Thursday, July 2, 2009

ಅಜೇಯ - true invincible




ಅಂದು ಬೆಳಿಗ್ಗೆ ಸುಮಾರು ೧೦:೩೦ ರ ಸಮಯ ಯಾವುದೊ ವ್ಯವಹಾರದ ಸಲುವಾಗಿ ಬ್ಯಾಂಕಿನಲ್ಲಿದ್ದೆ. ನನ್ನ ಕಿವಿಗೆ ಬಿದ್ದ ಸಂಭಾಷಣೆಯ ಒಂದು ತುಣುಕು.

"ಗೊತ್ತಾಯಿತೆನ್ರಿ........ಮೈಕಲ್ ಜಾಕ್ಸನ್ ಹೋಗ್ಬಿಟ್ನಂತೆ"
"ಅಯ್ಯೋ ಹೌದ!.......ಛೆ"

ತಾನು ಎಂದೂ ನಿಜವಾಗಿ ನೋಡಿರದ, ತನಗೆ ಯಾವರೀತಿಯಲ್ಲೂ ಸಂಭಂಧಿಸದ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಇಷ್ಟೊಂದು ಕಕ್ಕುಲಾತಿ ತೋರಿಸುತ್ತನೆಂದರೆ ಅದು ಅವನಿಗೆ ಸಂದ ಗೌರವವಷ್ಟೇ ಅಲ್ಲ ಇನ್ನು ಹೆಚ್ಚಿನ ಅಭಿಮಾನವನ್ನು ತೋರಿಸುತ್ತದೆ. ಕೇವಲ ಮೈಕಲ್ ಜಾಕ್ಸನ್ ನಂತಹ ಅಪ್ಪಟ ಪ್ರತಿಭೆಗಳಿಗೆ ಮಾತ್ರ ಇಂತಹದೊಂದು ಛಾಪು ಮೂಡಿಸಲು ಸಾಧ್ಯ. ಬರಿಯ ಸಂಗೀತಕ್ಕೆ/ಕಲೆಗೆ ಮಾತ್ರವಲ್ಲ ಸಂಗೀತಗಾರನಿಗೂ ಗಡಿರೇಖೆಗಳಿಲ್ಲ. ವಿಶ್ವದ ಯಾವುದೊ ಮೂಲೆಯಲ್ಲಿ ಕುಳಿತ ವ್ಯಕ್ತಿಗೆ ಮೈಕಲ್ ಜಾಕ್ಸನ್ ದಿವಂಗತನಾದಾಗ ಅವನ ಮನ ಮಿಡಿದ ಸಂದರ್ಭ ಮೈಕಲ್ ಜಾಕ್ಸನ್ ನ ಕಲೆಯ ಮೋಡಿಗೆ ಕೊಡಬಹುದಾದ ಒಂದು ಚಿಕ್ಕ ಉದಾಹರಣೆ. ಮೈಕಲ್ ಜಾಕ್ಸನ್ ತನ್ನ ಕಲೆಯ ಮೂಲಕ ಗಡಿಗಳನ್ನು ದಾಟಿ ಹೃದಯಗಳನ್ನು ಮೀಟಿದ ನಿಜವಾದ ವಿಶ್ವಮಾನವ. ಮೈಕಲ್ ಜೋಸೆಫ್ ಜಾಕ್ಸನ್ ಸಂಗೀತಗಾರರ ತುಂಬು ಕುಟುಂಬದಲ್ಲಿ ಹುಟ್ಟಿದವನು. ಸಂಗೀತ ಅವನ ರಕ್ತದಲ್ಲೇ ಇತ್ತು. ಅದಕ್ಕೆ ತಕ್ಕಂತೆ ಅವನ ಅಪ್ಪ ಬಾಲ್ಯದಿಂದಲೇ ತನ್ನ ಮಕ್ಕಳಿಗೆ ಸಂಗೀತ ಕಲಿಸಿದ, ತಪ್ಪಿದಾಗ ಹೊಡೆದು ತಿದ್ದಿದ, ತನ್ನ ಮಕ್ಕಳದೇ ಒಂದು ಬ್ಯಾಂಡ್ ಮಾಡಲು ಶ್ರಮಿಸಿದ. ಅಪ್ಪನ ಅತಿಶಿಸ್ತಿನ ಉಳಿಯ ಏಟುಗಳು ಮೈಕಲ್ ಜಾಕ್ಸನ್ ಎಂಬ ಶಿಲ್ಪವನ್ನು ಕೆತ್ತತೊಡಗಿದ್ದವು. ಇದರ ನಂತರ ಆದದ್ದೆಲ್ಲವು HIStory [ ಇದು ಕೂಡ ಅವನ ಒಂದು ಆಲ್ಬಮ್ ಹೆಸರು ].

ನಾವು ನೋಡಿದ್ದು, ಆನಂದಿಸಿದ್ದು, ಆರಾಧಿಸಿದ್ದು ಮೈಕಲ್ ಜಾಕ್ಸನ್ ನ ನೃತ್ಯ ಪ್ರತಿಭೆಯನ್ನು. ಚಾಲ್ತಿಯಲ್ಲಿರುವ ಅನೇಕ ಪ್ರತಿಭಾವಂತ ನೃತ್ಯಗಾರರು, ನೃತ್ಯ ಸಂಯೋಜಕರು ಮೈಕಲ್ ಜಾಕ್ಸನ್ ನನ್ನು ತಮ್ಮ ಗುರುವೆಂದು ಆದರದಿಂದ ಒಪ್ಪಿಕೊಂಡಿದ್ದಾರೆ. ಬಹುಷಃ ನ್ರುತ್ಯಾಸಕ್ತಿ ಉಳ್ಳವರೆಲ್ಲರೂ ಅವನ ಒಂದಾದರು ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. ನಮ್ಮಲ್ಲಿ ಡಾನ್ಸ್ ಗೆ ಮತ್ತೊಂದು ಹೆಸರೇ ಮೈಕಲ್ ಜಾಕ್ಸನ್.

ನಾನು ಮೈಕಲ್ ಜಾಕ್ಸನ್ ಬಗ್ಗೆ ತಿಳಿದುಕೊಂಡಿದ್ದು ಬರಿಯ ಪತ್ರಿಕೆಗಳಿಂದ. ಅದು ಹೆಚ್ಚೇನು ಅಲ್ಲ. ಇತ್ತೀಚಿನ ದಿನಗಳಲ್ಲಿ ಮೈಕಲ್ ಜಾಕ್ಸನ್ ತನ್ನ ಕಲೆಗಿಂತ ವಿವಾದಗಳಿಂದಾಗಿಯೇ ಹೆಚ್ಚು ಪ್ರಸಿದ್ಧಿ ಪಡೆದಿದ್ದ. ನಾನು ಓದಿದ್ದು ಹೆಚ್ಚು ಇಂತಹ ವಿಷಯಗಳನ್ನೇ. ತಾನು ಸಂಪಾದಿಸಿದ ಕೋಟ್ಯಾಂತರ ರೂಪಾಯಿಗಳನ್ನು ದೇಣಿಗೆ ನೀಡಿದ ವಿಚಾರ ಅವನ ವಿವಾದಗಳಿಂದ ಮಸುಕಾಯಿತು. ಸರಿಸುಮಾರು ೩೯ ವಿವಿಧ ಸಂಸ್ಥೆಗಳ ಮೂಲಕ ದೇಣಿಗೆ ನೀಡಿದ್ದು ಇಂದಿಗೂ ವಿಶ್ವದಾಖಲೆ.

