Sunday, June 28, 2009

ಕನಸು - ನಕ್ಷತ್ರ

ನಿನ್ನ ಬಗ್ಗೆ
ಬೀಳುವ
ಕನಸುಗಳೆಲ್ಲ
ರಾತ್ರಿ
ಎದ್ದು
ನಕ್ಷತ್ರಗಳಾದವೆ........?




Saturday, June 27, 2009

ಅಪರಿಚಿತ ಸುಂದರಿ

ಚಿಕ್ಕಂದಿನಿಂದ ಬಸ್ಸಿನಲ್ಲಿ ಪ್ರಯಾಣಿಸುವಾಗ ಕಿಟಕಿ ಪಕ್ಕದ ಸೀಟಿನಲ್ಲೇ ಕೂರಬೇಕೆಂಬ ಆಸೆ. ಆ ಆಸೆ ಇನ್ನು ನನ್ನ ಬಿಟ್ಟಿಲ್ಲ ಅಥವಾ ನಾನು ಅದನ್ನು ಬಿಟ್ಟಿಲ್ಲ. ಈಗಲೂ ಬಸ್ಸು ಹತ್ತಿದ ಕೂಡಲೇ ನಾನು ಮಾಡುವ ಮೊದಲ ಕಸರತ್ತು ಕಿಟಕಿ ಸೀಟು ಖಾಲಿ ಇದೆಯಾ ನೋಡೋದು. ಚೆನ್ನಾಗಿ ಗಾಳಿ ಬೀಸುತ್ತೆ ಅಂತಲೋ, ಹೊರಗಿನ ಒಂದಷ್ಟು 'ನೋಟಗಳು' ಕಾನಬಹುದೆಂದೋ ಹೀಗೆ ಕಾರಣಗಳು. ಊರಿಗೆ ಹೋಗುವಾಗ KSRTC ಬಸ್ಸಿನಲ್ಲಿ reservation ಮಾಡಿಸುವುದು ಕಿಟಕಿ ಸೀಟ್ ಸಿಕ್ಕರೆ ಮಾತ್ರ. ಇಲ್ದಿದ್ದ್ರೆ ordinary ಬಸ್ಸಲ್ಲೇ ನನ್ನ ಪ್ರಯಾಣ. ಹೀಗೆ ಒಂದು ಸಲ ಕಿಟಕಿ ಸೀಟ್ ಕಾಯ್ದಿರಿಸಿ 'ಹರಿ ಹರಿ' ಅಂತ ನನ್ನ ಕನಸಿನ ಪ್ರಯಾಣಕ್ಕೆ ಕಾಮತ್ ಹೋಟೆಲಿನಲ್ಲಿ ಭರ್ಜರಿಯಾಗಿ ಊಟ ಮಾಡಿ KSRTC ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿನ ಬರುವಿಕೆಗಾಗಿ ಕಾಯತೊಡಗಿದೆ. ವೀಕೆಂಡ್ ಆಗಿದ್ದರಿಂದ ಜನರು ಜಾಸ್ತಿ ಇದ್ದರು, ಬಸ್ಸುಗಳು ಜಾಸ್ತಿ ಇದ್ದವು. ಸ್ವಲ್ಪ ಹೊತ್ತಿನ ನಂತರ ಪ್ರವಾಹದೊಪಾದಿಯ ಜನರನ್ನು ಮತ್ತು ಆತ್ತಿತ್ತ ನೋಡಲಾಗದೆ, ಎಲ್ಲೂ ಹೊರಳಾಡಲಾಗದೆ ಉಸಿರುಕಟ್ಟಿ ನಿಂತ ದೈತ್ಯ ಬಸ್ಸುಗಳನ್ನು ಸಂಭಾಳಿಸಲಾಗದೇ ಹೆಣಗುತ್ತಿದ್ದ ಒಬ್ಬ ಸುಪೆರ್ವೈಸರ್ ಗೆ ನನ್ನ ಟಿಕೆಟ್ ತೋರಿಸಿದೆ. ಆಗಲೇ ಸಿಕ್ಕಾಪಟ್ಟೆ ಟೆನ್ಶನ್ ನಲ್ಲಿದ್ದ ಅವನು "ನಿಮ್ಮೆದುರಿಗೆ ಇದಿಯಲ್ರಿ. ಅಷ್ಟು ಗೊತ್ತಾಗಲ್ವ" ಅಂತ ಉಗಿದ. ನನ್ನೆದುರಿಗೆ ಇದ್ದ ಬಸ್ಸನ್ನು ಸರಿಯಾಗಿ ಗಮನಿಸದೆ ಅವನನ್ನು ಕೇಳಿದ್ದಕ್ಕೆ ನನಗೆ ನಾನೇ ಶಾಪ ಹಾಕಿಕೊಳ್ಳುತ್ತಾ ಬಸ್ಸಿನೆಡೆಗೆ ನಡೆದೆ. ಆಗಲೇ ತುಂಬ ಪ್ರಯಾಣಿಕರು ತಮ್ಮ ತಮ್ಮ ಸ್ಥಾನಗಳಲ್ಲಿ ಸ್ವಸ್ಥವಾಗಿ ವಿರಾಜಮಾನರಾಗಿದ್ದರು. ಒಂದು, ಎರಡು ಎಣಿಸುತ್ತ ಪ್ರೈಮರಿ ಸ್ಕೂಲ್ ಜ್ಞಾಪಿಸಿಕೊಳ್ಳುತ್ತ ನನ್ನ ಸೀಟ್ ಎದುರಿಗೆ ಬಂದು ನಿಂತೆ. ನೋಡಿದರೆ ಕಿಟಕಿ ಪಕ್ಕ ಸೀಟ್ ಖಾಲಿ, ಅದರ ಪಕ್ಕದ ಸೀಟ್ ಭರ್ತಿ. ಅದರಲ್ಲೇನು ವಿಶೇಷ ಇಲ್ಲ ಬಿಡಿ. ವಿಶೇಷ ಇರೋದು ಅದನ್ನು ಭರ್ತಿ ಮಾಡಿದ ವ್ಯಕ್ತಿಯಲ್ಲಿ. ಆ ವ್ಯಕ್ತಿಯನ್ನು ನೋಡಿದ ನನಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. my heart rate increased, temperature raised, palms got sweaty, stomach fluttered, throat tightened etc etc. ಇಷ್ಟೆಲ್ಲಾ ಒಂದೇಸಲ ಆದರೆ ಹೇಗಾಗಿರಬೇಡ 'ಒಂದೇ ನೋಟಕ್ಕೆ'. ಬ್ಯಾಗನ್ನು ಮೇಲಿರಿಸಿ ಅಲ್ಪ ಸ್ವಲ್ಪ ತದಬಡಾಯಿಸುತ್ತಲೇ "execuse me" ಎಂದೆ. ಕಿವಿಗೆ ಹೆಡ್ ಫೋನ್ ಸಿಕ್ಕಿಸಿಕೊಂಡು ಅದೇನೋ ಕೇಳುತ್ತಿದ್ದ 'ಅವಳು' ತಲೆಯೆತ್ತಿ ನಸುನಕ್ಕು "Hi" ಎಂದಳು. ನಾನು ಅವಳಿಗೆ ವಿಶ್ ಮಾಡಿ ಸ್ವಲ್ಪ ಜಾಸ್ತಿನೆ ಸಭ್ಯತೆ ತೋರುತ್ತ ಪಕ್ಕದಲ್ಲಿ ಕುಳಿತೆ. ನಾನು ಕೂರುವ ಹೊತ್ತಿಗೆ ಅವಳ ಮೊಬೈಲ್ ಗೆ ಯಾರದ್ದೋ ಕರೆ ಬಂದು ಅವಳು ಇಂಗ್ಲೀಷಿನಲ್ಲಿ ಉತ್ತರಿಸತೊಡಗಿದಳು. ಇಂಗ್ಲಿಷ ಮಾತಾಡೋ ಹುಡುಗಿ ಜೊತೆ ಇಡೀ ರಾತ್ರಿ ಪ್ರಯಣಿಸಬೇಕಲ್ಲ ಎಂದು ಕಸಿವಿಸಿನೂ ಆಯಿತು. [ನನಗೇನು ಇಂಗ್ಲಿಷ ಬಗ್ಗೆ ದ್ವೇಷವಿಲ್ಲ. ಆದರೆ ಕನ್ನಡ ಮಾತಾಡಲು ಬಂದರೂ ಇಂಗ್ಲಿಷ್ ಬಳಸುವರ ಬಗ್ಗೆ ಅಸಹನೆ ಅಷ್ಟೇ]. ಶಿವಮೊಗ್ಗಕ್ಕೆ ಹೊರಟಿರೋದ್ರಿಂದ ಕನ್ನಡ ಬಂದ್ರು ಬರಬಹುದೆಂಬ ಆಸೆ ದೂರದಲ್ಲಿ ಮನೆಮಾಡತೊಡಗಿತು. ಅದೂ ಅಲ್ಲದೆ ಕರೆ ಮಾಡಿದ ಆ ಕಡೆಯ ವ್ಯಕ್ತಿಗೆ ಕನ್ನಡ ಬಾರದಿದ್ದರೆ [ ಪಾಪ ]ಇವಳದೆನು ತಪ್ಪು ಅಲ್ವೇ! ಅವಳು ಮಾತು ಮುಗಿಸಿ ಮೊಬೈಲ್ ಮಡಿಲಲ್ಲಿ ಮಡಗುವ ವೇಳೆಗಾಗಲೆ ನಾನು ಹಾಡುಗಳಿಗಿಂತ ಜಾಹಿರಾತುಗಳನ್ನೇ ಹೆಚ್ಚಾಗಿ ಪ್ರಸರಿಸುವ ರೇಡಿಯೋ ಸ್ಟೇಷನ್ ಒಂದನ್ನು ಕೇಳತೊಡಗಿದ್ದೆ. ಬ್ಯಾಗಿನಲ್ಲಿ ಏನೋ ತಡಕಾಡುತ್ತಾ ಒಂದು ಪ್ಲಾಸ್ಟಿಕ್ ಕವರ್ ತೆಗೆದು ತನ್ನ ಕಾಲ ಮೇಲೆ ಇಟ್ಟುಕೊಂಡಿದ್ದು ಓರೆಗಣ್ಣಿನಿಂದ ಗಮನಿಸಿದೆ. ತಿರುಗಿ ನೋಡುವುದು ಒಳ್ಳೆ manners ಅಲ್ಲ ಎಂದು ಕಷ್ಟಪಟ್ಟು ಮುಖ ಕಿಟಕಿಯ ಕಡೆಗೆ ತಿರುಗಿಸಿದೆ. " ಶಿವಮೊಗ್ಗಕ್ಕಾ ? " ಅವಳ ಮೊದಲ ಪ್ರಶ್ನೆ. ನಾನು ಅವಳತ್ತ ತಿರುಗಿ "ಹಾಂ... .ಹೌದು ". ಮತ್ತೆ ಸ್ವಸ್ಥಾನಕ್ಕೆ ಮುಖ ತಿರುಗಿಸಿದೆ. "ನೀವಿದನ್ನ ತಗೊಳ್ಳಲೇಬೇಕು.......ಇಲಾಂದ್ರೆ ನನಗೆ ಕಷ್ಟ ಆಗುತ್ತೆ. ......please ". ಇದೇನಪ್ಪ ಇದು ಅಪರಿಚಿತ, ಅನಾಮಿಕ ಸುಂದರಿ ಏನೋ ಕೊಡ್ತಾ ಇದಾಳೇಂತ ಒಳಗೊಳಗೇ ಖುಷಿಪಟ್ಟು ಅವಳತ್ತ ತಿರುಗಿದೆ. ಅವಳ ಆ ಭಂಗಿ ನೋಡಿ my heart rate increased, temperature raised, palms got sweaty, stomach fluttered, throat tightened etc etc. ಒಂದು ಕೈಯಲ್ಲಿ ಕತ್ತರಿಸಿದ ಸೇಬು....ಮತ್ತೊಂದು ಕೈಯಲ್ಲಿ ಚಾಕು ಹಿಡಿದು ಒಂದಿಷ್ಟು ವಿನಂತಿಸುವ ಜಾಸ್ತಿ ಆಜ್ಞಾಪಿಸುವ ಮುಖಭಾವದೊಂದಿಗೆ ನನ್ನ ಪಕ್ಕದ ಸೀಟಿನ ಸುಂದರಿ...........! ಹಾಗೆ ಸಾವರಿಸಿಕೊಂಡು "ಚಾಕು ತಗೊಳ್ಳಲ.......ಸೇಬು ತಗೊಳ್ಳಲ" ಎಂದೆ. ಇಂತ ಸಮಯದಲ್ಲಿ ಇನ್ನೇನು ಮಾಡೋಕಾಗುತ್ತೆ ಹೇಳಿ. ನಾನೇನೋ ಪಕ್ಕದ ಸೀಟಿನಲ್ಲಿ ಹುಡುಗಿ...ಪ್ರಯಾಣ ಮುಂದುವರೆಯುತ್ತಿರುವಂತೆ...ಹಾಗೆ ಅಲ್ಪ ಸ್ವಲ್ಪ ಮಾತುಕತೆ [ಹುಡುಗಿ IT ಫೀಲ್ಡಿನಲ್ಲಿ ಇದಾಳೆಂತ ಅವಳ ಮಾತುಕತೆಯಲ್ಲೇ ಕಂಡಿಕೊಂಡಿದ್ದೆ ]....ಮೊಬೈಲ್ ನಂಬರ್ exchange........ಆಮೇಲೆ ದಿನಾಲು sms........ಸ್ವಲ್ಪ ದಿನದ ನಂತರ ಕ್ಷೆಮಸಮಾಚಾರಕ್ಕಾಗಿ.....ಕರೆ ಮಾಡೋದು....ಹೀಗೆ ನನ್ನ ಕನಸಿನ ಬಲೂನ್ ಊದಿತ್ತು. ಆದರೆ ಚಾಕು ತೋರಿಸಿನೆ ಚುಚ್ಚದೆ ಒಡೆದಿದ್ದಳು ನನ್ನ ಕನಸಿನ ಬಲೂನನ್ನು. ಅವಳಿಗೂ ನನ್ನ ಕೆಟ್ಟ ಜೋಕು ಹಿಡಿಸಿರ ಬೇಕು. " ಒಬ್ಬಳೇ ತಿನ್ನೋಕೆ ಕಷ್ಟ ಆಗುತ್ತೆ; ನೀವು ತಗೊಳ್ಳಿ " ಅಂತ ಮತ್ತೊಮ್ಮೆ ಹೇಳಿದ್ಲು ಸುಂದರಿ. ಈ ಸಾರ್ತಿ ಧ್ವನಿ ಕೊಮಲವಾಗಿತ್ತು. " ಥ್ಯಾಂಕ್ಸ್ " ಹೇಳುತ್ತಾ ಹಣ್ಣನ್ನು ತೆಗೆದುಕೊಂಡು ಹೊರಗಡೆ ನೋಡುತ್ತಾ ನಿಧಾನವಾಗಿ ಮೆಲ್ಲತೊಡಗಿದೆ. ಅವಳು ಉಳಿದ ಹಣ್ಣು ತಿನ್ನುತ್ತಾ ಮಧ್ಯೆ ಮಧ್ಯೆ ಬಂದ ಕರೆಗಳಿಗೆ ಉತ್ತರಿಸುತ್ತ ಕುಳಿತಳು. ನಾನು ನನ್ನ favourite timepass ಆದ ಹೊರನೋಟಕ್ಕೆ ಮನಕೊಟ್ಟು ಸಮಯ ಕೊಲ್ಲತೊಡಗಿದೆ. ಇಲ್ಲನ್ದಿದ್ರೆ ಕೆಲ ನಿಮಿಷಗಳ ಹಿಂದೆ ಸಮಯವೇ ಹುಡುಗಿಯಾಗಿ ಬಂದು ನನ್ನ ಕೊಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿತ್ತಲ್ಲ! ಈ ವೇಳೆಗಾಗಲೆ ಬಸ್ಸು ಬೆಂಗಳೂರು ಸರಹದ್ದು ದಾಟಿ ಶಿವಮೊಗ್ಗದ ಹಾದಿ ಹಿಡಿದಾಗಿತ್ತು. ನಾನು ನಿದ್ರೆಯ ದಾರಿಯನ್ನು ಹಿಡಿಯತೊಡಗಿದೆ. " ಸುಖಕರ ಪ್ರಯಾಣಕ್ಕೆ KSRTC ಬಳಸಿ " ಎಂಬ ಸ್ಲೋಗನ್ ಸಾರ್ಥಕಗೊಳಿಸುವಂತೆ ಸುಖವಾಗಿ ಮತ್ತು 'ಸುರಕ್ಷಿತವಾಗಿ' ಶಿವಮೊಗ್ಗ ತಲುಪಿ ಬಸ್ ಸ್ಟ್ಯಾಂಡ್ ಮುಂದೆ ನಿಂತೆ. ಅದೇ ವೇಳೆ ತನ್ನ ತಂದೆ [ ಇರಬಹುದು ] ಜೊತೆ ಆ ಹುಡುಗಿ ನನ್ನ ಮುಂದೆ ಹೋದಾಗ ಚಾಕು ಹಿಡಿದ ಅವಳ ಭಂಗಿ ನನ್ನ ಸ್ಮೃತಿಪಟಲದ ಮುಂದೆ ತೇಲಿ ಬಂತು. ಒಂದೆರಡು ಹೆಜ್ಜೆ ಮುಂದೆ ಹೋದ ಹುಡುಗಿ ಹಿಂದಿರುಗಿ ನೋಡುತ್ತಾ ದೊಡ್ಡ ಧ್ವನಿಯಲ್ಲಿ ಬೈ ಹೇಳಿದಳು. ವಿಶ್ ಮಾಡಿದ್ದು ನನಗೇನೆ ? ಎಂದು ಆಶ್ಚರ್ಯ ಪಡುತ್ತ ನಾನೂ ಬೈ ಹೇಳಿದ್ದೆ. ಬಸ್ಸಿನಲ್ಲಿ ತಿನ್ನೋಕೆ ಹಣ್ಣು ಮಾತ್ರ ಅಲ್ಲ ಅದನ್ನು ಕತ್ತರಿಸೋಕೆ [ಹಣ್ಣನ್ನು ಕತ್ತರಿಸೋಕೆ ಮಾತ್ರಾನ?] ಚಕೂನು ತಂದಿರ್ತಾರೆ ಅಂತ ಆವತ್ತೇ ನನಗೆ ಗೊತ್ತಾಗಿದ್ದು. ಪ್ರತಿಸಲ KSRTC ಯಲ್ಲಿ ಪ್ರಯಾಣಿಸುವಾಗ ಈ ಘಟನೆ ನನಗೆ ಜ್ಞಾಪಕಕ್ಕೆ ಬರುತ್ತೆ. ಆ ಚಾಕು ತೋರಿಸಿದ ಸುಂದರಿ ಈ ಬೆಂಗಳೂರಿನ ಕಾಂಕ್ರೀಟ್ ಜಂಗಲ್ ನಲ್ಲಿ ಎಲ್ಲಿದ್ದಾಳೋ.............? ಮತ್ತೆ ಏನಾದ್ರು ಸಿಗ್ತಾಳೋ...........ಕಾಲಾನೇ ನಿರ್ಧರಿಸಬೇಕು.

Thursday, June 18, 2009

ನಾನು, ನೀನು ಮತ್ತು ಮಳೆ

ಮಳೆಯ ಆರ್ಭಟಕ್ಕೆ ಸೋತು ಬೆಚ್ಚಗಿನ ಗೂಡು ಸೇರಿದರೂ ಅಂದು ನಾವಿಬ್ಬರು ಮಳೆಯಲಿ ತೊಯ್ದು ತೊಪ್ಪೆಯಾದ ನೆನಪು ಸಾಗರದ ಅಲೆಗಳಂತೆ ಮರಳಿಬರುತ್ತಿದೆಯಲ್ಲ! ಇಂದಾದರೂ ಮನೆ ಬೇಗ ತಲುಪಬೇಕೆಂದುಕೊಂಡರೂ ನಿನ್ನ ಜೊತೆಯಲ್ಲಿರುವಾಗ ಸಮಯಸರಿದಿದ್ದು ತಿಳಿಯದೆ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಲ್ಲವೇ? ನಾವು ಹೊರಡುವಾಗ ಮಬ್ಬುಗತ್ತಲು ಒಂದೆರಡು ಹೆಜ್ಜೆ ನಿನ್ನ ಜೊತೆ, ಆ ಕ್ಷಣದಲ್ಲೇ ಕಾರ್ಮೋಡ ಆವರಿಸಿ ನಿನ್ನ ಮಾತಿನಂತೆಯೆ ಪಟಪಟನೆ ಸುರಿಯ ತೊಡಗಿತ್ತು ಮಳೆ. ನಿನಗೆಲ್ಲಿ ಹುಷಾರು ತಪ್ಪುವುದೋ ಎಂಬ ಆತಂಕದಲ್ಲಿ ನಾನಿದ್ದರೆ "ಮಳೆಯಲ್ಲೇ ಹೋಗೋಣ; ಸಖತ್ತಾಗಿರತ್ತೆ" ಎಂದು ಹುರಿದುಂಭಿಸಿದ್ದು ನೀನು ತಾನೇ. ನನಗೆ ನೀನು ನಿನಗೆ ನಾನು ಕೊಡೆಯಾಗಿ ಇಡತೊಡಗಿದ್ದೆವು ಒಟ್ಟಿಗೆ ಹೆಜ್ಜೆ. ಮೊದಮೊದಲು ಹನಿಗಳ ಸಂಗ ಬೇಸರವಾದರೂ ನಮ್ಮ ನಡಿಗೆಗೇನೂ ಅವು ತರಲಿಲ್ಲ ಭಂಗ. ನೀನಿದ್ದಿದ್ದರಿಂದಲೇ ಒಂದಿಷ್ಟು ಹುಮ್ಮನಸ್ಸು ಮೂಡಿ ಒಂಟಿಯಾಗಿ ಸುರಿವ ಮಳೆಗೆ ನಾವು ಜೊತೆಗಾರರಾಗಿದ್ದು. ತಲೆಯ ಮೇಲೆ ಬಿದ್ದ ಮಳೆಯಹನಿಗಳ ಬಳಗ ಚಿಕ್ಕ ತೊರೆಗಳಾಗಿ ಮುಖದಮೇಲೆ ಬಂದಾಗ ಅವನ್ನು ಕೈಯಿಂದ ಒರೆಸಿ ತೆಗೆಯುತ್ತಿದ್ದರೆ 'ಅವು ಮಳೆಯ ಹನಿಗಳಲ್ಲವೋ ಹುಡುಗ ನಿನ್ನ ಪ್ರೀತಿಗೆ ನನ್ನ ಆನಂದಬಾಷ್ಪ ಎಂದಿದ್ದೆ ನೀನು'. ಅಲ್ಲೆಲ್ಲೋ ಮಿಂಚು ಆಗಸದ ಮೂಲೆಯನು ಕ್ಷಣಕಾಲ ಬೆಳಗಿ ಮರೆಯಾದಾಗ ನನ್ನ ಕೈಹಿಡಿದು ಅದಕ್ಕೆ ಕೈತೋರಿಸಿ ಸಂಭ್ರಮಿಸಿದ್ದೆ ನೀನು. ತಣ್ಣಗಿನ ಮಳೆಯಲ್ಲಿಯೂ ಬೆಚ್ಚಗಿತ್ತು ನಿನ್ನ ಸ್ಪರ್ಶ. ಇದು ಆಶ್ಚರ್ಯ! ಸುಳ್ಳಲ್ಲ. ಗುಡುಗಿಗೆ ಬೆದರಿಸೋ ಉತ್ಸಾಹದಲ್ಲಿದ್ದವಳು ನಮ್ಮನು ಹೆದರಿಸಲು ಬಂದ ಗುಡುಗಿಗೆ ಬೆದರಿ ಪುಟ್ಟ ಮಗುವಿನಂತೆ ನನ್ನ ತಬ್ಬಿ ನಡೆಯಲಿಲ್ಲವೆ? ಮನೆಯ ಹೊರಗೆ ನಿಂತು ಬೆಂಬಿಡದೆ ನಮ್ಮ ಪ್ರೀತಿಯ ಕಾಯ್ದ ಮಳೆಗೆ ಥ್ಯಾಂಕ್ಸ್ ಹೇಳುತ ಇಷ್ಟವಿಲ್ಲದೆ ನನ್ನ ಕೈಬಿಟ್ಟು ಒಳನಡೆದದ್ದು ನೀನು ತಾನೇ ? ನಿನ್ನ ಪ್ರೀತಿಗೆ, ಜೀವನೋತ್ಸಾಹಕೆ ಮನಸೋತು ಬಂದ ಕಣ್ಣೀರು ಮಳೆಯಲ್ಲಿ ಬೆರೆತು ಮಳೆಯಾಗಿದ್ದು ನೀ ನೋಡಲಿಲ್ಲ ಹುಡುಗಿ.

Friday, June 12, 2009

ಕನ್ನಡದಲ್ಲಿ ಚಾಟ್ ಮಾಡಿ

ಕನ್ನಡದಲ್ಲಿ ಚಾಟ್ ಮಾಡಲು ಸರಿಯಾದ tool ಇಲ್ಲದೆ ಒಂದಿಷ್ಟು ಅಸಮಾಧಾನದಿಂದಲೇ ಕನ್ನಡವನ್ನು ಇಂಗ್ಲೀಷ್ನಲ್ಲಿ ಟೈಪಿಸುತ್ತಿದ್ದೆ. ಆದರೆ ಗೂಗಲ್ ಲ್ಯಾಬ್ಸ್ ಹೊರತಂದಿರುವ transliteration bookmarklet ಈ ಸಮಸ್ಯೆಯನ್ನು ನೀಗಿಸಿದೆ. transliteration bookmarklet ಎಂಬ ಪುಟ್ಟ ಸಾಫ್ಟವೇರ್ codeನ್ನು ನಿಮ್ಮ ಬ್ರೌಸರ್ನಲ್ಲಿ ಸ್ಥಾಪಿಸಿ ನಿಮ್ಮಿಷ್ಟದ ವೆಬ್ಸೈಟಿನಲ್ಲಿ ಸಿರಿಗನ್ನಡವನ್ನು ಟೈಪಿಸಿ ಕಳುಹಿಸಬಹುದಾಗಿದೆ. Gmail, Orkut, Knool, blogger, ಹಾಗು iGoogle Gadget ಗಳಲ್ಲಿ ಈ ಸೌಲಭ್ಯ ಅಂತರಿಕವಾಗಿ [ inbuilt ] ಲಭ್ಯವಿದೆ. ಆದರೆ gmail, orkut ಗಳಲ್ಲಿ ಚಾಟ್ ಮಾಡಲು bookmarklet ಅತ್ಯಂತ ಉಪಯುಕ್ತ. ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ, ಮಲಯಾಳಂ, ತೆಲುಗು ಹಾಗು ತಮಿಳು ಭಾಷೆಗಳಲ್ಲಿ ಸಹ ಈ ಸೇವೆ ದೊರೆಯುತ್ತದೆ. ಇದರ ಕೆಲವು ನಿಯಮಿತ ಸೇವೆಗಳು ಹೀಗಿವೆ.
೧) ನೆಟ್ವರ್ಕಿಂಗ್ ವೆಬ್ಸೈಟ್ ಗಳಲ್ಲಿ ಕನ್ನಡದಲ್ಲೇ ಸಂದೇಶಗಳನ್ನು ಕಳುಹಿಸಬಹುದು.
೨) ಕನ್ನಡ ವಿಕಿಪೀಡಿಯ ಸಂಪಾದಿಸಬಹುದು.
೩) ಗೂಗಲ್ ನ್ಯೂಸ್ ನಲ್ಲಿ ಕನ್ನಡ ವಾರ್ತೆಗಳಿಗೆ ಹುಡುಕಾಟ ನಡೆಸಬಹುದು.
೪) ಗೂಗಲ್ ಸರ್ಚ್ ನಲ್ಲಿ ಕನ್ನಡದ ಮಾಹಿತಿಗಾಗಿ ಹುಡುಕಾಟ ನಡೆಸಬಹುದು.
೫) gmail, orkut ಗಳಲ್ಲಿ ಕನ್ನಡದಲ್ಲೇ ಚಾಟ್ ಮಾಡಬಹುದು.

ನಿಮ್ಮ ಬ್ರೌಸರ್ ನಲ್ಲಿ ಈ codeನ್ನು ಅನುಸ್ಥಾಪಿಸಲು ಹಾಗು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.
http://t13n.googlecode.com/svn/trunk/blet/docs/help_kn.html

Thursday, June 11, 2009

I have taken a CHANCE


ಕಳೆದಿದ್ದು ಕೆಲವು ಪಡೆದಿದ್ದು ಹಲವು

ಕಳೆದೆರಡು ದಿನಗಳು ಜೀವನ ಹಳಿ ತಪ್ಪಿದ ರೈಲಿನಂತೆ ಅಡ್ಡಾದಿಡ್ಡಿ ಮಲಗಿತ್ತು. ಎಂದಿನ ಉತ್ಸಾಹ ಇರದೆ ಪೇಲವವಾಗಿತ್ತು. ಇದೆಲ್ಲ ಶುರುವಾಗಿದ್ದು ನಾನು ಬಸ್ಸಿನಲ್ಲಿ ಬಿಟ್ಟುಬಂದ ಬ್ಯಾಗಿನಿಂದ. ಹೆಚ್ಚಿನ ಬೆಲೆಬಾಳುವ ವಸ್ತುಗಳಿರದಿದ್ದರೂ ತುಂಬಾ ಅಗತ್ಯವಾದ ಕೆಲವು ಮಿಸ್ಸಾದವು. ಕಳೆದುಕೊಂಡಿದ್ದು mobile charger, hands free, ಒಂದೆರಡು ಜೊತೆ ಬಟ್ಟೆ, ಹಲ್ಲುಜ್ಜುವ ಬ್ರಷ್, ಸ್ನೇಹಿತನಿಂದ ಎರವಲು ಪಡೆದ ಪುಸ್ತಕ ಹಾಗು ಮನೆಯ ಬೀಗದ ಕೈ ಮತ್ತು ಅಮ್ಮ ಪ್ರೀತಿಯಿಂದ ಮಾಡಿ ಕಳಿಸಿದ ತಿಂಡಿ. Duplicate key ಮಾಡಿಕೊಟ್ಟವನಿಗೆ ಕೊಟ್ಟ ಇನ್ನೂರೈವತ್ತು ರೂಪಾಯಿಗಳಿಂದ ಶುರುವಾಗಿ ಕಳೆದುಕೊಂಡ ಅಗತ್ಯವಾದ ವಸ್ತುಗಳನ್ನು ಖರೀದಿಸಲು ತೆರಬೇಕಾದ ದುಡ್ಡು ಎಲ್ಲ ಸೇರಿದರೆ ನನಗೆ ನಷ್ಟದ ಬಾಬತ್ತೆ! ಜೊತೆಗೆ ವ್ಯರ್ಥವಾದ ಸಮಯ.

ತಿಳಿನೀರಿನಂತೆ ಇದ್ದ ಜೀವನ ಕಲ್ಲೆಸೆದಂತೆ ಒಂದಿಷ್ಟು ಹೊಯ್ದಾಡಿ, ಅಲೆಗಳನ್ನೆಬ್ಬಿಸಿ ಶಾಂತವಾಗಲು ಸಮಯ ಬೇಡುತ್ತೆ. ಆದರೆ ಈ ಅನುಭವದಿಂದ ಕಲಿತ ಪಾಠ ಬಹುಷಃ ಅಮೂಲ್ಯವಾದುದು. ಎಲ್ಲೋ ಒಂದು ಕಡೆ ಬೇಜವಬ್ದಾರಿತನದೆಡೆಗೆ ಜಾರುತ್ತಿದ್ದ ನನ್ನನ್ನು ಈ ಘಟನೆ alert ಮಾಡಿದೆ. ಮುದುಡಿದ್ದ ಮನಸ್ಸು ಬಹುಬೇಗ normal ಆಗಿದೆ. ಸಮಸ್ಯೆಗೆ ಬೆನ್ನು ತೋರಿ ಕಾಲ ಕಳೆಯದೆ ಅದನ್ನು ಬಹುಬೇಗ ಬಗೆಹರಿಸಿದ ತೃಪ್ತಿ ನನಗಿದೆ. Totally ಕಳೆದಿದ್ದು ಕೆಲವು ಪಡೆದಿದ್ದು ಹಲವು.

Wednesday, June 10, 2009

ನನ್ನ ಇಮೇಲ್ ಪುರಾಣ

ಇಂಟರ್ನೆಟ್ ಬಗ್ಗೆ ನಾನು ಮೊದಲು ಕೇಳಿದ್ದು ಪೀಯುಸಿ ಓದಬೇಕಾದರೆ. ಅಂದರೆ ಸುಮಾರು ೧೯೯೬-೧೯೯೭ ಸಮಯದಲ್ಲಿ. ಕಂಪ್ಯೂಟರನ್ನು ನೋಡಿದ್ದು ೮ ನೆ ತರಗತಿ ಓದುವಾಗ. 8thB ಸೆಕ್ಷನ್ನಲ್ಲಿ ನಮ್ಮೆಲರನ್ನು ಕೂಡಿಹಾಕಿ ಕಂಪ್ಯೂಟರ್ ಎಂಬ ಮಾಯಾ ಯಂತ್ರವನ್ನು ತೋರಿಸಿದಾಗ ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡಿದ್ದೆವು. ಅದರಲ್ಲೂ ನಮಗೆ ಆಶ್ಚರ್ಯವೆನಿಸಿದ್ದು ಕಂಪ್ಯೂಟರ್ 1, 0 ಗಳ ಭಾಷೆಯನ್ನು ಆಂತರಿಕವಾಗಿ ಉಪಯೋಗಿಸುತ್ತದೆ ಎಂಬ ಸಂಗತಿ. ನಂತರ ಪಿಯುಸಿ ಮುಗಿಸುವವರೆಗೂ ಕಂಪ್ಯೂಟರ್ ನೊಡನೆ ನನ್ನ ಒಡನಾಟ ಇರಲಿಲ್ಲ. ಇಂಜಿನಿಯರಿಂಗ್ 1st ಸೆಮಿಸ್ಟರ್ ನಲ್ಲಿ [chemistry cycle] ಮೊಟ್ಟ ಮೊದಲಬಾರಿಗೆ ಕಂಪ್ಯೂಟರ್ ಮುಟ್ಟುವ, ಉಪಯೋಗಿಸುವ, ಅದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಅವಕಾಶ. Thanks to C Programming Lab. ಮೊದಲೆಲ್ಲ ಲ್ಯಾಬ್ ನಲ್ಲಿ ಕಂಪ್ಯೂಟರ್ switch on ಮಾಡುವುದೇ ಒಂದು ದೊಡ್ಡ ಸಂಭ್ರಮ ಆಗಿತ್ತು ನನಗೆ. MSOffice ಓಪನ್ ಮಾಡುವಾಗ ಭಯ ಮಿಶ್ರಿತ ಕುತೂಹಲ. MSWord/Excel ನಲ್ಲಿ ಒಂದಿಷ್ಟು ಸರಕು ತುಂಬಿ save ಮಾಡಿದರೆ ಮನದಲ್ಲಿ ಸಿಹಿಯಾದ ಕೋಲಾಹಲ. ಟೈಪಿಸುವಾಗ ಅಕ್ಷರಗಳನ್ನು ಹುಡುಕಿ ಹುಡುಕಿ "Q ಎಲ್ಲೋ ಕಾಣಿಸ್ತ ಇಲ್ವಲ" ಎಂದೋ , "capital letter ಮೂಡಲು shift ಒತ್ತಬೇಕೋ ಅಥವಾ Ctrl ಒತ್ತಬೇಕೋ" ಎಂದು ಪಕ್ಕದವನನ್ನು ತಿವಿದು ಪದೇ ಪದೇ ಕೇಳುತ್ತಿದ್ದ ದೃಶ್ಯ ಇನ್ನು ನನ್ನ ಕಣ್ಣ ಮುಂದೆ ಇದೆ. ಈ ಎಲ್ಲ ಅನುಮಾನಗಳು ಪರಿಹಾರವಾಗಿ ಕಂಪ್ಯೂಟರ್ ಬಗ್ಗೆ ಒಂದಿಷ್ಟು ಜ್ಞಾನ ವ್ರುದ್ಧಿಯಗಬೇಕಾದರೆ ಒಂದು ಸೆಮಿಸ್ಟರ್ ಕಳೆದಿತ್ತು.

