Monday, October 6, 2008

ನಮ್ಮ ಟ್ರಿಪ್ಪಿನ ಬಗ್ಗೆ ನಿಮಗೆ updateಉ

" ಈ ಸಲನಾದ್ರು ಎಲ್ಲಾದರು ಟ್ರಿಪ್ಗೆ ಹೋಗಬೇಕು "
" ಹೋಗೋಣ ಬಿಡೋ "
" ಪ್ರತಿ ಸಲಾನೂ ಹೀಗೆ ಹೇಳ್ತೀರಾ ಮಕ್ಳ...ಬರಿ ಹೋಗೋಣ ಅನ್ನೋದಷ್ಟೇ ಆಯಿತು "
" ಆಯಿತಪ್ಪ placeಉ, dateಉ ಫಿಕ್ಸ್ ಮಾಡು.....ನಾವು ಬರ್ತೀವಿ "
" ಏನು ನಿಮಗೆಲ್ಲ ಇಂಟರೆಸ್ಟ್ ಇಲ್ಲವ......ನನಗೊಬ್ಬನಿಗೊಸ್ಕರ ಬರೋತರ ಮಾತಾಡ್ತೀರಲ್ಲ "
" ಸರಿ ಬಿಡು ಗುರು, ಒಂದೆರಡು place ನೋಡಿ ಇಮೇಲ್ ಹಾಕಿ.....ಆಮೇಲೆ decide ಮಾಡಿದರಾಯಿತು "

ಈ ಸಂಭಾಷಣೆ ನಾವು ವಾರಾಂತ್ಯಕ್ಕೆ ಸಿಕ್ಕಾಗಲೆಲ್ಲ ಪುನರಾವರ್ತನೆ ಗೊಳ್ಳುತ್ತಿತ್ತು. ಪ್ರತಿ ವರ್ಷಾನು ಎರಡು ಅಥವಾ ಮೂರು ದಿನ ಪ್ರವಾಸ ಹೋಗೋದು ನಮ್ಮ ಗುಂಪಿನ ವಾಡಿಕೆ. ಕೊಡೈಕೆನಾಲ್ ಗೆ ಹೋಗಿದ್ದು ೨೦೦೬ ರಲ್ಲಿ. ಕಳೆದ ವರ್ಷ ಕಲವಾರಹಳ್ಳಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದು ಬಿಟ್ರೆ ಮತ್ತೆಲ್ಲೂ ಹೋಗಿರಲಿಲ್ಲ. ಹಾಗಾಗಿ ಈ ಸಲ ಪ್ರವಾಸಕ್ಕೆ ಹೋಗೋದು ಒಂಥರಾ ಹೊಸ ಹುಮ್ಮಸ್ಸು ತಂದಿತ್ತು. ನಮ್ಮ ಗುಂಪಿನ ಹಲವರು ಸಂಸಾರಕ್ಕೆ ಕಾಲಿಡೋಕೆ ಯೋಚಿಸುತ್ತಿರೋದ್ರಿಂದ ಮುಂದಿನ ವರ್ಷ ಎಷ್ಟು ಜನ ಸಿಕ್ತಾರೆ ಅನ್ನೋ ಅನುಮಾನ ಎಲ್ಲರಿಗೂ ಇತ್ತು. ಇದೊಂದು ಕುಂಟು ನೆಪಾನು ಸೇರಿಕೊಂಡು ನಾವು ಕೊಡಚಾದ್ರಿಗೆ ಮತ್ತು ಜೋಗಕ್ಕೆ ಹೋಗೋದು ಅಂತ ತೀರ್ಮಾನವಾಯಿತು. ಹೋಗಿದ್ದು ಆಯಿತು, ಸುಂದರ ನೆನಪುಗಳನ್ನು ನಮ್ಮ ನೆನಪಿನ ಖಜಾನೆಗೆ ಸೇರಿಸಿದ್ದು ಆಯಿತು. ನಾವೆಲ್ಲರೂ IT sector ನಲ್ಲಿ ಕೆಲಸ ಮಾಡ್ತಿರೋದ್ರಿಂದ ಈ ತರಹದ ಒಂದು refreshment ನಮಗೆ ಬೇಕಿತ್ತು.

ರಾತ್ರಿ ಕೊಲ್ಲೂರಿಗೆ ಕೆ.ಎಸ್.ಆರ್.ಟೀ.ಸೀ ಬಸ್ಗೆ ಟಿಕೆಟ್ ಬುಕ್ ಮಾಡಿಸಿದ ಅಸಾಮಿನೆ ಬಸ್ಸು ಹೊರಡೋವೇಳೆ ಆದರು ಪತ್ತೆ ಇಲ್ಲ. ಬಸ್ ಸ್ಟ್ಯಾಂಡ್ ನಲ್ಲಿ ಕಂಡಕ್ಟರ್ ಸಮಜಾಯಿಷಿ ನೀಡಿ ನಮಗೆ ಸಾಕಾಗಿದ್ರೆ ಅವ್ನು ಆರಾಮವಾಗಿ ಕೈ ಬೀಸಿಕೊಂಡು ಬರ್ತಾ ಇದಾನೆ. ಯಾಕೋ lateಉ ಅಂದ್ರೆ ಇನ್ನು ೮:೨೫ ಕಣೋ ನನ್ನ ಗಡಿಯಾರದಲ್ಲಿ ಅಂತ ೧೦ ನಿಮಿಷ ಹಿಂದೆ ಇರೋ ಮೊಬೈಲ್ ತೋರಿಸ್ತಾನೆ. ಸರಿ ಅಂತ ಬಸ್ ಏರಿ, ಹೊರಟು, ಅರ್ಧರಾತ್ರಿಯಲ್ಲಿ ನಂದಿನಿ ಪೇಡ ತಿಂದು, ಅಕ್ಕಪಕ್ಕ ದ ಪ್ರಯಾಣಿಕರಿಂದೆಲ್ಲ ಶಾಪ ಹಾಕಿಸಿಕೊಂಡು ಕೊಲ್ಲೂರಿಗೆ ಹೋಗಿದ್ದಾಯಿತು. ಮೂಕಾಂಬಿಕೆ ದರ್ಶನದ ನಂತರ ಜೇಸನ್ ಹೇಳುತ್ತಿದ್ದ f ವರ್ಡ್ ಜೋಕ್ ಗಳಿಗೆಲ್ಲ ನಗುತ್ತ ಕೊಡಚಾದ್ರಿಯನ್ನು ಬೆವರು ಬಸಿಯುತ್ತಲೇ ಹತ್ತಿ, ಭಟ್ಟರ ಮನೆಯಲ್ಲಿ ಸುಸ್ತಾಗಿ ಕುಕ್ಕರಿಸಿ, ಅವರು ಕೊಟ್ಟ ಟೀ ಕುಡಿದ ಮೇಲೆ ನಮಗೆ ಜೀವ ಬಂದಿದ್ದು. Sunset point ಹತ್ತಿರ ಒಂದಿಷ್ಟು ತರ್ಲೆ ಫೋಟೋಗಳನ್ನು ತೆಗ್ಸಿ, ಸೂರ್ಯನನ್ನು ಮುಳುಗಿಸಿ ಮರಳಿ ಭಟ್ಟರ ಮನೆಗೆ ಬಂದು, ಬಿಸಿ ಬಿಸಿ ಊಟ ಮಾಡಿ, ಬೆಚ್ಚಗೆ ಮಲಗಿದ್ದಾಯಿತು. ಬೆಳಿಗ್ಗೆ ಎದ್ದು ಹಿಂದಿನ ದಿನ ಉಳಿದ ಅನ್ನದಿಂದ ಮಾಡಿದ ಚಿತ್ರಾನ್ನ ತಿಂದು, ಮೈ ಕೈ ನೋವುಮಾಡಿಕೊಂಡು ಜೀಪ್ನಲ್ಲಿ ಕೊಡಚಾದ್ರಿ ಅವರೋಹಿಸಿ, ಮರಳಿ ಕೊಲ್ಲೂರಿಗೆ ಬಂದು ವಿಶ್ರಾಂತಿ ಪಡೆದು, ಸಾಗರಕ್ಕೆ ಪ್ರಯಾಣಿಸಿದ್ದಾಯಿತು. ಮಾರನೆ ದಿನ ಅತ್ಯುತ್ಸಾಹದಿಂದ "ಜೀವನದಲ್ಲೊಮ್ಮೆ ನೋಡಿದ ಜೋಗದ ಗುಂಡಿನ " ಇಳಿದು ಅಷ್ಟೆ ಉತ್ಸುಹಕತೆಯಿಂದ ಹತ್ತಲು ಪ್ರಯತ್ನಿಸಿ, ವಿಫಲರಾಗಿ ಹ್ಯಾಪ್ಮೋರೆ ಹಾಕಿಕೊಂಡು ಕಷ್ಟಪಟ್ಟು ಏರಿದ್ದಯಿತು. ಕೊನೆಗೆ ಅಂತು ಇಂತೂ ಶಿವಮೊಗ್ಗ ತಲುಪಿ ರೈಲು ಹತ್ತಿದ ಮೇಲೆನೆ ನಮಗೆ ಮತ್ತೆ ಬೆಂಗಳೂರು, ಟ್ರಾಫಿಕ್ ಜಾಮ್, ಪೋಲ್ಲುಶನ್, ಡೆಡ್ಲೈನ್, ಪ್ರಾಜೆಕ್ಟ್ ರಿಲೀಸ್ ಅಂತೆಲ್ಲ ನೆನಪಾಗಿದ್ದು.