Tuesday, May 5, 2009

ಆಮೆಗತಿಯಲ್ಲಿ ಅಂತರ್ಜಾಲ.....!

ಮುಂದಿನ ಎರಡು ವರ್ಷಗಳಲ್ಲಿ ಅಂತರ್ಜಾಲ ಸಂಪರ್ಕವಿರುವ ನಿಮ್ಮ ಕಂಪ್ಯೂಟರ್ ನಿಧಾನಗತಿಯಲ್ಲಿ ಕೆಲಸಮಾಡುತ್ತಿದ್ದರೆ ಅಥವಾ ಹತ್ತಾರು ನಿಮಿಷಗಳ ಕಾಲ ಸ್ಥಬ್ಧವಾದರೆ ಅಥವಾ offline ಗೆ ಹೋದರೆ ನೀವು ಆಶ್ಚರ್ಯ ಪಡಬೇಕಿಲ್ಲ. ಈ ಸಮಸ್ಯೆಗೆ ಇಂಟರ್ನೆಟ್ ಬ್ರೌನ್ ಔಟ್ ಎಂಬ ವಿದ್ಯಮಾನವೇ ಕಾರಣವಾಗಿರಬಹುದು. ಸಾಮಾನ್ಯವಾಗಿ ಬ್ರೌನ್ ಔಟ್ (Brownout) ಪದವನ್ನು ಕಡಿಮೆಯಾಗುತ್ತಿರುವ / ನಶಿಸುತ್ತಿರುವ ಎಂಬರ್ಥದಲ್ಲಿ ಉಪಯೋಗಿಸಲಾಗುತ್ತದೆ. ಇಂಟರ್ನೆಟ್ ಬ್ರೌನ್ ಔಟ್ ಅನ್ನು ಅಂತರ್ಜಾಲದ ಬಳಕೆಯ ವೇಗ ಕಡಿಮೆಯಾಗುವ ಒಂದು ವಿದ್ಯಮಾನವೆನ್ನಬಹುದು.

ಅಂತರ್ಜಾಲವು ೧೯೮೯ ರಲ್ಲಿ ಸಾರ್ವಜನಿಕ ಬಳಕೆಗೆ ಬಂದಾಗ ಅದು ತಂದ ಸಾಧ್ಯತೆಗಳು ಅಗಾಧವಾಗಿದ್ದವು. ಅಂತರ್ಜಾಲವು ಅಪರಿಮಿತ ಮಾಹಿತಿ ಕಣಜವಾಗಿ ಮಾರ್ಪಡುವುದರಲ್ಲಿ ಯಾವುದೇ ಅನುಮಾನಗಳಿರಲಿಲ್ಲ. ಭೂಮಿಯಲ್ಲಿ ದೊರೆಯುವ ಬೇರೆ ಸಂಪನ್ಮೂಲಗಳಂತೆ ಅಂತರ್ಜಾಲಕ್ಕೂ ಅದರದೇ ಆದ ಮಿತಿಗಳಿವೆ ಎಂಬ ಸಂಗತಿ ಇತ್ತೆಚಿಗೆ ನಡೆಸಿದ ಸಂಶೋಧನೆಗಳಿಂದ ತಿಳಿದುಬಂದಿದೆ. ಈಗ ಚಾಲ್ತಿಯಲ್ಲಿರುವ VOIP, Video Conference, Video Sharing, File sharing, Multimedia download ಗಳ ಬಳಕೆ ವರ್ಷದಿಂದ ವರ್ಷಕ್ಕೆ ಅಂತರ್ಜಾಲದ ಉಪಯೋಗ ಶೇಕಡಾ ೬೦ ರಷ್ಟು ಹೆಚ್ಚುತ್ತಿದೆ. ಇದೆ ಪರಿಸ್ಥಿತಿ ಮುಂದುವರೆದರೆ ಮಾಹಿತಿ ಹೊತ್ತೊಯ್ಯುವ [physcal medium] ಜಾಲದ ಸಾಮರ್ಥ್ಯವು ಸಾಲದೇ ಇಂಟರ್ನೆಟ್ ಬ್ರೌನ್ ಔಟ್ ಗೆ ಕಾರಣವಾಗಬಹುದೆಂಬ ಕುತೂಹಲಕಾರಿ ಅಂಶವನ್ನು ಬೆಳಕಿಗೆ ತರಲಾಗಿದೆ. ಹಾಗಾದರೆ ಇಂಟರ್ನೆಟ್ ಬ್ರೌನ್ ಔಟ್ ನ ಉದ್ಭವಕ್ಕೆ ಕಾರಣಗಳೇನು? ಅದರ ಅನಾನುಕೂಲಗಳೇನು? ಎಂಬ ಪ್ರಶ್ನೆಗಳು ಮೂಡುತ್ತವೆ.

