ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಯವರು ತಮ್ಮ ಬತ್ತಳಿಕೆಯಲ್ಲಿರೋ ಒಂದೊಂದೇ
ಬಾಣಗಳನ್ನು ಪ್ರಯೋಗಿಸತೊಡಗಿದ್ದಾರೆ. ಹಿಂದುಳಿದ ವರ್ಗದ ಹಾಗು ಅಲ್ಪ ಸಂಖ್ಯಾತರ
ಸಮಾವೇಶಗಳ ನಂತರ ಈಗ ಅವರ ಹೊಸ ಪ್ರಯೋಗ 'ಎಮೋಷನಲ್ ಬ್ಲಾಕ್ಮೇಲ್'. ಅಧಿಕಾರದ ಮೋಹ
ರಾಜಕಾರಣಿಗಳನ್ನು ಯಾವ ಮಟ್ಟಕ್ಕೆ ಇಳಿಸುತ್ತೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ.
ಇವತ್ತಿನ thatskannada.com ನಲ್ಲಿ "ನನಗೆ ಹೃದಯ ಕಾಯಿಲೆ ಇದೆ. ಇನ್ನೆಷ್ಟು ದಿನ ಬದುಕುತ್ತಿನೋ ಗೊತ್ತಿಲ್ಲ. ಆದರೆ ನಾನು
ಮಣ್ಣಾಗುವ ಮುನ್ನ ಈ ರಾಜ್ಯದ ಬಗ್ಗೆ ನಾನು ಕಂಡ ಕನಸು ನನಸಾಗಬೇಕೆಂಬುವುದೇ ನನ್ನ ಗುರಿ" ಎನ್ನುವ ಕುಮಾರಸ್ವಾಮಿಯವರ ಈ ಹೇಳಿಕೆ ಪ್ರಕಟವಾಗಿದೆ. ಒಬ್ಬ ಹತಾಶ ರಾಜಕಾರನಿಯಷ್ಟೇ ಈ
ರೀತಿಯಹೇಳಿಕೆಗಳನ್ನು ಕೊಡಬಲ್ಲ. ಹಿಂದೆ ಕುಮಾರಸ್ವಾಮಿ ಯವರು ಬಿಜೆಪಿ ಜೊತೆಗೂಡಿ ಸರ್ಕಾರ
ರಚಿಸಿದಾಗ ಎಲ್ಲರಲ್ಲೂ ಒಂದು ಆಶಾವಾದ ಇತ್ತು. ಅದಲ್ಲದೆ ತಮ್ಮ ತಂದೆಯವರನ್ನು
ದಿಕ್ಕರಿಸಿ ಕೋಮುವಾದಿ ಪಕ್ಷವೆಂದು ಬ್ರಾಂಡ್ ಆಗಿರೋ ಬಿಜೆಪಿ ಜೊತೆಗೆ ಕೈಜೋಡಿಸಿದ್ದು ಸಹ
ಅವರನ್ನು ಹೀರೋ ಆಗಿ ಮಾಡಿತ್ತು. ನನ್ನ ಪ್ರಕಾರ ಆ ಸಮಯದಲ್ಲಿ ಕುಮಾರಸ್ವಾಮಿ ಯವರಿಗೆ
ನಿಜವಾಗಲು ಒಂದು ಒಳ್ಳೆ ಸರ್ಕಾರ, ಒಳ್ಳೆ ಆಡಳಿತ ಕೊಡಬೇಕೆಂಬ ಹಂಬಲ ಇದ್ದಿರಬಹುದು. ಅದು
ಅವರು ಜಾರಿಗೆ ತಂದ ಹಲವು ಕಾರ್ಯಕ್ರಮಗಳಲ್ಲೇ ಗೊತ್ತಾಗುತ್ತದೆ. ಅಲ್ಲದೆ ಗ್ರಾಮವಾಸ್ತವ್ಯ
ಪ್ರಾರಂಭದಲ್ಲಿ ಗಿಮಿಕ್ ಆಗಿರಲಿಲ್ಲ. ರೈತಾಪಿ ಜನರ ಬಗ್ಗೆ ನಿಜವಾದ ಕಾಳಜಿಯನ್ನು
ಕುಮಾರಸ್ವಾಮಿ ಹೊಂದಿದ್ದರು. ತಮ್ಮ ಡೈನಾಮಿಕ್ ಪರ್ಸನಾಲಿಟಿ ಯಿಂದಾಗಿ ಕರ್ನಾಟಕದ
ಜನತೆಯಲ್ಲಿ 2006-07 ರ ಸಂದರ್ಭದಲ್ಲಿ ಒಳ್ಳೆಯ ಭರವಸೆ ಮೂಡಿಸಿದ್ದು ಸುಳ್ಳಲ್ಲ.
ಯಾಕೆಂದರೆ ಕರ್ನಾಟಕ ಅಲ್ಲಿಯವರೆಗೆ ಒಬ್ಬ ಯುವ ಮುಖ್ಯಮಂತ್ರಿ [ಬೇರೆಯವರಿಗೆ ಹೋಲಿಸಿದಾಗ]
ಯನ್ನು ನೋಡಿರಲಿಲ್ಲ. ಕೆಲಸದ ವೇಗ, ದಿಟ್ಟ ನಿರ್ಧಾರಗಳು, ಒಳ್ಳೆಯ ಆಡಳಿತ ಕೊಡಬೇಕೆಂಬ
ತುಡಿತ ಇವುಗಳಿಂದಾಗಿ ಜನರ ಮನಸ್ಸಿನಲ್ಲಿ ಒಂದು ಹೊಸ ಆಶಾಕಿರಣ ಮೂಡಿದ್ದಂತೂ ಹೌದು. "ಈ
ಕುಮಾರಸ್ವಾಮಿ ಏನಾದ್ರು ಮಾಡಬಹುದು ನೋಡು" ಅಂತ ನಮ್ಮಮ್ಮ ಹೇಳಿದ್ದು ಇನ್ನು ನನಗೆ
ನೆನಪಿದೆ. ಇಷ್ಟೊಂದು ಪಾಸಿಟಿವ್ ಅಂಶಗಳನ್ನು ಇಟ್ಟುಕೊಂಡು ಕುಮಾರಸ್ವಾಮಿ ರಾಜ್ಯದ
ಉದ್ದಗಲಕ್ಕೂ ಓಡಾಡಿದರು. ಜನ ಭರವಸೆಯ ಮಂಟಪ ಕಟ್ಟಿದರು, ನಂಬಿಕೆ ಇಟ್ಟರು. ಆದರೆ
ಅಧಿಕಾರದ ಕೊನೆಯ ದಿನಗಳಲಿ ಏನಾಯಿತು ? ಕೌಟುಂಬಿಕ ಒತ್ತಡಗಳಿಗೆ ಸಿಲುಕಿ, ಕೊಟ್ಟ ಮಾತಿಗೆ
ತಪ್ಪಿ, ಕರ್ನಾಟಕದ ಜನತೆಯ ಮುಂದೆ ತಲೆತಗ್ಗಿಸಿ ನಿಂತರು. ಮನುಷ್ಯ ಯಾವುದನ್ನೂ ಬೇಕಾದರೂ
ಕ್ಷಮಿಸುತ್ತಾನೆ ಆದರೆ ವಿಶ್ವಾಸ ದ್ರೋಹವನ್ನಲ್ಲ. ಕುಮಾರಸ್ವಾಮಿ ಬಿಜೆಪಿ ಗೆ ಅಧಿಕಾರ
ಹಸ್ತಾಂತರ ಮಾಡದೆ ಕೈಕಟ್ಟಿ ಕುಳಿತರು. ಅದು ಕೇವಲ ರಾಜನೀತಿ ಅಥವಾ ರಾಜಕಾರಣ ಎನಿಸಲಿಲ್ಲ.
ಅದು ಕೇವಲ ಬಿಜೆಪಿಗಷ್ಟೇ ಮಾಡಿದ ದ್ರೋಹ ಆಗಿರಲಿಲ್ಲ ಬದಲಿಗೆ ಕರ್ನಾಟಕದ ಜನತೆಗೆ ಮಾಡಿದ
ವಿಶ್ವಾಸ ದ್ರೋಹ ಆಗಿತ್ತು. ಒತ್ತಡಗಳಿಗೆ ಮಣಿಯದೆ ಸ್ಥಿರವಾಗಿ ನಿಂತಿದ್ದರೆ ಬಹುಷಃ
ಈಗಲೂ ಮುಖ್ಯಮಂತ್ರಿ ಗಳಾಗಿ ಅಧಿಕಾರ ನಡೆಸುತ್ತಿದ್ದರು ಅನ್ಸುತ್ತೆ. ಅದೊಂದು ಪರೀಕ್ಷೆಯ
ಸಮಯ. ಪರೀಕ್ಷೆ ಏನು? ಅವರ ನಿರ್ಧಾರ, ಜನತೆಯ ಬಗ್ಗೆ ಕಾಳಜಿ, ಅಭಿವೃದ್ಧಿಯ ಬಗೆಗಿನ ಒಲವು
ಎಲ್ಲವು ನಿಜ ಎನ್ನುವುದನ್ನು ಪ್ರಮಾಣೀಕರಿಸಲು ಸಿಕ್ಕಂತ ಪರೀಕ್ಷೆ. ಧೃಡ ಮನಸ್ಸು
ಮಾಡಿ, ಒತ್ತಡಗಳಿಗೆ ತಲೆಬಾಗದೆ ಭರವಸೆ ಕೊಟ್ಟಂತೆ ನಡೆದಿದ್ದರೆ.......ಇವತ್ತು ಜನ
ಕುಮಾರಸ್ವಾಮಿ ಯವರನ್ನು ಆರಾಧಿಸುತ್ತಿದ್ದರು. ಆದರೆ ಎಲ್ಲ ರಾಜಕಾರಣಿಗಳಂತೆ ನಾನು,
ನಾನೇನು ಭಿನ್ನ ಅಲ್ಲ ಎಂಬುದು ಪರೀಕ್ಷೆಯಲ್ಲಿ ಸಾಬೀತಾಯಿತು. ಪ್ರತಿಯೊಬ್ಬ ಮನುಷ್ಯನಿಗೂ
ಒಂದು ಮಹತ್ತರವಾದುದನ್ನು ಮಾಡುವ ಅವಕಾಶ ಜೀವನದಲ್ಲಿ ಬರುತ್ತೆ. ಆದರೆ ಹೆಚ್ಚಿನ
ಮನುಷ್ಯರು ಈ ಅವಕಾಶವನ್ನು ಕೈಚೆಲ್ಲುತ್ತಾರೆ. ಅದಕ್ಕೆ ಒಳ್ಳೆಯ ಉದಾಹರಣೆ ಕುಮಾರಸ್ವಾಮಿ.
ಈಗ ಕರ್ನಾಟಕದಲ್ಲಿ ಬಿಜೆಪಿ ಪಕ್ಷದವರು ತಾವು ಸರ್ಕಾರ ನಡೆಸುತ್ತ ಇದೀವಿ, ಜನರಿಗೋಸ್ಕರ
ದುಡಿಯುವುದಕ್ಕೆ ಬಂದಿದ್ದೀವಿ, ಒಳ್ಳೆಯ ಆಡಳಿತ ಕೊಡೋಣ ಎನ್ನುವ ವಿಚಾರಗಳನ್ನು ಮರೆತು
ತಮ್ಮಲ್ಲೇ ಕಚ್ಚಾಡಲು ಶುರುಮಾದಿಕೊಂಡಿದ್ದಾರೆ. ಬಿಜೆಪಿ ಯವರು ಏನಾದ್ರು ಬಂದು ಸಾಧನೆ
ಮಾಡ್ತಾರೆ ಅನ್ನೋ ಭರವಸೆ ಆಗಲೇ ಹುಸಿಯಾಗಿದೆ. ಇಂಥ ಸಂದರ್ಭ ದಲ್ಲಿ ಯಾವಾಗ ಬೇಕಾದರೂ
ಚುನಾವಣೆಗಳು ನಡೆಯಬಹುದು ಎಂಬ ತರ್ಕವನ್ನಿಟ್ಟುಕೊಂಡು ಕುಮಾರಸ್ವಾಮಿ ಯವರು ಸಿದ್ಧತೆ
ನಡೆಸುತ್ತ ಇದ್ದಾರೆ. ಹಾಗಾಗಿ ಸಮಾವೇಶಗಳು, ಹೇಳಿಕೆಗಳು ಒಂದರ ಹಿಂದೆ ಒಂದು ಬರುತ್ತಿವೆ.
ಅಧಿಕಾರ ಹಿಡಿಯುವುದಕ್ಕೆ ರಾಜಕಾರಿಣಿಗಳು ಏನೆಲ್ಲಾ ಸರ್ಕಸ್ ಮಾಡ್ತಾರೆ ಅನ್ನೋದಕ್ಕೆ
ಇದೊಂದು ಸರಳ ಉದಾಹರಣೆ. ಆದರೆ ಜನ ಇದನ್ನೆಲ್ಲಾ ಗಮನಿಸುತ್ತಾರೆ ಅನ್ನೋದು ಕುಮಾರಸ್ವಾಮಿ
ಯವರು ಚೆನ್ನಾಗಿ ಗಮನಿಸಬೇಕು. ಯಾಕೆಂದರೆ ಕುಮಾರಸ್ವಾಮಿ ಯವರು ಈಗ ಹತ್ತರಲ್ಲೊಬ್ಬ
ರಾಜಕಾರಿಣಿ. ಎಲ್ಲ ರಾಜಕಾರಿಣಿ ಗಳ ಬಗ್ಗೆ ಯಾವ ಅಭಿಪ್ರಾಯವಿದೆಯೋ ಅದೇ ಅಭಿಪ್ರಾಯ ಅವರ
ಮೇಲೂ ಇದೆ.