Thursday, January 1, 2009

ಹೊಸ ವರುಷ ಮತ್ತು resolution ಗಳು

ನಾನು ಹೈಸ್ಕೂಲ್ ಮುಗಿಸುವವರೆಗೂ ಹೊಸವರುಷದ ಆಚರಣೆಯ ಸುದ್ದಿಗಳನ್ನ ದಿನಪತ್ರಿಕೆಗಳಲ್ಲಿ ಓದುತ್ತ ಇದ್ದೆ. ನಾನು ಇದ್ದ ಪರಿಸರಕ್ಕೆ ಹೊಸವರುಷದ ಆಚರಣೆಯ ಗಾಳಿ ತಗುಲಿರಲಿಲ್ಲ. ಪಿಯುಸೀ ಸೇರಿದ ನಂತರ ಹೊಸವರುಷದ ಸಂಭ್ರಮಾಚಾರಣೆಗಳನ್ನು ಹತ್ತಿರದಿಂದ ನೋಡುವ, ಪಾಲ್ಗೊಳ್ಳುವ ಅವಕಾಶಗಳು ದೊರೆತವು. ಮೊದಲು ಕುತೂಹಲವಿದ್ದರೂ, ನಂತರ ನನಗೆ ಸೆಲೆಬ್ರಶನ್ ನಲ್ಲಿ ಅಷ್ಟೇನೂ ಆಸಕ್ತಿ ಮೂಡಲಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಹೊಸ ವರುಷವನ್ನು ಸ್ವಾಗತಿಸುವ ಆಚರಣೆಗಳು excitement ತಂದಿಲ್ಲ. ಸ್ನೇಹಿತರೊಂದಿಗೆ ತಿಂದು, ಕುಡಿದು [ಎಲ್ಲರಿಗು ಅನ್ವಯಿಸುವುದಿಲ್ಲ], ಕಿರುಚಿ, ನರ್ತಿಸಿ, ತಲೆಹರಟೆ ಮಾಡಿ ಹೊಸ ವರುಷವನ್ನು ಬರಮಾಡಿಕೊಳ್ಳುವ ಬಗೆ ನನಗೆ ಅಷ್ಟೊಂದು ಆಸಕ್ತಿ ಇಲ್ಲ. ಆದರೆ ಇದು ನನ್ನ ಅಭಿಪ್ರಾಯವಷ್ಟೆ. ಬೇರೆಯವರ ಉತ್ಸಾಹವನ್ನು ಕಡಿಮೆ ಮಾಡುವಂತಹ ಮಾತುಗಳನ್ನು ನಾನು ಆಡೋದಿಲ್ಲ. ಆದರೆ ನನಗೆ ಇಲ್ಲಿಯವರೆಗೂ ಗಮನಿಸುತ್ತಾ ಬಂದಿರೋದು "New Year Resolution" ಗಳನ್ನು ಮಾಡುವ ಜನರನ್ನು. ಆ ದಿನದಿಂದ ಎಷ್ಟೋ ಜನ ತುಂಬ ಉತ್ಸಾಹದಿಂದ ಜೀವನವನ್ನು ನಡೆಸುವ ಅಥವಾ ಉತ್ಸಾಹದಿಂದ ಜೀವನದಲ್ಲಿ ನಡೆಯುವ ದಾರಿಗಳನ್ನು ಹುಡುಕುವ ಬಗ್ಗೆ ಸಂಕಲ್ಪ ತೊಡುತ್ತಾರೆ. ನಾನು ಯಾವುದೇ ರೀತಿಯಾದಂತಹ ರೆಸೋಲುಶನ್ ಗಳನ್ನು ಮಾಡದೆ ಇದ್ದರೂ ಹಲವರನ್ನು ಗಮನಿಸಿದ್ದೇನೆ. ಕೆಲವೊಂದು ಬಾರಿ ಇದು ತುಂಬ funny ಅನಿಸಿದರೂ ಅದು ಅವರು ನಡೆಸಿಕೊಂಡು ಹೋಗುವವರೆಗೂ ಗಂಭೀರ ಸಂಗತಿಯೆ. ತುಂಬ ಸಾಮಾನ್ಯವಾದ resolution ಗಳಲ್ಲಿ ಮುಖ್ಯವಾದವು ಅಂದ್ರೆ

೧. ಸಿಗರೇಟು ಸೇದೋದು ಬಿಡ್ತೀನಿ .
[ಧೂಮಪಾನ ವ್ಯಸನಿಗಳ ಸಂಕಲ್ಪ. ಹೆಚ್ಚಿನವರಲ್ಲ, ಕೆಲವರು.]

೨. ಇವತ್ತಿಂದ (ಅಥವ ನಾಳೆಯಿಂದ,)ಬೇಗ ಏಳ್ತೀನಿ.
[ಸೂರ್ಯವಂಶಸ್ತರು ಮಾಡೋ ಸಂಕಲ್ಪ]

೩. ಕಡಿಮೆ ಸುಳ್ಳು ಹೇಳ್ತೀನಿ.

೪. ದುಂದು ವೆಚ್ಚ ಮಾಡೋದಿಲ್ಲ.

೫. ಟಿವಿ ನೋಡೋದು ಕಮ್ಮಿ ಮಾಡ್ತೀನಿ.

೬. ಓದೋದರ ಬಗ್ಗೆ ಗಮನ ಕೊಡ್ತೀನಿ.
[ವಿದ್ಯಾರ್ಥಿಗಳು ಮಾಡೋ ಸಂಕಲ್ಪ]
ಇತ್ಯಾದಿ ಇತ್ಯಾದಿ.
ಈ ಎಲ್ಲ resolution ಗಳು [ಶೇಕಡ ೮೫%] ಸ್ವಲ್ಪ ದಿನ ಮಾತ್ರ ನಡೆಯೋದು, ನಾನು ಗಮನಿಸಿದ ಹಾಗೆ. ಕ್ರಮೇಣ ಅವರಿಗೆ ಗೊತ್ತಿಲ್ಲದೇನೆ ಈ ಅಭ್ಯಾಸಗಳು, ಚಟಗಳು ಅವರಲ್ಲಿ ಪುನಃ ಸ್ಥಾಪನೆಗೊಂಡಿರುತ್ತವೆ. ನನಗೆ funny ಅಂತ ಅನಿಸೋದು ಇದೆ ವಿಚಾರ.

ಉದಾಹರಣೆಯಾಗಿ ತಗೊಂಡರೆ ' ಸಿಗರೇಟು ಬಿಡ್ತೀನಿ ' ಅನ್ನೋ resolution. ದಿನ ನಾಲ್ಕು ಸೇದೊದ್ರಲ್ಲಿ ಮೊದಲ ವಾರ ಎರಡು, ಎರಡನೇ ವಾರ ಒಂದು ಹೀಗೆ gradually ಕಡಿಮೆ ಮಾಡ್ತಾ ಪೂರ್ತಿ ಬಿಟ್ಟು ಬಿಡ್ತೀನಿ ಅನ್ನೋ ಉತ್ಸಾಹ ಮೊದಲವಾರದ ಕೊನೆಯವರೆಗೂ ಇರುತ್ತೆ. ಮನಸ್ಸು ಮೊದಲವಾರ ಅಷ್ಟೇನೂ ತರ್ಲೆ ಮಾಡೋಲ್ಲ. ಯಾಕೆಂದರೆ ಎರಡು ಸಿಗರೇಟು ಕಮ್ಮಿ ಮಾಡಿದರು ಇನ್ನೆರಡು ಇರುತ್ತಲ್ಲ ಅನ್ನೋ ಒಳ ಸಮಾಧಾನ. ಆದರೆ ಚಡಪಡಿಕೆ, ಅಸಹನೆ ಶುರುವಾಗೋದು ಎರಡು ವಾರಗಳ ನಂತರ. ಒಂದೇ ಒಂದು ಸಿಗರೆಟಿನಲ್ಲಿ ದಿನವೆಲ್ಲ ಕಳೆಯಬೇಕಲ್ಲ ಎಂಬ ನಿರಾಸೆ. ಆ ಒಂದು ಸಿಗರೇಟು ಮುಟ್ಟುವವರೆಗೆ ಅಪರಿಮಿತ ಉತ್ಸಾಹ, ಸೇದುವಾಗ ಮಹದಾನಂದ, ಮುಗಿಯುವ ಹೊತ್ತಲ್ಲಿ ನಿರಾಶಾವಾದ; ಯಾಕಾದರೂ ಸಿಗರೇಟು ಬಿಟ್ಟೆ ಅಂತ. ಮುಂದೆರಡು ವಾರಗಳು ಮನಸ್ಸು ಕುಡಿದ ಕೋತಿಯಾಗಿರತ್ತೆ. ನಾಲ್ಕನೆಯ ವಾರದ ಹೊತ್ತಿಗೆ ನಮ್ಮ resolution ಗುಡ್ಡ ಹತ್ತುತ್ತ ಇರುತ್ತೆ. ಅದೊಂತರ ಅಸ್ತಮಿಸೋ ಸೂರ್ಯನನ್ನು ಕಡಲ ದಂಡೆಯಲ್ಲಿ ನೋಡೋ ಹಾಗೆ. ನಮ್ಮ resolution ಆನ್ನೋ ಸೂರ್ಯ ಮರೆವಿನ ಮಹಾಸಾಗರದಲ್ಲಿ ಇಂಚಿಂಚಾಗಿ ನಮಗೆ ಗೊತ್ತಿಲ್ಲದ ಹಾಗೆ ಮುಳುಗಿರತ್ತೆ. ಈ ಸೂರ್ಯನ ಆಗಮನ ಆಗೋದು ಅದೇ ವರುಷದ ಕೊನೆಯಲ್ಲಿ.

ಇನ್ನೊಂದು ಉದಾಹರಣೆಯೆಂದರೆ ' ಬೆಳಿಗ್ಗೆ ಬೇಗ ಏಳ್ತೀನಿ '. ಈ resolution ಮಾಡೋರು ತಮ್ಮ ದೀರ್ಘವಾದ ಶಯನಯಾತ್ರೆಯಿಂದ office ಗೆ, ಶಾಲೆಗೆ/ ಕಾಲೇಜಿಗೆ ತಡವಾಗಿ ಹೋಗಿ, ಬಾಸ್/ಟೀಚರ್ ಗಳಿಂದ ಉಗಿಸಿಕೊಳ್ಳೋರು. ಅವರಿಗೂ ತಮ್ಮ ಯಾತ್ರೆಯ ದೆಸೆಯಿಂದಲೇ ಇದೆಲ್ಲ ಎಂದು ತಿಳಿದಿದ್ದರೂ ಅದನ್ನು ಬಿಡಲು ಆಗದಂತಹ ಸೋಮಾರಿತನ. ನಿದ್ರಾ ದೇವಿಯ ಭಕ್ತಿಯಲ್ಲಿ ಮುಳುಗಿ ಏಳಲಾಗದೆ ದಿನವು ಕೈ ಹಿಸುಕಿಕೊಳ್ಳುವ ಜನ ವರ್ಷದ ಕೊನೆಯಲ್ಲಿ ಮಾಡುವ ಒಂದು ಕೊನೆಯ ಪ್ರಯತ್ನವೇ ಈ resolution. ಈ resolution ಅಸಫಲವಾಗಲು "ಹೊಸವರುಷ ಚಳಿಗಾಲದಲ್ಲಿ ಬರೋದೆ" ಮುಖ್ಯ ಕಾರಣ. ಜನವರಿ ಒಂದರ ಬೆಳಿಗ್ಗೆ resolution ನೆನೆಸಿಕೊಂಡು ಬೇಗ ಎದ್ದು , ತಲುಪುವ ಸ್ಥಳ ಬೇಗ ತಲುಪಿ, ಮಹಾಯುದ್ಧವನ್ನು ಗೆದ್ದಂತೆ ಬೀಗಿ, ಮಾರನೆಯದಿನವು ಬೇಗ ಏಳುವ ಆಶಯದೊಂದಿಗೆ ಮಲಗಿ, ಮರುದಿನ ಬೆಳಗ್ಗಿನ ಚುಮು ಚುಮು ಚಳಿಯಲ್ಲಿ, ಇನ್ನೊಂದು ಐದು ನಿಮಿಷ ಮಲಗಿದರೆ ಏನಾಗುತ್ತೆ, ನಿನ್ನೆ ತುಂಬ ಬೇಗ ಎದ್ದಿದ್ದೆ ಎಂದು ಶುರುವಾಗಿ, ವಾರ ಕಳೆಯುವ ಹೊತ್ತಿಗೆ resolution ಇವರ ಜೊತೆ ಬೆಚ್ಚಗೆ ಮಲಗಿರತ್ತೆ.


ಮನುಷ್ಯನಿಗೆ, ಕೆಟ್ಟ ಅಭ್ಯಾಸಗಳು, ಚಟಗಳು ಬೇಗನೆ ಹೊಂದಿಕೊಳ್ಳುತ್ತವೆ ಅಥವಾ ಅವನು ಅವುಗಳಿಗೆ ಬೇಗ ಹೊಂದಿಕೊಳ್ಳುತ್ತಾನೆ. ಆದರೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಮತ್ತು ತುಂಬ ಪ್ರಯತ್ನದ ಅಗತ್ಯ ಇದೆ. ಆದರೆ ನಮಗೆ ಅವಕಾಶ ತುಂಬ ಇದ್ದರೂ ಪ್ರಯತ್ನ ಸ್ವಲ್ಪ ಕಡಿಮೆ ಆಗೋದ್ರಿಂದ ಹಲವಾರು ಒಳ್ಳೆಯ ಅಭ್ಯಾಸಗಳು ನಮ್ಮಲ್ಲಿ ಸೇರಿಕೊಳ್ಳುವ ಅವಕಾಶದಿಂದ ವಂಚಿತಗೊಳ್ಳುತ್ತವೆ .

ಅದು ಏನೆ ಆಗಲಿ
ಎಲ್ಲರಿಗು ೨೦೦೯ ಸುಖ, ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿ ತರಲಿ.

ಶುಭಾಶಯಗಳೊಂದಿಗೆ.

--ನವೀನ ಕೆ.ಎಸ್ಸ್.

No comments: