Thursday, June 18, 2009

ನಾನು, ನೀನು ಮತ್ತು ಮಳೆ

ಮಳೆಯ ಆರ್ಭಟಕ್ಕೆ ಸೋತು ಬೆಚ್ಚಗಿನ ಗೂಡು ಸೇರಿದರೂ ಅಂದು ನಾವಿಬ್ಬರು ಮಳೆಯಲಿ ತೊಯ್ದು ತೊಪ್ಪೆಯಾದ ನೆನಪು ಸಾಗರದ ಅಲೆಗಳಂತೆ ಮರಳಿಬರುತ್ತಿದೆಯಲ್ಲ! ಇಂದಾದರೂ ಮನೆ ಬೇಗ ತಲುಪಬೇಕೆಂದುಕೊಂಡರೂ ನಿನ್ನ ಜೊತೆಯಲ್ಲಿರುವಾಗ ಸಮಯಸರಿದಿದ್ದು ತಿಳಿಯದೆ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಲ್ಲವೇ? ನಾವು ಹೊರಡುವಾಗ ಮಬ್ಬುಗತ್ತಲು ಒಂದೆರಡು ಹೆಜ್ಜೆ ನಿನ್ನ ಜೊತೆ, ಆ ಕ್ಷಣದಲ್ಲೇ ಕಾರ್ಮೋಡ ಆವರಿಸಿ ನಿನ್ನ ಮಾತಿನಂತೆಯೆ ಪಟಪಟನೆ ಸುರಿಯ ತೊಡಗಿತ್ತು ಮಳೆ. ನಿನಗೆಲ್ಲಿ ಹುಷಾರು ತಪ್ಪುವುದೋ ಎಂಬ ಆತಂಕದಲ್ಲಿ ನಾನಿದ್ದರೆ "ಮಳೆಯಲ್ಲೇ ಹೋಗೋಣ; ಸಖತ್ತಾಗಿರತ್ತೆ" ಎಂದು ಹುರಿದುಂಭಿಸಿದ್ದು ನೀನು ತಾನೇ. ನನಗೆ ನೀನು ನಿನಗೆ ನಾನು ಕೊಡೆಯಾಗಿ ಇಡತೊಡಗಿದ್ದೆವು ಒಟ್ಟಿಗೆ ಹೆಜ್ಜೆ. ಮೊದಮೊದಲು ಹನಿಗಳ ಸಂಗ ಬೇಸರವಾದರೂ ನಮ್ಮ ನಡಿಗೆಗೇನೂ ಅವು ತರಲಿಲ್ಲ ಭಂಗ. ನೀನಿದ್ದಿದ್ದರಿಂದಲೇ ಒಂದಿಷ್ಟು ಹುಮ್ಮನಸ್ಸು ಮೂಡಿ ಒಂಟಿಯಾಗಿ ಸುರಿವ ಮಳೆಗೆ ನಾವು ಜೊತೆಗಾರರಾಗಿದ್ದು. ತಲೆಯ ಮೇಲೆ ಬಿದ್ದ ಮಳೆಯಹನಿಗಳ ಬಳಗ ಚಿಕ್ಕ ತೊರೆಗಳಾಗಿ ಮುಖದಮೇಲೆ ಬಂದಾಗ ಅವನ್ನು ಕೈಯಿಂದ ಒರೆಸಿ ತೆಗೆಯುತ್ತಿದ್ದರೆ 'ಅವು ಮಳೆಯ ಹನಿಗಳಲ್ಲವೋ ಹುಡುಗ ನಿನ್ನ ಪ್ರೀತಿಗೆ ನನ್ನ ಆನಂದಬಾಷ್ಪ ಎಂದಿದ್ದೆ ನೀನು'. ಅಲ್ಲೆಲ್ಲೋ ಮಿಂಚು ಆಗಸದ ಮೂಲೆಯನು ಕ್ಷಣಕಾಲ ಬೆಳಗಿ ಮರೆಯಾದಾಗ ನನ್ನ ಕೈಹಿಡಿದು ಅದಕ್ಕೆ ಕೈತೋರಿಸಿ ಸಂಭ್ರಮಿಸಿದ್ದೆ ನೀನು. ತಣ್ಣಗಿನ ಮಳೆಯಲ್ಲಿಯೂ ಬೆಚ್ಚಗಿತ್ತು ನಿನ್ನ ಸ್ಪರ್ಶ. ಇದು ಆಶ್ಚರ್ಯ! ಸುಳ್ಳಲ್ಲ. ಗುಡುಗಿಗೆ ಬೆದರಿಸೋ ಉತ್ಸಾಹದಲ್ಲಿದ್ದವಳು ನಮ್ಮನು ಹೆದರಿಸಲು ಬಂದ ಗುಡುಗಿಗೆ ಬೆದರಿ ಪುಟ್ಟ ಮಗುವಿನಂತೆ ನನ್ನ ತಬ್ಬಿ ನಡೆಯಲಿಲ್ಲವೆ? ಮನೆಯ ಹೊರಗೆ ನಿಂತು ಬೆಂಬಿಡದೆ ನಮ್ಮ ಪ್ರೀತಿಯ ಕಾಯ್ದ ಮಳೆಗೆ ಥ್ಯಾಂಕ್ಸ್ ಹೇಳುತ ಇಷ್ಟವಿಲ್ಲದೆ ನನ್ನ ಕೈಬಿಟ್ಟು ಒಳನಡೆದದ್ದು ನೀನು ತಾನೇ ? ನಿನ್ನ ಪ್ರೀತಿಗೆ, ಜೀವನೋತ್ಸಾಹಕೆ ಮನಸೋತು ಬಂದ ಕಣ್ಣೀರು ಮಳೆಯಲ್ಲಿ ಬೆರೆತು ಮಳೆಯಾಗಿದ್ದು ನೀ ನೋಡಲಿಲ್ಲ ಹುಡುಗಿ.

No comments: