ಕೆಲವು ದಿನಗಳು ಶುರುವಾಗೋದೇ ಹಾಗೆ..........ಬೆಳಗಿನಿಂದಲೇ ಒಂದಿಷ್ಟು ಬೇಸರ, ಅಸಹಾಯಕತೆ. ನಿನ್ನೆ ಕೂಡ ಹಾಗೆ ಆಯಿತು. ಶನಿವಾರ ರಾತ್ರಿ ಬರ್ಫಿ ಪಿಕ್ಚರ್ ನೋಡಿ ಬರುವಷ್ಟರಲ್ಲಿ ಮಧ್ಯರಾತ್ರಿ ಆಗಿತ್ತು. ಹಾಗಾಗಿ ನಿನ್ನೆ ಭಾನುವಾರ ಎದ್ದಿದ್ದು ತಡವಾಗಿತ್ತು. ಬಿಸಿ ಬಿಸಿ ಕಾಫಿ ಹೀರಿ ವಾರಕ್ಕೆ ಬೇಕಾಗುವ ತರಕಾರಿಗಳನ್ನು ತರೋಣ ಅಂತ ಹೊರಟ್ವಿ. ಇನ್ನೇನು ಕಾಂಪೌಂಡ್ ದಾಟುತ್ತಿರುವಾಗ ಓನರ್ ಮನೆಯವರು ಬಂದು "ನಿಮ್ಮ ಬೈಕಿನ ಪೆಟ್ರೋಲ್ ಯಾರೋ ಬೆಳಗಿನ ಜಾವದಲ್ಲಿ ಕದ್ದಿದ್ದಾರೆ . ಮೇಲಿನ ಮನೆಯವರು ನೋಡಿ ಜೋರು ಮಾಡಿದ ಮೇಲೆ ಓಡಿ ಹೋಗಿದ್ದಾರೆ" ಅಂತ ಹೇಳಿದ ಕೂಡಲೆ ನನಗೆ ಒಂದು ಶಾಕ್. ಇಷ್ಟು ದಿನದಲ್ಲಿ ಯಾವತ್ತು ಈ ತರ ಆಗಿರಲಿಲ್ಲ. ನಮಗೆ ಬೈಕ್ ನಿಲ್ಲಿಸೋಕೆ ಜಾಗ ಸರಿ ಇಲ್ಲದೆ ಇರೋದ್ರಿಂದ ಕಾಂಪೌಂಡ್ ಹೊರಗಡೆ ನಿಲ್ಲಿಸುವ ಅನಿವಾರ್ಯತೆ . ಆದರೆ ದೊಡ್ಡ ರಾಜಕಾರಣಿಗಳು , ಪ್ರತಿಷ್ಠಿತ ವ್ಯಕ್ತಿಗಳು ವಾಸಿಸುವ ಬಡಾವಣೆ ಯಾದ್ದರಿಂದ ಯಾವಾಗಲು ಪೋಲೀಸರ ಓಡಾಟ ಇರುವುದರಿಂದ ಇಷ್ಟು ದಿನ ನಿರಾಳವಾಗಿದ್ದೆ . ನಿನ್ನೆ ಮಾತ್ರ ಏಮಾರಿದ್ದಾಗಿತ್ತು . ಮತ್ತೆ ಯಾವುದೊ ಆಟೋಮೊಬೈಲ್ ಅಂಗಡಿಗೆ ಹೋಗಿ ಪೆಟ್ರೋಲ್ ಪೈಪ್, ಫ್ಯುಎಲ್ ಲಾಕ್ ತಂದು ಮನೆಯ ಹತ್ತಿರದಲ್ಲೇ ಇದ್ದ ಒಬ್ಬ ಮೆಕನಿಕ್ ನ ಕರೆತಂದು ರಿಪೇರಿ ಮಾಡಿಸಿದೆ. ಓದಿಷ್ಟು ಕಾಸು ಖರ್ಚು , ಸಮಯ ವ್ಯರ್ಥ , ಮನಸ್ಸಿಗೆ ಕಿರಿಕಿರಿ. ಶನಿವಾರ ಸಹ ಕೆಲಸ ಮಾಡಿದ್ದರಿಂದ ಸಿಕ್ಕಿದ ಒಂದು ರಜಾದಲ್ಲಿ ಅರ್ಧ ದಿನ ಈ ರೀತಿ ಕಳೀತು.