Wednesday, December 16, 2009

Bicycle - Buy a Cycle

Get a bicycle.  You will not regret it if you live. 
                ~Mark Twain, "Taming the Bicycle"


      ಕೆಲವು ದಿನಗಳ ಹಿಂದೆ ಆಜ್ಜಿಯ ಶ್ರಾದ್ಧ ಇತ್ತು ಹಾಗಾಗಿ ಊರಿಗೆ ಹೋಗಿದ್ದೆ. ಅಪರೂಪಕ್ಕೆ ಬೇಗ ಎದ್ದು ಅದೂ ಇದೂ ಕೆಲಸ ಮುಗಿಸೋ ಹೊತ್ತಿಗೆ 10 ಗಂಟೆಯಾಗಿತ್ತು. ಅದೇ ವೇಳೆ ಪುರೋಹಿತರು ಬಂದರು. ಅವರನ್ನು ಉಪಚರಿಸಿ ಉಭಯಕುಶಲೋಪರಿ ವಿನಿಮಯದ ನಂತರ ಮನೆಯ ಹೊರಗೆ ಕಾಲಿಟ್ಟೆ. ನೋಡಿದ್ರೆ ಚಪ್ಪರದ ಕೆಳಗೊಂದು ಸೈಕಲ್ ನಿಂತಿದೆ! [ಮನೆಯಲ್ಲಿ ಅಡಿಕೆ ಕೊಯ್ಲು ನಡಿತಿರೋದ್ರಿಂದ ಸೋಗೆಯ ಚಪ್ಪರ ಹಾಕಿದ್ದಾರೆ.] ಯಾರದ್ದು ಅಂತ ಗೊತ್ತಾಗಲಿಲ್ಲ. ಆಮೇಲೆ ಹೊಳೀತು ಪುರೋಹಿತರದ್ದು ಅಂತ. ಸೈಕಲ್ ನೋಡಿ ಯಾಕೋ ಮನಸ್ಸು ತಡೀಲಿಲ್ಲ. ಏನಾದ್ರು ಆಗ್ಲಿ ಅಂತ ನಿಲ್ಲಿಸಿದ್ದ ಸೈಕಲ್ ಹತ್ತಿ ಅಲ್ಲೇ ಅಂಗಳದಲಿ ಒಂದೆರಡು ಸುತ್ತು ಹಾಕಿದೆ. ಯಾಕೋ ತೃಪ್ತಿಯಾಗಲಿಲ್ಲ. ಹಾಗೆ ಮನೆಯ ಹಿಂದೆ ಓಡಿಸಿಕೊಂಡು ಹೋಗಿ ಬಾವಿಕಟ್ಟೆಯನ್ನು ಸುತ್ತು ಹಾಕಿ ಪುನಃ ಮನೆಯ ಅಂಗಳಕ್ಕೆ ಬಂದೆ. ಇದೆ ರೀತಿ ನಾಲ್ಕೈದು ಸುತ್ತು ಹಾಕಿದ ಮೇಲೆ ಮನಸ್ಸು ಪ್ರಫುಲ್ಲವಾಯಿತು. ಸೈಕಲ್ ಗೆ ಹೊಂದಿಕೊಂಡಂತೆ ಹತ್ತಾರು ನೆನಪುಗಳು ಒಂದರ ಹಿಂದೊಂದು ರೈಲಿನ ಬೋಗಿಗಳಂತೆ ಬಂದವು.

