Wednesday, September 23, 2009

ಪ್ರತಿ ನಿರೀಕ್ಷೆ

ಪ್ರೇಮ ಅವರ ಪ್ರೇಮಾಂತರಂಗ ಎಂಬ ಸುಂದರವಾದ ಬ್ಲಾಗಿನಲ್ಲಿ ಪ್ರಕಟವಾದ ಅವರ ನಿರೀಕ್ಷೆ ಹನಿಗವನಕ್ಕೆ ನನ್ನ ಪ್ರತಿ ನಿರೀಕ್ಷೆ.

ನಾ ನಿನಗೆ ಬೆನ್ನು ಮಾಡಿ ಹೋದಾಗ…..
ಮೈಯೆಲ್ಲಾ ಕಿವಿಯಾಗಿಸಿಕೊಂಡಿದ್ದೆ ನೀ ಕರೆವೆ ಎಂದು…..
ವಿಧಿಯ ಅಟ್ಟಹಾಸದ ಅಬ್ಬರದಲಿ ನಿನ್ನ ದನಿ ಕೇಳದೆ
ಮನದ ಭರವಸೆಯ ಬೀಜ ಮುರುಟಿಹೋಗಿತ್ತಂದು….

--ನವೀನ್ ಕೆ.ಎಸ್.

Sunday, September 20, 2009

ಮಳೆಯಲಿ... (ಯಾರೂ ಇರದೆ) ಜೊತೆಯಲಿ........



ಮಳೆಯ ವಿಚಾರದಲ್ಲಿ ಪಕ್ಕಾ ಮಲೆನಾಡಿಗ ನಾನು. ಎಲ್ಲೇ ಮಳೆಯಾದರೂ ತಟ್ಟನೆ ನೆನಪಾಗೋದು ನಮ್ಮೂರ ಮಳೆ. ಮಳೆಯ ಪ್ರಮಾಣದಲ್ಲಿ ವ್ಯತ್ಯಯ ಹೊರತುಪಡಿಸಿ ಎಲ್ಲ ಕಡೆ ಸುರಿಯುವ ಮಳೆ ತಂದೊಡುವ ಸನ್ನಿವೇಶಗಳು, ಎಬ್ಬಿಸುವ ಭಾವನೆಗಳು ಒಂದೇ. ಬೆಂಗಳೂರಿಗೆ ಬಂದ ನಂತರ ಮಳೆಯನ್ನು ಗಮನಿಸೋದು, ಮನದಲ್ಲಿ ಅರಳುವ ನವಿರು ಭಾವನೆಗಳನ್ನು ಅನುಭವಿಸೋದು ಬಿಟ್ಟಿದ್ದೆ. ದಾರಿಯಲ್ಲಿ ಹೋಗುವಾಗ ಮಳೆ ಬಂದರೆ ಅಲ್ಲೇ ಇರೋ ಅಂಗಡಿಯ ಸೂರಿನಲ್ಲಿ ನಿಂತು ಒಂದೈದು ನಿಮಿಷ ಮಳೆ ಬಿಡೋವರೆಗೂ ಕಾದು ಮುಂದೆ ಹೋಗುತ್ತಿದೆ. ಮಲೆನಾಡಿನಂತೆ ಬೆಂಗಳೂರ ಮಳೆಗೆ ವಿಶೇಷ ತಯಾರಿ ಬೇಕಾಗೋದಿಲ್ಲ. ಆದರು ಅಮ್ಮ ಮನೆಯಲ್ಲಿ ಇದ್ದ ಒಂದು ಕೊಡೆಯನ್ನು ಊರಿಗೆ ಹೋದಾಗ ಕೊಟ್ಟಿದ್ದಳು [ಈ ವಿಚಾರ ಗೊತ್ತಾದಾಗ ನೀನೆ ಛತ್ರಿ ನಿನಗ್ಯಾಕೋ ಛತ್ರಿ ಅಂತ ಸ್ನೇಹಿತೆ ಛೇಡಿಸುತ್ತ ಇದ್ಲು ].


ನಿನ್ನೆ ಕೆಲಸದ ಸಲುವಾಗಿ ಹೊರಗೆ ಹೋಗಿದ್ದೆ. ಮಳೆಯ ನಿರೀಕ್ಷೆ ಇದ್ದದ್ದರಿಂದ ಛತ್ರಿಯನ್ನು ತೆಗೆದುಕೊಂಡು ಹೋಗಲು ಮರೆತಿರಲಿಲ್ಲ. ಬಸ್ಸು ಇಳಿಯುವ ವೇಳೆಗಾಗಲೇ ಜಿಟಜಿಟ ಸದ್ದು ಮಾಡುತ್ತಾ ಮಳೆ ತನ್ನಿರುವಿಕೆಯನ್ನು ಸೂಚಿಸಿತ್ತು. ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಬಸ್ ಸ್ಟಾಂಡಿನಲ್ಲಿ ಕೆಸರುಗದ್ದೆಯನ್ನು ಸೃಷ್ಟಿಸಿಯಾಗಿತ್ತು. ನನ್ನ ನಿರೀಕ್ಷೆ ಸರಿಯಾದುದಕ್ಕೆ ಒಳಗೊಳಗೇ ಖುಷಿಪಡುತ್ತಾ ಬಸ್ಸಿನ ಕೊನೆಯ ಮೆಟ್ಟಿಲು [ಫುಟ್ ಬೋರ್ಡ್] ಇಳಿಯುವಾಗಲೇ ಛತ್ರಿ ಬಿಚ್ಚಿ ಕೆಸರಿನಲ್ಲಿ ಕಾಲಿಟ್ಟೆ. ನಿಧಾನವಾಗಿ ನಡೆದು ರಸ್ತೆಗೆ ಬಂದೆ. ಬೆನ್ನಲ್ಲಿದ್ದ ಬ್ಯಾಗನ್ನು ಸರಿಯಾಗಿ ಹೊತ್ತು ಒಂದು ಹನಿಯು ಮೈಮೇಲೆ ಬೀಳದಂತೆ ಜಾಗ್ರತೆವಹಿಸುತ್ತ ಮನೆಯ ಕಡೆ ಹೆಜ್ಜೆ ಹಾಕತೊಡಗಿದೆ. ನನ್ನ ಮುಂಜಾಗ್ರತೆಯನ್ನು ನೋಡಿ ಅಸೂಯೆಗೊಂಡ ಮಳೆ ಸ್ವಲ್ಪ ಜೋರಾಗಿಯೇ ಸುರಿಯತೊಡಗಿತು. ಛತ್ರಿ ಮತ್ತು ಬ್ಯಾಗನ್ನು ಬ್ಯಾಲೆನ್ಸ್ ಮಾಡ್ತಾ ಪ್ಯಾಂಟ್ ಒದ್ದೆಯಾಗದಿರಲಿ ಅಂತ ಸ್ವಲ್ಪ ಮಡಚಿಕೊಂಡೆ. ಇಟ್ಟಿದ್ದು ಎರಡೇ ಹೆಜ್ಜೆ ಧೋ ಅಂತ ಸುರಿಯತೊಡಗಿತ್ತು ಮಳೆ. ನನ್ನ ಮುನ್ನೆಚ್ಚರಿಕೆಗಳು ಯಾವುದು ನಡೆಯೋದಿಲ್ಲ ಅಂತ ಖಾತ್ರಿಯಾಯಿತು. ಅಲ್ಲಿಯವರೆಗೂ ನಾನು ಒದ್ದೆಯಾಗುತ್ತಿರುವ ಬಟ್ಟೆ ಮತ್ತು ಬ್ಯಾಗ್ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಯಾವಾಗ ಮಳೆಯ ಎದಿರು ನನ್ನ ಆಟಗಳು ನಡೀಲಿಲ್ಲವೋ ಆರಾಮವಾಗಿ ಹೆಜ್ಜೆ ಇಡತೊಡಗಿದೆ. ಬೆಂಬಿಡದೆ ಸುರಿಯುತ್ತಿದ್ದ ಮುಸಲಧಾರೆ ನನ್ನ ಛತ್ರಿಯ ಮೇಲೆ ಬಿದ್ದು ಕವಲುಗಳಾಗಿ ಒಡೆದು ಒಂದೊಂದು ತಂತಿಯ ತುದಿಯಲ್ಲೂ ಧಾರಾಕಾರವಾಗಿ ಬೀಳತೊಡಗಿತು. ಭೂಮಿಗೆ ಬಿದ್ದ ನೀರು ಕಾಲಿಗೆ ಎರಚತೊಡಗಿತ್ತು. ಛತ್ರಿಯ ತುದಿಯಿಂದ ನೇರವಾಗಿ ಕಂಬಿಗಳಂತೆ ಬೀಳುತ್ತಿದ್ದ ಮಳೆ ನನ್ನನ್ನು ಬಂಧಿಸಿರುವಂತೆ, ನಾನು ಪ್ರಕೃತಿಗೆ ಶರಣಾಗಿ ನನ್ನ ಛತ್ರಿ ಹಿಡಿದ ಕೈ ಅದಕ್ಕೆ ವಂದಿಸಿದಂತೆ ಭಾಸವಾಗತೊಡಗಿತು.


ಹಾಗೆ ನಡೆಯುತ್ತಿದ್ದಂತೆ ಹೈಸ್ಕೂಲಿಗೆ ಹೋಗುವಾಗ ಮಳೆ, ಗುಡುಗು, ಸಿಡಿಲು ಯಾವುದನ್ನೂ ಲೆಕ್ಕಿಸದೆ ಸೈಕಲ್ ಹೊಡಿತ ಇದ್ದದ್ದು ನೆನಪಾಯಿತು. ದೂರ ಹೆಚ್ಚೇನು ಅಲ್ಲ.....ಕೇವಲ ಐದು ಕಿಲೋಮೀಟರುಗಳು. ಸ್ಕೂಲ್ ಬ್ಯಾಗನ್ನು ಪ್ಲಾಸ್ಟಿಕ್ ನೊಳಗೆ ಸುತ್ತಿ ಕ್ಯಾರಿಯರ್ ಗೆ ಕಟ್ಟಿ ಒಂದು ಕೈನಲ್ಲಿ ಛತ್ರಿ ಮತ್ತೊಂದು ಕೈನಲ್ಲಿ ಸೈಕಲ್ ಹ್ಯಾಂಡಲ್ ಹಿಡಿದು ಉಬ್ಬು ತಗ್ಗುಗಳ ದಾರಿಯಲ್ಲಿ ಎಲ್ಲೂ ನಿಲ್ಲದೆ ಸೈಕಲ್ ಹೊಡೆಯುತ್ತಿದ್ದೆ[ವು]. ಸ್ಕೂಲ್ ತಲುಪೋವೇಳೆಗಾಗಲೇ ನಾವೆಲ್ಲಾ ಒದ್ದೆ ಮುದ್ದೆ. ನಮಗೆ ಖಾಳಜಿ ಇರ್ತ ಇದ್ದಿದ್ದು ನಮ್ಮ ಬ್ಯಾಗ್ ಒದ್ದೆಯಗಬಾರದೂಂತ. ನಮ್ಮ ಬಗ್ಗೆ ಗಮನ ಇರ್ತ ಇರಲಿಲ್ಲ. ಅದೇ ಒದ್ದೆ ಬಟ್ಟೆಯಲ್ಲಿ ಪಾಠ ಕೇಳ್ತಾ ಇದ್ವಿ. ದೂರದಿಂದ ಬರುವ ಎಲ್ಲ ವಿದ್ಯಾರ್ಥಿಗಳ ಪಾಡು ಇದೆ ಆಗಿರುತ್ತ ಇದ್ದಿದ್ದರಿಂದ ಅದೇನು ವಿಶೇಷ ಅನಿಸುತ್ತಿರಲಿಲ್ಲ. ಆ ದಿನಗಳಲ್ಲಿ ಸಾಮಾನ್ಯವಾಗಿದ್ದ ವಿಚಾರ ಈಗ ನೆನಪಿಗೆ ಬಂದಾಗ ಒಂಥರಾ ಸಾಹಸ ಅನಿಸೋಕೆ ಶುರುವಾಗೋದು ಸಹಜ. ಆದರೆ ಎಲ್ಲ ನೆನಪುಗಳ ಮಾತು ಮಧುರವೇನಲ್ಲ ಬಿಡಿ.

ನನ್ನ ನೆನಪಿನ ಸುರುಳಿ ಬಿಚ್ಚುತ್ತಿರುವಂತೆ ಮಳೆ ನನ್ನ ಮೈ ಒದ್ದೆ ಮಾಡಲು ಹೆಚ್ಚು ಆರ್ಭಟಿಸತೊಡಗಿತು. ಕೊನೆಗೂ ಮನೆಯ ಹತ್ತಿರ ಬರುವ ವೇಳೆಗಾಗಲೇ ಪ್ಯಾಂಟ್ ಒದ್ದೆಯಾಗಿದ್ದರೂ ಜೇಬಿನಲ್ಲಿದ್ದ ಮೊಬೈಲ್ ಸುರಕ್ಷಿತವಾಗಿತ್ತು. ರಾತ್ರಿ ಅಡಿಗೆಗೆ ಒಂದಿಷ್ಟು ತರಕಾರಿ ಕೊಂಡು ಮನೆಯ ಒಳಗೆ ಕಾಲಿಟ್ಟಾಗ ಮನಸ್ಸಿಗೆ ಆಹ್ಲಾದ, ದೇಹಕ್ಕೆ ಉತ್ಸಾಹ, ಜೀವನಕ್ಕೆ ನವಚೈತನ್ಯ ಬಂದಿತ್ತು. ಬಿಸಿ ಬಿಸಿ ಊಟ ಮಾಡ್ತಾ ನನ್ನ ನೆಚ್ಚಿನ ಟಿವಿ ಕಾರ್ಯಕ್ರಮ ನೋಡ್ತಾ ಇದ್ರೆ ಸ್ವರ್ಗವೇ ಧರೆಗಿಳಿದಂತಿತ್ತು...

Saturday, September 19, 2009

ಸುಳಿಯಲ್ಲಿ ಸಿಲುಕಿ......

ಕಳೆದ ವಾರ ತುಂಬಾ ನೀರಸವಾಗಿ ಶುರುವಾಗಿದ್ದು ಯಾವಾಗ ಮುಗಿಯುತ್ತಪ್ಪ ಅನಿಸಿಬಿಟ್ಟಿತ್ತು. ಒಂದರಹಿಂದೊಂದು ಬಂದ ಚಿಕ್ಕ ಪುಟ್ಟ ಸಮಸ್ಯೆಗಳು ಅನಗತ್ಯವಾಗಿ ತಲೆತಿಂದವು. ಕಳೆದ ವಾರದ ಆರಂಭಾನೆ ಸರಿಯಿರಲಿಲ್ಲ. ಭಾನುವಾರ ಸೋಮಾರಿತನ ಮಾಡಿ ಸುಮ್ಮನೆ ವೇಷ್ಟು ಮಾಡಿಕೊಂಡೆ. ಅವತ್ತು ಏಳುವ ಸಮಯಕ್ಕೆ ಸರಿಯಾಗಿ ಏಳದೆ ಎಷ್ಟೋ ಹೊತ್ತಿಗೆ ಎದ್ದು ದೇಹದ ತುಂಬಾ ಆಲಸ್ಯ ತುಂಬಿಕೊಂಡು, ದಿನದ ಕೊನೆಯ ಹೊತ್ತಿಗೆ ದೇಹದ ಜೊತೆ ಮನಸ್ಸೂ ಭಾರವಾಗಿತ್ತು. ಸೋಮವಾರ ಮಾಡಿದ ಒಳ್ಳೆಯ ಕೆಲಸವೆಂದರೆ ಒಂದು ಬಂಡಿ ಬಟ್ಟೆ ಒಗೆದಿದ್ದು.


ಮನೇಲಿ ಅಡಿಗೆ ಮಾಡಿಕೊಳ್ಳೋ ಅಭ್ಯಾಸ ಇರೋದ್ರಿಂದ ಎಲ್ ಪಿ ಜಿ ಯ ಮೇಲೆ ಅವಲಂಬನೆ ಸಹಜ. ಆದರೆ ಅದು ರೆಗ್ಯುಲರ್ ಸಿಲಿನ್ದೆರ್ ಅಲ್ಲ. ಎರಡೂವರೆ ಕೆಜಿ ಹಿಡಿಸೋ ಚಿಕ್ಕ ಬುರುಡೆ. ಅದು ರಾತ್ರಿ ಹೊತ್ತಿಗೆ ಖಾಲಿ. ಹೊಟ್ಟೆಗೆ ಹೋಟೆಲ್ ಊಟವೇ ಗತಿ. ಮತ್ತೆ ಮಾರನೆ ದಿನ ಸಂಜೆ ಹೊಸ ಬುರುಡೆ ಯನ್ನು ತಂದ್ದಿದ್ದಾಯಿತು. ಅದನ್ನು ಉಪಯೋಗಿಸಲು ತೊಡಗಿದ ಮೇಲೆ ನನಗೆ ಗೊತ್ತಾದ ವಿಷಯವೆಂದರೆ ಬರ್ನರ್ ಫಿಕ್ಸ್ ಮಾಡಿದ ಮೇಲೆ ಲೀಕೇಜ್ ಇದೆ ಅಂತ. ಅವತ್ತು ಹಾಗೆ ಅಡಿಗೆ ಮಾಡಿದೆ. ಆದ್ರೆ ಲೀಕೇಜ್ ಇರುವಲ್ಲಿ ಸಣ್ಣಗೆ ಬೆಂಕಿ ಹೊತ್ತಿಕೊಂಡು ಆಟೋಮ್ಯಾಟಿಕ್ ಸ್ಟಾರ್ಟಾರ್ ಕರಗಿಹೋಗಿದ್ದು ನಾನು ಗಮನಿಸಿದ್ದು ಅಡಿಗೆ ಮನೆ ಕ್ಲೀನ್ ಮಾಡಲು ಬಂದ ನಂತರವೇ. ಆಗಲೇ ಎಷ್ಟು damage ಆಗಬೇಕೋ ಅಷ್ಟು ಆಗಿಹೋಗಿತ್ತು. ಎಷ್ಟು ಅಂದ್ರೆ ನಾನು ಆ ಬರ್ನರ್ ಕಿಟ್ ಎಂದೆಂದಿಗೂ ಉಪಯೋಗಿಸಲಾರದಷ್ಟು. ಅದೇ ಬುರುಡೆಯಲ್ಲಿ ಸ್ನಾನಕ್ಕೆ ನೀರು ಕಾಯಿಸುತ್ತಿದ್ದೆ [immersion coil ಹಿಂದಿನ ವಾರ ಹಾಳಾಗಿತ್ತು.]. ಅದಕ್ಕೂ ಖೋತಾ ಆಯಿತು. ಹಾಗಂತ ಸ್ನಾನ ಮಾಡೋದೇನು ಬಿಡಲಿಲ್ಲ. ತಣ್ಣೀರು ಗತಿಯಾಯಿತು ಮುಂದೆರಡುದಿನ.


ತಲೆಮೇಲೆ ಮೇಲೆ ಕೈಹೊತ್ತು ಕುಳಿತ ನನಗೆ ಸ್ನೇಹಿತ ಸಾಂತ್ವಾನ ಹೇಳಿದ್ದಲ್ಲದೆ ತನ್ನಲ್ಲಿದ್ದ immersion coil ಮತ್ತು ಬರ್ನರ್ ತಂದು ಕೊಟ್ಟ. ಆಮೇಲೆ ನನಗೆ ಸ್ವಲ್ಪ ರಿಲೀಫ್ ಆಗಿದ್ದು. ಆದರೆ ಇವತ್ತು ಅಂದ್ರೆ ಶನಿವಾರ ದಿನ ಚೆನ್ನಾಗಿ ಕಳೀತು. ಸಂಜೆ ಸುರಿದ ಮಳೆಯಲ್ಲಿ ಛತ್ರಿ ಹಿಡಿದು ನಡೆದಿದ್ದು ತುಂಬಾ ಆಹ್ಲಾದಕರವಾಗಿತ್ತು [ನೀನೆ ಛತ್ರಿ ನಿನಗ್ಯಾಕೋ ಛತ್ರಿ ಅಂತ ನನ್ನ ಸ್ನೇಹಿತೆ ಹೇಳ್ತಾ ಇದ್ಲು ಬಿಡಿ. ]. ಬೆಂಗಳೂರಿಗೆ ಬಂದು ಈ ಅಕ್ಟೋಬರ್ ಗೆ ಹತ್ತು ವರ್ಷ ಆಗುತ್ತೆ. ಇಲ್ಲಿಯವರೆಗೂ ಎಲ್ಲ ಮಳೆಗಾಲಗಳನ್ನ ಕೊಡೆ ಇಲ್ಲದೆ ಕಳೆದಿದ್ದೆ. ಇವತ್ತಿನ ವಾಕಿಂಗ್ ನಾನು ಒಂದಿಷ್ಟು ನಾಸ್ತಲ್ಜಿಕ್ ಆಗೋಹಾಗೆ ಮಾಡಿದ್ದು ಸುಳ್ಳಲ್ಲ. ಕೊನೆಗೂ everything went well. I am very happy. ಮುಂದಿನ ವಾರ ಮಾಡಬೇಕಾಗಿರುವ ಹಲವು ಕೆಲಸಗಳನ್ನು ಚೆನ್ನಾಗಿ ಮಾಡುವ ಆಲೋಚನೆಗಳೊಂದಿಗೆ ನಿದ್ದೆಗೆ ಜಾರ್ತಾ ಇದ್ದೀನಿ. ಶುಭ ರಾತ್ರಿ.

Tuesday, August 4, 2009

108


108 ಇದು ಏನು ?
೧. ಇದು ಮೂರು ಅಂಕಿಯ ಟೋಲ್ ಫ್ರೀ ನಂಬರ್. ಇದಕ್ಕೆ ಕರೆಮಾಡಿ ನೀವು ವೈದ್ಯಕೀಯ, ಪೋಲಿಸ್, ಅಥವಾ ಅಗ್ನಿಶಾಮಕ ದಳದ ತುರ್ತು ಸೇವೆಗಳ ನೆರವು ಪಡೆಯಬಹುದು.
೨. 108 ಇದು ಯಾವುದೇ ಗಂಭೀರ ತುರ್ತು ಸ್ಥಿತಿಯಲ್ಲಿರುವ ಜನರಿಗಾಗಿ ದಿನದ ೨೪ ಗಂಟೆಗಳ ಉಚಿತ ಸೇವೆ.
೩. 108 ನ್ನು ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲ್ ನಿಂದ ನೇರವಾಗಿ ಸಂಪರ್ಕಿಸಬಹುದು.

108 ಇದು ಏನು ಮಾಡುತ್ತದೆ ?
108 ಕರೆಯು ನಿಮ್ಮ ಮತ್ತು / ವೃತ್ತಿಪರರೊಂದಿಗೆ (call center) ಸಂಪರ್ಕ ಹೊಂದಿಸುತ್ತದೆ ಹಾಗು ಅವರು ನಿಮ್ಮ ಕರೆಯನ್ನು ಸ್ವೀಕರಿಸಿ, ನಿಮ್ಮ ತುರ್ತು ಸಂದರ್ಭವನ್ನು ವಿವರಿಸಲು ಕೇಳುತ್ತಾರೆ. ನಂತರ ಅವರು ಅಗತ್ಯದ ತುರ್ತು ಸಿಬ್ಬಂದಿಯನ್ನು ನೀವಿರುವ ಸ್ಥಳಕ್ಕೆ ನಿಮ್ಮ ನೆರವಿಗೆ ಕಳಿಸುತ್ತಾರೆ.


ಯಾವ ಸಂದರ್ಭದಲ್ಲಿ ಕರೆ ಮಾಡಬೇಕು ?
೧. ವೈದ್ಯಕೀಯ ತುರ್ತು ಪರಿಸ್ಥಿತಿಗಳು.
a) ಗಾಯಗಳು b) ಹೃದಯ ತೊಂದರೆಗಳು c) ಲಕ್ವ d) ಉಸಿರಾಟ ಸಮಸ್ಯೆಗಳು e) ಮಧುಮೇಹ f) ಹೆರಿಗೆ g) ಪ್ರಜ್ಞೆ ತಪ್ಪುವಿಕೆ h) ಪ್ರಾಣಿಗಳು ಕಚ್ಚಿದಾಗ i) ಸುಟ್ಟ ಗಾಯಗಳು j) ಜ್ವರ k) ಸೋಂಕುಗಳು
೨. ಪೋಲೀಸ್ ತುರ್ತು ಪರಿಸ್ಥಿತಿಗಳು.
a) ಅಪರಾಧ b) ಕಳ್ಳತನ c) ಹ ೊಡೆದಾಟ d) ಕಳ್ಳತನ ನಡೆಯುತ್ತಿರುವಾಗ e) ಶಾರೀರಿಕ ಅಪರಾಧ.

೩. ಆಕಸ್ಮಿಕ ಅಗ್ನಿ ದುರಂತದ ತುರ್ತು ಪರಿಸ್ಥಿತಿಗಳು.

108 ಗೆ ಕರೆಮಾಡಿದಾಗ ಏನಾಗುತ್ತದೆ ?
ನೀವು 108 ಕ್ಕೆ ಕರೆ ಮಾಡಿದಾಗ ನಿಮ್ಮನ್ನು ವೃತ್ತಿಪರರಿಗೆ ಸಂಪರ್ಕಿಸಲಾಗುತ್ತದೆ. ಕೆಲವು ಅಗತ್ಯದ ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಿಸಿ ತುರ್ತು ಸೇವೆಯ ರೂಪದಲ್ಲಿ - ambulance, ಪೋಲೀಸ್ ಅಥವಾ ಅಗ್ನಿಶಾಮಕ ವಾಹನವನ್ನು ಕಳುಹಿಸಲಾಗುವುದು. ತಿಳಿಸಬೇಕಾದಂತಹ ಕೆಲವು ವಿವರಗಳು.
೧) ನೀವು ಕರೆ ಮಾಡುತ್ತಿರುವ ಸ್ಥಳ.
೨) ತುರ್ತು ಸ್ಥಿತಿಯ ವಿವರ.
೩) ಸಹಾಯ ಅಗತ್ಯವಿರುವ ಜನಗಳ ಸಂಖ್ಯೆ.
೪) ಕರೆ ಮಾಡುತ್ತಿರುವವರ ದೂರವಾಣಿ ಸಂಖ್ಯೆ / ಅವರನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ( ಸ್ಥಳ ಮಾರ್ಗದರ್ಶನಕ್ಕಾಗಿ ).

ಸಹಾಯವೂ ನಿಮ್ಮನ್ನು ಸರಾಸರಿ ೨೦ ನಿಮಿಷಗಳ ಅವಧಿಯಲ್ಲಿ ತಲಪುವುದು. ವೈದ್ಯಕೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವ್ಯಕ್ತಿಯ ಆರೋಗ್ಯದಲ್ಲಿ ಸ್ಥಿರತೆ ತರಲು ಬೇಕಾದ ಪೂರ್ವ ಚಿಕಿತ್ಸೆ ಮಾಡಲಾಗುವುದು. ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಅತ್ಯಂತ ಜನಪ್ರಿಯವಾದಂತ ಸೇವೆಯನ್ನು ಈಗ ನಗರಗಳಿಗೆ ವಿಸ್ತರಿಸಲಾಗಿದೆ. ನೆರವು ಬೇಕಾಗಿರುವ ಸ್ಥಳಕ್ಕೆ ಸಮೀಪವಾಗಿರುವ ತುರ್ತುಪರಿಸ್ಥಿತಿ ನಿರ್ವಹಣಾ ಕೇಂದ್ರದಿಂದ ಸೇವೆಯನ್ನು ಒದಗಿಸಲಾಗುವುದು. ಆದರೆ ಈ ಸೌಲಭ್ಯ ವಿಚಾರಣೆ ಮಾಡುವ ( enquiry) ದೂರವಾಣಿ ಸಂಖ್ಯೆಯಲ್ಲ. ತಮಾಷೆಗಾಗಿ 108 ಕ್ಕೆ ಕರೆ ಮಾಡಿ ಆಟವಾಡಬೇಡಿ. ಯಾವುದೇ ವ್ಯಕ್ತಿ ಗಂಭೀರ ಪರಿಸ್ಥಿತಿಯಲ್ಲಿ ಇಲ್ಲದಿದ್ದಾಗ ಕರೆ ಮಾಡಬಾರದು. ಸರ್ಕಾರ ಒದಗಿಸಿದ ಈ ಉಪಯುಕ್ತ ಸೇವೆಯನ್ನು ಸಾರ್ವಜನಿಕರು ಸದುಪಯೋಗಿಸಿಕೊಳ್ಳುವರೆಮ್ಬುದು ನನ್ನ ಆಶಯ.

Monday, August 3, 2009

ನನ್ನ ನೋಡಲು.............

ಇರುವೆನು ನಿನ್ನ ಮನದಲಿ

ಸುಳಿವೆನು ನಿನ್ನ ಬಳಿಯಲಿ

ಕಣ್ಮುಚ್ಚು ಹುಡುಗಿ ನೀ ನನ್ನ ನೋಡಲು.............

--ನವೀನ್ ಕೆ.ಎಸ್.

Friday, July 24, 2009

ಹೀಗೊಂದು ಮಾತುಕತೆ

ಹೀಗೆ ಒಂದು ದಿನ ಅನ್ನ ಮಾಡಲು ಬೇಜಾರಾಗಿ ಬೆಳಿಗ್ಗೆ ಉಳಿದಿದ್ದ ದೋಸೆ ಹಿಟ್ಟಿಗೆ ಸ್ವಲ್ಪ ಗೋದಿಹಿಟ್ಟು ಬೆರೆಸಿ ಈರುಳ್ಳಿ ಕೊಚ್ಚಿ ಹಾಕಿ ದೋಸೆ ಮಾಡಲು ರೆಡಿಯಾಗುತ್ತಿದ್ದೆ. ಮೊಬೈಲ್ ರಿಂಗಣಿಸಿದ ಸದ್ದು ಕೇಳಿ ಮಾಡುತ್ತಿದ ಕೆಲಸ ಅಲ್ಲಿಯೇ ಬಿಟ್ಟು ಕಾಲ್ ಅಟೆಂಡ್ ಮಾಡಲು ಹಾಲ್ ಗೆ ಓಡಿದೆ. ನನ್ನ ಗೆಳತಿಯ ಕರೆಯಾಗಿತ್ತದು. ನಮ್ಮಿಬ್ಬರ ಸಂಭಾಷಣೆ

ಗೆಳತಿ: ಏನೋ ಮಾಡ್ತಾ ಇದೀಯ?

ನಾನು: ದೋಸೆ ಹಿಟ್ಟು ಉಳಿದಿತ್ತು..................ಅದಿಕ್ಕೆ ಈರುಳ್ಳಿ ಕೊಚ್ಚಿ ಹಾಕಿ ದೋಸೆ ಮಾಡ್ತಿದೀನಿ.

ಗೆಳತಿ: ಎಷ್ಟು ಈಸಿನೋ ನಿನ್ನ ಲೈಫು..........

ನಾನು: ಅದ್ರಲ್ಲಿ ಲೈಫು ಈಸಿ ಆಗೋದೇನು ಬಂತು ಹುಡುಗಿ..........

ಗೆಳತಿ: ಮತ್ತಿನ್ನೇನೋ ನಮ್ ತರ ದಿನ ಇಂತದೇ ಅಡಿಗೆ ಆಗ್ಬೇಕೂಂತ ಏನಾದ್ರು ಇದ್ಯ.........?

ನಾನು: ದಿನ ಒಂದೊಂದು ತರ ಅಡಿಗೆ ಇದ್ರೆ ತಿನ್ನೋಕೆ ಚೆನ್ನಾಗಲ್ವೇನೆ.........!

ಗೆಳತಿ: ತಿನ್ನೋರಿಗೆ ಚಂದ.............ಆದ್ರೆ ಮಾಡೋರಿಗೆ........?

ನಾನು: ಅಂದ್ರೆ.....ನೀನು ದಿನ ಅಡಿಗೆ ಮಾಡ್ಬೇಕು ಅದ್ಕೆ ನಿಂಗೆ ಕಷ್ಟ ಅಂತಾನ?

ಗೆಳತಿ: ಹೌದು....ನಿಂತರ ಇದ್ರೆ ಆರಾಮು ನೋಡು....

ನಾನು: ನನ್ ಕಷ್ಟ ನನಗೆ.....ನಿಂಗೇನು ಗೊತ್ತು....

ಗೆಳತಿ: ನಿಂಗೇನೋ ಕಷ್ಟ. ಬೇಕಾದಲ್ಲಿಗೆ ಹೋಗ್ತಿಯ, ಬರ್ತೀಯ, ಹೇಳೋರು ಕೇಳೋರು ಯಾರು ಇಲ್ಲ.....ಹೆಂಗೆ ಬೇಕಾದ್ರೆ ಹಂಗೆ ಇರ್ತಿಯ.....ಇನ್ನೇನು.........

ನಾನು: ಅಯ್ಯೋ ಪಾಪಿ.........ನಿನಗೇನೆ ಕಡಿಮೆ ಆಗಿರೋದೀಗ...........!!?? ನಿನಗಿಷ್ಟವಾದ ಹಾಗೇನೇ ಇದ್ದೀಯಲ್ಲೇ.

ಗೆಳತಿ: ಆದರೂ....ಏನೋ ಒಂಥರಾ....ಕಣೋ.....ಮದುವೆಗಿಂತ ಮೊದಲೇ ಚೆನ್ನಾಗಿತ್ತು.......ಅನ್ಸುತ್ತೆ.......

ನಾನು: ಅದೆಲ್ಲ ಏನಿಲ್ಲ ಬಿಡು. ನಿನ್ನ ಮಾತು ಕೇಳೋಕೆ....ಕೇರ್ ಮಾಡೋಕೆ ಒಬ್ರು ಇದಾರಲ್ವ ಅದು ಮುಖ್ಯ. ನನಗೆ ಹೋಟೆಲ್ ಊಟ ಆಗಲ್ಲ. ಸೊ ಮನೇಲಿ ನಾನೇ ಬೇಯಿಸಿಕಳೋದು ತಪ್ಪಿಲ್ಲ. ಅಮ್ಮ ಇಲ್ಲಿಗೆ ಬರೋ ಪರಿಸ್ಥಿತಿ ಇಲ್ಲ. ಯಾರ ಹತ್ರ ಏನಾದ್ರು ಹೇಳಿಕೊಳ್ಳೋಣಾನ್ದ್ರು ಯಾರೂ ಇಲ್ಲ. ಹಾಗಾಗಿ ನಾನು ಅಂದ್ರೆ.........ಸಮಸ್ತ ಬ್ರಮ್ಹಚಾರಿಗಳ ಪ್ರತಿನಿಧಿ ಸುಮ್ಮನೆ ತಿರುಗ್ತಾನೆ ಇರ್ತೀನಿ. Most of the time it is waste..............ಆ ಸಮಸ್ಯೆ ನಿನಗಿಲ್ಲ ನೋಡು.

ಗೆಳತಿ: ನಮ್ಮನೇನಲ್ಲಿ ನಮ್ ಮಾವನಿಗೆ ಒಂಥರಾ ಅಡಿಗೆ, ನಮ್ ಅತ್ತೆಗೆ ಒಂಥರಾ ಅಡಿಗೆ, ಇವ್ರಿಗೆ ಒಂದು ರೀತಿ. ಕೆಲವೊಂದು ಸಲ ಪೇಷನ್ಸ್ ಕಳೆದು ಹೋಗ್ಬಿಡತ್ತೆ ಕಣೋ.

ನಾನು: ಇಪ್ಪತ್ನಾಕು ಗಂಟೇನು ಅಡಿಗೆನೆ ಮಾಡ್ತಾ ಇರ್ತೀಯ? ಇಲ್ಲ ತಾನೇ. ನೀನು ಬೇರೆ ಜವಾಬ್ದಾರಿಗಳನ್ನು ನಿರ್ವಹಿಸ್ತ ಇಲ್ವಾ. ನಿನ್ನ ಹಲವಾರು ಜವಾಬ್ದಾರಿಗಳಲ್ಲಿ ಅಡಿಗೆನು ಒಂದು ಅಷ್ಟೇ. ಇಟ್ ಇಸ್ ಜಸ್ಟ್ ಪಾರ್ಟ್ ಆಫ್ ಯುವರ್ ಲೈಫ್. ಅದೇ ಲೈಫ್ ಅಲ್ವಲ್ಲ.

ಗೆಳತಿ: ಫಿಲಾಸಫಿ ಹೇಳೋದು ಸುಲಭ ಕಣೋ........ಬಂದು ಮಾಡು ಗೋತ್ತಾಗುತ್ತೆ.

ನಾನು: ನೋಡು ಹುಡುಗಿ..........ಸಮಸ್ಯೆಗಳು ಎಲ್ಲರಿಗು ಇದ್ದೆ ಇದೆ. ಅದರ ಬಗ್ಗೆನೇ ಯೋಚಿಸ್ತಿದ್ರೆ ನಮಗಿಂತ ಕಷ್ಟಪಡೋರು ಯಾರೂ ಇಲ್ವೇನೋ ಅನ್ನೋ ಭಾವನೆ ಬಲವಾಗಿಬಿಡತ್ತೆ . ಮದುವೆಯಾದವರಿಗೆ ಒಂಥರಾ, ಆಗದಿದ್ದವರಿಗೆ ಒಂಥರಾ ಅಷ್ಟೇ. ಸಮಸ್ಯೆಗಳ ಬಗ್ಗೆ ಗಮನ ಹರಿಸೋದು ಬಿಟ್ಟು ಬೇರೆ ವಿಚಾರಗಳತ್ತ ಮನಸ್ಸು ಹರಿಸಿದರೆ ಮನಸ್ಸು ತಿಳಿಯಾಗಿರುತ್ತೆ.

ಗೆಳತಿ: ಅದೇನೋ ಕಣೋ ನನಗಂತೂ ಅರ್ಥ ಆಗಲ್ಲ. ಸರಿಯಪ್ಪ ನಾನು ಫೋನ್ ಇಡ್ತೀನಿ. ಮತ್ಯಾವಗಲಾದ್ರು ಮಾಡ್ತೀನಿ.

ನಾನು: ಸರಿ ಹುಡುಗಿ.........ಟೇಕ್ ಕೇರ್ ಬೈ ಬೈ.

ಗೆಳತಿ: ಓಕೆ.ಬೈ ಬೈ.

Thursday, July 23, 2009

ಅವ್ರು.........

ಇತ್ತೀಚೆಗಷ್ಟೆ ಮದುವೆಯಾದ ಗೆಳತಿಯೊಬ್ಬಳು ಅಚಾನಕ್ಕಾಗಿ ಸಿಕ್ಕಿದ್ದಳು. ಒಂದಿಷ್ಟು ಉಭಾಯಕುಶಲೋಪರಿಗಳ ನಂತರ ಅವಳು ಮಾತಾಡಿದ್ದು ಅವಳ ಗಂಡನ ಬಗ್ಗೆ ಬಿಟ್ಟರೆ ಇನ್ನೇನು ಅಲ್ಲ. ಪ್ರತಿ ಮಾತು ಅವನ ಸುತ್ತಲೇ ಗಿರಕಿ ಹೊಡೆದಿತ್ತು. "ನನ್ನ ಗಂಡನಿಗೆ ಬದನೇಕಾಯಿ ಆಗೋಲ್ಲ" ಅನ್ನೋ ವಿಷಯದಿಂದ ಶುರುವಾಗಿ "ಅವಳು ಬೇರೆಯವರ ಜೊತೆ ಫೋನಿನಲ್ಲಿ ಮಾತಾಡೋದು ಅವನಿಗೆ" ಇಷ್ಟವಾಗೋಲ್ಲ ಅನ್ನೋತನಕ ಮುಂದುವರೆದಿತ್ತು. ಇದು ಇವಳೊಬ್ಬಳ ಕೇಸ್ ಅಲ್ಲ. ಸಾಮಾನ್ಯವಾಗಿ ಮದುವೆಯಾದ ಶುರುವಿನಲ್ಲಿ ಹೆಚ್ಚುಕಡಿಮೆ ಎಲ್ಲ ಹೆಣ್ಮಕ್ಕಳ ವರ್ತನೆ ಹೀಗೆ ಇರತ್ತೆ. ಅವರು ಹೇಳುವ ಮಾತುಗಳ ತುಣುಕುಗಳು,


