ಎಲ್ಲಿಯೋ ಇದ್ದು, ಹೇಳದೆ ಬಂದು, ನಿನ್ನ ನಗುವನ್ನು ಬಿಟ್ಟು ಹೊರಟುಹೊಗುತ್ತಿಯಲ್ಲ! ನೀನು ನನ್ನ ಕಾಲ್ಪನಿಕ ಹುಡುಗಿ ಎಂದು ನನಗೆ ಅನಿಸುತ್ತಿಲ್ಲ. ನಿಜವಾಗಿಯು ಅಲ್ಲೆಲ್ಲೋ ಮೂಲೆಯಲ್ಲಿ ಅಡಗಿ ನನ್ನ ಕಲ್ಪನೆ, ವಾಸ್ತವದ ಜೊತೆ ಆಟವಾದೋ ತುಂಟಿ ನೀನು. ನನ್ನ ಭಾವದ ಜೀವಸೆಲೆ ಇನ್ನೂ ಬತ್ತದಿರಲು ನಿನ್ನ ಬಗೆಗಿನ ಕನಸುಗಳೇ ಕಾರಣವೆ? ನಾಳೆಯ ಬಗೆಗಿನ ಆಲೋಚನೆಗಳಲ್ಲೇ ಮುಳುಗಿದ್ದ ನನಗೆ ನೆನೆಪಿನ ಬುಟ್ಟಿಯ ಬಿಚ್ಚಿ ಸವಿಯಲು ಹೇಳಿದ್ದು ಏಕೆ? ನೀನು ಅವಳೇನಾ...? ಅದೇ ಐದನೆಯ ತರಗತಿಯಲ್ಲಿ ಇದ್ದ ದುಂಡಗಿನ ಕಣ್ಣುಗಳ, ಪುಟ್ಟ ಪಾದಗಳ, ಪೂರಿಗೆನ್ನೆಯ ಮುದ್ದು ಹುಡುಗಿ. ಆಗ ನಿನ್ನ ಬಗೆಗೆ ಎಂಥ ಆಕರ್ಷಣೆ! ಎಲ್ಲೋ ಬಿರಿದ ಹೂವಿನ ಸುಗಂಧ ತಂಗಾಳಿಯ ಜೊತೆ ಸರಸವಾಡುತ್ತ ಮೈಲಿಗಟ್ಟಲೆ ಸವೆಸಿ ನನ್ನ ಬಂದು ತಲುಪಿ ನಿನ್ನಯ ಅರಿವನ್ನು ತಿಳಿಸುವಂತೆ. ಅಥವಾ ಹೈಸ್ಕೂಲಿನಲ್ಲಿ ಓರೆಗಣ್ಣಿನಲ್ಲಿ ನೋಡುತ್ತಾ, ಎದುರಲ್ಲಿ ಬಂದಾಗ ಜಿಂಕೆಮರಿಯಂತೆ ಬೆದರುತ್ತಾ, ಬೆನ್ನ ಹಿಂದೆ ನಾಚಿಕೆಯ ನಗು ನಕ್ಕು ಓಡುತ್ತಿದ ಸರಳ ಸುಂದರ ಹುಡುಗಿ; ಅವಳೇನಾ ನೀನು..........? ಇದ್ದರೂ ಇರಬಹುದು. ಅದು ಸುವರ್ಣಯುಗ......ದೇಹದ, ಮನಸ್ಸಿನ ಸಂದಿಗೊಂದಿಗಳಲ್ಲಿ ಪ್ರಕೃತಿಯ ಲೀಲೆಗಳ ಕಲರವ. ನಿನ್ನ ನಗುವನ್ನು ನೋಡಿದೊಡನೆ ಪ್ರತಿನಗಲು ತುಸು ನಾಚಿಕೆಯಾಗಿ ಅದೇನೋ ಗೆದ್ದೆನೆಂಬ ಸಂಭ್ರಮದಲಿ ತೇಲುವಂತೆ ಮಾಡುತ್ತಿದ ಹುಡುಗಿ ನೀನೇನಾ.? ಅಥವಾ ಕಾಲೇಜಿನಲ್ಲಿ ನಾಚಿಕೆಯ ಪರದೆಯ ಸರಿಸಿ ಗಂಟೆಗಟ್ಟಲೆ ಹರಟುತ್ತ, ನನ್ನೊಡನೆ ಜಗಳವಾಡಲು ಪ್ರತಿಕ್ಷಣ ಹಾತೊರೆಯುತ್ತಾ, ನನ್ನ ಜೋರು ಮಾತಿಗೆ ಅಳು ಮೊರೆಯ ಸೇರಿಸಿ ದೂರುತ್ತಿದ್ದವಳು ನೀನೇನಾ....? ಅಥವಾ ಜನ್ಮ ಜನ್ಮಾನ್ತರದಿಂದ ಪ್ರೀತಿಸುತ್ತಿದ್ದಂತೆ ಪ್ರೀತಿಸಿ, ಕಾರಣವ ಹೇಳದೆ ಒಮ್ಮೆಲೇ ಮರೆಯಾಗಿ, ಹಿಡಿಯಲು ಪ್ರಯತ್ನಿಸಿದರೆ ನೈದಿಲೆಯ ಮೇಲಿನ ನೀರಿನ ಮುತ್ತುಗಳಂತೆ ಕೊಳದೊಳಗೆ ಕರಗಿ ಹೋದವಳು ನೀನೇನಾ? ಹುಡುಗಿ ನೀನು ತರುವ ನೆನಪುಗಳು ಸಾವಿರ ಸಾವಿರ. ಸಾಗರದ ದಂಡೆಯಲ್ಲಿನ ಮರಳಿನ ಕಣಗಳಂತೆ. ನೀನು ನನ್ನೊಡನೆ ಇರಲು ಪ್ರತಿಸಲವೂ ಬೇರೆ ವೇಷಗಳಲ್ಲಿ ಬಂದಂತಿದೆಯಲ್ಲ. ನೀನು ನಿಜವಾಗಲೂ ಒಬ್ಬಳೆನ? ಇಲ್ಲ ಬೇರೆ ಬೇರೆನಾ? ನನ್ನ ಬದುಕಿನ ಪ್ರತಿ ಹೆಜ್ಜೆ ಇಡುವಾಗಲು ನಿನ್ನ ನೆನಪಾಗಿ, ನೀನೆ ನೆಪವಾಗಿ, ಒಮ್ಮೊಮ್ಮೆ ಮುಗ್ಗರಿಸಿ, ಸಾವರಿಸಿ ಕೂತಾಗ ತಿಳಿ ನಗೆಯ ನಕ್ಕು ನನ್ನ ಜೊತೆ ಬರುವವಳು ನೀನೆ..? ನೀನು ಸ್ಕೂಲಿನವಳೋ, ಹೈಸ್ಕೂಲಿನವಳೋ, ಕಾಲೇಜಿನವಳೋ, ನಂತರದವಳೋ ? ಪ್ರತಿಸಲ ಸಂದಿಗ್ಧದಲ್ಲಿ ಸಿಲುಕಿಸಿ ಮರೆಯಾಗಿ ಓಡುವೆ ಏಕೆ? ನೀನು ಕಲ್ಪನೆಯೋ, ವಾಸ್ತವವೋ ಹೇಳು ಹುಡುಗಿ.
3 comments:
tunta nageya tunti yaru
manada kolava kalakidavalu
chigare kanna notadavalu
yaru.. ayalayaru..? avalyaru..?
thumba chenagide ri nimma kalpaneya hudugi bagge niv helirodu.....
Post a Comment