ಎಲ್ಲರಿಗೂ ತಿಳಿದಿರುವಂತೆ ಅಂತರ್ಜಾಲವು ಸಹಸ್ರಾರು ಗಣಕಯಂತ್ರಗಳ ಜಾಲಗಳ ನಡುವೆ ಸಂಪರ್ಕವನ್ನು ಏರ್ಪಡಿಸಿ ನಿರ್ಮಿಸಲಾದ ಬೃಹತ್ ಜಾಲ. ಇದು ಇಂಟರ್ನೆಟ್ ಪ್ರೋಟೋಕೋಲ್ ಎಂಬ ವ್ಯವಸ್ಥೆಗಳ ಮುಖಾಂತರ ಮಾಹಿತಿ ಸಂವಹನ ನಡೆಸುತ್ತದೆ. ಇಂತಹ ಬೃಹತ್ ಜಾಲದಲ್ಲಿ ಮಾಹಿತಿ ರವಾನೆ ನಡೆಯುವುದು ಫೈಬರ್ ಆಪ್ಟಿಕ್ / ಕಾಪರ್ ಕೇಬಲ್ ಗಳ ಮೂಲಕ. ಈ ತಂತಿಗಳ ಜಾಲಕ್ಕೆ ತನ್ನದೇ ಆದ ಮಾಹಿತಿ ಹೊತ್ತೊಯ್ಯುವ ಸಾಮರ್ಥ್ಯವಿರುತ್ತದೆ. ಯುಟ್ಯೂಬ್ ನಂತಹ ವೀಡಿಯೊ ಹಂಚಿಕೊಳ್ಳುವಂತಹ ವೆಬ್ ಸೈಟ್ ಗಳ ಬಳಕೆಯಿಂದ ಉಂಟಾಗುತ್ತಿರುವ ಮಾಹಿತಿ ದಟ್ಟಣೆ [traffic] ಪ್ರತಿವರ್ಷ ಹೆಚ್ಚುತ್ತಿದೆ. ಇದರಿಂದಾಗಿ ಫೈಬರ್ ಆಪ್ಟಿಕ್ / ಕಾಪರ್ ಕೇಬಲ್ ಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಾಹಿತಿಯನ್ನು ರವಾನಿಸಬೇಕಾಗುತ್ತದೆ. ಉದಾಹರಣೆಗೆ ಯುಟ್ಯೂಬ್ ನ ಒಂದು ತಿಂಗಳ ಬಳಕೆಯಿಂದ ಉಂಟಾಗುವ ಮಾಹಿತಿ ದಟ್ಟಣೆ ೨೦೦೨ ರ ವರ್ಷದಲ್ಲಿ ಆದ ಮಾಹಿತಿ ದಟ್ಟಣೆಗೆ ಸಮ. ತಜ್ಞರು ಈ ದಟ್ಟಣೆಯನ್ನು exabyte [=10^18] ನಿಂದ ಅಳೆಯುತ್ತಾರೆ. ಒಂದು exabyte ಸುಮಾರು ಐವತ್ತು ವರ್ಷಗಳ DVD ಮಾಹಿತಿಗೆ ಸಮ. ಹೆಚ್ಚಿನ ಮಾಹಿತಿ ಉಪಯೋಗದಿಂದ ಹೆಚ್ಚಿನ ದಟ್ಟಣೆ ಇದರಿಂದ ಮಾಹಿತಿ ಸಂಗ್ರಹಣಾ ವೇಗದಲ್ಲಿ ಕಡಿತ.

ಈ ಸಮಸ್ಯೆಗೆ ಪರಿಹಾರವೆಂದರೆ ಮಾಹಿತಿ ರವಾನಿಸುವ physical medium ನ ಸಾಮರ್ಥ್ಯವನ್ನು ಹೆಚ್ಚಿಸುವುದು. ಅರ್ಥಾತ್ ಅಂತರ್ಜಾಲದ ಮೂಲಭೂತ ಸೌಕರ್ಯಗಳನ್ನು [infrastructure] ಮೇಲ್ದರ್ಜೆಗೆ ಏರಿಸುವುದು / ಅಭಿವೃದ್ಧಿಪಡಿಸುವುದು. ಈ ಸೇವೆಯನ್ನು ಒದಗಿಸುವ ಕಂಪೆನಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಇಂಟರ್ನೆಟ್ ಬ್ರೌನ್ ಔಟ್ ಉನ್ನತ ಮಟ್ಟದ ತಾಂತ್ರಿಕ ಸಮಸ್ಯೆಯಾಗಿದ್ದು ಜನ ಸಾಮಾನ್ಯರಿಗೆ ಅಷ್ಟಾಗಿ ಸಂಭಂಧಿಸಿಲ್ಲದಿದ್ದರೂ ಈಬಗ್ಗೆ ತಿಳಿದಿಕೊಂಡಿರುವುದು ಅವಶ್ಯ ಎಂಬುದು ನನ್ನ ಭಾವನೆ.

1 comment:

ಜೋಗಿತಿ said...

ನಮಸ್ತೆ... ನಿಮ್ಮ ಬ್ಲಾಗ್ ಬರಹಗಳು ಉತ್ತಮವಾಗಿವೆ. ಇನ್ನಷ್ಟು ಬರೆಯುತ್ತಿರಿ. ಹಾಗೇ ಹೆಚಹಚಿನ ವಿಷಯಗಳು ಹೆಚ್ಚಿನ ಜನರಿಗೆ ತಲುಪಿಸುವ ಪ್ರಯತ್ನಕೂಡ ಮಾಡಿ. ಯಾಕೆಂದರೆ ವಿಷಯವುಳ್ಳ ಬರಹಗಳು ಹೆಚ್ಚು ಜನರಿಗೆ ತಲುಪಿದರೆ ಸಾರ್ಥಕ ಅಲ್ಲವೆ?