೧) ಅವ್ರಿಗೆ ಜೀನ್ಸ್ ಪ್ಯಾಂಟ್ ಅಂದ್ರೆ ತುಂಬಾ ಇಷ್ಟ; ಅದನ್ನೇ ಯಾವಾಗಲು ಹಾಕ್ಕೋತಾರೆ.
೨) ಇಸ್ತ್ರಿ ಮಾಡದ ಶರ್ಟ್ ಹಾಕೋದೆ ಇಲ್ಲ. ನನಗಂತೂ ಇಸ್ತ್ರಿ ಮಾಡೋದೇ ಕೆಲಸ ಆಗ್ಬಿಟ್ಟಿದೆ.
೩) ಅವ್ರು ನಂತಾರಾನೆ ತುಂಬಾ ಕ್ಲೀನ್.
೪) ಅವ್ರಿಗೆ ಗರ್ಲ್ ಫ್ರೆಂಡ್ಸ್ [ಫ್ರೆಂಡ್ಸ್ ಹೂ ಆರ್ ಗರ್ಲ್ಸ್] ತುಂಬಾ ಜಾಸ್ತಿ.
೫) ಅವ್ರು ಮನೆಗೆ ಬಂದ ತಕ್ಷಣ ನಾನು ಅವ್ರ ಮುಂದೇನೆ ಇರಬೇಕು.
೬) ಅವ್ರು ಬದನೇಕಾಯಿ ಸಾಂಬಾರ್ ತಿನ್ನಲ್ಲ...............ಆದ್ರೆ ಪಲ್ಯ ತಿಂತಾರೆ.
೭) ಅವ್ರಿಗೆ ಹೃತಿಕ್ ರೋಶನ್ ಅಂದ್ರೆ ತುಂಬಾ ಇಷ್ಟ.
೮) ಅವ್ರಿಗೆ ಮೊಬೈಲ್ ಚೇಂಜ್ ಮಾಡೋ ಹುಚ್ಚು. ಮೊನ್ನೆ ಮದುವೆಗಿಂತ ನಾಲ್ಕು ತಿಂಗಳು ಮೊದಲು ತಗೊಂಡ ಮೊಬೈಲ್
ಫೋನ್ ಮಾರಿ ಹೊಸಾದು ತಗೊಂದಿದಾರೆ.
೯) ಟೈಮಿಗೆ ಸರಿಯಾಗಿ ತಿಂಡಿ ಆಗ್ಲಿಲ್ಲಾಂದ್ರೆ ಸಿಕ್ಕಾಪಟ್ಟೆ ಕೋಪ ಬರುತ್ತೆ ಅವ್ರಿಗೆ.
೧೦) ತಣ್ಣನೆ ಅನ್ನ ತಿನ್ನೋಲ್ಲ..........ಯಾವಾಗಲೂ ಬಿಸಿಬಿಸಿನೆ ಇರಬೇಕು.

ಅರೆ ಯಾರ್ give me a break [ಅಂತ ಹೇಳ್ಬೇಕು ಅನ್ನಿಸುತ್ತಿಲ್ವ ]. ಮದುವೆಗೆ ಮುಂಚೆ ನಮ್ಮ ಜೊತೆ ತರ್ಲೆ ಮಾಡಿಕೊಂಡು, ಕಂಡಿದ್ದಕ್ಕೆಲ್ಲ ವಾದ ಮಾಡ್ತಾ, ಎಲ್ಲರನ್ನು ರೆಗಿಸಿಕೊಂಡಿದ್ದ ಹುಡುಗಿ ಇವಳ? ಅನ್ನೋವಷ್ಟು ಬದಲಾವಣೆ. ಇದು ಮದುವೆಯಾದ ಇನ್ನು ಸರಿಯಾಗಿ ಹೇಳ್ಬೇಕೂಂದ್ರೆ ಹೊಸದಾಗಿ ಮದುವೆಯಾದ ಹೆಣ್ಮಕ್ಕಳನ್ನ ಗಮನಿಸಿದರೆ ತಿಳಿಯುವಂತ ವಿಚಾರ. ಅದೇ ನವವಿವಾಹಿತನನ್ನ ಗಮನಿಸಿ ಅವನು ಅಷ್ಟೇನೂ ತನ್ನ ಹೆಂಡತಿಯ ಬಗ್ಗೆ ಹೇಳೋಲ್ಲ [ಹೇಳಬಾರದು ಅಂತ ತೀರ್ಮಾನಿಸಿಕೊಂಡಿರ್ತಾರೆ ಅನ್ಸುತ್ತೆ]. ಅವನ ಮಾತುಗಳು ಎಂದಿನಂತೆ ನಾರ್ಮಲ್ ಆಗಿರ್ತವೆ. ಇನ್ನು "ಹ್ಯಾಗಿದೆ ಲೈಫು ಮದುವೆ ಆದ ಮೇಲೆ" ಅಂತ ಬಿಡಿಸಿ ಕೇಳಿ ಮಾಮೂಲು ಕಣೋ ಅಂತ ವಿಶೇಷ ಏನು ಇಲ್ಲ ಅಂತಾನೋ...........ನೆಂಟರ ಮನೆಗೆ / ಫಂಕ್ಷನ್ ಗಳಿಗೆ ಹೋಗೋದು ಜಾಸ್ತಿ ಆಗಿದೆ ಅಂತಾನೋ ಅವನು ಹೇಳ್ತಾನೆ. ಮದುವೆಯ ಸಂಭ್ರಮ ಕೆಲವಾರು ವರುಷ ಹೊತ್ತು ತಿರುಗೊದ್ರಲ್ಲಿ ಹುಡುಗಿಯರಿಗೆ ಇರೋ ಆಸಕ್ತಿ ಹುಡುಗರಿಗೆ ಇರೋದಿಲ್ಲ. ಹೊಸ ಜನ, ಹೊಸ ಮನೆ, ಹೊಸ ಪರಿಸರ [ಮತ್ತು ಹೊಸ ಅನುಭವ] ಹುಡುಗಿಯರ ಸಂಭ್ರಮವನ್ನು ಜತನದಿಂದ ಕಾಪಾಡಿಕೊಂಡು ಬಾರೋ ಹಾಗೆ ಮಾಡ್ತಾವೆಂತ ನನ್ನ ಅನಿಸಿಕೆ.