Saturday, January 4, 2014

ಬೇಕಾಸ್ (BEKAS) - ಒಂದು ವಿಮರ್ಶೆ


            ಇರಾಕ್ ನಲ್ಲಿ ಸದ್ದಾಮ್ ಹುಸೈನ್ ಆಳ್ವಿಕೆಯ ಕಾಲವನ್ನು ಹಿನ್ನೆಲೆಯಾಗಿಟ್ಟುಕೊಂಡು ಇಬ್ಬರು ಅನಾಥ ಮಕ್ಕಳ ದೃಷ್ಟಿಯಿಂದ ಚಿತ್ರಿಸಿದ ಚಲನಚಿತ್ರ ಬೇಕಾಸ್(2012). ಕುರ್ದಿಶ್ ಭಾಷೆಯಲ್ಲಿರುವ ಈ ಚಿತ್ರದ ಕಥೆ ಇರಾಕ್ ನ ಕುರ್ದಿಷ್ತಾನದ ಒಂದು ಚಿಕ್ಕ ನಗರದಲ್ಲಿ ಆರಂಭವಾಗುತ್ತದೆ . ಝಾನಾ  (Zana)  ಮತ್ತು  ದಾನಾ (Dana) ಇಬ್ಬರೂ ಅಣ್ಣ ತಮ್ಮಂದಿರು. ಅದಕ್ಕಿಂತಲೂ ಹೆಚ್ಚಾಗಿ ಅನಾಥರು. ತಮ್ಮ ಹೊಟ್ಟೆಪಾಡಿಗಾಗಿ ಬೂಟ್ ಪಾಲಿಶ್ ಮಾಡಿ ಬದುಕು ಸಾಗಿಸುತ್ತಿರುವವರು. ಅವರಿಬ್ಬರಿಗೂ ಇರುವ ಒಂದೇ ಭಾವನಾತ್ಮಕ ಕೊಂಡಿಯೆಂದರೆ ಅವರ ಬೂಟ್ ಪಾಲಿಶ್ ಸಾಮಾನುಗಳನ್ನು ಸುರಕ್ಷಿತವಾಗಿರಿಸಲು ಹೋಗುವ ರೇಡಿಯೋ ಅಂಗಡಿಯ ಮಾಲೀಕ ಖಾಲೀದ್ ಅಜ್ಜ . ಜೀವನದಲ್ಲಿ ಭಾವನೆ, ಸಂಬಂಧಗಳ ಬಗ್ಗೆ ಪಾಠ ಹೇಳುವ ಅಜ್ಜ ಚಿಕ್ಕವನಾದ ಝಾನಾನಿಗೆ ಅಚ್ಚುಮೆಚ್ಚು . ಹೀಗಿರುವಾಗ ಒಮ್ಮೆ ಸ್ಥಳೀಯ ಚಿತ್ರಮಂದಿರದಲ್ಲಿ ಸುಪರ್ ಮ್ಯಾನ್ (Superman) ಚಿತ್ರ ಪ್ರದರ್ಶಿತವಾಗುತ್ತದೆ. ಒಂದು ದೀನಾರ್ ಟಿಕೆಟ್ ಗೆ ತೆರಲು ಆಗದ ಇಬ್ಬರು ಕಳ್ಳಗಿಂಡಿಯಿಂದ ಸುಪರ್ ಮ್ಯಾನ್ ಸಾಹಸಗಳನ್ನು ನೋಡಿ ರೋಮಾಂಚನಗೊಳ್ಳುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸುಪರ್ ಮ್ಯಾನ್ ನಮಗೂ ಸಹಾಯ ಮಾಡಲಾರನೆ.... ಅನ್ನೋ ಆಶಾಭಾವನೆ ಇಬ್ಬರಲ್ಲೂ ಹುಟ್ಟುತ್ತದೆ. ಈ ಮಕ್ಕಳಿಗೆ ದೇವರ  ಅವತಾರದಂತೆ ಕಾಣುವ ಸುಪರ್ ಮ್ಯಾನ್  ಹೊಸ ಕನಸುಗಳನ್ನು ಕಾಣಲು ಕಾರಣನಾಗುತ್ತಾನೆ. ಆದರೆ ಸುಪರ್ ಮ್ಯಾನ್ ಇರೋದು ಅಮೇರಿಕಾದಲ್ಲಿ ಅಲ್ಲಿಗೆ ಹೋಗಲು ಪಾಸ್ಪೋರ್ಟ್ ಬೇಕು ಎಂದು ಪತ್ತೆ ಹಚ್ಚುತ್ತಾರೆ. ಅಂದಿನ ಇರಾಕ್ ನ ರಾಜಕೀಯ ಬಿಕ್ಕಟ್ಟಿ ನಲ್ಲಿ ಪಾಸ್ಪೋರ್ಟ್ ಪಡೆಯುವುದು ಅಷ್ಟು ಸುಲಭವಿರುವುದಿಲ್ಲ. ತಲಾ ಏಳು ಸಾವಿರ ದೀನಾರು ಕೊಟ್ಟರೆ ಪಾಸ್ಪೋರ್ಟ್ ಪಡೆಯಬಹುದು ಅನ್ನೋ ವಿಚಾರ ಮಕ್ಕಳಿಗೆ ತಿಳಿಯುತ್ತದೆ. ಹೇಗಾದರೂ ಆಗಲಿ ಪಾಸ್ಪೋರ್ಟ್ ಪಡೆಯಲೇ ಬೇಕು ಎಂದು ನಿಶ್ಚಯಿಸುವ ಇಬ್ಬರು ಹೆಚ್ಚಿನ ಸಮಯ ಕೆಲಸದಲ್ಲಿ ವ್ಯಯಿಸಿ ದಿನಾಲು ಉಳಿತಾಯ ಮಾಡಲು ತೊಡಗುವರು. ಅದೇ ಸಮಯದಲ್ಲಿ ತಮ್ಮ ಅಚ್ಚುಮೆಚ್ಚಿನ ಖಾಲೀದ್ ಅಜ್ಜ ವಿಧಿವಶನಾದಾಗ ಅಪ್ಪ ಅಮ್ಮನ ಪ್ರೀತಿಯನ್ನೇ ಕಾಣದ ಝಾನಾ ಅತೀವ ದುಃಖಿತನಾಗುತ್ತಾನೆ. ಸುಪರ್ ಮ್ಯಾನ್ ಒಳ್ಳೆಯವರಿಗೆ ಜೀವ ಕೊಡಬಲ್ಲ....ಕೆಟ್ಟವರನ್ನು  ಸಾಯಿಸಬಲ್ಲ ಅನ್ನುವ ಕಲ್ಪನೆ ಅವರ ಅಮೇರಿಕ ಪ್ರಯಾಣದ ಕನಸನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಅದೇ ಸಮಯಕ್ಕೆ ಕತ್ತೆಯೊಂದು ಅವರಿಗೆ ಮಾರಾಟಕ್ಕೆ ಸಿಕ್ಕು ಅದರ ಮೇಲೆ ಸವಾರಿ ಮಾಡುತ್ತ ತಮ್ಮ ಕನಸಿನ ಅಮೆರಿಕಕ್ಕೆ  ಹೊರಡುತ್ತಾರೆ. ಈ ಮಕ್ಕಳು ಅಮೆರಿಕಾವನ್ನು ಮುಟ್ಟಿದರೆ? ಅವರ ಸುಪರ್ ಮ್ಯಾನ್ ಭೇಟಿ ಮಾಡುವ ಕನಸು ನನಸಾಗುತ್ತದೆಯೇ? ಅವರ ಅಪ್ಪ ಅಮ್ಮಂದಿರು ಮತ್ತು ಖಾಲಿದ್ ಅಜ್ಜ ಸುಪರ್ ಮ್ಯಾನ್ ಕೈಚಳಕದಿಂದ ಹುಟ್ಟಿಬಂದರೆ? ಎನ್ನುವುದು ಚಿತ್ರದ ಸಾರಾಂಶ. 

              ಇದೊಂದು ಮಕ್ಕಳ ಬಗೆಗಿನ ಚಿತ್ರವಾದರೂ ಕೇವಲ ಮಕ್ಕಳ ಚಿತ್ರ  ಎಂಬ ವರ್ಗಕ್ಕೆ ಖಂಡಿತ ಸೇರುವುದಿಲ್ಲ. Children of Heaven  , Colors of Paradise (both the movies directed by Majid Majidi) ಮುಂತಾದ ಅತ್ಯುತ್ತಮ ಎನಿಸುವ ಚಿತ್ರಗಳ ಸಾಲಿಗೆ ಬೇಕಾಸ್ ಮತ್ತೊಂದು ಸೆರ್ಪಡೆ. ಚಿತ್ರಕಥೆಯಲ್ಲಿನ ಬಿಗಿ ನೆರೂಪಣೆ ಕೊನೆಯವರೆಗೂ ನಮ್ಮನ್ನು ಆಸಕ್ತಿಯಿಂದ ನೋಡುವಂತೆ ಮಾಡುತ್ತದೆ. ಮಕ್ಕಳ ಪ್ರಪಂಚದ ಸೂಕ್ಷ್ಮಗಳನ್ನು ತಮಾಷೆಯಾಗಿ ನಿರೂಪಿಸುವಲ್ಲಿ  ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸದ್ದಾಮ್ ಆಳ್ವಿಕೆಯ ಸಂಕಷ್ಟಗಳು ಮತ್ತು ರಾಜಕೀಯ ಬಿಕ್ಕಟ್ಟು ನೇರವಾಗಿ ಅರ್ಥವಾಗದಿದ್ದರೂ ಬಾಲಕ ಝಾನಾ  ಮಾಡಿರುವ ಕೆಟ್ಟವರ ಪಟ್ಟಿಯ ಆಗ್ರಸ್ಥಾನದಲ್ಲಿ ಸದ್ದಾಂ ಹುಸೈನ್ ಹೆಸರು ಇರುತ್ತದೆ. ಅಪ್ಪ ಅಮ್ಮನ ಪ್ರೀತಿಯ ಪರಿಚಯವಿಲ್ಲದಿದ್ದರೂ ಅಜ್ಜ ಖಾಲೀದ್ 'ಮಗ' ಎಂದು ಅವನನ್ನು ಕರೆದಾಗ ಝಾನಾ ಪುಳಕಿತನಾಗುತ್ತಾನೆ. ಅಷ್ಟೇ ಅಲ್ಲದೆ.. ನೀನು ನನಗೆ ಮಗ ಎಂದು ಕರೆದರೆ ನನಗೆ ಸಂತೋಷವಾಗುತ್ತದೆ ಎಂದು ಅಜ್ಜನಿಗೆ ಹೆಳುತ್ತಾನೆ. ಇದೊಂದು ಸನ್ನಿವೇಶದಲ್ಲಿ ಒಬ್ಬ ಅನಾಥ ಹುಡುಗ ತಂದೆ ತಾಯಿಯರ ವಾತ್ಸಲ್ಯಕ್ಕೆ ತೊಳಲಾಡುವುದು ಅರ್ಥಗರ್ಭಿತ ವಾಗಿ ಚಿತ್ರಿತವಾಗಿದೆ. ಒಟ್ಟಿನಲ್ಲಿ 'ಬೇಕಾಸ್' ಮಕ್ಕಳ ಮುಗ್ಧತೆಯನ್ನು ಯಶಸ್ವಿಯಾಗಿ ಚಿತ್ರಿಸುತ್ತಲೇ ಅವರ ಕನಸು....ಕನಸನ್ನು ಸಾಕಾರಗೊಳಿಸಲು ಅವರು ಪಡುವ ಕಷ್ಟ , ಕಷ್ಟವನ್ನು ಬುದ್ದಿವಂತಿಕೆಯಿಂದ ಎದುರಿಸುವ ಅವರ ಧೈರ್ಯ, ಎಂಥವ ಸನ್ನಿವೇಶದಲ್ಲೂ ತಮ್ಮ ಪ್ರಯತ್ನವನ್ನು ಬಿಡದೆ ಮುನ್ನೆಡೆಯುವ ಮಕ್ಕಳ ಛಲ ಇವುಗಳನ್ನು ಅತ್ಯಪೂರ್ವವಾಗಿ ದಾಖಲಿಸುತ್ತದೆ. ಝಾಮದ್ ತಾಹ (ಝಾನಾ ) ಮತ್ತು ಸರ್ವಾರ್ ಫಾಜ್ಹಿಲ್ (ದಾನಾ) ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಮಕ್ಕಳಲ್ಲಿ  ಅಭಿನಯವನ್ನು ಹದಗೊಳಿಸುವಲ್ಲಿ ನಿರ್ದೇಶಕರ ಪಾತ್ರವೂ ತುಂಬಾ ಇದೆ. ಕೇವಲ ಎರಡೇ ಮುಖ್ಯಪಾತ್ರಗಳಲ್ಲಿ ಇಡೀ ಚಿತ್ರವನ್ನು ಯಶಸ್ವಿಯಾಗಿ  ಕೊಂಡೊಯ್ದ ನಿರ್ದೇಶಕರಿಗೆ ನನ್ನ  "ಹ್ಯಾಟ್ಸ್ ಆಫ್". ಛಾಯಾಗ್ರಹಣ ಮತ್ತು  ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿವೆ. 

               BEKAS  is a celebration of innocence, hope, dream and never quit attitude. ನಮ್ಮ ಕನ್ನಡ ಚಿತ್ರರಂಗ ಇದರಿಂದ ಕಲಿಯುವ ಅಂಶ ಬಹಳ ಇದೆ.