                 ಎಲ್ಲ ಹುಡುಗರಿಗೂ ಇರುವಂತೆ ನನಗೂ ಚಿಕ್ಕಂದಿನಿಂದಲೇ ಸೈಕಲ್ ಬಗ್ಗೆ ವಿಪರೀತ ಕುತೂಹಲ, ಆಸಕ್ತಿ,..........ಹುಚ್ಚು. ಮೂರು ನಾಲ್ಕು ತರಗತಿಯಲ್ಲಿರುವಾಗ ರಜಾದಿನಗಳಲ್ಲಿ ಚಿಕ್ಕಮ್ಮನ ಮನೆಗೆ ಹೋದಾಗ ಚಿಕ್ಕ ಸೈಕಲ್ ಹೊಡೀತಿದ್ದೆ. ಅದು ಗಂಟೆಗೆ ಒಂದು ರೂಪಾಯಿಗೆ ಸಿಗುತ್ತಿದ್ದ ಬಾಡಿಗೆ ಸೈಕಲ್. ನಾವೊಂದಿಷ್ಟು ಹುಡುಗರು ಬಾಡಿಗೆ ಸೈಕಲ್ ನಲ್ಲಿ ದಾವಣಗೆರೆಯ ಬೀದಿಗಳನ್ನು ಸುತ್ತಿದ ನೆನಪು ಚೆನ್ನಾಗಿಯೇ ಇದೆ. ಮನೆಯಲ್ಲಿ ಅಪ್ಪನ ಸೈಕಲ್  ಇದ್ದರೂ ಅದು ನನಗೆ ಆಗ್ತಾ ಇರಲಿಲ್ಲ. ಅಂತೂ ಇಂತೂ ಯಾವಾಗ ಉದ್ದ ಆಗ್ತೀನಿ ಅಂತ ಕಾದು ಕಾದು ಐದನೆಯ ತರಗತಿಗೆ ಬರುವ ವೇಳೆಗೆ ಸೈಕಲ್ ರೂಲ್ ಹಿಡಿದು ಓಡಿಸೋದು ಕಲಿತಿದ್ದೆ. [ಆಗ ಅಪ್ಪ ತಮ್ಮ ಸೈಕಲ್ ಮಾರಾಟ ಮಾಡಿ ಮೊಪೆಡ್ ತಗೊಂಡಿದ್ರು.] ನನ್ನೆಲ್ಲ experiment ಗೆ ಆಹುತಿ ಆಗ್ತಾ ಇದ್ದಿದ್ದು ಮನೆಗೆ ಬರುತ್ತಿದ್ದವರ ಸೈಕಲ್ ಗಳು. ಐದನೆಯ ತರಗತಿ ಕೊನೆಗೆ ಬರೋ ಹೊತ್ತಿಗೆ ಸೀಟು ಹತ್ತಿ ಸೈಕಲ್ ಓಡಿಸೋದು ಕಲಿತೆ. ತುಂಬಾ ತಾಳ್ಮೆಯಿಂದ ನನ್ನ ಹಿಂದೆಓಡುತ್ತ ಸೈಕಲ್ ಹಿಡಿದು ಬ್ಯಾಲೆನ್ಸ್ ಮಾಡಲು ಸಹಾಯ ಮಾಡಿದ್ದು  ಮುಕುಂದ ಎಂಬ ನನ್ನ ದೊಡ್ಡಮ್ಮನ ಮನೆಯ ಪಕ್ಕದ ಮನೆಯವನು. ಯಾವಾಗ ನಾನು ಸೈಕಲ್ ಆರಾಮವಾಗಿ ಓಡಿಸಲು ಕಲಿತೆನೋ ಆವಾಗಿನಿಂದ ಮನೆಗೆ ಯಾರೇ ಸೈಕಲ್ ತಗೊಂಡು ಬಂದ್ರು ನಾನು ಓಡಿಸಲು ತಗೊಂಡು ಹೋಗ್ತಾ ಇದ್ದೆ. ನಿಜ ಹೇಳ್ಬೇಕಂದ್ರೆ ಯಾರಾದ್ರು ಸೈಕಲ್ ತಗೋದು ಬರ್ಲಪ್ಪ ಅಂತ ಕಾಯುತ್ತ ಇದ್ದೆ. ಯಾರೇ ಬಂದ್ರು ಅವರ ಹತ್ತಿರ ಸೈಕಲ್ ಇರಲಿ ಎಂಬುದೇ ನನ್ನ ಪ್ರಾರ್ಥನೆ ಆಗಿತ್ತು.

