೊಳ್ಳುವ ಅವಕಾಶದಿಂದ ವಂಚಿತಗೊಳ್ಳುತ್ತವೆ .

ಅದು ಏನೆ ಆಗಲಿ
ಎಲ್ಲರಿಗು ೨೦೦೯ ಸುಖ, ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿ ತರಲಿ.

ಶುಭಾಶಯಗಳೊಂದಿಗೆ.

--ನವೀನ ಕೆ.ಎಸ್ಸ್.