Friday, October 1, 2010

ಅವಲೋಕನ

                ನಿನ್ನೆ ಸಂಜೆ ಜನರು ಅಯೋಧ್ಯೆ ತೀರ್ಪಿನ ಬಗ್ಗೆ ಆಸಕ್ತರಾಗಿದ್ದರೆ, ನಾನು ಸುಮ್ನೆ ಸೋಮಾರಿಯಾಗಿ ಏನೂ ಮಾಡದೆ ಕುಳಿತಿದ್ದೆ. ವಾಕಿಂಗ್ ಹೋಗಿ ಬಂದರೂ ಏನೂ ಉಲ್ಲಾಸ ಇರ್ಲಿಲ್ಲ.  ಈಗಷ್ಟೆ ಗ್ರಾಜುಎಶನ್ ಮುಗಿಸಿ ಮುಂದೇನು ಮಾಡಲು ದಿಕ್ಕು ತೋಚದೆ ಕುಳಿತವನಂತಿತ್ತು ನನ್ನ ಪರಿಸ್ಥಿತಿ. ಹೊಟ್ಟೆನು ತಾಳ ಹಾಕೋಕೆ ಶುರು ಮಾಡಿತು. ಇನ್ನು ಕೂತರೆ ಆಗಲ್ಲ, ಊಟ ಏನು ಮೇಲಿಂದ ಬೀಳಲ್ವಲ್ಲ, ಅಡಿಗೆ ಮಾಡ್ಬೇಕು ಅಂತ ತೀರ್ಮಾನಿಸಿ ಸಿದ್ಧತೆ ಮಾಡಲು ತೊಡಗಿದೆ. ಇರೋನು ಒಬ್ಬ ಅದೇನು ಮಹಾ ಸಿದ್ಧತೆ ಅಂತ ಅನಿಸೋದು ಸಹಜ. ನಾನು ಮಾಡೋ ಕೆಲಸಕ್ಕೆ  ಬಹುಷಃ ಸಿದ್ಧತೆ ಅನ್ನೋದು ತುಂಬಾ ದೊಡ್ಡ ಪದವಾಯಿತೋ ಏನೋ. ಏನೆ ಆಗಲಿ ನನಗೆ ನಾನು ಮಾಡೋ ಕೆಲಸ ದೊಡ್ಡದು. ಸಿದ್ಧತೆಯಲ್ಲಿ ಮೊದಲ ಹಂತ ಯಾವ ತರಕಾರಿ ಒಣಗಿಹೊಗದೆ ಉಳಿದಿದೆ ಅಂತ ನೋಡೋದು. [ನನ್ನ ಹತ್ತಿರ ತಂಗಳು ಪೆಟ್ಟಿಗೆ ಇಲ್ಲ, ಹಾಗಾಗಿ.]. ಸದ್ಯಕ್ಕೆ ಒಂದೇ ಒಂದು ಬೀಟ್ರೂಟ್ ಗಡ್ಡೆ ಒಣಗದೇ ಉಳಿದಿತ್ತು. ಸರಿ ಬೀಟ್ರೂಟ್ ಸಾಂಬಾರ್ ಮಾಡೋಣ ಅಂತ ಅಂದು ಕೊಂಡು ಬೇರೆ ಯಾವ ಪದಾರ್ಥಗಳು ಬೇಕಾಗಬಹುದು ಅಂತ ಯೋಚಿಸುತ್ತಿರುವಾಗ ಸಂದು [ = ಸಂಚಾರಿ ದೂರವಾಣಿ = ಮೊಬೈಲ್  ಫೋನ್ ] ಅರಚಿಕೊಳ್ಳಲು ಶುರುಮಾಡಿತು. ಕೂಗ್ಬೇದ್ವೋ ಮಾರಾಯ ಅಂತ ಹೇಳುತ್ತಾ ಅದರ ತಲೆಗೆ ಮೊಟಕಿ ನೋಡಿದ್ರೆ.......Ravi Mysore Calling...... ಕಾಲ್ ರಿಸೀವ್ ಮಾಡಿ ಅವನ ಹತ್ತಿರ ಒಂದತ್ತು ನಿಮಿಷ ಮಾತಾಡಿದೆ. ರವಿ ಮತ್ತು ನಾನು ಕಾಲೇಜು ದಿನಗಳಿಂದ ಸ್ನೇಹಿತರು. ಕೆಲವೊಂದು ವಯುಕ್ತಿಕ ಕಾರಣಗಳಿಂದ ಓದನ್ನು ಮುಂದುವರಿಸಲಾಗದೆ ಊರಿನಲ್ಲಿ ಸೆಟಲ್ ಆಗಿದಾನೆ. ಅವಾಗವಾಗ ನಂಬರ್  ಬದಲಾಯಿಸೋ ಚಟವಿರುವ ನಾನು ಪ್ರತಿಸಲ ನಂಬರ್ ಬದಲಾಯಿಸಿದಾಗ್ಲೂ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವವರಿಗೆಲ್ಲ ನಂಬರ್ ಕೊಡದೆ ಅವರೆಲ್ಲ ನನ್ನ ನಂಬರ್ ಗೆ ಪರದಾಡೋ ಹಾಗೆ ಆಗಿರತ್ತೆ. ರವಿ ಒಂಥರಾ ಛಲ ಬಿಡದ ತ್ರಿವಿಕ್ರಮನಂತೆ ನನ್ನ ನಂಬರ್ ಚೇಂಜ್ ಆದಾಗಲೆಲ್ಲ ಕಷ್ಟಪಟ್ಟು ಹುಡುಕಿ ಕಾಲ್ ಮಾಡ್ತಾನೆ.
 
             ಈಗೆ ಸುಮಾರು ಮೂರು ತಿಂಗಳ ಹಿಂದೇನು ಕಾಲ್ ಮಾಡಿ ಕುಶಲ ವಿಚಾರಿಸಿಕೊಂಡಿದ್ದ. ನಾನು ಒಂದು ಸಲಾನು ಅವನಿಗೆ ಫೋನ್ ಮಾಡಲಿಲ್ವಲ್ಲ ಅನ್ನೋ ಗಿಲ್ಟ್ ನನ್ನ ಕಾಡತೊಡಗಿತು. ಈ ನನ್ನ ಸ್ವಭಾವಕ್ಕೆ ಒಂಚೂರು ಹಿಸ್ಟರಿನು ಇದೆ [ಹಿಸ್ಟರಿ ಇಲ್ಲದೆ ಇದ್ದೋರು ಯಾರಿದ್ದಾರೆ ಹೇಳಿ; ಕೆಲವರು ಹಿಸ್ಟರಿನೆ ಆಗ್ಬಿಡ್ತಾರೆ, ಇನ್ನು ಕೆಲವರದ್ದು ಹಿಸ್ಟರಿ ಬೇರೆಯವರೇ ಬರೆದು ಅವರ ಜೊತೆ ತಾವೂ ಹಿಸ್ಟರಿ ಆಗ್ತಾರೆ; ಉಳಿದವರು ನನ್ನಂತೋರು ನಮ್ಮ ಹಿಸ್ಟರಿಯನ್ನು ನಾವೇ ಬರೆದುಕೊಳ್ತೀವಿ.]. ನನಗೆ ಮೊದಲಿಂದಲೂ ಸುಖಾಸುಮ್ಮನೆ ಕಂಡವರಿಗೆಲ್ಲ ಫೋನ್ ಮಾಡೋದು ಗಂಟೆಗಟ್ಟಲೆ ಹರಟೆ ಹೊಡೆಯೋದು ಇಷ್ಟ ಆಗಲ್ಲ. ಫೋನ್ ವಿಚಾರದಲ್ಲಿ ನಾನು ಇನ್ನೂ ಹತ್ತೊಂಬತ್ತನೇ ಶತಮಾನದಲಿದೀನಿ
 
. ಈಗ್ಲೂ ನನಗೆ ಫೋನ್ ಅಂದ್ರೆ ಏನಾದ್ರು ವಿಚಾರ ಇದ್ರೆ ಹೇಳೋದು/ಕೇಳೋದಕ್ಕೆ ಮಾತ್ರ. ಆದರೆ ನಾನೇನು ರಿಸರ್ವ್ದ್ ಅಲ್ಲ; ವಾಚಾಳಿ ಅಂತಾನೆ ಹೇಳಬಹುದು. ಆದರೆ ಈ ವಾಚಾಳಿತನ ಫೇಸ್ ಟು ಫೇಸ್ ಮಾತ್ರ. ಗಂಟೆಗಟ್ಲೆ ಮಾತಾಡದಿದ್ರು ಉಭಯಕುಶಲೋಪರಿ ವಿಚಾರಿಸೋಕೂ ಏನು ನನಗೆ ತೊಂದ್ರೆ ಅನ್ನೋದು ನನ್ನ ಮುಂದಿರುವ ಪ್ರಶ್ನೆ. ಈ ವಿಚಾರ ಹಲವಾರು ತಿಂಗಳುಗಳಿಂದ ನನ್ನ ತಲೆಯಲ್ಲಿ ಕೊರಿತಾ ಇದೆ. ಈ  ಸ್ವಭಾವವನ್ನು ಬದಲಾಯಿಸಿಕೊಳ್ಳಬೇಕು ಅಂತ ತುಂಬಾ ಅನಿಸುತಿದೆ ಯಾಕೋ ಇಂದು. ಈ ವಿಚಾರವಾಗಿ  ನನ್ನ ಮೇಲೆ ನನಗೆ ಬೇಜಾರಾಗಿದೆ. ಇನ್ಮುಂದೆ ವಾರಕ್ಕೆ ನಾಲ್ಕು ಜನಕ್ಕಾದರೂ ಕಾಲ್ ಮಾಡಬೇಕು.