Friday, July 24, 2009

ಹೀಗೊಂದು ಮಾತುಕತೆ

ಹೀಗೆ ಒಂದು ದಿನ ಅನ್ನ ಮಾಡಲು ಬೇಜಾರಾಗಿ ಬೆಳಿಗ್ಗೆ ಉಳಿದಿದ್ದ ದೋಸೆ ಹಿಟ್ಟಿಗೆ ಸ್ವಲ್ಪ ಗೋದಿಹಿಟ್ಟು ಬೆರೆಸಿ ಈರುಳ್ಳಿ ಕೊಚ್ಚಿ ಹಾಕಿ ದೋಸೆ ಮಾಡಲು ರೆಡಿಯಾಗುತ್ತಿದ್ದೆ. ಮೊಬೈಲ್ ರಿಂಗಣಿಸಿದ ಸದ್ದು ಕೇಳಿ ಮಾಡುತ್ತಿದ ಕೆಲಸ ಅಲ್ಲಿಯೇ ಬಿಟ್ಟು ಕಾಲ್ ಅಟೆಂಡ್ ಮಾಡಲು ಹಾಲ್ ಗೆ ಓಡಿದೆ. ನನ್ನ ಗೆಳತಿಯ ಕರೆಯಾಗಿತ್ತದು. ನಮ್ಮಿಬ್ಬರ ಸಂಭಾಷಣೆ

ಗೆಳತಿ: ಏನೋ ಮಾಡ್ತಾ ಇದೀಯ?

ನಾನು: ದೋಸೆ ಹಿಟ್ಟು ಉಳಿದಿತ್ತು..................ಅದಿಕ್ಕೆ ಈರುಳ್ಳಿ ಕೊಚ್ಚಿ ಹಾಕಿ ದೋಸೆ ಮಾಡ್ತಿದೀನಿ.

ಗೆಳತಿ: ಎಷ್ಟು ಈಸಿನೋ ನಿನ್ನ ಲೈಫು..........

ನಾನು: ಅದ್ರಲ್ಲಿ ಲೈಫು ಈಸಿ ಆಗೋದೇನು ಬಂತು ಹುಡುಗಿ..........

ಗೆಳತಿ: ಮತ್ತಿನ್ನೇನೋ ನಮ್ ತರ ದಿನ ಇಂತದೇ ಅಡಿಗೆ ಆಗ್ಬೇಕೂಂತ ಏನಾದ್ರು ಇದ್ಯ.........?

ನಾನು: ದಿನ ಒಂದೊಂದು ತರ ಅಡಿಗೆ ಇದ್ರೆ ತಿನ್ನೋಕೆ ಚೆನ್ನಾಗಲ್ವೇನೆ.........!

ಗೆಳತಿ: ತಿನ್ನೋರಿಗೆ ಚಂದ.............ಆದ್ರೆ ಮಾಡೋರಿಗೆ........?

ನಾನು: ಅಂದ್ರೆ.....ನೀನು ದಿನ ಅಡಿಗೆ ಮಾಡ್ಬೇಕು ಅದ್ಕೆ ನಿಂಗೆ ಕಷ್ಟ ಅಂತಾನ?

ಗೆಳತಿ: ಹೌದು....ನಿಂತರ ಇದ್ರೆ ಆರಾಮು ನೋಡು....

ನಾನು: ನನ್ ಕಷ್ಟ ನನಗೆ.....ನಿಂಗೇನು ಗೊತ್ತು....

ಗೆಳತಿ: ನಿಂಗೇನೋ ಕಷ್ಟ. ಬೇಕಾದಲ್ಲಿಗೆ ಹೋಗ್ತಿಯ, ಬರ್ತೀಯ, ಹೇಳೋರು ಕೇಳೋರು ಯಾರು ಇಲ್ಲ.....ಹೆಂಗೆ ಬೇಕಾದ್ರೆ ಹಂಗೆ ಇರ್ತಿಯ.....ಇನ್ನೇನು.........

ನಾನು: ಅಯ್ಯೋ ಪಾಪಿ.........ನಿನಗೇನೆ ಕಡಿಮೆ ಆಗಿರೋದೀಗ...........!!?? ನಿನಗಿಷ್ಟವಾದ ಹಾಗೇನೇ ಇದ್ದೀಯಲ್ಲೇ.

ಗೆಳತಿ: ಆದರೂ....ಏನೋ ಒಂಥರಾ....ಕಣೋ.....ಮದುವೆಗಿಂತ ಮೊದಲೇ ಚೆನ್ನಾಗಿತ್ತು.......ಅನ್ಸುತ್ತೆ.......

ನಾನು: ಅದೆಲ್ಲ ಏನಿಲ್ಲ ಬಿಡು. ನಿನ್ನ ಮಾತು ಕೇಳೋಕೆ....ಕೇರ್ ಮಾಡೋಕೆ ಒಬ್ರು ಇದಾರಲ್ವ ಅದು ಮುಖ್ಯ. ನನಗೆ ಹೋಟೆಲ್ ಊಟ ಆಗಲ್ಲ. ಸೊ ಮನೇಲಿ ನಾನೇ ಬೇಯಿಸಿಕಳೋದು ತಪ್ಪಿಲ್ಲ. ಅಮ್ಮ ಇಲ್ಲಿಗೆ ಬರೋ ಪರಿಸ್ಥಿತಿ ಇಲ್ಲ. ಯಾರ ಹತ್ರ ಏನಾದ್ರು ಹೇಳಿಕೊಳ್ಳೋಣಾನ್ದ್ರು ಯಾರೂ ಇಲ್ಲ. ಹಾಗಾಗಿ ನಾನು ಅಂದ್ರೆ.........ಸಮಸ್ತ ಬ್ರಮ್ಹಚಾರಿಗಳ ಪ್ರತಿನಿಧಿ ಸುಮ್ಮನೆ ತಿರುಗ್ತಾನೆ ಇರ್ತೀನಿ. Most of the time it is waste..............ಆ ಸಮಸ್ಯೆ ನಿನಗಿಲ್ಲ ನೋಡು.

ಗೆಳತಿ: ನಮ್ಮನೇನಲ್ಲಿ ನಮ್ ಮಾವನಿಗೆ ಒಂಥರಾ ಅಡಿಗೆ, ನಮ್ ಅತ್ತೆಗೆ ಒಂಥರಾ ಅಡಿಗೆ, ಇವ್ರಿಗೆ ಒಂದು ರೀತಿ. ಕೆಲವೊಂದು ಸಲ ಪೇಷನ್ಸ್ ಕಳೆದು ಹೋಗ್ಬಿಡತ್ತೆ ಕಣೋ.

ನಾನು: ಇಪ್ಪತ್ನಾಕು ಗಂಟೇನು ಅಡಿಗೆನೆ ಮಾಡ್ತಾ ಇರ್ತೀಯ? ಇಲ್ಲ ತಾನೇ. ನೀನು ಬೇರೆ ಜವಾಬ್ದಾರಿಗಳನ್ನು ನಿರ್ವಹಿಸ್ತ ಇಲ್ವಾ. ನಿನ್ನ ಹಲವಾರು ಜವಾಬ್ದಾರಿಗಳಲ್ಲಿ ಅಡಿಗೆನು ಒಂದು ಅಷ್ಟೇ. ಇಟ್ ಇಸ್ ಜಸ್ಟ್ ಪಾರ್ಟ್ ಆಫ್ ಯುವರ್ ಲೈಫ್. ಅದೇ ಲೈಫ್ ಅಲ್ವಲ್ಲ.

ಗೆಳತಿ: ಫಿಲಾಸಫಿ ಹೇಳೋದು ಸುಲಭ ಕಣೋ........ಬಂದು ಮಾಡು ಗೋತ್ತಾಗುತ್ತೆ.

ನಾನು: ನೋಡು ಹುಡುಗಿ..........ಸಮಸ್ಯೆಗಳು ಎಲ್ಲರಿಗು ಇದ್ದೆ ಇದೆ. ಅದರ ಬಗ್ಗೆನೇ ಯೋಚಿಸ್ತಿದ್ರೆ ನಮಗಿಂತ ಕಷ್ಟಪಡೋರು ಯಾರೂ ಇಲ್ವೇನೋ ಅನ್ನೋ ಭಾವನೆ ಬಲವಾಗಿಬಿಡತ್ತೆ . ಮದುವೆಯಾದವರಿಗೆ ಒಂಥರಾ, ಆಗದಿದ್ದವರಿಗೆ ಒಂಥರಾ ಅಷ್ಟೇ. ಸಮಸ್ಯೆಗಳ ಬಗ್ಗೆ ಗಮನ ಹರಿಸೋದು ಬಿಟ್ಟು ಬೇರೆ ವಿಚಾರಗಳತ್ತ ಮನಸ್ಸು ಹರಿಸಿದರೆ ಮನಸ್ಸು ತಿಳಿಯಾಗಿರುತ್ತೆ.

ಗೆಳತಿ: ಅದೇನೋ ಕಣೋ ನನಗಂತೂ ಅರ್ಥ ಆಗಲ್ಲ. ಸರಿಯಪ್ಪ ನಾನು ಫೋನ್ ಇಡ್ತೀನಿ. ಮತ್ಯಾವಗಲಾದ್ರು ಮಾಡ್ತೀನಿ.

ನಾನು: ಸರಿ ಹುಡುಗಿ.........ಟೇಕ್ ಕೇರ್ ಬೈ ಬೈ.

ಗೆಳತಿ: ಓಕೆ.ಬೈ ಬೈ.

Thursday, July 23, 2009

ಅವ್ರು.........

ಇತ್ತೀಚೆಗಷ್ಟೆ ಮದುವೆಯಾದ ಗೆಳತಿಯೊಬ್ಬಳು ಅಚಾನಕ್ಕಾಗಿ ಸಿಕ್ಕಿದ್ದಳು. ಒಂದಿಷ್ಟು ಉಭಾಯಕುಶಲೋಪರಿಗಳ ನಂತರ ಅವಳು ಮಾತಾಡಿದ್ದು ಅವಳ ಗಂಡನ ಬಗ್ಗೆ ಬಿಟ್ಟರೆ ಇನ್ನೇನು ಅಲ್ಲ. ಪ್ರತಿ ಮಾತು ಅವನ ಸುತ್ತಲೇ ಗಿರಕಿ ಹೊಡೆದಿತ್ತು. "ನನ್ನ ಗಂಡನಿಗೆ ಬದನೇಕಾಯಿ ಆಗೋಲ್ಲ" ಅನ್ನೋ ವಿಷಯದಿಂದ ಶುರುವಾಗಿ "ಅವಳು ಬೇರೆಯವರ ಜೊತೆ ಫೋನಿನಲ್ಲಿ ಮಾತಾಡೋದು ಅವನಿಗೆ" ಇಷ್ಟವಾಗೋಲ್ಲ ಅನ್ನೋತನಕ ಮುಂದುವರೆದಿತ್ತು. ಇದು ಇವಳೊಬ್ಬಳ ಕೇಸ್ ಅಲ್ಲ. ಸಾಮಾನ್ಯವಾಗಿ ಮದುವೆಯಾದ ಶುರುವಿನಲ್ಲಿ ಹೆಚ್ಚುಕಡಿಮೆ ಎಲ್ಲ ಹೆಣ್ಮಕ್ಕಳ ವರ್ತನೆ ಹೀಗೆ ಇರತ್ತೆ. ಅವರು ಹೇಳುವ ಮಾತುಗಳ ತುಣುಕುಗಳು,


೧) ಅವ್ರಿಗೆ ಜೀನ್ಸ್ ಪ್ಯಾಂಟ್ ಅಂದ್ರೆ ತುಂಬಾ ಇಷ್ಟ; ಅದನ್ನೇ ಯಾವಾಗಲು ಹಾಕ್ಕೋತಾರೆ.
೨) ಇಸ್ತ್ರಿ ಮಾಡದ ಶರ್ಟ್ ಹಾಕೋದೆ ಇಲ್ಲ. ನನಗಂತೂ ಇಸ್ತ್ರಿ ಮಾಡೋದೇ ಕೆಲಸ ಆಗ್ಬಿಟ್ಟಿದೆ.
೩) ಅವ್ರು ನಂತಾರಾನೆ ತುಂಬಾ ಕ್ಲೀನ್.
೪) ಅವ್ರಿಗೆ ಗರ್ಲ್ ಫ್ರೆಂಡ್ಸ್ [ಫ್ರೆಂಡ್ಸ್ ಹೂ ಆರ್ ಗರ್ಲ್ಸ್] ತುಂಬಾ ಜಾಸ್ತಿ.
೫) ಅವ್ರು ಮನೆಗೆ ಬಂದ ತಕ್ಷಣ ನಾನು ಅವ್ರ ಮುಂದೇನೆ ಇರಬೇಕು.
೬) ಅವ್ರು ಬದನೇಕಾಯಿ ಸಾಂಬಾರ್ ತಿನ್ನಲ್ಲ...............ಆದ್ರೆ ಪಲ್ಯ ತಿಂತಾರೆ.
೭) ಅವ್ರಿಗೆ ಹೃತಿಕ್ ರೋಶನ್ ಅಂದ್ರೆ ತುಂಬಾ ಇಷ್ಟ.
೮) ಅವ್ರಿಗೆ ಮೊಬೈಲ್ ಚೇಂಜ್ ಮಾಡೋ ಹುಚ್ಚು. ಮೊನ್ನೆ ಮದುವೆಗಿಂತ ನಾಲ್ಕು ತಿಂಗಳು ಮೊದಲು ತಗೊಂಡ ಮೊಬೈಲ್
ಫೋನ್ ಮಾರಿ ಹೊಸಾದು ತಗೊಂದಿದಾರೆ.
೯) ಟೈಮಿಗೆ ಸರಿಯಾಗಿ ತಿಂಡಿ ಆಗ್ಲಿಲ್ಲಾಂದ್ರೆ ಸಿಕ್ಕಾಪಟ್ಟೆ ಕೋಪ ಬರುತ್ತೆ ಅವ್ರಿಗೆ.
೧೦) ತಣ್ಣನೆ ಅನ್ನ ತಿನ್ನೋಲ್ಲ..........ಯಾವಾಗಲೂ ಬಿಸಿಬಿಸಿನೆ ಇರಬೇಕು.

ಅರೆ ಯಾರ್ give me a break [ಅಂತ ಹೇಳ್ಬೇಕು ಅನ್ನಿಸುತ್ತಿಲ್ವ ]. ಮದುವೆಗೆ ಮುಂಚೆ ನಮ್ಮ ಜೊತೆ ತರ್ಲೆ ಮಾಡಿಕೊಂಡು, ಕಂಡಿದ್ದಕ್ಕೆಲ್ಲ ವಾದ ಮಾಡ್ತಾ, ಎಲ್ಲರನ್ನು ರೆಗಿಸಿಕೊಂಡಿದ್ದ ಹುಡುಗಿ ಇವಳ? ಅನ್ನೋವಷ್ಟು ಬದಲಾವಣೆ. ಇದು ಮದುವೆಯಾದ ಇನ್ನು ಸರಿಯಾಗಿ ಹೇಳ್ಬೇಕೂಂದ್ರೆ ಹೊಸದಾಗಿ ಮದುವೆಯಾದ ಹೆಣ್ಮಕ್ಕಳನ್ನ ಗಮನಿಸಿದರೆ ತಿಳಿಯುವಂತ ವಿಚಾರ. ಅದೇ ನವವಿವಾಹಿತನನ್ನ ಗಮನಿಸಿ ಅವನು ಅಷ್ಟೇನೂ ತನ್ನ ಹೆಂಡತಿಯ ಬಗ್ಗೆ ಹೇಳೋಲ್ಲ [ಹೇಳಬಾರದು ಅಂತ ತೀರ್ಮಾನಿಸಿಕೊಂಡಿರ್ತಾರೆ ಅನ್ಸುತ್ತೆ]. ಅವನ ಮಾತುಗಳು ಎಂದಿನಂತೆ ನಾರ್ಮಲ್ ಆಗಿರ್ತವೆ. ಇನ್ನು "ಹ್ಯಾಗಿದೆ ಲೈಫು ಮದುವೆ ಆದ ಮೇಲೆ" ಅಂತ ಬಿಡಿಸಿ ಕೇಳಿ ಮಾಮೂಲು ಕಣೋ ಅಂತ ವಿಶೇಷ ಏನು ಇಲ್ಲ ಅಂತಾನೋ...........ನೆಂಟರ ಮನೆಗೆ / ಫಂಕ್ಷನ್ ಗಳಿಗೆ ಹೋಗೋದು ಜಾಸ್ತಿ ಆಗಿದೆ ಅಂತಾನೋ ಅವನು ಹೇಳ್ತಾನೆ. ಮದುವೆಯ ಸಂಭ್ರಮ ಕೆಲವಾರು ವರುಷ ಹೊತ್ತು ತಿರುಗೊದ್ರಲ್ಲಿ ಹುಡುಗಿಯರಿಗೆ ಇರೋ ಆಸಕ್ತಿ ಹುಡುಗರಿಗೆ ಇರೋದಿಲ್ಲ. ಹೊಸ ಜನ, ಹೊಸ ಮನೆ, ಹೊಸ ಪರಿಸರ [ಮತ್ತು ಹೊಸ ಅನುಭವ] ಹುಡುಗಿಯರ ಸಂಭ್ರಮವನ್ನು ಜತನದಿಂದ ಕಾಪಾಡಿಕೊಂಡು ಬಾರೋ ಹಾಗೆ ಮಾಡ್ತಾವೆಂತ ನನ್ನ ಅನಿಸಿಕೆ.

Thursday, July 16, 2009

Pod Slurping - ಮಾಹಿತಿ ಕಳ್ಳತನದ ಹೊಸ ರೂಪ

ಮಾಹಿತಿ ಸಂಗ್ರಹಣೆಗೆ ಉಪಯೋಗಿಸುತ್ತಿದ್ದ ಸ್ಮರಣ ಕೋಶ [ಮೆಮೊರಿ] ಸಾಧನಗಳಲ್ಲಿ ಪ್ರಮುಖವಾದವು floppy, CD-ROm/DVD, Hard Disk. ನಾನು ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ floppy ಅತ್ಯಂತ ಜನಪ್ರಿಯ, ಅಗ್ಗದ ಸಾಧನವಾಗಿತ್ತು. ನಂತರ ಆರಂಭವಾಗಿದ್ದು CD-ROm/DVD ಗಳ ಭರಾಟೆ. ಇದನ್ನೂ ಹಿಂದೆ ಹಾಕಿ ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವುದು Pen Drive ಗಳೆಂಬ ನಮ್ಮ ಹೆಬ್ಬೆರಳು ಗಾತ್ರದ ಸಾಧನಗಳು. [Pen Drive is also known as thumb drive, memory stick, USB flashdrive, key drive, jumpdrive etc]. ಇದಲ್ಲದೆ apple ಕಂಪೆನಿಯವರು ಹೊರಬಿಟ್ಟ iPod ಎಂಬ mp3 ಸಂಗೀತ ಕೇಳುವ ಸಾಧನ ಕೂಡ ಸಂಗೀತದ ಕಡತಗಳನ್ನಲ್ಲದೆ ಬೇರೆ ಮಾಹಿತಿ ಸಂಗ್ರಹಣಕ್ಕೂ ಕೂಡ ಬಳಸಬಹುದಾಗಿದೆ. [ ಸೆಪ್ಟೆಂಬರ್ ೨೦೦೮ ರ ವರೆಗೆ ಸುಮಾರು ೧೭೩,೦೦೦,೦೦೦ ಗಳಷ್ಟು ಐಪಾಡ್ ಗಳು ಮಾರಾಟಗೊಂಡಿವೆ.] ಇತ್ತೀಚಿಗೆ ಮಾರುಕಟ್ಟೆ ಪ್ರವೇಶಿಸಿರುವ mp3 ಪ್ಲೇಯರ್ ಗಳು ಮತ್ತು USB Stick ಗಳ ಸ್ಮರಣ ಸಾಮರ್ಥ್ಯ ಹೆಚ್ಚಿದ್ದು, ಅವುಗಳ ಗಾತ್ರ ನಂಬಲಸಾಧ್ಯವಾದಷ್ಟು ಚಿಕ್ಕದಾಗಿದೆ. ಮಾಹಿತಿ ವರ್ಗಾವನ್ರ್ ವೇಗ ಸಹ ಹೆಚ್ಚಿದೆ. ಮುಗ್ಧನಂತೆ ಕಾಣೋ ನಿಮ್ಮ ಈ portable storage device ತನ್ನಷ್ಟೇ ಸಾಮರ್ಥ್ಯದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ತನ್ನ ತೆಕ್ಕೆಗೆ ವರ್ಗಾಯಿಸಿಕೊಳ್ಳಬಲ್ಲದಾಗಿದೆ. ಉದಾಹರಣೆಗೆ ನಿಮ್ಮಲ್ಲಿ 60GB pen drive ಅಥವಾ mp3 player ಇದ್ದರೆ 60GB ಯಷ್ಟು ಕಾರ್ಪೋರೆಟ್ ಮಾಹಿತಿ / ಇನ್ನ್ಯಾವುದೇ ಮಾಹಿತಿ ಮಿಂಚಿನ ವೇಗದಲ್ಲಿ ನಿಮ್ಮ ಸಾಧನಕ್ಕೆ ವರ್ಗಾಯಿಸಬಹುದು.

ಈ ಸಾಧನಗಳ ಉಪಯೋಗ ಅನೇಕ ಕಂಪೆನಿಗಳಿಗೆ, ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ. Data Leakage, Data Ciphering ಎಂಬ ಮಾಹಿತಿ ಕಳ್ಳತನದ ಪ್ರಕಾರಗಳಿಗೆ Pod Slurping ಎನ್ನುವುದು ಸೇರ್ಪಡೆಗೊಂಡಿದೆ. slurp [= copy] - ನಕಲು. Pod Slurping ಎಂಬ ಪದ portable storage device ಗಳನ್ನು [Pen Drive, iPod ಇತ್ಯಾದಿ] ಉಪಯೋಗಿಸಿಕೊಂಡು ಬಹುಮುಖ್ಯ/ಅತಿಸೂಕ್ಷ್ಮ ಮಾಹಿತಿ ಕದಿಯುವುದು ಎಂದು ವಿವರಿಸಬಹುದು. ಎಲ್ಲ ಮಾಹಿತಿ ಹೊತ್ತೊಯ್ಯುವ ಸಾಧನಗಳು ಉದಾಹರಣೆಗೆ ಡಿಜಿಟಲ್ ಕ್ಯಾಮರ, ಮೊಬೈಲ್ ಫೋನ್, PDA, mp3 player ಗಳು Pod Slurping ಗೆ ಬಳಸಲ್ಪಡುತ್ತವೆ. ಇದೊಂದು ಸರಳ ಯಾಂತ್ರಿಕ ವಿಧಾನವಾಗಿದ್ದು ಯಾವುದೇ ರೀತಿಯಾದಂತಹ ತಾಂತ್ರಿಕ ಕೌಶಲ್ಯ ಇದಕ್ಕೆ ಬೇಕಾಗಿಲ್ಲ. ಕಾರ್ಪೋರೆಟ್ / ಸರ್ಕಾರಿ ಸಂಸ್ಥೆಗಳ ಮಾಹಿತಿಯ ಮೇಲೆ ಕಣ್ಣಿಟ್ಟಿರುವ ಯಾವುದೇ ವ್ಯಕ್ತಿ ಹಾಗೆ ಸುಮ್ಮನೆ ಓಡಾಡುತ್ತಲೇ / ಹಾಡು ಆಲಿಸುತ್ತಲೇ ಮಾಹಿತಿಯನ್ನು ಹೀರಬಹುದು. ಸರಿಸುಮಾರು 100MB ಯಷ್ಟು word, excel, ppt, pdf, txt ಕಡತಗಳನ್ನು ಎರಡು ನಿಮಿಷಗಳೋಳಗಾಗಿ ನಕಲು ಮಾಡಬಹುದು.

