Sunday, September 20, 2009

ಮಳೆಯಲಿ... (ಯಾರೂ ಇರದೆ) ಜೊತೆಯಲಿ........



ಮಳೆಯ ವಿಚಾರದಲ್ಲಿ ಪಕ್ಕಾ ಮಲೆನಾಡಿಗ ನಾನು. ಎಲ್ಲೇ ಮಳೆಯಾದರೂ ತಟ್ಟನೆ ನೆನಪಾಗೋದು ನಮ್ಮೂರ ಮಳೆ. ಮಳೆಯ ಪ್ರಮಾಣದಲ್ಲಿ ವ್ಯತ್ಯಯ ಹೊರತುಪಡಿಸಿ ಎಲ್ಲ ಕಡೆ ಸುರಿಯುವ ಮಳೆ ತಂದೊಡುವ ಸನ್ನಿವೇಶಗಳು, ಎಬ್ಬಿಸುವ ಭಾವನೆಗಳು ಒಂದೇ. ಬೆಂಗಳೂರಿಗೆ ಬಂದ ನಂತರ ಮಳೆಯನ್ನು ಗಮನಿಸೋದು, ಮನದಲ್ಲಿ ಅರಳುವ ನವಿರು ಭಾವನೆಗಳನ್ನು ಅನುಭವಿಸೋದು ಬಿಟ್ಟಿದ್ದೆ. ದಾರಿಯಲ್ಲಿ ಹೋಗುವಾಗ ಮಳೆ ಬಂದರೆ ಅಲ್ಲೇ ಇರೋ ಅಂಗಡಿಯ ಸೂರಿನಲ್ಲಿ ನಿಂತು ಒಂದೈದು ನಿಮಿಷ ಮಳೆ ಬಿಡೋವರೆಗೂ ಕಾದು ಮುಂದೆ ಹೋಗುತ್ತಿದೆ. ಮಲೆನಾಡಿನಂತೆ ಬೆಂಗಳೂರ ಮಳೆಗೆ ವಿಶೇಷ ತಯಾರಿ ಬೇಕಾಗೋದಿಲ್ಲ. ಆದರು ಅಮ್ಮ ಮನೆಯಲ್ಲಿ ಇದ್ದ ಒಂದು ಕೊಡೆಯನ್ನು ಊರಿಗೆ ಹೋದಾಗ ಕೊಟ್ಟಿದ್ದಳು [ಈ ವಿಚಾರ ಗೊತ್ತಾದಾಗ ನೀನೆ ಛತ್ರಿ ನಿನಗ್ಯಾಕೋ ಛತ್ರಿ ಅಂತ ಸ್ನೇಹಿತೆ ಛೇಡಿಸುತ್ತ ಇದ್ಲು ].


ನಿನ್ನೆ ಕೆಲಸದ ಸಲುವಾಗಿ ಹೊರಗೆ ಹೋಗಿದ್ದೆ. ಮಳೆಯ ನಿರೀಕ್ಷೆ ಇದ್ದದ್ದರಿಂದ ಛತ್ರಿಯನ್ನು ತೆಗೆದುಕೊಂಡು ಹೋಗಲು ಮರೆತಿರಲಿಲ್ಲ. ಬಸ್ಸು ಇಳಿಯುವ ವೇಳೆಗಾಗಲೇ ಜಿಟಜಿಟ ಸದ್ದು ಮಾಡುತ್ತಾ ಮಳೆ ತನ್ನಿರುವಿಕೆಯನ್ನು ಸೂಚಿಸಿತ್ತು. ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಬಸ್ ಸ್ಟಾಂಡಿನಲ್ಲಿ ಕೆಸರುಗದ್ದೆಯನ್ನು ಸೃಷ್ಟಿಸಿಯಾಗಿತ್ತು. ನನ್ನ ನಿರೀಕ್ಷೆ ಸರಿಯಾದುದಕ್ಕೆ ಒಳಗೊಳಗೇ ಖುಷಿಪಡುತ್ತಾ ಬಸ್ಸಿನ ಕೊನೆಯ ಮೆಟ್ಟಿಲು [ಫುಟ್ ಬೋರ್ಡ್] ಇಳಿಯುವಾಗಲೇ ಛತ್ರಿ ಬಿಚ್ಚಿ ಕೆಸರಿನಲ್ಲಿ ಕಾಲಿಟ್ಟೆ. ನಿಧಾನವಾಗಿ ನಡೆದು ರಸ್ತೆಗೆ ಬಂದೆ. ಬೆನ್ನಲ್ಲಿದ್ದ ಬ್ಯಾಗನ್ನು ಸರಿಯಾಗಿ ಹೊತ್ತು ಒಂದು ಹನಿಯು ಮೈಮೇಲೆ ಬೀಳದಂತೆ ಜಾಗ್ರತೆವಹಿಸುತ್ತ ಮನೆಯ ಕಡೆ ಹೆಜ್ಜೆ ಹಾಕತೊಡಗಿದೆ. ನನ್ನ ಮುಂಜಾಗ್ರತೆಯನ್ನು ನೋಡಿ ಅಸೂಯೆಗೊಂಡ ಮಳೆ ಸ್ವಲ್ಪ ಜೋರಾಗಿಯೇ ಸುರಿಯತೊಡಗಿತು. ಛತ್ರಿ ಮತ್ತು ಬ್ಯಾಗನ್ನು ಬ್ಯಾಲೆನ್ಸ್ ಮಾಡ್ತಾ ಪ್ಯಾಂಟ್ ಒದ್ದೆಯಾಗದಿರಲಿ ಅಂತ ಸ್ವಲ್ಪ ಮಡಚಿಕೊಂಡೆ. ಇಟ್ಟಿದ್ದು ಎರಡೇ ಹೆಜ್ಜೆ ಧೋ ಅಂತ ಸುರಿಯತೊಡಗಿತ್ತು ಮಳೆ. ನನ್ನ ಮುನ್ನೆಚ್ಚರಿಕೆಗಳು ಯಾವುದು ನಡೆಯೋದಿಲ್ಲ ಅಂತ ಖಾತ್ರಿಯಾಯಿತು. ಅಲ್ಲಿಯವರೆಗೂ ನಾನು ಒದ್ದೆಯಾಗುತ್ತಿರುವ ಬಟ್ಟೆ ಮತ್ತು ಬ್ಯಾಗ್ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಯಾವಾಗ ಮಳೆಯ ಎದಿರು ನನ್ನ ಆಟಗಳು ನಡೀಲಿಲ್ಲವೋ ಆರಾಮವಾಗಿ ಹೆಜ್ಜೆ ಇಡತೊಡಗಿದೆ. ಬೆಂಬಿಡದೆ ಸುರಿಯುತ್ತಿದ್ದ ಮುಸಲಧಾರೆ ನನ್ನ ಛತ್ರಿಯ ಮೇಲೆ ಬಿದ್ದು ಕವಲುಗಳಾಗಿ ಒಡೆದು ಒಂದೊಂದು ತಂತಿಯ ತುದಿಯಲ್ಲೂ ಧಾರಾಕಾರವಾಗಿ ಬೀಳತೊಡಗಿತು. ಭೂಮಿಗೆ ಬಿದ್ದ ನೀರು ಕಾಲಿಗೆ ಎರಚತೊಡಗಿತ್ತು. ಛತ್ರಿಯ ತುದಿಯಿಂದ ನೇರವಾಗಿ ಕಂಬಿಗಳಂತೆ ಬೀಳುತ್ತಿದ್ದ ಮಳೆ ನನ್ನನ್ನು ಬಂಧಿಸಿರುವಂತೆ, ನಾನು ಪ್ರಕೃತಿಗೆ ಶರಣಾಗಿ ನನ್ನ ಛತ್ರಿ ಹಿಡಿದ ಕೈ ಅದಕ್ಕೆ ವಂದಿಸಿದಂತೆ ಭಾಸವಾಗತೊಡಗಿತು.


ಹಾಗೆ ನಡೆಯುತ್ತಿದ್ದಂತೆ ಹೈಸ್ಕೂಲಿಗೆ ಹೋಗುವಾಗ ಮಳೆ, ಗುಡುಗು, ಸಿಡಿಲು ಯಾವುದನ್ನೂ ಲೆಕ್ಕಿಸದೆ ಸೈಕಲ್ ಹೊಡಿತ ಇದ್ದದ್ದು ನೆನಪಾಯಿತು. ದೂರ ಹೆಚ್ಚೇನು ಅಲ್ಲ.....ಕೇವಲ ಐದು ಕಿಲೋಮೀಟರುಗಳು. ಸ್ಕೂಲ್ ಬ್ಯಾಗನ್ನು ಪ್ಲಾಸ್ಟಿಕ್ ನೊಳಗೆ ಸುತ್ತಿ ಕ್ಯಾರಿಯರ್ ಗೆ ಕಟ್ಟಿ ಒಂದು ಕೈನಲ್ಲಿ ಛತ್ರಿ ಮತ್ತೊಂದು ಕೈನಲ್ಲಿ ಸೈಕಲ್ ಹ್ಯಾಂಡಲ್ ಹಿಡಿದು ಉಬ್ಬು ತಗ್ಗುಗಳ ದಾರಿಯಲ್ಲಿ ಎಲ್ಲೂ ನಿಲ್ಲದೆ ಸೈಕಲ್ ಹೊಡೆಯುತ್ತಿದ್ದೆ[ವು]. ಸ್ಕೂಲ್ ತಲುಪೋವೇಳೆಗಾಗಲೇ ನಾವೆಲ್ಲಾ ಒದ್ದೆ ಮುದ್ದೆ. ನಮಗೆ ಖಾಳಜಿ ಇರ್ತ ಇದ್ದಿದ್ದು ನಮ್ಮ ಬ್ಯಾಗ್ ಒದ್ದೆಯಗಬಾರದೂಂತ. ನಮ್ಮ ಬಗ್ಗೆ ಗಮನ ಇರ್ತ ಇರಲಿಲ್ಲ. ಅದೇ ಒದ್ದೆ ಬಟ್ಟೆಯಲ್ಲಿ ಪಾಠ ಕೇಳ್ತಾ ಇದ್ವಿ. ದೂರದಿಂದ ಬರುವ ಎಲ್ಲ ವಿದ್ಯಾರ್ಥಿಗಳ ಪಾಡು ಇದೆ ಆಗಿರುತ್ತ ಇದ್ದಿದ್ದರಿಂದ ಅದೇನು ವಿಶೇಷ ಅನಿಸುತ್ತಿರಲಿಲ್ಲ. ಆ ದಿನಗಳಲ್ಲಿ ಸಾಮಾನ್ಯವಾಗಿದ್ದ ವಿಚಾರ ಈಗ ನೆನಪಿಗೆ ಬಂದಾಗ ಒಂಥರಾ ಸಾಹಸ ಅನಿಸೋಕೆ ಶುರುವಾಗೋದು ಸಹಜ. ಆದರೆ ಎಲ್ಲ ನೆನಪುಗಳ ಮಾತು ಮಧುರವೇನಲ್ಲ ಬಿಡಿ.

ನನ್ನ ನೆನಪಿನ ಸುರುಳಿ ಬಿಚ್ಚುತ್ತಿರುವಂತೆ ಮಳೆ ನನ್ನ ಮೈ ಒದ್ದೆ ಮಾಡಲು ಹೆಚ್ಚು ಆರ್ಭಟಿಸತೊಡಗಿತು. ಕೊನೆಗೂ ಮನೆಯ ಹತ್ತಿರ ಬರುವ ವೇಳೆಗಾಗಲೇ ಪ್ಯಾಂಟ್ ಒದ್ದೆಯಾಗಿದ್ದರೂ ಜೇಬಿನಲ್ಲಿದ್ದ ಮೊಬೈಲ್ ಸುರಕ್ಷಿತವಾಗಿತ್ತು. ರಾತ್ರಿ ಅಡಿಗೆಗೆ ಒಂದಿಷ್ಟು ತರಕಾರಿ ಕೊಂಡು ಮನೆಯ ಒಳಗೆ ಕಾಲಿಟ್ಟಾಗ ಮನಸ್ಸಿಗೆ ಆಹ್ಲಾದ, ದೇಹಕ್ಕೆ ಉತ್ಸಾಹ, ಜೀವನಕ್ಕೆ ನವಚೈತನ್ಯ ಬಂದಿತ್ತು. ಬಿಸಿ ಬಿಸಿ ಊಟ ಮಾಡ್ತಾ ನನ್ನ ನೆಚ್ಚಿನ ಟಿವಿ ಕಾರ್ಯಕ್ರಮ ನೋಡ್ತಾ ಇದ್ರೆ ಸ್ವರ್ಗವೇ ಧರೆಗಿಳಿದಂತಿತ್ತು...

2 comments:

ಚಕೋರ said...

ಫೋಟೋ ಗಳನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಿದ್ದೀರಿ.

ಬರಹವೂ ಚೆನ್ನಾಗಿದೆ.

ನವೀನ್ said...

ಚಕೋರ ಅವರಿಗೆ,
ಧನ್ಯವಾದಗಳು.

ನವೀನ