               ಹೀಗೆ  ಕಂಡಕಂಡವರ ಸೈಕಲ್ ಹೊಡೆಯೋದು ನೋಡಿ ನಮ್ಮಮ್ಮ ನನಗೂ ಒಂದು ಸೈಕಲ್ ಕೊಡಿಸೋ ಮನಸ್ಸು ಮಾಡಿದ್ರು; ಆದರೆ ಆಗ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಹಾಗೂ ಹೀಗೂ ವರ್ಷಗಳು ದೂಡ್ತ ಹೈಸ್ಕೂಲಿಗೆ ಸೇರಿದೆ. ಸ್ಕೂಲಿನ ಸಮಯಕ್ಕೆ ಸರಿಯಾಗಿ ಬಸ್ಸಿಲ್ಲದೆ ಬೆಳಿಗ್ಗೆ ಅಟೆಂಡರುಗಳು  ಬರುವ ಮೊದಲೇ ಶಾಲೆಗೇ ಹೊಗಿಯಾಗಿರತಿತ್ತು. ಸಂಜೆ ನಡೆದು ಬರಬೇಕಾಗ್ತಿತ್ತು. ನಾನು NCC ಗೆ ಬೇರೆ ಸೇರಿಕೊಂಡಿದ್ದೆ. ಒಂಬತ್ತನೆಯ ತರಗತಿಯ ಶುರುವಿನ ವೇಳೆ RD (republic day) ಕ್ಯಾಂಪ್ ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಹತ್ತು ದಿನಗಳ ಕ್ಯಾಂಪ್ ಇದ್ದಿದ್ದು ಸೂರತ್ಕಲ್ ನಲ್ಲಿ. ಕ್ಯಾಂಪ್ ಮುಗಿಸಿ ಮನೆಗೆ ಕಾಲಿಟ್ಟರೆ ಜಗುಲಿಯಲ್ಲಿ ನಿಂತಿದೆ ಒಂದು ಹೊಸ ಸೈಕಲ್. ಬ್ಯಾಗ್ ಇಳಿಸಿದವನೇ ಸೈಕಲ್ ಹತ್ತಿರ ನಿಂತು ಅಲ್ಲೇ ವಿಶ್ರಮಿಸುತ್ತಿದ್ದ ಅಪ್ಪನನ್ನು,  "ಯಾರದ್ದು ಸೈಕಲ್ " ಅಂತ ಕೇಳಿದೆ. ಅವರು ನಗುತ್ತ "ನಿಂದೆ"  ಅಂದ್ರು. ನನಗಂತೂ ನಂಬೋಕೆ ಆಗಲಿಲ್ಲ. ಒಳಗಿಂದ ಬಂದ ಅಮ್ಮ ಅದನ್ನು confirm ಮಾಡಿದ್ರು. ನನಗೋ ಹೇಳರದಷ್ಟು ಖುಷಿ, ಸಂಭ್ರಮ. ನಮ್ಮಪ್ಪ ಕೊಟ್ಟ ಎರಡು suprise ಗಳಲ್ಲಿ ಇದು ಒಂದನೆಯದು [ಮತ್ತು ಮೊದಲನೆಯದು.]. ಆ ವೇಳೆಗಾಗಲೇ ಕಂಡಕಂಡವರ ಸೈಕಲ್ ಹೊಡೆದು ಸೈಕಲ್ ಹೊಡೆಯೋದ್ರಲ್ಲಿ expert ಆಗಿದ್ದೆ. ಅಲ್ಲಿಂದ ಹೈಸ್ಕೂಲ್ ಮುಗಿಯುವ ವರೆಗೂ ಅದೇ ನನ್ನ ಮೆಚ್ಚಿನ ಸಂಗಾತಿ. ಸ್ವಂತ ಸೈಕಲ್ ಬಂದ ಮೇಲೆ ನನ್ನನ್ನು ಹಿಡಿಯೋರು ಯಾರೂ ಇಲ್ಲದ ಹಾಗೆ ಆಯಿತು. ಆ ಎರಡು ವರ್ಷ ಸೈಕಲ್ ಬಿಟ್ಟು ನನ್ನ ಜೀವನವನ್ನು ಯೋಚಿಸಲೂ ಸಾಧ್ಯ ಇರಲಿಲ್ಲ. ಮಳೆ, ಚಳಿ, ಗಾಳಿ, ಬಿಸಿಲು, ತಗ್ಗು, ಏರು, ಕೆಸರು, ಟಾರು, ಕಲ್ಲು, ಮಣ್ಣು, ಹೊಂಡ, ಒಳದಾರಿ, ಗಾಡಿ ದಾರಿ, ಪಾಚಿಗಟ್ಟಿದ ದಾರಿ, ಯಾವುದನ್ನೂ ಲೆಕ್ಕಿಸದೆ; ನಗು, ಅಳು, ನಿರಾಸೆ, ಹತಾಶೆ, ಉತ್ಸಾಹ, ಸಂಭ್ರಮ, ಅವಸರ, ಬೇಸರ ಎಲ್ಲದಕ್ಕೂ ಸಾಕ್ಷಿಯಾಗಿ ನನ್ನ ಸೈಕಲ್ ನನ್ನೊಡನಿತ್ತು.



                 ನಾನು ಸೈಕಲ್ ತೆಗೆದುಕೊಂಡ ಮೇಲೆ ನನ್ನ ಸ್ನೇಹಿತರೂ ತಗೊಂಡರು. ಹಾಗಾಗಿ ಎಲ್ಲರೂ ಒಟ್ಟಿಗೆ ಸ್ಕೂಲಿಗೆ ಹೋಗಿ ಬರ್ತಾ ಇದ್ವಿ. ಹೈಸ್ಕೂಲ್ ಮುಗಿಸಿ ಸೈಕಲ್ ಸ್ಟ್ಯಾಂಡ್ ನಿಂದ ಬಸ್ ಸ್ಟ್ಯಾಂಡ್ ವರೆಗೂ ಸೈಕಲ್ ಗಳ ಮೆರವಣಿಗೆ, ಒಂದರಹಿಂದೊಂದು ಸೈಕಲ್ ಗಳು. ಬೆಲ್ ಮಾಡುತ್ತಾ ನಡೆಯುತ್ತಿದ್ದವರನ್ನು ಅತ್ತಿತ್ತ ಸರಿಸುತ್ತ ಮಧ್ಯದಲ್ಲಿ ಜಾಗ ಮಾಡಿಕೊಂಡು ವೇಗವಾಗಿ ನುಗ್ಗುತ್ತಿದ್ದೆವು. ಹಳೆದು, ಹೊಸಾದು, ಬ್ರೇಕ್ ಇಲ್ಲದೆ ಇರೋವು , ಪೆಡಲ್ ಇಲ್ಲದೆ ಇರೋವು, ಸೀಟ್ ಕಿತ್ತು ಹೋಗಿರೋವು, ವಿಚಿತ್ರ ಶಬ್ದ ಮಾಡುವಂತವು......ಹೀಗೆ ಏನೇನೊ ತರದ ಸೈಕಲ್ ಗಳು. ನಾನಾ ವಿದಧ ಸೈಕಲ್ ಗಳಿದ್ದರೂ ಅದನ್ನು ಓಡಿಸುವ ಸಂಭ್ರಮ ಎಲ್ಲರಿಗೂ ಒಂದೇ ಆಗಿತ್ತು. ಯಾರೋ ಒಬ್ಬರು ಒಂದು ದಿನ ತಮ್ಮ ಪುಟ್ಟ ಸೈಕಲ್ ನ್ನು ತಂದಿದ್ದು ಇನ್ನೂ ನನಗೆ ನೆನಪಿದೆ. ಸೈಕಲ್ ಬಂದ ಮೇಲೆ ಒಂದಿಷ್ಟು ಕೆಲಸಗಳೂ ಜಾಸ್ತಿ ಆಯಿತು. ಮಿಲ್ ನಿಂದ  ಮೂಟೆ ತರೋದು, ಸಂತೆಯಿಂದ ತರಕಾರಿ ತರೋದು ಹೀಗೆ....ಅದೇನೂ ದೊಡ್ಡ ವಿಚಾರ ಅನ್ನಿಸಿರಲಿಲ್ಲ.  
             