ಮಾಹಿತಿ ಕಳ್ಳತನ ಹೊರಗಿನ ವ್ಯಕ್ತಿಗಳಿಂದಲೇ ಆಗಬೇಕೆಂದೇನಿಲ್ಲ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅತೃಪ್ತ ಕೆಲಸಗಾರನಿಂದಲೂ ಇಂತಹ ಬೆದರಿಕೆ ಬರಬಹುದು. ಯಾಕೆಂದರೆ ಈ ಮಾಹಿತಿ ಅನೇಕ ವಿಧಗಳಲ್ಲಿ ಉಪಯೋಗಕ್ಕೆ ಬರುತ್ತದೆ. Engineering plans, tender, price list, source code, data dase scheme, sound files, lyrics etc ಮಾಹಿತಿಗಳಿಂದ ಕದ್ದವನಿಗೆ ಲಕ್ಷ ಲಾಭ ತಂದುಕೊಟ್ಟರೆ ಸಂಸ್ಥೆಗೆ ಕೋಟಿಗಟ್ಟಲೆ ನಷ್ಟ ಉಂಟುಮಾಡುತ್ತದೆ. ಇಂದಿನ ಸ್ಪರ್ಧಾತ್ಮಕ ಉಗದಲ್ಲಿ ಈ ಮೇಲ್ಕಂಡ ಮಾಹಿತಿಗಲೆಲ್ಲವು ಒಂದು ಸಂಸ್ಥೆಯ / ವ್ಯಕ್ತಿಯ ವಿರೋಧಿಗಳಿಗೆ ಮೇಲುಗೈ ಸಾಧಿಸಲು ಸಹಾಯ ಮಾಡುತ್ತವೆ. ಉತ್ತಮ ಹುದ್ದೆಯಲ್ಲಿರುವ ಯಾವುದೇ ಅತೃಪ್ತ ಕೆಲಸಗಾರ ಅತಿಸೂಕ್ಷ್ಮ ಮಾಹಿತಿಗಳನ್ನು ಹೊತ್ತೊಯ್ದು ಪ್ರತಿಸ್ಪರ್ಧಿಗಳಿಗೆ ಮಾರಿಕೊಳ್ಳುವಂತಹ ಸಂಧರ್ಭಗಳಿಗೇನು ಕಡಿಮೆ ಇಲ್ಲ. Pod Slurping ಇನ್ನಷ್ಟು ದೊಡ್ಡದಾದ ಮಾಹಿತಿ ಕಳ್ಳತನದ ವಿದ್ಯಮಾನ ಆಗುವ ಮೊದಲು portable storage control poplicy ಯನ್ನು ತರಲು ಕಾರ್ಪೊರೇಟ್ ಸಂಸ್ಥೆಗಳ ಜೊತೆಗೂಡಿ ಸರ್ಕಾರ ಪ್ರಯತ್ನಿಸುತ್ತದೆಯೋ ಕಾದುನೋಡಬೇಕು.

Friday, July 3, 2009

ಕಬ್ಬಡ್ಡಿ ಚಿತ್ರ ವಿಮರ್ಶೆ

ಇತ್ತೀಚಿಗೆ ಬಂದ ಕನ್ನಡ ಚಿತ್ರಗಳಿಗೆ ಹೋಲಿಸಿದರೆ ಕಬ್ಬಡ್ಡಿ ಒಂದು ವಿಭಿನ್ನ ಪ್ರಯತ್ನ. ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಕಬ್ಬಡ್ಡಿ ಜನಪ್ರಿಯ ಕ್ರೀಡೆ. ನಿರ್ದೇಶಕರು ಇದರ ಮಹತ್ವವನ್ನು ತಿಳಿದೇ ಪ್ರೇಮಕಥೆಯನ್ನು ಕಬ್ಬಡ್ಡಿಯ ಹಿನ್ನೆಲೆಯಲ್ಲಿ ಹೇಳಲು ಹೊರಟಿದ್ದಾರೆ. ಮೂಟೆ ಹೊರುತ್ತಿದ್ದ ನಾಯಕ ಕಬ್ಬಡ್ಡಿ ಆಟಗಾರನಾಗಿ ತರಬೇತಿ ಪಡೆದು ರಾಷ್ಟ್ರೀಯ ತಂಡದಲ್ಲಿ ಆಡುವ ಕನಸು ಕಾಣುತ್ತಾನೆ. ಅದೇ ವೇಳೆ ಅವನ ಆಡುವ ತಂಡದ ಮಾಲೀಕ ಹಾಗು ಕಾಲೇಜು ಚೇರ್ಮನ್ ನ ಆದ ವೆಂಕಟೇಶನ ತಂಗಿ ಮತ್ತು ನಾಯಕ ಪ್ರೀತಿಸಲು ಆರಂಭಿಸಿರುತ್ತಾರೆ. ಖಳನಾಯಕನ ನೀಡಿದ ಪಣವನ್ನು ಗೆದ್ದು ನಾಯಕ ನಾಯಕಿಯನ್ನು ಪಡೆದನೆ? ಚಿತ್ರ ನೋಡಿ. ಚಿತ್ರದ ಮೊದಲಾರ್ಧದಲ್ಲಿ ಕಥೆ ಫ್ಲಾಶ್ ಬ್ಯಾಕಿನಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಈ ತಂತ್ರ ಹೆಚ್ಚಿನ ಮಟ್ಟಿಗೆ ಯಶಸ್ವಿಯಾಗಿದೆ. ಮಂಡ್ಯ ಕನ್ನಡವನ್ನು ಚೆನ್ನಾಗಿ ಬಳಸಿಕೊಂಡಿರುವುದು ಚಿತ್ರದ ಪ್ಲಸ್ ಪಾಯಿಂಟ್. ಹಂಸಲೇಖಾರು ಸಂಯೋಜಿಸಿರುವ ಒಂದೆರಡು ಹಾಡುಗಳು ಗುನುಗುನಿಸುವಂತಿದೆ. ಉಳಿದದ್ದೆಲ್ಲ ಬೇಡದೆ ಇರೋ ಸರಕು. ಚಿತ್ರದ ಆರಂಭದಿಂದಲೇ ಹಿನ್ನೆಲೆ ಸಂಗೀತ ಚಿತ್ರಕ್ಕೆ ಒಳ್ಳೆಯ ಸಾಥ್ ನೀಡಿದೆ. ಪ್ರತ್ಯೇಕ ಕಾಮಿಡಿ ಟ್ರಾಕ್ ಇಲ್ಲದೆ ಇರೋದು ಪ್ರೇಕ್ಷಕರಿಗೆ ರಿಲೀಫ್. ಆದರೆ ನಿರ್ದೇಶಕರು ಕಬ್ಬಡ್ಡಿಯ ಹಿನ್ನೆಲೆ, ಆಟದ ತಂತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ [ಲಗಾನ್ ಚಿತ್ರ ಇದಕ್ಕೆ ಉತ್ತಮ ಉದಾಹರಣೆ]. ಇದು ನಗರ ಕೇಂದ್ರೀಕೃತ ಪ್ರೇಕ್ಷಕರಿಗೆ ಕುತೂಹಲವನ್ನು ಮೂಡಿಸಿದ ಹಾಗಾಗುತ್ತಿತ್ತು. ಮೈದಾನದ ಕೊರತೆ, ಪ್ರೋತ್ಸಾಹದ ಕೊರತೆ, ಮಾಹಿತಿಯ ಕೊರತೆಗಳಿಂದಾಗಿ ಮತ್ತು ಕ್ರಿಕೆಟ್ ನಂತಹ ಜನಪ್ರಿಯ ಆಟಗಳಿಂದ ನಗರವಾಸಿ ಮಕ್ಕಳು ದೇಸಿ ಕ್ರೀಡೆಗಳನ್ನು ಆಡುತ್ತಿಲ್ಲ. ಇವರಿಗೆ ನಮ್ಮ ದೇಸಿ ಗಂಡು ಕ್ರೀಡೆಯಾದ ಕಬ್ಬಡ್ಡಿಯ ಬಗ್ಗೆ ಆಸಕ್ತಿ ಮೂಡಿಸಬಹುದಾಗಿತ್ತು. ಅನಗತ್ಯವಾದ ಎರಡು ಹಾಡುಗಳನ್ನು ತೆಗೆದುಹಾಕಿದ್ದಾರೆ ಚಿತ್ರದ ಓಟಕ್ಕೆ ಧಕ್ಕೆಯಗುತ್ತಿರಲಿಲ್ಲ. ದ್ವಿತೀಯರ್ದದಲ್ಲಿರುವ ಐಟಂ ಸಾಂಗ್ ಯಾಕೆ ಅನ್ನೋದು ನನಗೆ ಇನ್ನೊ ಅರ್ಥ ಆಗಿಲ್ಲ. ಇನ್ನು ಅಭಿನಯದ ವಿಚಾರಕ್ಕೆ ಬಂದರೆ ನಾಯಕನ ಪಾತ್ರ ಮಾಡಿರುವ ಪ್ರವೀಣ್ ತಮ್ಮ ಸಾಮರ್ಥ್ಯ ಮೀರಿ ಅಭಿನಯಿಸಿದ್ದಾರೆ. ಹೊಡೆದಾಟದ ಮತ್ತು ಗಂಭೀರ ದೃಶ್ಯಗಳಲ್ಲಿ ಸೈ ಎನಿಸಿದರು ಭಾವಾಭಿನಯದಲ್ಲಿ ಇನ್ನು ಪಳಗಬೇಕು. ನಾಯಕಿ ಪ್ರಿಯಾಂಕ ಚುರುಕಾಗಿ ನಟಿಸಿದ್ದರೂ ಕೆಲವೆಡೆ ಮಾತಿನ ವೇಗ ಅಗತ್ಯಕ್ಕಿಂತ ಹೆಚ್ಚು [ಅಥವಾ ಡಬ್ಬಿಂಗ್ ಸಮಸ್ಯೆ]. ಕೋಚ್ ಪಾತ್ರವನ್ನು ಕಿಶೋರ್ ಅಂಡರ್ ಪ್ಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ನಿಜವಾದ (ಖಳ?)ನಾಯಕ ಧರ್ಮ. ಉತ್ತಮ ಪಾತ್ರ ಪೋಷಣೆಯಿಂದ ಧರ್ಮ ಹೆಚ್ಚು ಕಡಿಮೆ ನೆಗೆಟಿವ್ ಅಂಶಗಳಿರೋ ನಾಯಕನಂತೆ ಕಂಡರೆ ಆಶ್ಚರ್ಯವೇನಿಲ್ಲ. ಆದರೆ ಅವಿನಾಶ್ ಮತ್ತು ಶ್ರೀರಕ್ಷಾರ ಪಾತ್ರಗಳು ಪ್ರೇಕ್ಷಕರಲ್ಲಿ ಒಂದಿಷ್ಟು ಗಲಿಬಿಲಿ ಮೂಡಿಸುತ್ತವೆ. ಆ ಪಾತ್ರಗಳ ಅಗತ್ಯವಿತ್ತೇ ಎನ್ನುವುದು ನಿರ್ದೇಶಕರೇ ಹೇಳಬೇಕು. ಉಳಿದೆಲ್ಲ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅನಂತ್ ಅರಸ್ ಮತ್ತು ಸಂತೋಷ್ ವಿಕ್ರಮಾದಿತ್ಯ ಅವರ ಛಾಯಾಗ್ರಹಣ ಉತ್ತಮವಾಗಿದೆ. ಕೆಲವೊಂದು ಅಂಶಗಳಿಗೆ ಪ್ರತ್ಯೇಕ ಗಮನ ಕೊಡದೆ ನೋಡಿದರೆ 'ಕಬ್ಬಡ್ಡಿ' ಒಂದು ಉತ್ತಮ ಸದಭಿರುಚಿಯ ಕುಟುಂಬ ಸಮೇತ ನೋಡಬಹುದಾದ ಚಿತ್ರ.

Thursday, July 2, 2009

ಅಜೇಯ - true invincible




ಅಂದು ಬೆಳಿಗ್ಗೆ ಸುಮಾರು ೧೦:೩೦ ರ ಸಮಯ ಯಾವುದೊ ವ್ಯವಹಾರದ ಸಲುವಾಗಿ ಬ್ಯಾಂಕಿನಲ್ಲಿದ್ದೆ. ನನ್ನ ಕಿವಿಗೆ ಬಿದ್ದ ಸಂಭಾಷಣೆಯ ಒಂದು ತುಣುಕು.

"ಗೊತ್ತಾಯಿತೆನ್ರಿ........ಮೈಕಲ್ ಜಾಕ್ಸನ್ ಹೋಗ್ಬಿಟ್ನಂತೆ"
"ಅಯ್ಯೋ ಹೌದ!.......ಛೆ"

ತಾನು ಎಂದೂ ನಿಜವಾಗಿ ನೋಡಿರದ, ತನಗೆ ಯಾವರೀತಿಯಲ್ಲೂ ಸಂಭಂಧಿಸದ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಇಷ್ಟೊಂದು ಕಕ್ಕುಲಾತಿ ತೋರಿಸುತ್ತನೆಂದರೆ ಅದು ಅವನಿಗೆ ಸಂದ ಗೌರವವಷ್ಟೇ ಅಲ್ಲ ಇನ್ನು ಹೆಚ್ಚಿನ ಅಭಿಮಾನವನ್ನು ತೋರಿಸುತ್ತದೆ. ಕೇವಲ ಮೈಕಲ್ ಜಾಕ್ಸನ್ ನಂತಹ ಅಪ್ಪಟ ಪ್ರತಿಭೆಗಳಿಗೆ ಮಾತ್ರ ಇಂತಹದೊಂದು ಛಾಪು ಮೂಡಿಸಲು ಸಾಧ್ಯ. ಬರಿಯ ಸಂಗೀತಕ್ಕೆ/ಕಲೆಗೆ ಮಾತ್ರವಲ್ಲ ಸಂಗೀತಗಾರನಿಗೂ ಗಡಿರೇಖೆಗಳಿಲ್ಲ. ವಿಶ್ವದ ಯಾವುದೊ ಮೂಲೆಯಲ್ಲಿ ಕುಳಿತ ವ್ಯಕ್ತಿಗೆ ಮೈಕಲ್ ಜಾಕ್ಸನ್ ದಿವಂಗತನಾದಾಗ ಅವನ ಮನ ಮಿಡಿದ ಸಂದರ್ಭ ಮೈಕಲ್ ಜಾಕ್ಸನ್ ನ ಕಲೆಯ ಮೋಡಿಗೆ ಕೊಡಬಹುದಾದ ಒಂದು ಚಿಕ್ಕ ಉದಾಹರಣೆ. ಮೈಕಲ್ ಜಾಕ್ಸನ್ ತನ್ನ ಕಲೆಯ ಮೂಲಕ ಗಡಿಗಳನ್ನು ದಾಟಿ ಹೃದಯಗಳನ್ನು ಮೀಟಿದ ನಿಜವಾದ ವಿಶ್ವಮಾನವ. ಮೈಕಲ್ ಜೋಸೆಫ್ ಜಾಕ್ಸನ್ ಸಂಗೀತಗಾರರ ತುಂಬು ಕುಟುಂಬದಲ್ಲಿ ಹುಟ್ಟಿದವನು. ಸಂಗೀತ ಅವನ ರಕ್ತದಲ್ಲೇ ಇತ್ತು. ಅದಕ್ಕೆ ತಕ್ಕಂತೆ ಅವನ ಅಪ್ಪ ಬಾಲ್ಯದಿಂದಲೇ ತನ್ನ ಮಕ್ಕಳಿಗೆ ಸಂಗೀತ ಕಲಿಸಿದ, ತಪ್ಪಿದಾಗ ಹೊಡೆದು ತಿದ್ದಿದ, ತನ್ನ ಮಕ್ಕಳದೇ ಒಂದು ಬ್ಯಾಂಡ್ ಮಾಡಲು ಶ್ರಮಿಸಿದ. ಅಪ್ಪನ ಅತಿಶಿಸ್ತಿನ ಉಳಿಯ ಏಟುಗಳು ಮೈಕಲ್ ಜಾಕ್ಸನ್ ಎಂಬ ಶಿಲ್ಪವನ್ನು ಕೆತ್ತತೊಡಗಿದ್ದವು. ಇದರ ನಂತರ ಆದದ್ದೆಲ್ಲವು HIStory [ ಇದು ಕೂಡ ಅವನ ಒಂದು ಆಲ್ಬಮ್ ಹೆಸರು ].

ನಾವು ನೋಡಿದ್ದು, ಆನಂದಿಸಿದ್ದು, ಆರಾಧಿಸಿದ್ದು ಮೈಕಲ್ ಜಾಕ್ಸನ್ ನ ನೃತ್ಯ ಪ್ರತಿಭೆಯನ್ನು. ಚಾಲ್ತಿಯಲ್ಲಿರುವ ಅನೇಕ ಪ್ರತಿಭಾವಂತ ನೃತ್ಯಗಾರರು, ನೃತ್ಯ ಸಂಯೋಜಕರು ಮೈಕಲ್ ಜಾಕ್ಸನ್ ನನ್ನು ತಮ್ಮ ಗುರುವೆಂದು ಆದರದಿಂದ ಒಪ್ಪಿಕೊಂಡಿದ್ದಾರೆ. ಬಹುಷಃ ನ್ರುತ್ಯಾಸಕ್ತಿ ಉಳ್ಳವರೆಲ್ಲರೂ ಅವನ ಒಂದಾದರು ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. ನಮ್ಮಲ್ಲಿ ಡಾನ್ಸ್ ಗೆ ಮತ್ತೊಂದು ಹೆಸರೇ ಮೈಕಲ್ ಜಾಕ್ಸನ್.

ನಾನು ಮೈಕಲ್ ಜಾಕ್ಸನ್ ಬಗ್ಗೆ ತಿಳಿದುಕೊಂಡಿದ್ದು ಬರಿಯ ಪತ್ರಿಕೆಗಳಿಂದ. ಅದು ಹೆಚ್ಚೇನು ಅಲ್ಲ. ಇತ್ತೀಚಿನ ದಿನಗಳಲ್ಲಿ ಮೈಕಲ್ ಜಾಕ್ಸನ್ ತನ್ನ ಕಲೆಗಿಂತ ವಿವಾದಗಳಿಂದಾಗಿಯೇ ಹೆಚ್ಚು ಪ್ರಸಿದ್ಧಿ ಪಡೆದಿದ್ದ. ನಾನು ಓದಿದ್ದು ಹೆಚ್ಚು ಇಂತಹ ವಿಷಯಗಳನ್ನೇ. ತಾನು ಸಂಪಾದಿಸಿದ ಕೋಟ್ಯಾಂತರ ರೂಪಾಯಿಗಳನ್ನು ದೇಣಿಗೆ ನೀಡಿದ ವಿಚಾರ ಅವನ ವಿವಾದಗಳಿಂದ ಮಸುಕಾಯಿತು. ಸರಿಸುಮಾರು ೩೯ ವಿವಿಧ ಸಂಸ್ಥೆಗಳ ಮೂಲಕ ದೇಣಿಗೆ ನೀಡಿದ್ದು ಇಂದಿಗೂ ವಿಶ್ವದಾಖಲೆ.

2001 ರಲ್ಲಿ ನಾನು ಬ್ರಿಗೇಡ್ ರಸ್ತೆಯಲ್ಲಿರುವ Music World ಗೆ ಹೋಗಿದ್ದೆ. ಆವಾಗ ಅಲ್ಲಿನ ಆಲ್ಬಂ ಸಂಗ್ರಹವನ್ನು ವೀಕ್ಷಿಸುತ್ತಿರುವಾಗ world music ವಿಭಾಗದಲ್ಲಿ ನನ್ನ ಕಣ್ಣಿಗೆ ಅಚಾನಕ್ಕಾಗಿ ಕಣ್ಣಿಗೆ ಬಿದ್ದದ್ದು ಮೈಕಲ್ ಜಾಕ್ಸನ್ ನ ಆಗಷ್ಟೆ release ಆದ ಆಲ್ಬಮ್ 'Invincible'. ನನಗೆ ಪಾಶ್ಚಿಮಾತ್ಯ ಸಂಗೀತದ ಬಗ್ಗೆ ಅಷ್ಟೇನೂ ಒಲವು ಇರದಿದ್ದ ಕಾರಣ Invincible ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅದರ ಅರ್ಥವನ್ನು ಪದಕೋಶದಲ್ಲಿ ಹುಡುಕಿದ್ದೇ[Invincible - ಅಜೇಯ ]. ಅವನ ವಿಶ್ವವಿಖ್ಯಾತ ಹಾಡುಗಳಾದ thriller, Beat it, Black & White, Belli Jeans, Smooth Criminal ವೀಡಿಯೊಗಳನ್ನ ನೋಡಿದ್ದೇ. ಆದರೆ ನನಗೆ ಕುತೂಹಲವಿದ್ದದ್ದು ಅವನ ನೃತ್ಯದ ಬಗ್ಗೆ ಮಾತ್ರ. [ಹಾಡುಗಳು ತಲೆಬುಡ ಅರ್ಥವಾಗುತ್ತಿರಲಿಲ್ಲ ಬಿಡಿ]. ಈಗ ಪಾಶ್ಚಿಮಾತ್ಯ ಸಂಗೀತದ ಬಗ್ಗೆ ಈಗೇನು ಒಲವು ಮೂಡದಿದ್ದರೂ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದರಿಂದ ಮೈಕಲ್ ಜಾಕ್ಸನ್ ನ ಸಂಗೀತ ಎಷ್ಟು ಸಂಪತ್ಭರಿತವಾಗಿದೆ ಎಂದು ಗೊತ್ತಾಯಿತು.



ಕೆಲವರು ಇದ್ದಾಗ ಸುದ್ದಿ ಮಾಡ್ತಾರೆ; ಕೆಲವರು ಸತ್ತ ಮೇಲೆ ಸುದ್ದಿ ಮಾಡ್ತಾರೆ; ಇನ್ನೂ ಕೆಲವರು ಇದ್ದಾಗ ಸುದ್ದಿ ಮಾಡಿದ್ದಲ್ಲದೆ, ಹೋದನಂತರವೂ ಸುದ್ದಿ ಮಾಡ್ತಾರೆ. ಕೊನೆಯದು ತುಂಬಾ rare category. ಇದಕ್ಕೆ ಸೇರುವ ಅಪರೂಪದ ವ್ಯಕ್ತಿ MJ. MJ ಯೊಡನೆ ಸ್ಪರ್ಧಿಸಲು MJ ಯೆ ಹುಟ್ಟಿಬರಬೇಕು. He is truly invincible. Hats off to you MJ. May your soul rest in peace.