Wednesday, June 10, 2009

ನನ್ನ ಇಮೇಲ್ ಪುರಾಣ

ಇಂಟರ್ನೆಟ್ ಬಗ್ಗೆ ನಾನು ಮೊದಲು ಕೇಳಿದ್ದು ಪೀಯುಸಿ ಓದಬೇಕಾದರೆ. ಅಂದರೆ ಸುಮಾರು ೧೯೯೬-೧೯೯೭ ಸಮಯದಲ್ಲಿ. ಕಂಪ್ಯೂಟರನ್ನು ನೋಡಿದ್ದು ೮ ನೆ ತರಗತಿ ಓದುವಾಗ. 8thB ಸೆಕ್ಷನ್ನಲ್ಲಿ ನಮ್ಮೆಲರನ್ನು ಕೂಡಿಹಾಕಿ ಕಂಪ್ಯೂಟರ್ ಎಂಬ ಮಾಯಾ ಯಂತ್ರವನ್ನು ತೋರಿಸಿದಾಗ ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡಿದ್ದೆವು. ಅದರಲ್ಲೂ ನಮಗೆ ಆಶ್ಚರ್ಯವೆನಿಸಿದ್ದು ಕಂಪ್ಯೂಟರ್ 1, 0 ಗಳ ಭಾಷೆಯನ್ನು ಆಂತರಿಕವಾಗಿ ಉಪಯೋಗಿಸುತ್ತದೆ ಎಂಬ ಸಂಗತಿ. ನಂತರ ಪಿಯುಸಿ ಮುಗಿಸುವವರೆಗೂ ಕಂಪ್ಯೂಟರ್ ನೊಡನೆ ನನ್ನ ಒಡನಾಟ ಇರಲಿಲ್ಲ. ಇಂಜಿನಿಯರಿಂಗ್ 1st ಸೆಮಿಸ್ಟರ್ ನಲ್ಲಿ [chemistry cycle] ಮೊಟ್ಟ ಮೊದಲಬಾರಿಗೆ ಕಂಪ್ಯೂಟರ್ ಮುಟ್ಟುವ, ಉಪಯೋಗಿಸುವ, ಅದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಅವಕಾಶ. Thanks to C Programming Lab. ಮೊದಲೆಲ್ಲ ಲ್ಯಾಬ್ ನಲ್ಲಿ ಕಂಪ್ಯೂಟರ್ switch on ಮಾಡುವುದೇ ಒಂದು ದೊಡ್ಡ ಸಂಭ್ರಮ ಆಗಿತ್ತು ನನಗೆ. MSOffice ಓಪನ್ ಮಾಡುವಾಗ ಭಯ ಮಿಶ್ರಿತ ಕುತೂಹಲ. MSWord/Excel ನಲ್ಲಿ ಒಂದಿಷ್ಟು ಸರಕು ತುಂಬಿ save ಮಾಡಿದರೆ ಮನದಲ್ಲಿ ಸಿಹಿಯಾದ ಕೋಲಾಹಲ. ಟೈಪಿಸುವಾಗ ಅಕ್ಷರಗಳನ್ನು ಹುಡುಕಿ ಹುಡುಕಿ "Q ಎಲ್ಲೋ ಕಾಣಿಸ್ತ ಇಲ್ವಲ" ಎಂದೋ , "capital letter ಮೂಡಲು shift ಒತ್ತಬೇಕೋ ಅಥವಾ Ctrl ಒತ್ತಬೇಕೋ" ಎಂದು ಪಕ್ಕದವನನ್ನು ತಿವಿದು ಪದೇ ಪದೇ ಕೇಳುತ್ತಿದ್ದ ದೃಶ್ಯ ಇನ್ನು ನನ್ನ ಕಣ್ಣ ಮುಂದೆ ಇದೆ. ಈ ಎಲ್ಲ ಅನುಮಾನಗಳು ಪರಿಹಾರವಾಗಿ ಕಂಪ್ಯೂಟರ್ ಬಗ್ಗೆ ಒಂದಿಷ್ಟು ಜ್ಞಾನ ವ್ರುದ್ಧಿಯಗಬೇಕಾದರೆ ಒಂದು ಸೆಮಿಸ್ಟರ್ ಕಳೆದಿತ್ತು.

ಇದೆಲ್ಲದರ ನಡುವೆ ಈ ಇಮೇಲ್ ಎಂಬ ಒಂದು ಹೊಸದಾದ ಕಲ್ಪನೆಗೂ ನಿಲುಕದ ಸಂಗತಿಯೊಂದು ನನ್ನ ತಲೆಯನ್ನು ಕೊರೆಯುತ್ತಿತ್ತು. ೧೯೯೮-೯೯ ರ ಸಮಯದಲ್ಲಿ ಆಲ್ಲೊಂದು ಇಲ್ಲೊಂದು cyber cafe ಗಳಿದ್ದವು. ಒಂದು ಘಂಟೆಗೆ ೪೫ ರೂಗಳಷ್ಟು ಇಂಟರ್ನೆಟ್ ಉಪಯೋಗಕ್ಕಾಗಿ ತೆರಬೇಕಾಗಿತ್ತು. ಹಾಗಾಗಿ ಅದರ ಸಹವಾಸಕ್ಕೆ ನಾನು ಹೋಗಿರಲಿಲ್ಲ. ಅದೇ ವೇಳೆ ಕಾಲೇಜಿನಲ್ಲಿ internet ಸೌಲಭ್ಯವನ್ನು ನಾವು ಸ್ಟ್ರೈಕ್ ಎಂಬ ನಾಟಕ ಆಡಿದ ಮೇಲೆ ಕಲ್ಪಿಸಿದ್ದು ನನ್ನ ಇಮೇಲ್ ಬಗ್ಗೆ ಇದ್ದ ಕುತೂಹಲಕ್ಕೆ ಇಂಬು ಕೊಟ್ಟಿತು. ಈ ಕುತೂಹಲ ಒಂದು ಘಂಟೆಯಷ್ಟು [ಆಮೆಗತಿಯಲ್ಲಿ ಇದ್ದ download speed] internet ಉಪಯೋಗಕ್ಕೆ ಹಾತೊರೆದು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಸುಳ್ಳಲ್ಲ. ಮೊದಲನೆಯ ದಿನ practicles ಇದ್ದಿದ್ದರಿಂದ ಇಂಟರ್ನೆಟ್ lab ಗೆ ಹೋಗೋದಿಕ್ಕೆ ಆಗಿರಲಿಲ್ಲ. ಅದೇ ವೇಳೆ ನನ್ನ ಸ್ನೇಹಿತ ಸಂದೀಪ್ ಹುರುಪಿನಿಂದ ಬಂದು ಇಂಟರ್ನೆಟ್ ಬಗ್ಗೆ ಹೇಳುತ್ತಿದ್ದುದನ್ನು ಕೇಳಿ ಅವನ ಹತ್ತಿರ ಹೋಗಿ ಕೇಳಿದೆ,
"ಏನ್ ಮಾಡಿದ್ಯೋ ಇಂಟರ್ನೆಟ್ ನಲ್ಲಿ " ಅಂತ.
"ಏನೂ ಇಲ್ವೋ ಇಮೇಲ್ ಅಕೌಂಟ್ create ಮಾಡಿದೆ, yahoo.com, amezon.com ಎಲ್ಲ ನೋಡಿದೆ " ಅಂದ.
ಇಮೇಲ್ ಅನ್ನೋ ಪದ ಕಿವಿಗೆ ಬಿದ್ದಕೂಡಲೇ ನನ್ನ ಮೈ ಮನಗಳು ರೋಮಾಂಚನಗೊಂಡವು. ಮತ್ತೊಂದಿಷ್ಟು ಕೆದಕಿ ಕೇಳಲು ಅನುವಾದೆ.
"ಇಮೇಲ್ ಅಕೌಂಟ್ create ಮಾಡೋದು ಹೆಂಗೆ? "
"www.yahoo.com ಅಂತ ಟೈಪ್ ಮಾಡು. ಆ ವೆಬ್ಸೈಟ್ ಓಪನ್ ಆಗುತ್ತೆ. ಅಲ್ಲಿ register ಅಂತ ಇರತ್ತೆ, ಅಲ್ಲಿ ಕ್ಲಿಕ್ ಮಾಡಿದ್ರೆ ಒಂದು form open ಆಗುತ್ತೆ ಅಲ್ಲಿ ನಿನ್ details ತುಂಬಿ ok ಬಟನ್ ಒತ್ತು ಅದು ಹೋಗುತ್ತೆ."

websiteಉ, yahoo.comಉ ಯಾವುದೂ ತಲೆಗೆ ಹೋಗಲಿಲ್ಲ. ಅಲ್ಲದೆ ಫಾರಂ ತುಂಬಿಸೋದು ಯಾಕೆ ? ಇಲ್ಲೀವರೆಗೂ ಫಾರಂ ಅಂದ್ರೆ ಸರ್ಕಾರಿ ಕಛೇರಿಗಳಲ್ಲಿ ಅಥವಾ ಕಾಲೇಜಿನಲ್ಲಿ ತುಂಬಿಸುತ್ತಿದ್ದ ಫಾರಂ ಬಗ್ಗೆ ತಿಳಿದಿದ್ದ ನನಗೆ account opening form ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿಲ್ಲ. ಅಲ್ಲದೆ ಇನ್ನೊಂದು ಪ್ರಶ್ನೆ ನನ್ನ ನಾಲಿಗೆ ತುದಿಗೆ ಬಂದು ನಿಂತಾಗಿತ್ತು.

"ಫಾರಂ ಹೋಗುತ್ತೆ ಅಂದ್ಯಲ್ಲ ಎಲ್ಲಿಗೆ ಹೋಗುತ್ತೆ?"
ಹೌದಲ್ವಾ ಎಲ್ಲಿಗೆ ಹೋಗುತ್ತೆ? ಪ್ರಶ್ನೆ ಸಹಜವಾಗಿತ್ತು. . . . . . . . . . ಆದರೆ ಉತ್ತರ ಅವನ ಬಳಿ ಇರಲಿಲ್ಲ. ಹ್ಯಾಗಿರೋಕೆ ಸಾಧ್ಯ ಅವನು ನನಗಿಂತ one day ಸೀನಿಯರ್ ಆಗಿದ್ದ ಅಷ್ಟೆ.

ಅಂತೂ ಇಂತೂ ಅವರಿವರ ಬಳಿ ಅಷ್ಟು ಇಷ್ಟು ಮಾಹಿತಿ ಪಡೆದು ಇಮೇಲ್ ಅಕೌಂಟ್ ರಚಿಸಿದ್ದಾಯಿತು, ಉಪಯೋಗಿಸಿದ್ದೂ ಆಯಿತು. ಆದರೂ ಇಮೇಲ್ ನಲ್ಲಿ ಉಪಯೋಗಿಸುವ @ [at the rate] ಚಿಹ್ನೆ ಬಗ್ಗೆ ಎಲ್ಲೋ ಮೂಲೆಯಲ್ಲಿ ಇದ್ದ ಒಂಚೂರು ಕುತೂಹಲ ಇನ್ನು ತಣಿದಿರಲಿಲ್ಲ. ಮೊದಲು ಅದರ ಬಗ್ಗೆ ಮಾಹಿತಿ ಅಷ್ಟಾಗಿ ಸಿಕ್ಕಿರಲಿಲ್ಲ. ಅಲ್ಲದೆ ನನಗೆ google ಉಪಯೋಗ ಕೂಡ ಮೊದಮೊದಲು ತಿಳಿದಿರಲಿಲ್ಲ. ಆದರೆ ಇಂದು ಏನೋ ಗೂಗಲಿಸುವಾಗ @ ಬಗ್ಗೆ ಸಿಕ್ಕ ಮಾಹಿತಿ ನನ್ನ ಮನ ತಣಿಸಿತು.

೧೯೭೧ ರಲ್ಲಿ BBN [Bolt Bernek and Newman] ಕಂಪೆನಿಗೆ ಕಂಪ್ಯೂಟರ್ ಇಂಜಿನಿಯರ್ ಆಗಿ ಕೆಲಸಮಾಡುತ್ತಿದ್ದ ರೆ ಟಾಮ್ಲಿನ್ಸನ್ [Ray Tomlinson]ಎಂಬಾತ ಇಮೇಲ್ ಕಂಡುಹಿಡಿದವನು. ಜನರ ಹೆಸರಿನಲ್ಲಿ ಉಪಯೋಗಿಸುವ ಅಕ್ಷರಗಳನ್ನು ಬಿಟ್ಟು ಬೇರ್ಯಾವುದಾದರೂ ಕೀಲಿಮಣೆ ಅಕ್ಷರವನ್ನು ಉಪಯೋಗಿಸುವ ಚಿಂತನೆಯಲ್ಲಿರಬೇಕಾದರೆ ಅವನಿಗೆ ಹೊಳೆದ ಚಿಹ್ನೆ @. ಹಾಗಾಗಿ ನಾವು ಉಪಯೋಗಿಸುವ ಇಮೇಲ್ ನಲ್ಲಿ @ ಇದೆ. ಇನ್ನೊದು ಸಂಗತಿಯೇನೆಂದರೆ ಮೊದಲ ಇಮೇಲ್ ಸಂದೇಶದಲ್ಲಿದ್ದುದು "QWERTYUIOP" ಎಂಬ QWERTY ಕೀಲಿಮಣೆಯ ಮೊದಲನೆಯ ಸಾಲಿನ ಅಕ್ಷರಗಳು ಮಾತ್ರ ಎಂಬಲ್ಲಿಗೆ ನನ್ನ ಇಮೇಲ್ ಪುರಾಣವು ಮುಕ್ತಾಯವು.

No comments: