Friday, July 3, 2009

ಕಬ್ಬಡ್ಡಿ ಚಿತ್ರ ವಿಮರ್ಶೆ

ಇತ್ತೀಚಿಗೆ ಬಂದ ಕನ್ನಡ ಚಿತ್ರಗಳಿಗೆ ಹೋಲಿಸಿದರೆ ಕಬ್ಬಡ್ಡಿ ಒಂದು ವಿಭಿನ್ನ ಪ್ರಯತ್ನ. ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಕಬ್ಬಡ್ಡಿ ಜನಪ್ರಿಯ ಕ್ರೀಡೆ. ನಿರ್ದೇಶಕರು ಇದರ ಮಹತ್ವವನ್ನು ತಿಳಿದೇ ಪ್ರೇಮಕಥೆಯನ್ನು ಕಬ್ಬಡ್ಡಿಯ ಹಿನ್ನೆಲೆಯಲ್ಲಿ ಹೇಳಲು ಹೊರಟಿದ್ದಾರೆ. ಮೂಟೆ ಹೊರುತ್ತಿದ್ದ ನಾಯಕ ಕಬ್ಬಡ್ಡಿ ಆಟಗಾರನಾಗಿ ತರಬೇತಿ ಪಡೆದು ರಾಷ್ಟ್ರೀಯ ತಂಡದಲ್ಲಿ ಆಡುವ ಕನಸು ಕಾಣುತ್ತಾನೆ. ಅದೇ ವೇಳೆ ಅವನ ಆಡುವ ತಂಡದ ಮಾಲೀಕ ಹಾಗು ಕಾಲೇಜು ಚೇರ್ಮನ್ ನ ಆದ ವೆಂಕಟೇಶನ ತಂಗಿ ಮತ್ತು ನಾಯಕ ಪ್ರೀತಿಸಲು ಆರಂಭಿಸಿರುತ್ತಾರೆ. ಖಳನಾಯಕನ ನೀಡಿದ ಪಣವನ್ನು ಗೆದ್ದು ನಾಯಕ ನಾಯಕಿಯನ್ನು ಪಡೆದನೆ? ಚಿತ್ರ ನೋಡಿ. ಚಿತ್ರದ ಮೊದಲಾರ್ಧದಲ್ಲಿ ಕಥೆ ಫ್ಲಾಶ್ ಬ್ಯಾಕಿನಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಈ ತಂತ್ರ ಹೆಚ್ಚಿನ ಮಟ್ಟಿಗೆ ಯಶಸ್ವಿಯಾಗಿದೆ. ಮಂಡ್ಯ ಕನ್ನಡವನ್ನು ಚೆನ್ನಾಗಿ ಬಳಸಿಕೊಂಡಿರುವುದು ಚಿತ್ರದ ಪ್ಲಸ್ ಪಾಯಿಂಟ್. ಹಂಸಲೇಖಾರು ಸಂಯೋಜಿಸಿರುವ ಒಂದೆರಡು ಹಾಡುಗಳು ಗುನುಗುನಿಸುವಂತಿದೆ. ಉಳಿದದ್ದೆಲ್ಲ ಬೇಡದೆ ಇರೋ ಸರಕು. ಚಿತ್ರದ ಆರಂಭದಿಂದಲೇ ಹಿನ್ನೆಲೆ ಸಂಗೀತ ಚಿತ್ರಕ್ಕೆ ಒಳ್ಳೆಯ ಸಾಥ್ ನೀಡಿದೆ. ಪ್ರತ್ಯೇಕ ಕಾಮಿಡಿ ಟ್ರಾಕ್ ಇಲ್ಲದೆ ಇರೋದು ಪ್ರೇಕ್ಷಕರಿಗೆ ರಿಲೀಫ್. ಆದರೆ ನಿರ್ದೇಶಕರು ಕಬ್ಬಡ್ಡಿಯ ಹಿನ್ನೆಲೆ, ಆಟದ ತಂತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ [ಲಗಾನ್ ಚಿತ್ರ ಇದಕ್ಕೆ ಉತ್ತಮ ಉದಾಹರಣೆ]. ಇದು ನಗರ ಕೇಂದ್ರೀಕೃತ ಪ್ರೇಕ್ಷಕರಿಗೆ ಕುತೂಹಲವನ್ನು ಮೂಡಿಸಿದ ಹಾಗಾಗುತ್ತಿತ್ತು. ಮೈದಾನದ ಕೊರತೆ, ಪ್ರೋತ್ಸಾಹದ ಕೊರತೆ, ಮಾಹಿತಿಯ ಕೊರತೆಗಳಿಂದಾಗಿ ಮತ್ತು ಕ್ರಿಕೆಟ್ ನಂತಹ ಜನಪ್ರಿಯ ಆಟಗಳಿಂದ ನಗರವಾಸಿ ಮಕ್ಕಳು ದೇಸಿ ಕ್ರೀಡೆಗಳನ್ನು ಆಡುತ್ತಿಲ್ಲ. ಇವರಿಗೆ ನಮ್ಮ ದೇಸಿ ಗಂಡು ಕ್ರೀಡೆಯಾದ ಕಬ್ಬಡ್ಡಿಯ ಬಗ್ಗೆ ಆಸಕ್ತಿ ಮೂಡಿಸಬಹುದಾಗಿತ್ತು. ಅನಗತ್ಯವಾದ ಎರಡು ಹಾಡುಗಳನ್ನು ತೆಗೆದುಹಾಕಿದ್ದಾರೆ ಚಿತ್ರದ ಓಟಕ್ಕೆ ಧಕ್ಕೆಯಗುತ್ತಿರಲಿಲ್ಲ. ದ್ವಿತೀಯರ್ದದಲ್ಲಿರುವ ಐಟಂ ಸಾಂಗ್ ಯಾಕೆ ಅನ್ನೋದು ನನಗೆ ಇನ್ನೊ ಅರ್ಥ ಆಗಿಲ್ಲ. ಇನ್ನು ಅಭಿನಯದ ವಿಚಾರಕ್ಕೆ ಬಂದರೆ ನಾಯಕನ ಪಾತ್ರ ಮಾಡಿರುವ ಪ್ರವೀಣ್ ತಮ್ಮ ಸಾಮರ್ಥ್ಯ ಮೀರಿ ಅಭಿನಯಿಸಿದ್ದಾರೆ. ಹೊಡೆದಾಟದ ಮತ್ತು ಗಂಭೀರ ದೃಶ್ಯಗಳಲ್ಲಿ ಸೈ ಎನಿಸಿದರು ಭಾವಾಭಿನಯದಲ್ಲಿ ಇನ್ನು ಪಳಗಬೇಕು. ನಾಯಕಿ ಪ್ರಿಯಾಂಕ ಚುರುಕಾಗಿ ನಟಿಸಿದ್ದರೂ ಕೆಲವೆಡೆ ಮಾತಿನ ವೇಗ ಅಗತ್ಯಕ್ಕಿಂತ ಹೆಚ್ಚು [ಅಥವಾ ಡಬ್ಬಿಂಗ್ ಸಮಸ್ಯೆ]. ಕೋಚ್ ಪಾತ್ರವನ್ನು ಕಿಶೋರ್ ಅಂಡರ್ ಪ್ಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ನಿಜವಾದ (ಖಳ?)ನಾಯಕ ಧರ್ಮ. ಉತ್ತಮ ಪಾತ್ರ ಪೋಷಣೆಯಿಂದ ಧರ್ಮ ಹೆಚ್ಚು ಕಡಿಮೆ ನೆಗೆಟಿವ್ ಅಂಶಗಳಿರೋ ನಾಯಕನಂತೆ ಕಂಡರೆ ಆಶ್ಚರ್ಯವೇನಿಲ್ಲ. ಆದರೆ ಅವಿನಾಶ್ ಮತ್ತು ಶ್ರೀರಕ್ಷಾರ ಪಾತ್ರಗಳು ಪ್ರೇಕ್ಷಕರಲ್ಲಿ ಒಂದಿಷ್ಟು ಗಲಿಬಿಲಿ ಮೂಡಿಸುತ್ತವೆ. ಆ ಪಾತ್ರಗಳ ಅಗತ್ಯವಿತ್ತೇ ಎನ್ನುವುದು ನಿರ್ದೇಶಕರೇ ಹೇಳಬೇಕು. ಉಳಿದೆಲ್ಲ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅನಂತ್ ಅರಸ್ ಮತ್ತು ಸಂತೋಷ್ ವಿಕ್ರಮಾದಿತ್ಯ ಅವರ ಛಾಯಾಗ್ರಹಣ ಉತ್ತಮವಾಗಿದೆ. ಕೆಲವೊಂದು ಅಂಶಗಳಿಗೆ ಪ್ರತ್ಯೇಕ ಗಮನ ಕೊಡದೆ ನೋಡಿದರೆ 'ಕಬ್ಬಡ್ಡಿ' ಒಂದು ಉತ್ತಮ ಸದಭಿರುಚಿಯ ಕುಟುಂಬ ಸಮೇತ ನೋಡಬಹುದಾದ ಚಿತ್ರ.

2 comments:

Prabhuraj Moogi said...

ಬಹಳ ಚೆನ್ನಾಗಿದೆ ಸರ್ ಬ್ಲಾಗ ನಿಮ್ಮದು, ಇನ್ನೂ ಬಹಳ ಪೋಸ್ಟ ಓದಲಿದೆ ಬರುವುದು ತಡವಾಯಿತು. ಕಬಡ್ಡಿ ಹೊಸ ಪ್ರಯತ್ನ ಚೆನ್ನಾಗಿದೆ ಅಂತ ಪೇಪರಿನಲ್ಲೂ ಓದಿದ್ದೆ, ನಿಜಕ್ಕೊ ಹೊಸತನ ಇದೆ ಅಂತ ಕಾಣುತ್ತೆ. ನೋಡೊನ ಸಾಧ್ಯವಾದರೆ ನೆಕ್ಸ್ಟ ವೀಕೇಂಡ ನೋದಲಾಗುತ್ತ ಅಂತ...

ನವೀನ್ said...

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ನನ್ನ ಧನ್ಯವಾದಗಳು. ಉತ್ತಮ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ನನ್ನದೊಂದು ಚಿಕ್ಕ ಪ್ರಯತ್ನ. ಕಬಡ್ಡಿ ನೋಡಿ enjoy ಮಾಡಿ.

ನವೀನ್