Tuesday, December 2, 2008

ಮತಾಂತರ

ಮತಾಂತರದ ಬಗ್ಗೆ ಈಗಾಗಲೇ ಸುಧೀರ್ಘ ಚರ್ಚೆಗಳು ನಡೆದಿವೆ. ನನ್ನ ಅನಿಸಿಕೆಗಳು ಮತಾಂತರದ ವಿರುದ್ಧವಾಗಿ ಅಥವಾ ಪರವಾಗಿ ಇಲ್ಲ. ಇದೊಂತರ ನಮ್ಮನ್ನ ನಾವು ಕನ್ನಡಿಯಲ್ಲಿ ನೋಡಿಕೊಂಡು, ಸರಿಯಿಲ್ಲದ ಕಡೆ ತಿದ್ದಿಕೊಂಡು ಹೋಗುವ ಹಾಗೆ. ನಾನು ಗಮನಿಸಿದಂತಹ ಸಂಗತಿಗಳನ್ನು ಹೇಳಲು ಇಷ್ಟಪಡುತ್ತೇನೆ ಅಥವಾ ಪ್ರಯತ್ನಪಟ್ಟಿದ್ದೇನೆ.

ನನಗನಿಸುವ ಮಟ್ಟಿಗೆ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ನಮ್ಮ ಹಿಂದೂ ಸಮಾಜಕ್ಕೆ ಇಂದು ತನ್ನನ್ನು ತಾನು ಪರಾಮರ್ಶಿಸಿಕೊಳ್ಳುವಂತಹ ಹೊಸ್ತಿಲಿಗೆ ಬಂದಿದೆ. ಮತಾಂತರವೆಂಬ ಭೂತ ನಮನ್ನ ಕಾಡ್ತಾ ಇದೆ ಅಂದರೆ ಅದರಲ್ಲಿ ನಮ್ಮ ದೌರ್ಬಲ್ಯಗಳ ಕೊಡುಗೆ ಕೂಡ ಇದೆ ಎಂದು ನನಗೆ ಅನಿಸುತ್ತದೆ. ಮತಾಂತರಿಗಳು [ ಅವರು ಯಾರೇ ಆಗಿರಬಹುದು ] ನಮ್ಮ ಸಮಾಜದಲ್ಲಿರುವ ಕೆಳವರ್ಗಕ್ಕೆ [ಪ್ರಕೃತಿಯ ದೃಷ್ಟಿಯಲ್ಲಿ / ದೇವರ ಸೃಷ್ಟಿಯಲ್ಲಿ ಕೆಳವರ್ಗ ಎನ್ನುವುದು ಇಲ್ಲದಿದ್ದರೂ ಬೇರೆ ಪದ ಹೊಳೆಯದೆ ಹಾಗೆ ಉಪಯೋಗಿಸಿದ್ದೇನೆ] / ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ತಮ್ಮ ಗುರಿಯನ್ನು ಇರಿಸಿಕೊಂಡಿದಾರೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರೂ ಮತಾಂತರ ಹೊಂದಿದ್ದರು ಅದು ಆಮಿಷಕ್ಕೊಳಗಾಗದೆ ಆಗಿರುವಂತಹದ್ದು. ಅಥವ ಅದು ಅವರ ಪ್ರಜ್ಞಾಪೂರ್ವಕ ನಿರ್ಧಾರವಾಗಿರಬಹುದು.

ಶತ ಶತಮಾನಗಳ ಹಿಂದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವಿಧಗಳಾಗಿ ವಿಂಗಡಿಸಿದ್ದು ಅವರು ಮಾಡುವ ಕೆಲಸಕ್ಕನುಗುಣವಾಗಿ ಅಷ್ಟೆ . ಕಾಲಕ್ರಮೇಣ ವರ್ಗಗಳು ಜಾತಿಗಳಾಗಿ, ಉಪಜಾತಿಗಳಾಗಿ ತಾನು ಶ್ರೇಷ್ಠ, ಮತ್ತೊಬ್ಬ ಕೀಳು ಎಂಬ ಭ್ರಮೆಗೊಳಗಾಗಿದ್ದು ಒಂದು ದುರಂತ. ಇನ್ನೂ ಅಸ್ಪ್ರುಶ್ಯತೆಯಂತಹ ಅಸಹ್ಯ ಪದ್ಧತಿ ಇದೆ ಎಂದರೆ ನಾವು ನಾಗರೀಕರಾಗಿ ವಿಕಾಸಹೊಂದಿದ್ದೀವ ಅಥವಾ ಅನಾಗರೀಕತೆಯತ್ತ ಮುಖ ಮಾಡಿದ್ದೇವಾ ? ಇಂತಹ ಪದ್ಧತಿಗಳು [ಇನ್ನೊಂದು ಉದಾಹರಣೆಯೆಂದರೆ ದೇವದಾಸಿಪದ್ದತಿ] ನಮ್ಮ ಧರ್ಮದ ದೌರ್ಬಲ್ಯಗಳಲ್ಲವೇ?

ಶ್ರೀಕೃಷ್ಣ " ವಸುದೈವ ಕುಟುಂಬಕಂ " ಅಂತ ಹೇಳಿದ. ವಿಶ್ವದಲ್ಲಿರುವ ಸಕಲ ಜೀವ ಜಂತುಗಳು ದೇವರ ಸೃಷ್ಟಿಯಲ್ಲಿ ಒಂದೇ. ಹಾಗಾದರೆ ನಾವೆಲ್ಲರೂ ಒಂದೇ ಎಂದು ಯಾಕೆ ಭಾವಿಸಬಾರದು. ಜಾತಿ ಪದ್ದತಿಯನ್ನು ಬೇರು ಸಮೇತ ಕೀಳೋದು ಅಷ್ಟು ಸುಲಭವಲ್ಲ ನಿಜ. ವಿಚಾರವಾಗಿ ಕ್ರಾಂತಿಯಾಗಲಿ ಅಂತ ನಿರೀಕ್ಷೆಸೋದು ತಪ್ಪಾಗುತ್ತೆ. ಆದರೆ ವಿಚಾರವಾಗಿ ಉದಾತ್ತ ಚಿಂತನೆಗಳು ನಡೆಯಬೇಕಿದೆ. ಮತಾಂತರವನ್ನು ವಿರೋಧಿಸುವ ಮೊದಲು ನಮ್ಮನು ನಾವು ತಿದ್ದಿಕೊಳ್ಳಬೇಕಿದೆ. ನಮ್ಮ ಸಮಾಜದ ವಿಚಾರವಂತರು, ಬುದ್ದಿಜೀವಿಗಳು, ಧರ್ಮದ ಬಗ್ಗೆ ಜ್ಞಾನವನ್ನು ಹೊಂದಿರುವವರು, ಮಠಗಳ ಮುಖ್ಯಸ್ಥರು ಜನರಲ್ಲಿ ಧರ್ಮದ ಬಗ್ಗೆ ಅರಿವನ್ನು, ಅದರ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಬೇಕಿದೆ. ಮಠ ಮಾನ್ಯಗಳು ಒಂದು ಜಾತಿಯ ಶ್ರದ್ಧಾ ಕೇಂದ್ರಗಳಾಗದೆ ನಮ್ಮ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಕೋಟ್ಯಾಂತರ ಹಣ ವೆಚ್ಚಮಾಡಿ ದೇವಸ್ಥಾನಗಳನ್ನು ಕಟ್ಟುವ ಬದಲು ದುರ್ಬಲ / ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೆ ಹಣವನ್ನು ವಿನಿಯೋಗಿಸುವುದು ಸೂಕ್ತ. ಜನರು vote bank ರಾಜಕೀಯಕ್ಕೆ ಬಲಿಯಾಗದೆ ನಾವು ದೂರ ಇಟ್ಟಿರುವವರು ನಮ್ಮವರೇ ಎಂದು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಮನಸ್ಥಿತಿಯನ್ನ ಬೆಳೆಸಿಕೊಳ್ಳಬೇಕಿದೆ. ಆಗ ಮತಾಂತರ ಅಥವಾ ಇನ್ನ್ಯಾವುದೇ ಧಾರ್ಮಿಕ, ಸಾಂಸ್ಕೃತಿಕ, ಸಮಾಜಿಕ ಅಭದ್ರತೆಯನ್ನು ತರುವಂತಹ ಚಟುವಟಿಕೆಗಳ ಆಟ ನಮ್ಮಲ್ಲಿ ನಡೆಯುವುದಿಲ್ಲ ಎಂಬುದು ನನ್ನ ಆಶಯ.

Monday, December 1, 2008

ದೇಶಕ್ಕಾಗಿ ಪ್ರಾಣ ನೀಡಿದವರಿಗೆ ನಮನ



ನಮ್ಮ ದೇಶಕ್ಕೆ ಪ್ರತಿಸಲ ಆಪತ್ತು ಬಂದಾಗ, ವಿಪತ್ತು ಬೆನ್ನೇರಿದಾಗ ನಮ್ಮ ಸಹಾಯಕ್ಕೆ, ರಕ್ಷಣೆಗೆ ಬರುವವರು ಸೈನಿಕರು ಮತ್ತು ಪೊಲೀಸರು. ನದಿಗಳು ಉಕ್ಕಿ ನೆರೆ ಬಂದಾಗ, ಶತ್ರುಗಳು ಮುಗಿಬಿದ್ದಾಗ, ಭಯೋತ್ಪಾದಕರು ಆರ್ಭಟಿಸಿದಾಗ ನಮ್ಮ ರಕ್ಷಣೆಗೆ ಧಾವಿಸಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವವರು ಸೈನಿಕರು. ಮೊನ್ನೆ ಮುಂಬೈ ನಲ್ಲಿ ನಡೆದ ಉಗ್ರಗಾಮಿಗಳ ದಾಳಿಯಲ್ಲಿ

೧) ಅಶೋಕ್ ಕಾಮ್ಟೆ
೨) ವಿಜಯ್ ಸಲಸ್ಕರ್
೩) ಹೇಮಂತ್ ಕರ್ಕೆರೆ
೪) ಸಂದೀಪ್ ಉನ್ನಿಕೃಷ್ಣನ್

ಹಾಗು ಇನ್ನಿತರ ಅನಾಮಧೇಯ ಹೀರೋಗಳು ನಮಗಾಗಿ ಪ್ರಾಣವನ್ನು ಅರ್ಪಿಸಿದ್ದಾರೆ. ಈ ಎಲ್ಲ ಧೀರರಿಗೆ ನನ್ನ ಹೃತ್ಪೂರ್ವಕ ನಮನಗಳು. ನಮ್ಮ ದೇಶ ನಿಮ್ಮ ಶೌರ್ಯವನ್ನ, ನಿಮ್ಮ ಕರ್ತವ್ಯಪ್ರಜ್ಞೆಯನ್ನ, ನಿಮ್ಮ ಸಾಹಸವನ್ನ ಹೆಮ್ಮೆಯಿಂದ ಸ್ಮರಿಸುತ್ತೇವೆ. ಇಂತಹ ಧೈರ್ಯಶಾಲಿ ಸೈನಿಕರು ಇರೋದ್ರಿಂದಲೇ ನಾವು ಇಂದು ನೆಮ್ಮದಿಯ ಜೀವನವನ್ನು ನಡೆಸುತ್ತ ಇದ್ದೇವೆ ಅಂದ್ರೆ ಅದು ಅತಿಶಯೋಕ್ತಿಯೇನಲ್ಲ.

ಆದರೆ ಪ್ರತಿಯೊಬ್ಬ ಸೈನಿಕ ಹುತಾತ್ಮನಾದಾಗ ಅವನ ಕುಟುಂಬದಲ್ಲಿ ಸೃಷ್ಠಿಯಾಗುವ ಶೂನ್ಯವನ್ನು ನಾವು ತುಂಬಲು ಸಾಧ್ಯವೇ? ತಂದೆತಾಯಿಗೆ ಮಗನನ್ನ, ಅಕ್ಕನಿಗೆ ತಮ್ಮನನ್ನ, ತಂಗಿಯರಿಗೆ ಅಣ್ಣನನ್ನ, ಹೆಂಡತಿಗೆ ಗಂಡನನ್ನ ಕಳೆದುಕೊಂಡ ದುಃಖವನ್ನು ಕಿಂಚಿತ್ತಾದರೂ ಭರಿಸಲು ನಮಗೆ ಸಾಧ್ಯವೇ? ನಮ್ಮ ಕರ್ತವ್ಯ ಅವರಿಗೆ ಸಲ್ಯೂಟ್ ಹೊಡೆಯುವುದರಲ್ಲೇ ಮುಗಿದು ಹೋಗುತ್ತಾ ಇದೆಯಲ್ಲ ಅನ್ನೋ ಭಾವ ನನ್ನನ್ನ ಕಾಡ್ತಾ ಇದೆಯಲ್ಲ?