                 ಪಿಯುಸಿ ಗೆ ಕಾಲೇಜು ಸೇರಿದ್ದು residential ಆಗಿದ್ದರಿಂದ ನನ್ನ ಸೈಕಲ್ ಮೂಲೆ ಸೇರಿತು. ಸುಮ್ನೆ ತುಕ್ಕು ಹಿಡಿಯುತ್ತೆ ಅಂತ ಅಪ್ಪ ಅದನ್ನು ಯಾರಿಗೋ ಮಾರಿದರು. ಮೊದಲು ಅದಿಕ್ಕೆ ವಿರೋಧಿಸಿದರು ನಾನು ಏನು ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಅದರೂ ಸೈಕಲ್ ಬಗ್ಗೆ ಇರುವ ನೆನಪುಗಳಿಗೆ ಕೊರತೆ ಇಲ್ಲ.

                  ಸೂರ್ಯ ಮೂಡೋ ಹೊತ್ತಿನಲ್ಲಿ ತಂಗಾಳಿ ಸೇವಿಸುತ್ತ, ಸಂಗೀತ ಕೇಳುತ್ತ ಸೈಕಲ್ ಓಡಿಸುವ ಮಜಾನೆ ಬೇರೆ. ಈಗಂತೂ ಮಾರ್ಕೆಟಿನಲ್ಲಿ ವಿಧ ವಿಧದ ಸೈಕಲ್ ಗಳು ಮಾರಾಟಕ್ಕಿವೆ. ಗಿಯರ್ ಸೈಕಲ್, ಫೋಲ್ಡಿಂಗ್ ಸೈಕಲ್, ಮೌಂಟೈನ್ ಬೈಕ್, conference ಸೈಕಲ್ ಹೀಗೆ....ಏನೇನೊ ಮಾದರಿಗಳು. ಯಾರಿಗಾದರು ಸೈಕಲ್ ಮಾದರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಬಹುದು. ಸೈಕಲ್ ಡಿಸೈನ್ ಬಗ್ಗೆ ಆಸಕ್ತಿ ಇದ್ದಾರೆ ಈ ಕೆಳಗಿನ ಬ್ಲಾಗ್ ಅತ್ಯುತ್ತಮ ಮಾಹಿತಿ ಹೊಂದಿದೆ.
http://bicycledesign.blogspot.com/








 
 


                  ಮನುಷ್ಯನು invent ಮಾಡಿರುವ ಅತ್ಯಂತ ಉಪಯುಕ್ತ ಸಾಧನ ಸೈಕಲ್. ಪಾಶ್ಚಿಮಾತ್ಯ ದೇಶಗಳಲ್ಲಿ ಬೈಕ್ ಅಂತಾನೂ ಕರೀತಾರೆ. ಸೈಕಲ್ ನಷ್ಟು ಉಪಯುಕ್ತ, ಆರಾಮದಾಯಕ ಹಾಗು ಆರೋಗ್ಯಕ್ಕೆ ಒಳ್ಳೆಯದಾದ ಸಾಧನ ಬೇರೊಂದಿಲ್ಲ. ಅದಿಕ್ಕೆ "When man invented the bicycle he reached the peak of his attainments.  Here was a machine of precision and balance for the convenience of man.  And (unlike subsequent inventions for man's convenience) the more he used it, the fitter his body became.  Here, for once, was a product of man's brain that was entirely beneficial to those who used it, and of no harm or irritation to others.  Progress should have stopped when man invented the bicycle" ಅಂತ ಹೇಳಲಾಗಿದೆ. ಸೈಕಲ್ ಬಗ್ಗೆ ಏನಾದ್ರು ಉಕ್ತಿಗಳು ಇದ್ದೀಯ ಅಂತ ಗೂಗಲಿಸಿದರೆ ಈ ಕೊಂಡಿ ಸಿಕ್ಕಿತು ನೋಡಿ. http://www.quotegarden.com/bicycling.html .

-- ನವೀನ್ ಕೆ.ಎಸ್. 

No comments: