ಮೂಲ ಕತೆ : ಹರ್ನ್ಯಂಡೋ ತೆಲೆಜ್
ಇಂಗ್ಲೀಶ್ ಅನುವಾದ: ಡೊನಾಲ್ಡ್ ಎ ಯೇಟ್ಸ್
ಇಂಗ್ಲೀಶ್ ಅನುವಾದ: ಡೊನಾಲ್ಡ್ ಎ ಯೇಟ್ಸ್
ನಾವು ಪಿ ಯು ಸಿ ಯಲ್ಲಿ ಓದುತ್ತಿರುವಾಗ ಇಂಗ್ಲಿಷ್ ಭಾಷೆಯ/ವಿಷಯದ ಒಂದು ಭಾಗವಾಗಿ ಓದಿದ Just Lather..Thats All ನನ್ನ ಮನ ತಟ್ಟಿದ ಕತೆ. ಕೊಲಂಬಿಯಾದಲ್ಲಿ ಹುಟ್ಟಿ ಪತ್ರಕರ್ತನಾಗಿ ದುಡಿದು, ಸರ್ವಾಧಿಕಾರದ ಆಳ್ವಿಕೆಯ ಕಾಲದಲ್ಲಿ ಆದ ಅನುಭವಗಳನ್ನು ತಮಾಶೆಯಾಗಿ ಅಷ್ಟೇ ಸ್ವಾರಸ್ಯಕರವಾಗಿ ಕತೆಗಳ ಮೂಲಕ ನಿರೂಪಿಸಿದ್ದಾನೆ ಹರ್ನ್ಯಂಡೋ ತೆಲೆಜ್ . ನನ್ನ ಸ್ನೇಹಿತ ಗುರುರಾಜ್ ಇಂಟರ್ನೆಟ್ ನಲ್ಲಿ ಹುಡುಕಿ ಕಳಿಸಿ ಅನುವಾದ ಮಾಡು ಎಂದಾಗ ಮನದಲ್ಲಿ ಅಳುಕು ಮೂಡಿತ್ತು. ಕೊನೆಗೂ ಅನುವಾದ ಮಾಡಿದ ಮೇಲೆ ಮನಸ್ಸು ನಿರಾಳವಾಗಿದೆ. ಇದು ತುಂಬಾ ಗ್ರೇಟ್ ಅನುವಾದ ಏನಲ್ಲ. ಆದರೆ ಮೂಲ ಕತೆಗೆ ಚ್ಯುತಿ ಬಾರದಂತೆ ಅನುವಾದಿಸಲು ಪ್ರಯತ್ನಿಸಿದ್ದೇನೆ. ಈ ಅನುವಾದ Just Lather..Thats All ಕತೆಯನ್ನು ತುಂಬಾ ಇಷ್ಟ ಪಡುವ ನನ್ನ ಸ್ನೇಹಿತ ರಜನಿ ಬಾಬುಗೆ ಅರ್ಪಣೆ.
ರೇಝರನ್ನು ಹರಿತಗೊಳಿಸುತ್ತಿದ್ದ ನಾನು ಒಳಗೆ ಬಂದು ಏನೂ ಹೇಳದೆ ಇದ್ದವನನ್ನು ಗಮನಿಸಲಿಲ್ಲ. ಸರಿಯಾಗಿ ನೋಡಿ ಅವನನ್ನು ಗುರುತಿಸಿದೊಡನೆ ಹೃದಯ ಬಡಿತ ಹೆಚ್ಚಾಗಿತ್ತು. ಆತಂಕವನ್ನು ಹೊರಗೆಡವದೆ ಮಸೆದ ರೇಝರಿನ ಹರಿತವನ್ನು ಬೆಳಕಿಗೆ ಹಿಡಿದು ನೋಡಿದೆ. ಅಷ್ಟರೊಳಗೆ ದೇಹಕ್ಕೆ ಆತುಕೊಂಡಿದ್ದ ಬೆಲ್ಟ್, ಗನ್ ಹೋಲ್ಡರ್ಗಳನ್ನು ಮೊಳೆಗೆ ತೂಗುಹಾಕಿ ತನ್ನ ಮಿಲಿಟರಿ ಕ್ಯಾಪನ್ನು ಅದರ ಮೇಲೆ ಇರಿಸಿದ್ದ. ಟೈ ಸಡಿಲಗೊಳಿಸುತ್ತ ನನ್ನತ್ತ ತಿರುಗಿ "ಸಿಕ್ಕಾಪಟ್ಟೆ ಸೆಖೆ. ಶೇವ್ ಆದ್ರೆ ಒಳ್ಳೇದು" ಎನ್ನುತ್ತಾ ಖುರ್ಚಿಯಲ್ಲಿ ಕುಳಿತ.
ಕಪ್ಪಿಟ್ಟ ಮುಖ. ನಾಲ್ಕು ದಿನಗಳ ಗಡ್ಡ. ಆ ದಿನಗಳು ನಮ್ಮವರನ್ನು ಹಿಡಿಯಲು ನೂರಾರು ಸೈನಿಕರೊಡನೆ ಕಾಡಿಗೆ ನುಗ್ಗಿದ್ದು ನನಗೆ ತಿಳಿದಿತ್ತು. ಸೋಪಿನ ಚೂರುಗಳನ್ನು ಬೆಚ್ಚನೆ ನೀರಿಗೆ ಹಾಕಿ ಬ್ರಶ್ ನಿಂದ ತಿರುಗಿಸುತ್ತಿದ್ದಂತೆ ನೊರೆ ಉಕ್ಕತೊಡಗಿತು.
"ಆ ಗುಂಪಿನವರಿಗೂ ಇಷ್ಟೇ ಗಡ್ಡ ಇರತ್ತೆ" ನಾನು ಕೇಳದೆಯೇ ಹೇಳಿದ. ಇನ್ನಷ್ಟು ರಭಸದಿಂದ ಬ್ರಶ್ ತಿರುಗಿತು."ಪ್ರಮುಖರೆಲ್ಲರು ಸಿಕ್ಕಿದ್ದಾರೆ. ಒಂದಿಷ್ಟು ಹೆಣಗಳೂ ಸಿಕ್ಕಿವೆ. ತಪ್ಪಿಸಿಕೊಂಡೋರನ್ನು ಬಿಡಲ್ಲ. . . . ಒಂದೆರಡು ದಿನ ಅಷ್ಟೇ . . . . . ಅವರನ್ನೂ ಹಿಡಿದು ಹಾಕ್ತೀವಿ."
"ಎಷ್ಟು ಜನ ಸಿಕ್ಕಿದ್ದಾರೆ"
"ಹದಿನಾಲ್ಕು.....ಅವರನ್ನು ಹಿಡಿಯೋಕೆ ತುಂಬಾ ಕಾಡಿನೊಳಗೆ ಹೋಗಬೇಕಾಯಿತು. ಈ ಸಾರ್ತಿ ಎಲ್ಲರನ್ನು ಕೊಂದುಹಾಕ್ತೀವಿ."
"ಮೊನ್ನೆ ಶಾಲೆಗೆ ಬಂದಿದ್ಯಲ್ಲ""ಎಷ್ಟು ಜನ ಸಿಕ್ಕಿದ್ದಾರೆ"
"ಹದಿನಾಲ್ಕು.....ಅವರನ್ನು ಹಿಡಿಯೋಕೆ ತುಂಬಾ ಕಾಡಿನೊಳಗೆ ಹೋಗಬೇಕಾಯಿತು. ಈ ಸಾರ್ತಿ ಎಲ್ಲರನ್ನು ಕೊಂದುಹಾಕ್ತೀವಿ."
ಇನ್ನೂ ಏನೋ ಹೇಳಹೊರಟವನು ನೊರೆ ತುಂಬಿದ ಬ್ರಶ್ ನೋಡುತ್ತಲೇ ಖುರ್ಚಿಗೆ ಒರಗಿದ. ಇನ್ನು ಬಟ್ಟೆಯನ್ನು ಅವನಿಗೆ ಹೊದಿಸಬೇಕಿತ್ತು. ಬ್ರಶ್ ಮೇಜಿನ ಮೇಲಿಟ್ಟು ಡ್ರಾ ದಿಂದ ಬಟ್ಟೆ ತೆಗೆದು ಕುತ್ತಿಗೆಗೆ ಗಂಟು ಹಾಕಿದೆ. ಅವನ ಮಾತಿಗೆ ಕಡಿವಾಣ ಇರಲಿಲ್ಲ. ನನ್ನ ಮೌನ ಅವನೆಡೆಗೆ ಅನುಕಂಪ ತೋರುವನ್ತಿದ್ದರೆ ನನ್ನ ತಪ್ಪಲ್ಲ. ಸಾಸಿವೆಕಾಳಿನಷ್ಟು ಅನುಕಂಪ ಅವನೆಡೆಗೆ ಇರಲಿಲ್ಲ. ಆದರೆ ಅವನು ಹಾಗೆ ಭಾವಿಸಿದ್ದ.
"ಹೌದು"
"ಹೇಗಿತ್ತು"
"ಚೆನ್ನಾಗಿತ್ತು"
"ಜನಕ್ಕೆ ಒಳ್ಳೆ ಪಾಠ ಅಲ್ವ?"
"ಹೌದು"
ಮತ್ತೆ ಬ್ರಶ್ ತೆಗೆದುಕೊಂಡು ಗಡ್ಡಕ್ಕೆ ಹಚ್ಚತೊಡಗಿದೆ. ಬ್ರಷನ್ನು ಆವರಿಸಿದ್ದ ನೊರೆ ನಿಧಾನವಾಗಿ ಗಡ್ಡವನ್ನು ಆವರಿಸಿತು. ತಂಪಾದ ನೊರೆ ಮುಖಕ್ಕೆ ಸೋಕುತ್ತಲೇ ಸುಸ್ತಾಗಿದ್ದ ಅವನು ಕಣ್ಮುಚ್ಚಿದ. ಅವನನ್ನು ಮೊದಲು ನೋಡಿದ್ದು ಶಾಲಾ ಮೈದಾನದಲ್ಲಿ. ಗಲ್ಲಿಗೇರಿಸಿದ ನಾಲ್ವರು ಕ್ರಾಂತಿಕಾರಿಗಳನ್ನು ನೋಡಲು ಇಡೀ ನಗರಕ್ಕೆ ಆಜ್ಞೆ ನೀಡಿದ್ದ. ಆದರೆ ಅಂಗ ಹೀನವಾದ ಆ ಹೆಣಗಳ ನೋಟ ಅವನ ಮುಖವನ್ನು ನೋಡದಂತೆ ಮಾಡಿತ್ತು. ಇವತ್ತು ಅದೇ ಮುಖ ನನ್ನ ಕೈಯಲ್ಲಿದೆ. ಇವನ ಮುಖ ಅಷ್ಟೇನೂ ಕೆಟ್ಟದಾಗಿಲ್ಲ. ಗಡ್ಡ ಅವನನ್ನು ಸ್ವಲ್ಪ ವಯಸ್ಸಾದವನಂತೆ ಮಾಡಿತ್ತು. ಅವನ ಹೆಸರು ಟಾರಸ್, ಕ್ಯಾಪ್ಟನ್ ಟಾರಸ್. ಈ ಮನುಷ್ಯನಿಗೆ ಎಷ್ಟು ವಿಚಿತ್ರ ಕಲ್ಪನೆಗಳು ಬರುತ್ತವೆ ಅಂತ ಇವನು ಗಲ್ಲಿಗೆರಿಸಿದವರ ಹೆಣಗಳ ಮೇಲೆ ಟಾರ್ಗೆಟ್ ಪ್ರಾಕ್ಟೀಸ್ ಮಾಡಿಸಿದಾಗಲೇ ಗೊತ್ತಾಗಿದ್ದು. ಅವನು ಕಣ್ಮುಚ್ಚಿಕೊಂಡೆ " ನಾನೀಗ ಆರಾಮವಾಗಿ ನಿದ್ದೆ ಮಾಡಬಹುದು" ಎಂದ. ನನ್ನನ್ನೇನು ಕೆಣಕುತ್ತಿಲ್ಲ ಅಲ್ವ! ನಾನು ಸೋಪ್ ಹಚ್ಚೋದು ನಿಲ್ಲಿಸಿದೆ.
"ಸಂಜೆ ಸಿಕ್ಕಾಪಟ್ಟೆ ಕೆಲಸ ಇದೆ""ಮತ್ತೆ ಟಾರ್ಗೆಟ್ ಪ್ರಾಕ್ಟೀಸ್ ಮಾಡ್ತೀರ ?"
"ಅದೇ ತರ. ಆದರೆ ಯೋಚಿಸಿಲ್ಲ"
ಮೊನ್ನೆಯ ಘಟನೆಯು ಕಣ್ಮುಂದೆ ಬಂದಿತು. ಆತಂಕ ಎದೆಯ ಒಳಗೆ. ನಡುಗುತ್ತಿರುವ ಕೈಯಿಂದ ಬಿಟ್ಟ ಕೆಲಸ ಮತ್ತೆ ಶುರುಮಾಡಿದೆ. ಅವನ ಪ್ರಾಣ ನನ್ನ ಕೈಲಿದೆ ಅನ್ನೋ ಯೋಚನೆ ಒಂದಿಷ್ಟು ಸಮಾಧಾನ ನೀಡಿತು. ಆದರೆ ಇವನು ಇಲ್ಲಿಗೆ ಬರದೆ ಇದ್ದಿದ್ರೆ ಒಳ್ಳೇದಿತ್ತು. ಇಷ್ಟು ಹೊತ್ತಿಗಾಗಲೇ ಕ್ಯಾಪ್ಟನ್ ನನ್ನ ಬಳಿ ಶೇವ್ ಮಾಡಿಸಿಕೊಳ್ಳುತ್ತಿರೋ ವಿಚಾರ ನಮ್ಮವರಿಗೆಲ್ಲ ತಿಳಿದಿರುತ್ತೆ. ವೈರೀನ ಮನೆಗೆ ಸೇರಿಸೋದು ಒಳ್ಳೇದಲ್ಲ. ನನ್ನ ಪ್ರತಿ ಗ್ರಾಹಕರಂತೆ ಎಚ್ಚರಿಕೆಯಿಂದ, ನಿಧಾನವಾಗಿ ಒಂದೂ ಹನಿ ರಕ್ತ ಹೊರಬರದಂತೆ ಶೇವ್ ಮಾಡಬೇಕಾದ ಅನಿವಾರ್ಯತೆ ನನಗೆ. ರೇಝರ್ ಸರಿದಾಡಿದ ಪ್ರತಿ ಅಂಗುಲವೂ ಸ್ವಚ್ಚವಾಗಬೇಕು, ಮ್ರುದುವಾಗಬೇಕು. ಸವರಿದಾಗ ಚರ್ಮ ಒರಟಾಗಿರಬಾರದು. ನಾನು ಒಳಗೊಳಗೇ ಕ್ರಾಂತಿಕಾರಿಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿದ್ದೆ. ಜೊತೆಗೆ ನನ್ನ ವೃತ್ತಿಯ ಬಗ್ಗೆ ಅಷ್ಟೇ ಶ್ರದ್ದೆ ಇತ್ತು. ನನ್ನ ನಿಖರತೆಯ ಬಗ್ಗೆ ಹೆಮ್ಮೆಯೂ ಇತ್ತು. ನಾಲ್ಕು ದಿನದ ಗಡ್ಡ ರೇಝರಿಗೆ ಸವಾಲಾಗದಿದ್ದರೂ ನನಗೆ ಸವಾಲಾಗಿತ್ತು.
ರೇಝರ್ ತೆಗೆದುಕೊಂಡು ಸೈಡ್ ಬರ್ನ್ ಕೆಳಗಿಂದ ಕೆಲಸ ಆರಂಭಿಸಿದೆ. ಅವನ ಗಡ್ಡ ಶತ ಒರಟು. ಚರಚರ ಸದ್ದು ಮಾಡುತ್ತಾ ರೇಝರ್ ಅತ್ತಿತ್ತ ಓದುತ್ತಿದ್ದಂತೆ ಚರ್ಮ ಸ್ವಲ್ಪ ಸ್ವಲ್ಪ ಕಾಣಿಸಿತು. ಕೂದಲು ನೋರೆಯೊಂದಿಗೆ ಬೆರೆತು ಬ್ಲೇಡಿನ ಸುತ್ತ ಮುಟ್ಟಿತು. ಅಂಟಿಕೊಂಡಿದ್ದನ್ನು ಒರೆಸಿ ಮತ್ತೊಮ್ಮೆ ರೆಝರ್ ಮಸೆದೆ. ಕಣ್ಮುಚ್ಚಿ ಕುಳಿತವ ನಿಧಾನವಾಗಿ ಕಣ್ತೆರೆದು ಬಟ್ಟೆಯ ಒಳಗಿಂದ ಕೈ ತೆಗೆದು ಕೆನ್ನೆ ಮುಟ್ಟಿನೋಡಿಕೊಂಡ . ಕನ್ನಡಿಯಲ್ಲಿ ಶೇವ್ ಆದ ಜಾಗ ನೋಡುತ್ತಾ
"ಇವತ್ತು ಸಂಜೆ ಆರು ಗಂಟೆಗೆ ಬಂದುಬಿಡು" ಎಂದ. "ಮೊನ್ನೆ ತರ ಇವತ್ತೇನಾದರೂ...." ಅನುಮಾನಿಸಿದೆ.
"ಅವತ್ತಿಗಿಂತ ಚೆನ್ನಾಗಿರುತ್ತೆ"
ತಾನು ಮಾಡಲು ಹೋರಾಟ ಕೆಲಸದ ಬಗ್ಗೆ ತುಂಬಾ ವಿಶ್ವಾಸ ಇರುವವನಂತೆ ಕಾಣಿಸಿತು. ನನಗೂ ಭಯಮಿಶ್ರಿತ ಕುತೂಹಲ.
"ಏನು ಮಾಡ್ಬೇಕು ಅಂದುಕೊಂಡಿದ್ದೀರಾ?"
"ಇನ್ನು ಏನು ಇಲ್ಲ.......ಆದರೆ ಒಂದಿಷ್ಟು ಗಮ್ಮತು ಮಾಡಬಹುದು"
ಹಿಂದೊರಗಿ ಕಣ್ಮುಚ್ಚಿದ. ಕೈಗೆ ರೇಝರ್ ಬಂತು. ಬಾಯಿಗೆ ಮಾತು ಬಂತು.
"ಇವತ್ತೇ ಎಲ್ಲರಿಗೂ ಶಿಕ್ಷೆನ?"
"ಹೌದು ಎಲ್ಲರಿಗೂ"
ಹಚ್ಚಿದ್ದ ಸೋಪು ಒಣಗುತ್ತಿತ್ತು. ತಕ್ಷಣವೇ ಕೆಲಸ ಮುಂದುವರೆಸಿದೆ. ನನ್ನ ನೋಟ ಕನ್ನದಿಯೇದೆಗೆ ಸರಿಯಿತು. ಅದೇ ಬಿಂಬ ಪ್ರತಿಬಿಂಬಗಳ ಆಟ. ಎಡಬಲಗಳು ಬಲಎಡಗಳಾಗಿ, ಹತ್ತಿರ ದೂರಗಳು ಒಂದಾಗಿ ಮೊದಲನೋಟಕ್ಕೆ ಅರ್ಥವಾಗದ ಪ್ರತಿಬಿಂಬಗಳ ಸಂಕಲನ. ಹೊರಗಡೆ ಇದ್ದಿದ್ದು ಮಧ್ಯಾನ್ಹದ ಮಾಮೂಲಿ ದೃಶ್ಯಗಳು. ಕಿರಾಣಿ ಅಂಗಡಿಯಲ್ಲಿನ ಒಂದೆರಡು ಮಾಮೂಲಿ ಗಿರಾಕಿಗಳು ಬಿಟ್ಟರೆ ಬೀದಿಯೆಲ್ಲ ಖಾಲಿ ಖಾಲಿ. ಮತ್ತೊಂದು ಸೈಡ್ ಬರ್ನ್ ನಿಂದ ರೇಝರ್ ಕೆಳಗಿಳಿಯಿತು. ಗಡ್ಡ ಇದ್ದಾಗಲೇ ಇವನು ಚೆನ್ನಾಗಿ ಕಾಣಿಸುತ್ತಿದ್ದ. ಕವಿಗಳ ಹಾಗೆ, ಸನ್ಯಾಸಿಗಳ ಹಾಗೆ ಗಡ್ಡ ಬಿಟ್ಟಿದ್ರೆ ಚೆನ್ನಾಗಿ ಒಪ್ಪುತ್ತಿತ್ತು. ತುಂಬಾ ಜನಕ್ಕೆ ಅವನ ಗುರುತು ಸಿಕ್ತಾ ಇರಲಿಲ್ಲ; ನನಗೂ. ಈಗ ರೆಝರ್ ನ ಅಲುಗು ಕುತ್ತಿಗೆಯ ಬಳಿ ಆಡ್ತಾ ಇದೆ. ಸೂಕ್ಷ್ಮ ಜಾಗ ಆಗಿರೋದ್ರಿಂದ ಎಷ್ಟು ಎಚ್ಚರಿಕೆವಹಿಸಿದ್ದರೂ ಸಾಲದು. ಈ ಜಾಗದಲ್ಲಿ ಕೂದಲು ಸುರುಳಿಯಾಗಿರುತ್ತೆ; ಆದರೆ ಮ್ರುದುವಾಗಿರುತ್ತೆ. ಒಂದು ಅಜಾಗರೂಕತೆಯ ರೇಝರಿನ ಎಳೆತ ಸಾಕು ಚರ್ಮದ ರಂಧ್ರದಲ್ಲಿ ರಕ್ತದ ಮುತ್ತನ್ನು ಹೊರಗೆಡವಲು. ನನ್ನಂತ ಉತ್ತಮ ಕ್ಷೌರಿಕ ಬೇಜವಾಬ್ದಾರಿತನದಿಂದ ಕೆಲಸ ಮಾಡಲು ಸಾಧ್ಯವೇ? ನಮ್ಮೋರು ಎಷ್ಟು ಜನ ಸತ್ತಿದ್ದು? ಹದಿನಾಲ್ಕು ಜನರನ್ನು ಹಿಡಿದಿದ್ದೀನಿ ಅಂದ ಅಲ್ವ? ಇವರೆಲ್ಲರ ಮೇಲೆ ಮತ್ತೊಮ್ಮೆ ಟಾರ್ಗೆಟ್ ಪ್ರಾಕ್ಟೀಸ್? ಈ ಆಲೋಚನೆಗೆಲ್ಲ ಬರದಿದ್ರೆ ಒಳ್ಳೇದು. ನಾನು ಅವನ ಶತ್ರು ಅಂತ ಅವನಿಗೆ ಗೊತ್ತಿಲ್ಲ. ಅವನಿಗೇನು ಯಾರಿಗೂ ಗೊತ್ತಿಲ್ಲ; ನಮ್ಮವರನ್ನು ಬಿಟ್ಟು. ಬಂದೂಕು ಹಿಡಿದು ಕೆಲಸ ಮಾಡುವುದಕ್ಕಿಂತ ಎಲ್ಲರ ನಡುವೆ ಇದ್ದು ಅನುಮಾನಬಾರದಂತೆ ಕೆಲಸ ಮಾಡೋದು ಕಷ್ಟ. ಹೌದು ಒಳಗೊಳಗೇ ಕ್ರಾಂತಿಕಾರಿಗಳಿಗೆ ಸಹಾಯ ಮಾಡುತ್ತಾ ಇದ್ದೆ. ಟಾರಸ್ ನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದೆ. ಅವನ ಪ್ರತಿಯೊಂದು ಕೆಲಸಗಳ ಬಗ್ಗೆ ನಮ್ಮವರಿಗೆ ಮಾಹಿತಿ ಕೊಡ್ತಾ ಇದ್ದೆ. ನಾನು ಏನೆ ಪ್ರಯತ್ನ ಮಾಡಿದರು ಪ್ರತಿಬಾರಿ ಅವನ ಯೋಜನೆಗಳಲ್ಲಿ ಯಶಸ್ವಿಯಾಗಿದ್ದ. ನನ್ನ ಕೈಗೆ ಸಿಕ್ಕ ಮೇಲೂ ಇವನನ್ನು ಜೀವಂತವಾಗಿ ಹೋಗೋಕೆ ಬಿಡೋದೇ.. ಅದೂ ಶೇವ್ ಮಾಡಿ.
ನನ್ನ ಕೆಲಸ ಹೆಚ್ಚು ಕಡಿಮೆ ಮುಗಿಯುತ್ತಾ ಬಂತು. ಈಗ ಅವನು ಮೊದಲಿಗಿಂತ ಚಿಕ್ಕವನಂತೆ ಕಾಣಿಸುತ್ತಿದ್ದಾನೆ. ನನ್ನ ಬಳಿ ಶೇವ್ ಮಾಡಿಸಿಕೊಂದವರೆಲ್ಲರು ಬಹುಷಃ ಹೀಗೆ ಕಾಣ್ತಾರೆಂತ ಅನ್ಸುತ್ತೆ. ಗಲ್ಲದ ಹತ್ತಿರ ಒಂಚೂರು, ಕುತ್ತಿಗೆಯ ಹತ್ತಿರ ಒಂಚೂರು, ದೊಡ್ಡ ನಾಡಿಯ ಹತ್ತಿರ ಒಂಚೂರು ನೊರೆ ಅಷ್ಟೇ. ನೋಡುತ್ತಿದ್ದಾರೆ ರೋಷ ಉಕ್ಕೆರುತ್ತೆ. ಟಾರಸ್ ಕೂಡ ಬೆವರುತ್ತಿರಬೇಕು. ಆದರೆ ಅವನು ಹೆದರಿದಂತೆ ಕಾಣುತ್ತಿಲ್ಲ. ಅವನು ಎಷ್ಟು ಶಾಂತ ನಾಗಿದ್ದಾನೆ ಎಂದರೆ ಸೆರೆ ಹಿಡಿದ ನಮ್ಮವರನ್ನು ಏನು ಮಾಡೋದು ಅಂತಾನು ಇನ್ನು ಚಿಂತಿಸಿಲ್ಲ. ಆದರೆ ನಾನು ರೇಝರ್ ಹರಿತಕ್ಕೆ ರಕ್ತ ಹೊರಬರದಂತೆ ಅತಿ ಎಚ್ಚರಿಕೆಯಿಂದ ಶೇವ್ ಮಾಡಬೇಕಿದೆ. ಬೇರೆ ವಿಚಾರಗಳನ್ನು ಸರಿಯಾಗಿ ಯೋಚಿಸಲೂ ಆಗ್ತ ಇಲ್ಲ. ಇವನ್ಯಾಕೆ ಇಲ್ಲಿಗೆ ಬಂದ? ನಾನೊಬ್ಬ ಕ್ರಾಂತಿಕಾರಿ, ಕೊಲೆಗಡುಕ ಅಲ್ಲ. ಇವನನ್ನು ಕೊಲ್ಲೋದು ಎಷ್ಟು ಸುಲಭ. ಇವನಿಗೆ ಬದುಕೋಕೆ ಅರ್ಹತೆ ಇಲ್ಲ. ನಿಜವಾಗಲೂ ಇಲ್ವಾ? ಅಯ್ಯೋ ದೇವರೇ!? ಯಾರೋ ಇನ್ನ್ಯಾರನ್ನೋ ಇನ್ನ್ಯಾರಿಗೊಸ್ಕರ ಕೊಲೆ ಮಾಡೋದು ಎಷ್ಟು ಸರಿ? ಅದರಿಂದ ಸಿಗೋದೇನು? ಒಬ್ಬರ ಹಿಂದೆ ಒಬ್ಬರು ಬರ್ತಾನೆ ಇರ್ತಾರೆ. ಮೊದಲು ಬಂದವರು ಅವರ ಹಿಂದೆ ಇದ್ದೊರನ್ನು, ಹಿಂದೆ ಇದ್ದೋರು ಅವರ ಹಿಂದೆ ಬರೋರನ್ನು ಕೊಲ್ತಾ ಇದ್ರೆ ಅದಕ್ಕೆ ಕೊನೆ ಎಲ್ಲಿ? ಕೊನೆಗೆ ಸಿಗೋದು ರಕ್ತದ ಕಾಲುವೆ ಮಾತ್ರ. ಇವನ ಕುತ್ತಿಗೆ ಕೊಯ್ಯೋದು ಎಷ್ಟು ಸುಲಭ. ರೇಝರ್ ನ ಒಂದು ಎಳೆತ ಕುತ್ತಿಗೆ ಹತ್ತಿರ...ನಾಡಿ ತುಂಡಾಗಿ ರಕ್ತ ನೀರಿನಂತೆ ಹರಿಯುತ್ತೆ. ಇವನಿಗೆ ಅಲ್ಲಾಡೋಕೂ ಆಸ್ಪದ ಇಲ್ಲ. ನನ್ನ ಹೊಳೆಯುತ್ತಿರೋ ರೇಝರ್ ಅಥವಾ ಹೊಳೆಯುತ್ತಿರೋ ಕಣ್ಣುಗಳನ್ನು ನೋಡೋಕು ಅವಕಾಶ ಸಿಗಲ್ಲ. ನನ್ನ ಕೈ ನಿಜವಾದ ಕೊಲೆಗಾರನಂತೆ ನಡುಗುತ್ತಿದೆ. ಅವನ ಕುತ್ತಿಗೆಯಿಂದ ಹೊರಬರೋ ರಕ್ತಧಾರೆ ಅವನಿಗೆ ಹೊದಿಸಿದ ಬಟ್ಟೆಯ ಮೇಲೆ ಚಿಮ್ಮಿ, ಕುರ್ಚಿಯ ಮೇಲೆ ಹರಿದು, ನನ್ನ ಕೈಗಳನ್ನು ತೊಯ್ದು, ನೆಲದ ಮೇಲೆ ಹರಿಯುತ್ತಲ್ಲ!!! ನನಗೆ ಗೊತ್ತು ಒಂದು ಜೋರಾದ ಹೊಡೆತ, ಒಂದು ಆಳವಾದ ಕಚ್ಚು ನೋವಾಗದಂತೆ ಸಾವು ತರುತ್ತೆ. ಆದರೆ ಶವಾನ ಏನು ಮಾಡೋದು? ಎಲ್ಲಿ ಅಡಗಿಸಿಡೋದು? ನಾನೆಲ್ಲಿ ಹೋಗಲಿ......ಓಡಿಹೊಗಲಿ? ಹೌದು ಓಡಿಹೊಗಬೇಕಾಗುತ್ತೆ....ದೂರ.... ಬಹುದೂರ.....ಬಲುದೂರ. ಅವರು ನನ್ನನ್ನು ಸುಮ್ಮನೆ ಬಿಡ್ತಾರ? ನಾನು ಸಿಗೋವರೆಗೂ ಹಿಂದೆ ಬರ್ತಾರೆ. ಜನ ಏನೆಂದುಕೊಳ್ತಾರೆ....? "ಕ್ಯಾಪ್ಟನ್ ಟಾರಸ್ ನ ಕೊಲೆಗಾರ. ಶೇವ್ ಮಾಡೋವಾಗ ಕುತ್ತಿಗೆ ಕೊಯ್ದೊನು. ಹೇಡಿ." ಮತ್ತೊಂದು ಕಡೆ " ನಮ್ಮೆಲರಿಗೂ ಆಸರೆಯಾಗಿದ್ದವ. ನಮ್ಮ ಕೆಲಸಗಳಿಗೆ ನೆರವಾದವ. ನಮ್ಮ ಹೀರೋ." ಆದರೆ ನಾನು ಯಾವ ವರ್ಗಕ್ಕೆ ಸೇರ್ತೀನಿ? ಕೊಲೆಗಾರಾನ ಅಥವಾ ಹೀರೋನ? ನನ್ನ ವಿಧಿ ನಾನು ಹೇಗೆ ರೆಝರನ್ನು ಹೇಗೆ ಉಪಯೋಗಿಸ್ತೀನಿ ಅನ್ನೋದರ ಮೇಲೆ ನಿಂತಿದೆ. ಕೈಯನ್ನು ತಿರುಗಿಸಿ ಸ್ವಲ್ಪ ಒತ್ತಿ ಒಳಗೆ ಸೇರಿಸಿದರೆ ಮುಗೀತು. ಚರ್ಮ ರೇಷ್ಮೆಯಂತೆ, ರಬ್ಬರಿನಂತೆ ದಾರಿ ಬಿಡುತ್ತೆ. ಮನುಷ್ಯನ ಚರ್ಮಕ್ಕಿಂತ ಮ್ರುದುವಾಗಿರೋದು ಯಾವುದೂ ಇಲ್ಲ. ಗಂಟಲು ಸೀಳಿದೊಡನೆ ಅದರ ಹಿಂದೆ ಹೊರನುಗ್ಗೋದು ರಕ್ತ...ಕೆಂಪುರಕ್ತ. ಇಷ್ಟು ಹರಿತವಾದ ರೇಝರ್ ಕೊಯ್ಯದೆ ಇರಲು ಸಾಧ್ಯವೇ ಇಲ್ಲ. ಆದರೆ ನಾನು ಕೊಲೆಗಾರ ಆಗಲು ಸಿದ್ಧ ಇಲ್ಲ. ಇಲ್ಲ ಸರ್ ನೀವು ಇಲ್ಲಿ ಬಂದಿರೋದು ಶೇವ್ಗೋಸ್ಕರ. ನಾನು ನನ್ನ ಕೆಲಸ ಮಾಡ್ತೀನಿ.....ಒಂಚೂರು ರಕ್ತ ಹೊರಬರದಂತೆ, ನನ್ನ ಕೈ ರಕ್ತವಾಗದಂತೆ. ಬರಿ ನೊರೆ....ನೊರೆ ಅಷ್ಟೇ. ನೀವೊಬ್ಬ ಕ್ಯಾಪ್ಟನ್. ಜನರನ್ನು ಹಿಡಿಯೋದು, ಶಿಕ್ಷಿಸೋದು ನಿಮ್ಮ ಕೆಲಸ. ಆದರೆ ನಾನು ಇಲ್ಲಿ ಬರೀ ಬಾರ್ಬರ್. ಪ್ರತಿ ಮನುಷ್ಯನಿಗೂ ಅವನದೇ ಆದ ಕರ್ತವ್ಯಗಳಿವೆ. ಅದನ್ನು ಅವನು ಮಾಡಬೇಕು.
ಅಂತೂ ಶೇವ್ ಮುಗೀತು. ಅವನು ಎದ್ದು ಕನ್ನಡಿಯಲ್ಲಿ ಮುಖ ನೋಡಿದ. ಹೊಸದಾಗಿ ಹೊಳೆಯುತ್ತಿದ್ದ ಮುಖವನ್ನು ಕೈಯಿಂದ ಮುಟ್ಟಿನೋಡಿ ನಸುನಕ್ಕ. "ಥ್ಯಾಂಕ್ಸ್" ಎಂದು ನೇತು ಹಾಕಿದ್ದ ಒಂದೊಂದೇ ವಸ್ತುಗಳನ್ನು ಧರಿಸತೊಡಗಿದ. ನಾನು ಬಿಳಿಚಿಕೊಂಡಿದ್ದ. ಅಂಗಿ ಒದ್ದೆಯಾಗಿರುವಂತೆ ಅನಿಸಿತು. ಟಾರಸ್ ಪಿಸ್ತೂಲ್ ಸರಿಯಾಗಿ ಇಟ್ಟುಕೊಂಡು ತಲೆ ಕೂದಲು ಆಚೀಚೆ ಸರಿಸಿ ಕ್ಯಾಪ್ ಧರಿಸಿದ. ಪ್ಯಾಂಟ್ ಜೇಬಿನಿಂದ ಒಂದಿಷ್ಟು ಕಾಯಿನ್ ಗಳನ್ನು ತೆಗೆದು ನನ್ನ ಕೈಮೇಲಿಟ್ಟು ಹೊರಗೆ ಬಾಗಿಲಿನ ಕಡೆಗೆ ನಡೆದ. ಬಾಗಿಲ ಬಳಿ ಒಂದು ಕ್ಷಣ ನಿಂತು ನನ್ನತ್ತ ತಿರುಗಿ " ನೀನು ನನ್ನ ಕೊಲೆ ಮಾಡೋಕೆ ಸಂಚು ಮಾಡಿದ್ದೀಯ ಅಂತ ಸುದ್ದಿ ಬಂತು. ಅದನ್ನು ಪರೀಕ್ಷೆ ಮಾಡೋಕೆ ಬಂದೆ. ಒಂದು ತಿಳಕೋ ಕೊಲೆ ಮಾಡೋದು ಅಷ್ಟು ಸುಲಭ ಅಲ್ಲ" ಎಂದು ಹೇಳಿ ರಸ್ತೆಗೆ ಇಳಿದ. ನಾನು ಅವಕ್ಕಾಗಿ ನೋಡುತ್ತಲೇ ಇದ್ದೆ.