ಇದೆಲ್ಲದರ ನಡುವೆ ಈ ಇಮೇಲ್ ಎಂಬ ಒಂದು ಹೊಸದಾದ ಕಲ್ಪನೆಗೂ ನಿಲುಕದ ಸಂಗತಿಯೊಂದು ನನ್ನ ತಲೆಯನ್ನು ಕೊರೆಯುತ್ತಿತ್ತು. ೧೯೯೮-೯೯ ರ ಸಮಯದಲ್ಲಿ ಆಲ್ಲೊಂದು ಇಲ್ಲೊಂದು cyber cafe ಗಳಿದ್ದವು. ಒಂದು ಘಂಟೆಗೆ ೪೫ ರೂಗಳಷ್ಟು ಇಂಟರ್ನೆಟ್ ಉಪಯೋಗಕ್ಕಾಗಿ ತೆರಬೇಕಾಗಿತ್ತು. ಹಾಗಾಗಿ ಅದರ ಸಹವಾಸಕ್ಕೆ ನಾನು ಹೋಗಿರಲಿಲ್ಲ. ಅದೇ ವೇಳೆ ಕಾಲೇಜಿನಲ್ಲಿ internet ಸೌಲಭ್ಯವನ್ನು ನಾವು ಸ್ಟ್ರೈಕ್ ಎಂಬ ನಾಟಕ ಆಡಿದ ಮೇಲೆ ಕಲ್ಪಿಸಿದ್ದು ನನ್ನ ಇಮೇಲ್ ಬಗ್ಗೆ ಇದ್ದ ಕುತೂಹಲಕ್ಕೆ ಇಂಬು ಕೊಟ್ಟಿತು. ಈ ಕುತೂಹಲ ಒಂದು ಘಂಟೆಯಷ್ಟು [ಆಮೆಗತಿಯಲ್ಲಿ ಇದ್ದ download speed] internet ಉಪಯೋಗಕ್ಕೆ ಹಾತೊರೆದು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಸುಳ್ಳಲ್ಲ. ಮೊದಲನೆಯ ದಿನ practicles ಇದ್ದಿದ್ದರಿಂದ ಇಂಟರ್ನೆಟ್ lab ಗೆ ಹೋಗೋದಿಕ್ಕೆ ಆಗಿರಲಿಲ್ಲ. ಅದೇ ವೇಳೆ ನನ್ನ ಸ್ನೇಹಿತ ಸಂದೀಪ್ ಹುರುಪಿನಿಂದ ಬಂದು ಇಂಟರ್ನೆಟ್ ಬಗ್ಗೆ ಹೇಳುತ್ತಿದ್ದುದನ್ನು ಕೇಳಿ ಅವನ ಹತ್ತಿರ ಹೋಗಿ ಕೇಳಿದೆ,
"ಏನ್ ಮಾಡಿದ್ಯೋ ಇಂಟರ್ನೆಟ್ ನಲ್ಲಿ " ಅಂತ.
"ಏನೂ ಇಲ್ವೋ ಇಮೇಲ್ ಅಕೌಂಟ್ create ಮಾಡಿದೆ, yahoo.com, amezon.com ಎಲ್ಲ ನೋಡಿದೆ " ಅಂದ.
ಇಮೇಲ್ ಅನ್ನೋ ಪದ ಕಿವಿಗೆ ಬಿದ್ದಕೂಡಲೇ ನನ್ನ ಮೈ ಮನಗಳು ರೋಮಾಂಚನಗೊಂಡವು. ಮತ್ತೊಂದಿಷ್ಟು ಕೆದಕಿ ಕೇಳಲು ಅನುವಾದೆ.
"ಇಮೇಲ್ ಅಕೌಂಟ್ create ಮಾಡೋದು ಹೆಂಗೆ? "
"www.yahoo.com ಅಂತ ಟೈಪ್ ಮಾಡು. ಆ ವೆಬ್ಸೈಟ್ ಓಪನ್ ಆಗುತ್ತೆ. ಅಲ್ಲಿ register ಅಂತ ಇರತ್ತೆ, ಅಲ್ಲಿ ಕ್ಲಿಕ್ ಮಾಡಿದ್ರೆ ಒಂದು form open ಆಗುತ್ತೆ ಅಲ್ಲಿ ನಿನ್ details ತುಂಬಿ ok ಬಟನ್ ಒತ್ತು ಅದು ಹೋಗುತ್ತೆ."

websiteಉ, yahoo.comಉ ಯಾವುದೂ ತಲೆಗೆ ಹೋಗಲಿಲ್ಲ. ಅಲ್ಲದೆ ಫಾರಂ ತುಂಬಿಸೋದು ಯಾಕೆ ? ಇಲ್ಲೀವರೆಗೂ ಫಾರಂ ಅಂದ್ರೆ ಸರ್ಕಾರಿ ಕಛೇರಿಗಳಲ್ಲಿ ಅಥವಾ ಕಾಲೇಜಿನಲ್ಲಿ ತುಂಬಿಸುತ್ತಿದ್ದ ಫಾರಂ ಬಗ್ಗೆ ತಿಳಿದಿದ್ದ ನನಗೆ account opening form ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿಲ್ಲ. ಅಲ್ಲದೆ ಇನ್ನೊಂದು ಪ್ರಶ್ನೆ ನನ್ನ ನಾಲಿಗೆ ತುದಿಗೆ ಬಂದು ನಿಂತಾಗಿತ್ತು.

"ಫಾರಂ ಹೋಗುತ್ತೆ ಅಂದ್ಯಲ್ಲ ಎಲ್ಲಿಗೆ ಹೋಗುತ್ತೆ?"
ಹೌದಲ್ವಾ ಎಲ್ಲಿಗೆ ಹೋಗುತ್ತೆ? ಪ್ರಶ್ನೆ ಸಹಜವಾಗಿತ್ತು. . . . . . . . . . ಆದರೆ ಉತ್ತರ ಅವನ ಬಳಿ ಇರಲಿಲ್ಲ. ಹ್ಯಾಗಿರೋಕೆ ಸಾಧ್ಯ ಅವನು ನನಗಿಂತ one day ಸೀನಿಯರ್ ಆಗಿದ್ದ ಅಷ್ಟೆ.

ಅಂತೂ ಇಂತೂ ಅವರಿವರ ಬಳಿ ಅಷ್ಟು ಇಷ್ಟು ಮಾಹಿತಿ ಪಡೆದು ಇಮೇಲ್ ಅಕೌಂಟ್ ರಚಿಸಿದ್ದಾಯಿತು, ಉಪಯೋಗಿಸಿದ್ದೂ ಆಯಿತು. ಆದರೂ ಇಮೇಲ್ ನಲ್ಲಿ ಉಪಯೋಗಿಸುವ @ [at the rate] ಚಿಹ್ನೆ ಬಗ್ಗೆ ಎಲ್ಲೋ ಮೂಲೆಯಲ್ಲಿ ಇದ್ದ ಒಂಚೂರು ಕುತೂಹಲ ಇನ್ನು ತಣಿದಿರಲಿಲ್ಲ. ಮೊದಲು ಅದರ ಬಗ್ಗೆ ಮಾಹಿತಿ ಅಷ್ಟಾಗಿ ಸಿಕ್ಕಿರಲಿಲ್ಲ. ಅಲ್ಲದೆ ನನಗೆ google ಉಪಯೋಗ ಕೂಡ ಮೊದಮೊದಲು ತಿಳಿದಿರಲಿಲ್ಲ. ಆದರೆ ಇಂದು ಏನೋ ಗೂಗಲಿಸುವಾಗ @ ಬಗ್ಗೆ ಸಿಕ್ಕ ಮಾಹಿತಿ ನನ್ನ ಮನ ತಣಿಸಿತು.

೧೯೭೧ ರಲ್ಲಿ BBN [Bolt Bernek and Newman] ಕಂಪೆನಿಗೆ ಕಂಪ್ಯೂಟರ್ ಇಂಜಿನಿಯರ್ ಆಗಿ ಕೆಲಸಮಾಡುತ್ತಿದ್ದ ರೆ ಟಾಮ್ಲಿನ್ಸನ್ [Ray Tomlinson]ಎಂಬಾತ ಇಮೇಲ್ ಕಂಡುಹಿಡಿದವನು. ಜನರ ಹೆಸರಿನಲ್ಲಿ ಉಪಯೋಗಿಸುವ ಅಕ್ಷರಗಳನ್ನು ಬಿಟ್ಟು ಬೇರ್ಯಾವುದಾದರೂ ಕೀಲಿಮಣೆ ಅಕ್ಷರವನ್ನು ಉಪಯೋಗಿಸುವ ಚಿಂತನೆಯಲ್ಲಿರಬೇಕಾದರೆ ಅವನಿಗೆ ಹೊಳೆದ ಚಿಹ್ನೆ @. ಹಾಗಾಗಿ ನಾವು ಉಪಯೋಗಿಸುವ ಇಮೇಲ್ ನಲ್ಲಿ @ ಇದೆ. ಇನ್ನೊದು ಸಂಗತಿಯೇನೆಂದರೆ ಮೊದಲ ಇಮೇಲ್ ಸಂದೇಶದಲ್ಲಿದ್ದುದು "QWERTYUIOP" ಎಂಬ QWERTY ಕೀಲಿಮಣೆಯ ಮೊದಲನೆಯ ಸಾಲಿನ ಅಕ್ಷರಗಳು ಮಾತ್ರ ಎಂಬಲ್ಲಿಗೆ ನನ್ನ ಇಮೇಲ್ ಪುರಾಣವು ಮುಕ್ತಾಯವು.

Wednesday, June 3, 2009

Life as a Game

"Imagine life as a game in which you are juggling some five balls in the air.

You name them - Work, Family, Health, Friends and Spirit and you're keeping all of these in the Air.

You will soon understand that work is a rubber ball.

If you drop it, it will bounce back.

But the other four Balls - Family, Health, Friends and Spirit - are made of glass.

If you drop one of these; they will be irrevocably scuffed, marked, nicked, damaged or even shattered.

They will never be the same. You must understand that and strive for it."

- Bryan Dyson(CEO of CocaCola)

ಒಮ್ಮೆ ನೋಡಿ ಚಂದಿರನನು

ಕುರಿಗಳು ಸಾಗುತಿವೆ
ಮರ್ಕ್ಯುರಿ ದೀಪದ ಬೆಳಕಲಿ
ಕಳೆದು ಹೋಗುತಿವೆ
ಲಕ್ಷ ಲಕ್ಷ......
ಸುತ್ತಮುತ್ತಲಿನ ಬಗ್ಗೆ ಅವಕೆ ಅಲಕ್ಷ
ಕೆಲಸ, ದುಡ್ಡು, ಮನೆ, ವೀಕೆಂಡಿನಲ್ಲಿ
ಸಿನೆಮಾ, ಶಾಪಿಂಗು
ಬೇಸರ ಕಳೆಯಲು ಬಾರು
ಇವೆ ಕುರಿಗಳ ಕಾರುಬಾರು
ತಲೆಯೆತ್ತಿ ನೋಡಿ ಒಮ್ಮೆ
ಸಿನೆಮಾ ಪೋಸ್ಟರನಲ್ಲ
ಹೊಕ್ಕಳು ತೋರಿಸುತ್ತಿರುವ ಹುಡುಗಿಯ
ಜಾಹಿರಾತನಲ್ಲ
ಆರಿಹೋದ ಮರ್ಕ್ಯುರಿ ದೀಪವನಲ್ಲ
ಆಗಸದಲಿ ಇಣುಕುವ ಮುದ್ದಿನ
ಚಂದಿರನನು
ನಿಮ್ಮೊಡನೆ ಕರೆದಲ್ಲಿ ಬರುವ
ತಂಪಿನ ಹೂಮಳೆ ಸುರಿಸುವ
ನನ್ನ ಮುದ್ದಿನ ಬೇಟೆಗಾರನನು
ಕರೆಂಟ್ ಕೈಕೊಟ್ಟ ಕ್ಷಣದಲ್ಲಾದರೂ
ಹೊರಬಂದು ನೋಡಿ ಅವನನು
ಪಕ್ಷಗಳಿಗೊಮ್ಮೆ ಮರೆಯಾದರೂ
ಮನದಂಗಳದಲಿ ಮೂಡುವನು
ಒಮ್ಮೆ ನೋಡಿ ಚಂದಿರನನು