2001 ರಲ್ಲಿ ನಾನು ಬ್ರಿಗೇಡ್ ರಸ್ತೆಯಲ್ಲಿರುವ Music World ಗೆ ಹೋಗಿದ್ದೆ. ಆವಾಗ ಅಲ್ಲಿನ ಆಲ್ಬಂ ಸಂಗ್ರಹವನ್ನು ವೀಕ್ಷಿಸುತ್ತಿರುವಾಗ world music ವಿಭಾಗದಲ್ಲಿ ನನ್ನ ಕಣ್ಣಿಗೆ ಅಚಾನಕ್ಕಾಗಿ ಕಣ್ಣಿಗೆ ಬಿದ್ದದ್ದು ಮೈಕಲ್ ಜಾಕ್ಸನ್ ನ ಆಗಷ್ಟೆ release ಆದ ಆಲ್ಬಮ್ 'Invincible'. ನನಗೆ ಪಾಶ್ಚಿಮಾತ್ಯ ಸಂಗೀತದ ಬಗ್ಗೆ ಅಷ್ಟೇನೂ ಒಲವು ಇರದಿದ್ದ ಕಾರಣ Invincible ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅದರ ಅರ್ಥವನ್ನು ಪದಕೋಶದಲ್ಲಿ ಹುಡುಕಿದ್ದೇ[Invincible - ಅಜೇಯ ]. ಅವನ ವಿಶ್ವವಿಖ್ಯಾತ ಹಾಡುಗಳಾದ thriller, Beat it, Black & White, Belli Jeans, Smooth Criminal ವೀಡಿಯೊಗಳನ್ನ ನೋಡಿದ್ದೇ. ಆದರೆ ನನಗೆ ಕುತೂಹಲವಿದ್ದದ್ದು ಅವನ ನೃತ್ಯದ ಬಗ್ಗೆ ಮಾತ್ರ. [ಹಾಡುಗಳು ತಲೆಬುಡ ಅರ್ಥವಾಗುತ್ತಿರಲಿಲ್ಲ ಬಿಡಿ]. ಈಗ ಪಾಶ್ಚಿಮಾತ್ಯ ಸಂಗೀತದ ಬಗ್ಗೆ ಈಗೇನು ಒಲವು ಮೂಡದಿದ್ದರೂ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದರಿಂದ ಮೈಕಲ್ ಜಾಕ್ಸನ್ ನ ಸಂಗೀತ ಎಷ್ಟು ಸಂಪತ್ಭರಿತವಾಗಿದೆ ಎಂದು ಗೊತ್ತಾಯಿತು.



ಕೆಲವರು ಇದ್ದಾಗ ಸುದ್ದಿ ಮಾಡ್ತಾರೆ; ಕೆಲವರು ಸತ್ತ ಮೇಲೆ ಸುದ್ದಿ ಮಾಡ್ತಾರೆ; ಇನ್ನೂ ಕೆಲವರು ಇದ್ದಾಗ ಸುದ್ದಿ ಮಾಡಿದ್ದಲ್ಲದೆ, ಹೋದನಂತರವೂ ಸುದ್ದಿ ಮಾಡ್ತಾರೆ. ಕೊನೆಯದು ತುಂಬಾ rare category. ಇದಕ್ಕೆ ಸೇರುವ ಅಪರೂಪದ ವ್ಯಕ್ತಿ MJ. MJ ಯೊಡನೆ ಸ್ಪರ್ಧಿಸಲು MJ ಯೆ ಹುಟ್ಟಿಬರಬೇಕು. He is truly invincible. Hats off to you MJ. May your soul rest in peace.

1 comment:

Prabhuraj Moogi said...

ನಿಜಕ್ಕೂ ಪ್ರತಿಭಾವಂತ ಕಲಾವಿದ ಆದರೆ ಕಲೆಗಿಂತ ವಿವಾದಗಳೇ ಜಾಸ್ತಿ ಪ್ರಚಾರ ಪಡೆದದ್ದು ದುರಾದೃಷ್ಟ. ಮೂನವಾಕ ಅವನ ಹಾಗೆ ಯಾರು ಮಾಡಿಯಾರು...