ಇದೀಗ ಬಂದ ಸುದ್ದಿ....................ಏನಪ್ಪಾಂದ್ರೆ ವೈಕುಂಠ ಏಕಾದಶಿಯ ಪ್ರಯುಕ್ತ ಸರ್ಕಾರದಿಂದ ಲಾಡು ಹಂಚಿಕೆ. ಇದು ಮುಗ್ಧತೇನೋ , ಮೂರ್ಖತನಾನೋ, ಜನರನ್ನು ಸೆಳೆಯುವ ತಂತ್ರಾನೋ, ಭಕ್ತಿನೋ ನನಗೆ ಅರ್ಥ ಆಗುತ್ತಿಲ್ಲ. ಧಾರ್ಮಿಕ ದತ್ತಿ ಇಲಾಖೆಗೆ ಲಾಡು ಹಂಚುವ ಅಧಿಕಾರ ಇರಬಹುದು. ಇದು ಖಜಾನೆಯ ದುಡ್ಡನ್ನು ಪ್ರಸಾದ ವಿನಿಯೋಗಕ್ಕೆ ಹಂಚುವ ಸಮಯವೇ? ದೇವರ ಬಗ್ಗೆ, ದೇವಸ್ಥಾನಗಳ ಬಗ್ಗೆ, ಸರ್ಕಾರದ ಬಗ್ಗೆ ನನಗೆ ದ್ವೇಷವಿಲ್ಲ. ನಾನೂ ಜನತೆಯ ಭಾಗವಾಗಿದ್ದೇನೆ. ಇಲ್ಲಿ ಪ್ರಶ್ನೆ ಏಳೋದು ಇದರ ಅಗತ್ಯ ಇತ್ತೇ ಎನ್ನುವುದು? ಅದೇ ದುಡ್ಡನ್ನು ಶಿಥಿಲಗೊಂಡ ದೇವಸ್ಥಾನಗಳ ಜೀರ್ಣೋದ್ಧಾರಕ್ಕೋ, ಅರ್ಚಕರ ಸಂಬಳ ಹೆಚ್ಚು ಮಾಡುವುದಕ್ಕೋ, ಅಥವ ಇದಕ್ಕೆ ಸಂಬಂಧಿಸಿದ ಇನ್ನಿತರ ಕಾರ್ಯಗಳಿಗೆ ಉಪಯೋಗಿಸಬಹುದಲ್ಲವೇ? ಲಾಡು ತಯಾರಿಸಲು ಮತ್ತು ಹಂಚಲು ಕೆಲವೇ ಲಕ್ಷಗಳು ಬೇಕಾಗಿರಬಹುದು. ಆ ಕೆಲವೇ ಲಕ್ಷಗಳನ್ನು ಉಪಯುಕ್ತ ರೀತಿಯಲ್ಲಿ ಉಪಯೋಗಿಸಬಹುದಲ್ಲವೇ? ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ನೀಡಲಾಗದಷ್ಟು ಹಣದ ಸಂಗ್ರಹಣೆ ಇರಲಿಕ್ಕಿಲ್ಲ. ಹಾಗೆಂದು ಸರ್ಕಾರ ಲಾಡು ವಿತರಣೆಗೆ ತೊಡಗುವುದೇ ? ನಿಜವಾದ ಭಕ್ತನಿಗೆ ಭಕ್ತಿಯೇ ಮುಖ್ಯ. ಪ್ರಸಾದ ವಿತರಣೆ ನಮ್ಮ ಆಚರಣೆಯ ಒಂದು ಭಾಗ ಎಂದು ನಾನು ಒಪ್ಪುತ್ತೇನೆ. ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಸರ್ಕಾರದ ಸಹಾಯವಿಲ್ಲದೆ ದೇವಸ್ಥಾನಗಳು ಹಬ್ಬ ಹರಿದಿನಗಳನ್ನು ಆಚರಿಸಿಲ್ಲವೇ? ಜನರು ಅಥವಾ ಭಕ್ತರು ಅದರ ಬಗ್ಗೆ ಚಿಂತಿಸುತ್ತಾರೆ. ಸರ್ಕಾರಕ್ಕೆ ತಲೆಕೆಡಿಸಿಕೊಳ್ಳಲು ಬೇರೆ ಸಮಸ್ಯೆಗಳಿಲ್ಲವೇ? ವೈಕುಂಠ ಏಕಾದಶಿಗೆ ಲಾಡು, ಶಿವರಾತ್ರಿಗೆ ಫಲಹಾರ, ಗಣೇಶನ ಹಬ್ಬಕ್ಕೆ ಮೋದಕ/ಕಡಬು ಹಂಚುತ್ತ ಕುಳಿತರೆ ನಮ್ಮ ರಾಜ್ಯದ ಭವಿಷ್ಯವೇನು? ಸರ್ಕಾರ ಜಪಿಸಬೇಕಾದದ್ದು ಅಭಿವೃದ್ಧಿಯ ಮಂತ್ರ; ತೋರಿಸಬೇಕಾಗಿದ್ದು ಕೆಲಸದಲ್ಲಿ ಶ್ರದ್ಧೆ ಮತ್ತು ಭಕ್ತಿ; ಹಂಚಬೇಕಾಗಿದ್ದು ಸಮೃದ್ಧ ಕರ್ನಾಟಕವೆಂಬ ಪ್ರಸಾದ. ಇನ್ನಾದರೂ ಎಚ್ಚೆತ್ತು ಕೊಳ್ಳುತ್ತೀರ ಯಡ್ಯುರಪ್ಪನವರೆ.
1 comment:
ನವೀನ್, ಅದು ಬರಿ ಲಾಡು ಅಲ್ಲ, ತಿರುಪತಿ ಲಾಡು ........(ಹಾಗಂತ ಮಂತ್ರಿಗಳೇ ಹೇಳಿದ್ದರೂಆಗಿನ ಪತ್ರಿಕೆಗಳನ್ನ ನೋಡಿ). ಲಾಡು ಹಂಚುವ ಅಗತ್ಯ ಇತ್ತೇ ಅನ್ನುವ ನಿಮ್ಮ ಸಂಶಯಕ್ಕೆ ನಮ್ಮ ಬ್ಲಾಗ್ ನಲ್ಲಿ ಉತ್ತರ ಕೊಡ್ತೇವೆ. ಆಗ ಇದರ ಹಿಂದಿನ ರಹಸ್ಯ ಬಯಲಾಗುತ್ತೆ. ನೋಡ್ತಾ ಇರಿ.
Post a Comment